ಬುಧವಾರ, ಆಗಸ್ಟ್ 10, 2022
25 °C
‘ಸಮನ್ವಯದಿಂದ ಕಾರ್ಯ ನಿರ್ವಹಿಸಿ’

ಸಂಚಾರ ದಟ್ಟಣೆ ನಿವಾರಣೆ: ಇಲಾಖೆಗಳ ಅಧಿಕಾರಿಗಳೊಂದಿಗೆ ಪುನರಾವಲೋಕನ ಸಭೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ನಗರದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆಯನ್ನು ನಿರ್ವಹಿಸಲು ಎಲ್ಲ ಇಲಾಖೆಗಳು ಸಮನ್ವಯದಿಂದ ಕಾರ್ಯನಿರ್ವಹಿಸಬೇಕು. ಈ ಬಗ್ಗೆ ಅಲ್ಪಾವಧಿ ಹಾಗೂ ದೀರ್ಘಾವಧಿ ಯೋಜನೆಗಳನ್ನು ಅನುಷ್ಠಾನಗೊಳಿಸಬೇಕು ಎಂದು ಬಿಬಿಎಂಪಿ ಆಡಳಿತಾಧಿಕಾರಿ ರಾಕೇಶ್‌ಸಿಂಗ್‌ ಅಧಿಕಾರಿಗಳಿಗೆ ಸೂಚಿಸಿದರು.

ನಗರದ ಸಂಚಾರ ದಟ್ಟಣೆ ನಿರ್ವಹಣೆಗೆ ಸಂಬಂಧಿಸಿದಂತೆ ಗೃಹ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ. ರಜನೀಶ್‌ ಗೋಯಲ್‌, ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್‌ ಗಿರಿನಾಥ್‌ ಸೇರಿ ಹಿರಿಯ ಅಧಿಕಾರಿಗಳೊಂದಿಗೆ ಸೋಮವಾರ ಸಭೆ ನಡೆಸಿದ ರಾಕೇಶ್‌ ಸಿಂಗ್‌ ತುರ್ತು ಕ್ರಮಕ್ಕೆ ಆದೇಶಿಸಿದರು.

‘ಗೊರಗುಂಟೆ ಪಾಳ್ಯ, ಹೆಬ್ಬಾಳ ಹಾಗೂ ಕೆ.ಆರ್.ಪುರ ಜಂಕ್ಷನ್‌ಗಳಲ್ಲಿ ಕಳೆದ ವಾರ ಜಂಟಿ ತಪಾಸಣೆ ನಡೆಸಿ ಅಲ್ಪಾವಧಿ ಯೋಜನೆ ಜಾರಿಗೊಳಿಸಲು ಸೂಚಿಸಲಾಗಿತ್ತು. ಅದರಂತೆ ಗೊರಗುಂಟೆ ಪಾಳ್ಯ ಜಂಕ್ಷನ್‌ನಲ್ಲಿ ಪೊಲೀಸ್ ಚೌಕಿ ತೆರವುಗೊಳಿಸಿ ವಾಹನಗಳ ತಿರುವಿಗೆ ಅವಕಾಶ ಕಲ್ಪಿಸಲಾಗಿದೆ. ಹೆಬ್ಬಾಳ ಜಂಕ್ಷನ್‌ನಲ್ಲಿ ಮೀಡಿಯನ್‌ಗೆ ಬ್ಯಾರಿಕೇಡ್ ಅಳವಡಿಸಿ ಸರ್ವೀಸ್ ರಸ್ತೆಯಿಂದ ಬರುವ ಬಸ್‌ಗಳನ್ನು ಜಂಕ್ಷನ್ ಕೆಳಗಿರುವ ರ‍್ಯಾಂಪ್ ಮೂಲಕ ಹೋಗಲು ಅವಕಾಶ ನೀಡಲಾಗಿದೆ. ರ‍್ಯಾಂಪ್‌ಗಿಂತ ಮುಂದೆಯೇ ಬಸ್‌ಗಳ ನಿಲುಗಡೆ ಮಾಡಲು ವ್ಯವಸ್ಥೆ ಮಾಡಲಾಗಿದೆ’ ಎಂದರು.

ಕೆ.ಆರ್.ಪುರ ಜಂಕ್ಷನ್‌ನಲ್ಲಿ ಬಸ್ ನಿಲ್ದಾಣದ ಸ್ಥಳದಲ್ಲಿ ಡಾಂಬರೀಕರಣ ಮಾಡಲು ಬಿಎಂಆರ್‌ಸಿಎಲ್ ಅಧಿಕಾರಿಗಳಿಗೆ ಸೂಚನೆ ನೀಡಿದರು.

ಇಬ್ಲೂರು, ಸೆಂಟ್ರಲ್ ಸಿಲ್ಕ್ ಬೋರ್ಡ್, ಸಾರಕ್ಕಿ ಹಾಗೂ ಜಯದೇವ ವೃತ್ತಕ್ಕೆ ಬುಧವಾರ ಭೇಟಿ ನೀಡಿ ಪರಿಶೀಲಿಸಿದ ಅವರು, ಮುಂದಿನ ಸೋಮವಾರ ನಡೆಯುವ ಪುನರಾವಲೋಕನ ಸಭೆಯಲ್ಲಿ ಕೈಗೊಂಡ ಕ್ರಮಗಳು, ಅದರಿಂದಾದ ಉಪಯೋಗಗಳ ಬಗ್ಗೆ ಮಾಹಿತಿ ನೀಡಬೇಕು ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಸಭೆಯಲ್ಲಿ ಜಲಮಂಡಳಿ ಅಧ್ಯಕ್ಷ ಜಯರಾಮ್, ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್, ಬಿಡಿಎ ಆಯುಕ್ತ
ರಾಜೇಶ್ ಗೌಡ, ಕೆಎಸ್ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ಅನ್ಬು ಕುಮಾರ್, ಸಂಚಾರ ಪೋಲಿಸ್ ಜಂಟಿ ಆಯುಕ್ತ ರವಿಕಾಂತೇಗೌಡ,
ಸ್ಮಾರ್ಟ್ ಸಿಟಿ/ ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ರಾಜೇಂದ್ರ ಚೋಳನ್, ಬಿಎಂಟಿಸಿ ಐಟಿ ನಿರ್ದೇಶಕ ಸೂರ್ಯ ಸೇನ್, ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕರು, ಪಾಲಿಕೆಯ
ಎಲ್ಲಾ ವಿಶೇಷ ಆಯುಕ್ತರು, ವಲಯ ಜಂಟಿ ಆಯುಕ್ತರು,
ಮುಖ್ಯ ಎಂಜಿನಿಯರ್‌ಗಳು ಹಾಜರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು