ಬುಧವಾರ, 9 ಅಕ್ಟೋಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಬಿಬಿಎಂಪಿ: ಗುಂಡಿ ಮುಚ್ಚಲು ‘ಜೆಟ್‌ ಪ್ಯಾಚರ್‌’ ಯಂತ್ರ

ರಾಜರಾಜೇಶ್ವರಿನಗರ ವಲಯದಲ್ಲಿ ಪ್ರಾಯೋಗಿಕ ಕಾರ್ಯಾಚರಣೆ
Published : 12 ಸೆಪ್ಟೆಂಬರ್ 2024, 0:30 IST
Last Updated : 12 ಸೆಪ್ಟೆಂಬರ್ 2024, 0:30 IST
ಫಾಲೋ ಮಾಡಿ
Comments

ಬೆಂಗಳೂರು: ನಗರದಲ್ಲಿ ಕ್ಷಿಪ್ರಗತಿಯಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚುವ ಉದ್ದೇಶದಿಂದ ಬಿಬಿಎಂಪಿ ‘ಜೆಟ್‌ ಪ್ಯಾಚರ್‌ ಯಂತ್ರ’ವನ್ನು ಬಳಸಲು ಆರಂಭಿಸಿದೆ.

‘ಜೆಟ್ ಪ್ಯಾಚರ್’ ಯಂತ್ರದ ಮೂಲಕ ಪ್ರಮುಖ ರಸ್ತೆಗಳಲ್ಲಿ ಒಂದು ಬಾರಿಗೆ 150 ಚ.ಮೀ ನಿಂದ 180 ಚ.ಮೀ ಗುಂಡಿಗಳನ್ನು ಮುಚ್ಚಬಹುದು. ಒಂದು ಗಂಟೆಯಲ್ಲಿ ಕೆಲಸ ಮುಗಿಯಲಿದ್ದು, ಕೂಡಲೇ ವಾಹನಗಳು ಸಂಚಾರ ಮಾಡಬಹುದು.

ರಾಜರಾಜೇಶ್ವರಿ ನಗರ ವಲಯ ವ್ಯಾಪ್ತಿಯಲ್ಲಿ ಪ್ರಾಯೋಗಿಕವಾಗಿ ಜೆಟ್ ಪ್ಯಾಚರ್ ಯಂತ್ರದ ಮೂಲಕ ಪ್ರಮುಖ ರಸ್ತೆ ಗುಂಡಿಗಳನ್ನು ಬುಧವಾರದಿಂದ ಮುಚ್ಚಲಾಗುತ್ತಿದೆ ಎಂದು ವಲಯ ಜಂಟಿ ಆಯುಕ್ತ ಅಜಯ್ ತಿಳಿಸಿದರು.

ಪಂತರಪಾಳ್ಯ - ನಾಯಂಡಹಳ್ಳಿ ನಮ್ಮ ಮೆಟ್ರೋ ನಿಲ್ದಾಣದ ಬಳಿ ರಸ್ತೆ ಗುಂಡಿ ಮುಚ್ಚುವ ಕಾಮಗಾರಿಗೆ ಚಾಲನೆ ನೀಡಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.

ಜೆಟ್‌ ಪ್ಯಾಚರ್‌ ಯಂತ್ರವು ಹತ್ತು ಜನರು ಮಾಡಬಹುದಾದ ಕೆಲಸವನ್ನು ಒಂದು ಗಂಟೆಯಲ್ಲಿ ಮುಗಿಸುತ್ತದೆ. ಇದರ ಕಾರ್ಯವೈಖರಿ ಹಾಗೂ ಕಾರ್ಯಕ್ಷಮತೆಯನ್ನು ಈ ಪ್ರಾಯೋಗಿಕ ಅವಧಿಯಲ್ಲಿ ಪರಿಶೀಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಸ್ತೆಯನ್ನು ಕತ್ತರಿಸಿ, ಅದಕ್ಕೆ ಅನುಗುಣವಾಗಿ ಮಿಶ್ರಣವನ್ನು ಪೈಪ್‌ನಲ್ಲಿ ಸುರಿಯಲಾಗುತ್ತದೆ. ನಂತರ ಅದನ್ನು ಕಾಂಪ್ಯಾಕ್ಟರ್‌ ಮೂಲಕ ಸಮತಟ್ಟಾಗಿಸಲಾಗುತ್ತದೆ. ನಂತರದ ಕೆಲವೇ ಸಮಯದಲ್ಲಿ ವಾಹನಗಳು ಸಂಚರಿಸಬಹುದಾಗಿದೆ ಎಂದು ವಿವರಿಸಿದರು.

ರಾಜರಾಜೇಶ್ವರಿ ನಗರ ವಲಯದಲ್ಲಿ ಸಂಪೂರ್ಣ ಹಾಳಾಗಿರುವ ರಸ್ತೆಗಳನ್ನು ಹೊರತುಪಡಿಸಿ ಗುಂಡಿಗಳನ್ನು ತ್ವರಿತವಾಗಿ ಮುಚ್ಚಲು ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಗಲು-ರಾತ್ರಿ ರಸ್ತೆ ಗುಂಡಿಗಳನ್ನು ಮುಚ್ಚಲಾಗುತ್ತಿದ್ದು, ಕಾಲಮಿತಿಯೊಳಗಾಗಿ ಗುಂಡಿಗಳನ್ನು ಮುಚ್ಚಲಾಗುವುದು ಎಂದು ತಿಳಿಸಿದರು.

ವಲಯ ವ್ಯಾಪ್ತಿಯಲ್ಲಿ 20 ವಾರ್ಡ್‌ಗಳಿದ್ದು, 216.45 ಕಿ.ಮೀ ಪ್ರಮುಖ ರಸ್ತೆಗಳು ಸೇರಿದಂತೆ ಒಟ್ಟು 2,045 ಕಿ.ಮೀ ಉದ್ದದ ರಸ್ತೆಗಳಿವೆ. ಮೇ 20ರಿಂದ 2,443 ಗುಂಡಿಗಳನ್ನು ಗುರುತಿಸಲಾಗಿದೆ. 2,408 ರಸ್ತೆಗುಂಡಿಗಳನ್ನು ಮುಚ್ಚಲಾಗಿದ್ದು, 35 ರಸ್ತೆಗುಂಡಿಗಳನ್ನು ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ ಎಂದು ಹೇಳಿದರು.

‘ರಸ್ತೆ ಗುಂಡಿ ಗಮನ ತಂತ್ರಾಂಶ’ದಲ್ಲಿ ಸಾರ್ವಜನಿಕರಿಂದ 461 ದೂರುಗಳು ದಾಖಲಾಗಿದ್ದು, ಅದರಲ್ಲಿ 86 ರಸ್ತೆ ಗುಂಡಿಗಳನ್ನು ಮುಚ್ಚಲಾಗಿದ್ದು, 302 ರಸ್ತೆ ಗುಂಡಿಗಳನ್ನು ಮುಚ್ಚಬೇಕಿದೆ ಎಂದರು.

ರಸ್ತೆ ಗುಂಡಿ ಮುಚ್ಚಲು ಎಲ್ಲ ರೀತಿಯ ಸಾಮಗ್ರಿಗಳನ್ನೂ ಹೊಂದಿರುವ ‘ಜೆಟ್‌ ಪ್ಯಾಚರ್‌ ಯಂತ್ರ’
ರಸ್ತೆ ಗುಂಡಿ ಮುಚ್ಚಲು ಎಲ್ಲ ರೀತಿಯ ಸಾಮಗ್ರಿಗಳನ್ನೂ ಹೊಂದಿರುವ ‘ಜೆಟ್‌ ಪ್ಯಾಚರ್‌ ಯಂತ್ರ’

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT