ಶನಿವಾರ, ಸೆಪ್ಟೆಂಬರ್ 25, 2021
27 °C

ಬೆಂಗಳೂರು: ಕಗ್ಗದಾಸನಪುರ ಕೆರೆ ಒತ್ತುವರಿ ತೆರವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಂಗಳೂರು ಪೂರ್ವ ತಾಲ್ಲೂಕಿನ ಸಿ.ವಿ.ರಾಮನ್ ನಗರ ವಾರ್ಡ್‌ ವ್ಯಾಪ್ತಿಗೆ ಬರುವ ಕಗ್ಗದಾಸನಪುರ ಕೆರೆಯ ಒತ್ತುವರಿ ಜಾಗಗಳನ್ನು ಬಿಬಿಎಂಪಿ ವತಿಯಿಂದ ಗುರುವಾರ ತೆರವು ಮಾಡಲಾಯಿತು.

‘ಕಗ್ಗದಾಸನಪುರ ಗ್ರಾಮದ ಸರ್ವೇ ನಂಬರ್–141 ಹಾಗೂ ಬೈರಸಂದ್ರ ಗ್ರಾಮದ ಸರ್ವೇ ನಂಬರ್–5ರಲ್ಲಿ ಒಟ್ಟು 47 ಎಕರೆ ವಿಸ್ತೀರ್ಣದಲ್ಲಿ ಕೆರೆ ಇತ್ತು. ಈ ಪೈಕಿ ಕೆರೆಯ ಜಾಗದಲ್ಲಿ 2.8 ಎಕರೆ ಒತ್ತುವರಿಯಾಗಿತ್ತು’.

‘ಇದರಲ್ಲಿ 1.5 ಎಕರೆ ತೆರವು ಕಾರ್ಯಾಚರಣೆ ಆರಂಭಗೊಂಡಿದ್ದು, ₹25 ಕೋಟಿ ಮೌಲ್ಯದ 22 ಗುಂಟೆಯಷ್ಟು ಒತ್ತುವರಿ ಜಾಗವನ್ನು ಗುರುವಾರ ತೆರವುಗೊಳಿಸಲಾಗಿದೆ. ತೆರವು ಮಾಡಿದ ಸ್ಥಳದಲ್ಲಿ ಕೂಡಲೇ ತಂತಿ ಬೇಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಬಿಎಂಪಿ ತಿಳಿಸಿದೆ.

ಕಗ್ಗದಾಸನಪುರ ಕೆರೆ ಅಂಗಳದ ಜಮೀನಿನಲ್ಲಿ ಅನಧಿಕೃತವಾಗಿ ಒತ್ತುವರಿ ಮಾಡಿಕೊಂಡು, ನಿರ್ಮಿಸಿರುವ ಕಾಂಪೌಡ್ ಗೋಡೆ, ಅಪಾರ್ಟ್‌ಮೆಂಟ್ ಸಮುಚ್ಛಯ ಹಾಗೂ ಮನೆಗಳ ತೆರವು ಕಾರ್ಯಾಚರಣೆಗೆ ಹೈಕೋರ್ಟ್‌ ಆದೇಶಿಸಿತ್ತು. ಒತ್ತುವರಿದಾರರಿಗೆ ಪೂರ್ವ ತಾಲ್ಲೂಕಿನ ತಹಶೀಲ್ದಾರ್ ನೋಟಿಸ್‌ ಜಾರಿ ಮಾಡಿದ್ದರು.

‘ಕೆರೆಯಂಗಳದ 8 ಗುಂಟೆ ಒತ್ತುವರಿ ಪ್ರದೇಶದಲ್ಲಿ ಶ್ರೀಜಲಕಂಠೇಶ್ವರ ದೇವಾಲಯದ ಪೂಜಾರಿ ಮನೆ ಇದೆ. ಇದರ ತೆರವಿಗೆ ಸ್ಥಳೀಯರಿಂದ ವಿರೋಧವಿದೆ. ಇತರೆ ಒತ್ತುವರಿದಾರರಾದ ವೆಂಕಟಸುಬ್ರಹ್ಮಣ್ಯ ಮತ್ತು ಎಸ್‌.ಲಕ್ಷ್ಮೀನಾರಾಯಣ ಅವರಿಗೆ ಸೇರಿದ 3 ಗುಂಟೆ ಪ್ರದೇಶದ ವಿಲ್ಲಾ ಮತ್ತು ಮನೆ ಒತ್ತುವರಿ ಸಂಬಂಧ ಹೈಕೋರ್ಟ್‌ ಹಾಗೂ ಕರ್ನಾಟಕ ಮೇಲ್ಮನವಿ ನ್ಯಾಯಾಧೀಕರಣದಲ್ಲಿ ತಡೆಯಾಜ್ಞೆ ಇದೆ’.

‘ಐಶ್ಚರ್ಯ ಲೇಕ್ ವ್ಯೂ ರೆಸಿಡೆನ್ಸಿ ಅಪಾರ್ಟ್‌ಮೆಂಟ್ ಸಮುಚ್ಛಯದ 9 ಗುಂಟೆ ಹಾಗೂ ಮಠಪತಿ ಮೆರಿಡಿಯನ್ ಅಪಾರ್ಟ್‌ಮೆಂಟ್‌ಗೆ ಸೇರಿದ 5 ಮನೆಗಳ ತೆರವಿಗೂ ತಡೆಯಾಜ್ಞೆ ಇರುವುದರಿಂದ ಅಂತಿಮ ಆದೇಶದ ನಂತರ ಒತ್ತುವರಿ ತೆರವು ಮಾಡಲಾಗುವುದು. ತಡೆಯಾಜ್ಞೆ ಇರುವ ಜಾಗಗಳನ್ನು ಹೊರತುಪಡಿಸಿ, ಉಳಿದ ಒತ್ತುವರಿಗಳನ್ನು ತೆರವುಗೊಳಿಸಲಾಗುತ್ತಿದೆ’ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.

‘ಕೆರೆಯ ಸರ್ಕಾರಿ ಒತ್ತುವರಿಗಳಾದ ರಸ್ತೆ, ಸ್ವಾಮಿ ವಿವೇಕಾನಂದ ಯೋಗ ಕಟ್ಟಡ, ಪಾಲಿಕೆಯ ಒಣತ್ಯಾಜ್ಯ ಸಂಗ್ರಹಣಾ ಕೇಂದ್ರ ಹಾಗೂ ಡಾಂಬರು ರಸ್ತೆ ಒಳಗೊಂಡಂತೆ ಒಟ್ಟು 22 ಗುಂಟೆ ಸರ್ಕಾರಿ ಒತ್ತುವರಿಯನ್ನು ಪಾಲಿಕೆ ವತಿಯಿಂದ ಸಾರ್ವಜನಿಕರಿಗೆ ತೊಂದರೆಯಾಗದಂತೆ ಬದಲಿ ವ್ಯವಸ್ಥೆಯನ್ನು ಮಾಡಿ, ಒತ್ತುವರಿ ತೆರವುಗೊಳಿಸಲಾಗುವುದು’ ಎಂದು ಬಿಬಿಎಂಪಿ ಕೆರೆ ವಿಭಾಗದ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

ಪಾಲಿಕೆಯ ವಿಶೇಷ ಆಯುಕ್ತರು, ಸಿ.ವಿ.ರಾಮನ್ ನಗರ ವಿಭಾಗದ ಎಂಜಿನಿಯರ್‌ಗಳು, ಕಂದಾಯ ಇಲಾಖೆಯ ತಹಶೀಲ್ದಾರ್, ಬೆಂಗಳೂರು ಪೂರ್ವ ತಾಲ್ಲೂಕು ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕರು, ಕೆ.ಆರ್.ಪುರ ತಾಲ್ಲೂಕು ಭೂಮಾಪಕರು ಹಾಗೂ ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ಒತ್ತುವರಿ ತೆರವು ನಡೆಯಿತು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು