ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋವಿಡ್‌-19 | 50 ದಿನಗಳಿಂದ ರಜೆ ಪಡೆಯದೆ ಸೇವೆ

ನಗರದಲ್ಲಿ ಮೊದಲ ಪ್ರಕರಣ ಪತ್ತೆಯಾದ ಬಳಿಕ ಪ್ರತಿದಿನವೂ ಕರ್ತವ್ಯ
Last Updated 27 ಏಪ್ರಿಲ್ 2020, 21:55 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್‌ 19 ಮೊದಲ ಪ್ರಕರಣ ಪತ್ತೆಯಾಗಿದ್ದು ಮಾ. 08ರಂದು. ಆ ಬಳಿಕ ಲಾಕ್‌ಡೌನ್‌ ಹೇರಿಕೆಯಾಗಿ ಜನಜೀವನ ಸ್ತಬ್ಧವಾಗಿದೆ. ಆದರೆ, ಈ 50 ದಿನಗಳಲ್ಲಿ ಬಿಬಿಎಂಪಿಯ ವಿಶೇಷ ಆಯುಕ್ತರಾಗಿರುವ (ಯೋಜನೆ ಮತ್ತು ಆರೋಗ್ಯ) ಐಎಎಸ್‌ ಅಧಿಕಾರಿ ಡಾ.ರವಿಕುಮಾರ್‌ ಸುರಪುರ ಅವರ ಕಚೇರಿಯ ಸಿಬ್ಬಂದಿ ಒಂದು ದಿನವೂ ರಜೆ ಪಡೆಯದೆ ಕಾರ್ಯನಿರ್ವಹಿಸಿದ್ದಾರೆ.

ತಮ್ಮ ಕಚೇರಿ ಸಿಬ್ಬಂದಿಯ ಕಾರ್ಯವೈಖರಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ ರವಿಕುಮಾರ್‌ ಅವರು ಅಷ್ಟೂ ಮಂದಿಯ ಫೋಟೋಗಳನ್ನು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

ನಗರದಲ್ಲಿ ಸೋಂಕು ಪತ್ತೆಯಾದ ಬಳಿಕ ತಮ್ಮ ಸಿಬ್ಬಂದಿ ಒಂದು ದಿನವೂ (ಭಾನುವಾರವೂ) ರಜೆಯನ್ನೇ ಪಡೆಯದ ಬಗ್ಗೆ ಬರೆದುಕೊಂಡಿರುವ ಅವರು, ‘ನೋಡಿ ಇವರೇ ನಮ್ಮ ಉಕ್ಕಿನ ಕವಚ. ನನ್ನ ಕಚೇರಿಯ ಯೋಧರು. ಇಂತಹವರ ಬಗ್ಗೆ ಹೆಚ್ಚು ಕಾಳಜಿ ವಹಿಸಬೇಕಿದೆ’ ಎಂದು ತಿಳಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವಿಶೇಷ ಆಯುಕ್ತರ ಆಪ್ತ ಕಾರ್ಯದರ್ಶಿ ಮಂಜುನಾಥ್‌ ಗೌಡ, ‘ಇದು ತೀರಾ ಸಂಕಷ್ಟದ ಸಂದರ್ಭ. ಈ ಸಂಕಟ ದೂರ ಮಾಡುವಲ್ಲಿ ಕೈ ಜೋಡಿಸಬೇಕಾದುದು ಸರ್ಕಾರಿ ನೌಕರರಾಗಿ ನಮ್ಮ ಕರ್ತವ್ಯ. ನಗರದಲ್ಲಿ ಕೋವಿಡ್‌– 19 ಪ್ರಕರಣ ನಿಯಂತ್ರಣಕ್ಕೆ ತರುವ ಬಗ್ಗೆ ನಮ್ಮ ಸಾಹೇಬರು ( ರವಿಕುಮಾರ್), ಪಾಲಿಕೆ ಆಯುಕ್ತ ಬಿ.ಎಚ್‌.ಅನಿಲ್‌ ಕುಮಾರ್‌ ಅವರೆಲ್ಲ ಸಾಕಷ್ಟು ಶ್ರಮ ಪಡುತ್ತಿದ್ದಾರೆ. ಎಡೆಬಿಡದೆ ಯೋಜನೆ ರೂಪಿಸುತ್ತಿದ್ದಾರೆ. ನಾವು ಈ ಕಾರ್ಯದಲ್ಲಿ ಹೆಗಲು ಕೊಡುತ್ತಿದ್ದೇವೆ’ ಎಂದರು.

