ಕೆರೆ ಪ್ರದೇಶ ಒತ್ತುವರಿ ತೆರವು

ಬೆಂಗಳೂರು: ಮಹದೇವಪುರ ವಲಯದ ಹೂಡಿ ವಾರ್ಡ್‌ನಲ್ಲಿನ ವಾರಣಾಸಿ ಗ್ರಾಮದಲ್ಲಿ ಒತ್ತುವರಿ ಮಾಡಿಕೊಳ್ಳಲಾಗಿದ್ದ 1.6 ಎಕರೆ ಕೆರೆ ಪ್ರದೇಶವನ್ನು ಶುಕ್ರವಾರ ತೆರವುಗೊಳಿಸಲಾಯಿತು.
ಬಿದರಹಳ್ಳಿ ಹೋಬಳಿಯ ವಾರಣಾಸಿ ಗ್ರಾಮದ ಸರ್ವೇ ನಂಬರ್ 47ರಲ್ಲಿರುವ ಒಟ್ಟು 8 ಎಕರೆ 24 ಗುಂಟೆ ವಿಸ್ತೀರ್ಣದ ವಾರಣಾಸಿ (ಜಿಂಕೆತಿಮ್ಮನಹಳ್ಳಿ) ಕೆರೆ ಅಂಗಳದ ಜಮೀನಿನಲ್ಲಿ ಸ್ಥಳೀಯರು, 1 ಎಕರೆ 6 ಗುಂಟೆ ಜಮೀನನ್ನು ಒತ್ತುವರಿ ಮಾಡಿಕೊಂಡು, ಶೀಟಿನ ಮನೆಗಳನ್ನು ನಿರ್ಮಿಸಿಕೊಂಡಿದ್ದರು. ಈ ಜಾಗ ಅಂದಾಜು ₹ 30 ಕೋಟಿ ಮೌಲ್ಯದ್ದಾಗಿದೆ.
‘ಎರಡು ಜೆಸಿಬಿ, 25 ಸಿಬ್ಬಂದಿ ಸಹಕಾರದೊಂದಿಗೆ ಕಾರ್ಯಾಚರಣೆ ನಡೆಸಲಾಗಿದೆ. ಒತ್ತುವರಿ ತೆರವುಗೊಳಿಸಿದ ಸ್ಥಳದಲ್ಲಿ ಕೂಡಲೇ ತಂತಿ ಬೇಲಿ ಅಳವಡಿಸಲು ಕ್ರಮ ಕೈಗೊಳ್ಳಲಾಗಿದೆ’ ಎಂದು ಬಿಬಿಎಂಪಿ ಕೆರೆ ವಿಭಾಗದ ಮುಖ್ಯ ಎಂಜಿನಿಯರ್ ಬಿ.ಟಿ.ಮೋಹನ್ ಕೃಷ್ಣ ಹೇಳಿದರು.
‘ಈ ಕೆರೆಯನ್ನು ನವ ನಗರೋತ್ಥಾನ ಯೋಜನೆಯಡಿ ₹ 3 ಕೋಟಿ ವೆಚ್ಚದಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದ್ದು, ಕಾಮಗಾರಿ ಪ್ರಗತಿಯಲ್ಲಿದೆ. ಶೇ 45ರಷ್ಟು ಕಾಮಗಾರಿ ಪೂರ್ಣಗೊಂಡಿದೆ’ ಎಂದು ಹೇಳಿದರು.
ಪಾಲಿಕೆ ವಿಶೇಷ ಆಯುಕ್ತ (ಆಸ್ತಿಗಳು) ರೆಡ್ಡಿ ಶಂಕರಬಾಬು ನೇತೃತ್ವದಲ್ಲಿ ಈ ಕಾರ್ಯಾಚರಣೆ ಹಮ್ಮಿಕೊಳ್ಳಲಾಗಿತ್ತು. ಕಂದಾಯ ಇಲಾಖೆಯ ತಹಶೀಲ್ದಾರ್, ಬೆಂಗಳೂರು ಪೂರ್ವ ತಾಲ್ಲೂಕು ಮತ್ತು ಭೂದಾಖಲೆಗಳ ಸಹಾಯಕ ನಿರ್ದೇಶಕ, ಕೆ.ಆರ್.ಪುರ ತಾಲ್ಲೂಕು ಭೂಮಾಪಕರು ಮತ್ತು ಹೂಡಿ ಉಪವಿಭಾಗದ ಎಂಜಿನಿಯರ್, ಸ್ಥಳೀಯ ಪೊಲೀಸರು ಹಾಗೂ ಪಾಲಿಕೆಯ ಬಿಎಂಟಿಎಫ್ ಪೊಲೀಸರು ಕಾರ್ಯಾಚರಣೆಗೆ ಕೈ ಜೋಡಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.