‘ನಮ್ಮ ಕಚೇರಿಯ ಸಿಬ್ಬಂದಿ ಯಲಹಂಕ, ನಾಗರಬಾವಿ, ಸುಂಕದಕಟ್ಟೆ ಮುಂತಾದ ಪ್ರದೇಶಗಳಿಂದ ಕಚೇರಿಗೆ ಬರಬೇಕಾಗುತ್ತಿದೆ.ಏನೇ ಅಡೆತಡೆಗಳು ಎದುರಾದರೂ ಬೆಳಿಗ್ಗೆ 10– 10.30 ಒಳಗೆ ಕಚೇರಿಗೆ ಬರುತ್ತೇವೆ. ಕೆಲವೊಮ್ಮ ಮನೆ ಸೇರುವಾಗ ರಾತ್ರಿ 10 ಗಂಟೆ ದಾಟಿದ್ದೂ ಉಂಟು’ ಎಂದು ಅವರು ತಿಳಿಸಿದರು.

‘ಮನೆಯಲ್ಲಿ ಮೊದಲು ತಗಾದೆ ತೆಗೆಯುತ್ತಿದ್ದರು. ಈಗ ಅವರಿಗೂ ಪರಿಸ್ಥಿತಿಯ ಗಂಭೀರತೆ ಮನವರಿಕೆ ಆಗಿದೆ’ ಎಂದರು.

ಪ್ರಥಮ ದರ್ಜೆ ಸಹಾಯಕಿ ಪ್ರೇಮಾ, ‘ನಾನೊಬ್ಬಳೇ ಅಲ್ಲ. ಕಚೇರಿಯಲ್ಲಿ ಎಲ್ಲರೂ ರಜೆ ಪಡೆಯದೆ ಉತ್ಸಾಹದಿಂದಲೇ ಕೆಲಸ ಮಾಡುತ್ತಿದ್ದಾರೆ. ನನ್ನನ್ನು ನನ್ನಣ್ಣ ಕಚೇರಿಗೆ ಕರೆದುಕೊಂಡು ಬಂದು, ಕರೆದುಕೊಂಡು ಹೋಗುತ್ತಾರೆ. ಯಾವತ್ತೂ ಈ ಬಗ್ಗೆ ಉತ್ಸಾಹಗುಂದಿಲ್ಲ’ ಎಂದು ತಿಳಿಸಿದರು.

‘ಕರ್ತವ್ಯದಲ್ಲಿರುವಾಗ ಮಾರ್ಗಸೂಚಿಯಂತೆ ಸಾಕಷ್ಟು ಮುನ್ನೆಚ್ಚರಿಕೆ ವಹಿಸುತ್ತೇವೆ. ಸದಾ ಮುಖಗವಸು ಧರಿಸುತ್ತೆವೆ. ಆಗಾಗ ಸ್ಯಾನಿಟೈಸರ್‌ನಿಂದ ಕೈತೊಳೆಯುತ್ತೇವೆ. ಮನೆಗೆ ಮರಳಿದಾಗಲೂ ಸ್ನಾನ ಮಾಡಿ ಬಟ್ಟೆಗಳನ್ನು ಬಿಸಿನೀರಿನಲ್ಲಿ ತೊಳೆದ ಬಳಿಕವೇ ಒಳಗೆ ಬರುತ್ತೇವೆ’ ಎಂದು ಅವರು ವಿವರಿಸಿದರು.

‘ಹಬ್ಬಹರಿದಿನವಿಲ್ಲ– ವಾರಾಂತ್ಯವೂ ಇಲ್ಲ’
‘ನಗರದಲ್ಲಿ ಕೊರೊನಾ ಕಾಣಿಸಿಕೊಂಡ ಬಳಿಕ ನಾವು ರಾಮನವಮಿ, ಯುಗಾದಿ ಸೇರಿದಂತೆ ಯಾವ ಹಬ್ಬವನ್ನೂ ಆಚರಿಸಿಲ್ಲ. ಪ್ರತಿ ಎರಡನೇ ಮತ್ತು ನಾಲ್ಕನೇ ಶನಿವಾರ ಸರ್ಕಾರಿ ನೌಕರರಿಗೆ ರಜೆ ಇರುತ್ತದೆ. ಅದನ್ನು ಪಡೆದಿಲ್ಲ. ಕೊರೊನಾ ಕಾಣಿಸಿಕೊಂಡ ಬಳಿಕ ಎಲ್ಲ ಭಾನುವಾರವೂ ಕರ್ತವ್ಯ ನಿರ್ವಹಿಸಿದ್ದೇವೆ. ಈ ಬಗ್ಗೆ ನಮಗೆ ಹೆಮ್ಮೆ ಇದೆ’ ಎಂದು ಮಂಜುನಾಥ್‌ ಗೌಡ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT