ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಾಲಿಕೆ ಸುಪರ್ದಿಗೆ ನಗರದ ಗ್ರಂಥಾಲಯಗಳು: ವಿರೋಧ

Last Updated 26 ಜೂನ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಗ್ರಂಥಾಲಯಗಳನ್ನು ಸಾರ್ವಜನಿಕ ಗ್ರಂಥಾಲಯ ಇಲಾಖೆಯಿಂದ ಬೇರ್ಪಡಿಸಿ ತನ್ನ ವಶಕ್ಕೆ ಪಡೆಯಲು ಮುಂದಾಗಿರುವ ಬಿಬಿಎಂಪಿ ಕ್ರಮಕ್ಕೆ ಸಾಹಿತಿಗಳು ವಿರೋಧ ವ್ಯಕ್ತ
ಪಡಿಸಿದ್ದಾರೆ.

ಸಾಹಿತಿ ಚಂದ್ರಶೇಖರ ಕಂಬಾರ, ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕವಿ ಡಾ.ಸಿದ್ಧಲಿಂಗಯ್ಯ ಮತ್ತಿತರರು ನಗರದಲ್ಲಿ ಬುಧವಾರ ಸಭೆ ನಡೆಸಿ, ಬಿಬಿಎಂಪಿ ಕ್ರಮ ವಿರೋಧಿಸಿ ನಿರ್ಣಯ ಕೈಗೊಂಡರು.

ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಎಚ್.ಎಸ್.ದೊರೆಸ್ವಾಮಿ, ‘ಪಾಲಿಕೆ ಪ್ರತಿವರ್ಷ ಸಂಗ್ರಹಿಸುವ ಶೇ 6ರಷ್ಟು ಗ್ರಂಥಾಲಯ ಸೆಸ್ ಅನ್ನು ಗ್ರಂಥಾಲಯ ಇಲಾಖೆಗೆ ವರ್ಗಾಯಿಸುತ್ತಿಲ್ಲ. ಕಳೆದ ಐದಾರು ವರ್ಷಗಳಲ್ಲಿ ₹325 ಕೋಟಿ ಸೆಸ್ ಪಾವತಿಸುವುದು ಬಾಕಿ ಇದೆ. ಆರೋಗ್ಯ ಹಾಗೂ ಶಿಕ್ಷಣ ಇಲಾಖೆಗೆ ನಿಯಮಿತವಾಗಿ ಸೆಸ್ ನೀಡುತ್ತಿರುವ ಬಿಬಿಎಂಪಿ, ಗ್ರಂಥಾಲಯ ಇಲಾಖೆಗೆ ಮಾತ್ರ ಹಣ ನೀಡುತ್ತಿಲ್ಲ’ ಎಂದರು.

ಈ ಕುರಿತು ಗ್ರಂಥಾಲಯ ಇಲಾಖೆ ಅಧಿಕಾರಿಗಳು ಹಾಗೂ ಸಾಹಿತಿಗಳು ಒತ್ತಡ ಹೇರಿದಾಗ, ಪಾಲಿಕೆಯು ನಗರ ವ್ಯಾಪ್ತಿಯ ಎಲ್ಲಾ 250 ಗ್ರಂಥಾಲಯಗಳನ್ನು ತನ್ನ ಸುಪರ್ದಿಗೆ ತೆಗೆದುಕೊಂಡು ನಿರ್ವಹಿಸಲು ಮುಂದಾಗಿದೆ. ಈ ಸಂಬಂಧ ಬಿಬಿಎಂಪಿ ಆಯುಕ್ತರು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಜತೆ ಮಾತುಕತೆ ನಡೆಸಿದ್ದು, ಪ್ರಸ್ತಾವನೆ ಸಲ್ಲಿಸಲು ಸಿದ್ಧತೆ ನಡೆಸಿದ್ದಾರೆ. ಈ ಮೂಲಕ ಬಿಬಿಎಂಪಿ ಕೋಟಿಗಟ್ಟಲೇ ಸೆಸ್ ಹಣವನ್ನು ನುಂಗಿ ಹಾಕಲು ಪ್ರಯತ್ನಿಸುತ್ತಿದೆ. ಇದಕ್ಕೆ ಅವಕಾಶ ಕಲ್ಪಿಸಬಾರದು. ಈ ಸಂಬಂಧ ಮುಖ್ಯ ಕಾರ್ಯದರ್ಶಿ ಅವರಿಗೆ ಗುರುವಾರ ಮನವಿ ಸಲ್ಲಿಸಲಾಗುವುದು ಎಂದರು.

ಗ್ರಂಥಾಲಯ ಇಲಾಖೆಯ ನಿವೃತ್ತ ನಿರ್ದೇಶಕ ಡಾ.ರಾಜೇಂದ್ರ ಕುಮಾರ್, ‘1965ರಿಂದ ರಾಜ್ಯದಲ್ಲಿ ಗ್ರಂಥಾಲಯ ಸಂಸ್ಕೃತಿ ಬೆಳೆದುಬಂದಿದೆ. ರಾಜ್ಯದಲ್ಲಿ ಒಟ್ಟು 7 ಸಾವಿರ ಗ್ರಂಥಾಲಯಗಳಿವೆ. ಸಾರ್ವಜನಿಕ ಗ್ರಂಥಾಲಯ ಕಾಯ್ದೆಯಡಿ ಇವುಗಳನ್ನು ಸ್ಥಾಪಿಸಲಾಗಿದ್ದು, ಆಯಾ ಸ್ಥಳೀಯ ಸಂಸ್ಥೆಗಳು ಸಂಗ್ರಹಿಸುವ ಸೆಸ್ ನಲ್ಲಿ ಶೇ 6 ರಷ್ಟು ಮೊತ್ತವನ್ನು ಗ್ರಂಥಾಲಯಗಳ ನಿರ್ವಹಣೆಗೆ ನೀಡುವುದು ನಿಯಮ. ಆದರೆ, ಬಿಬಿಎಂಪಿ ಈಗ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಗ್ರಂಥಾಲಯಗಳನ್ನೇ ತನ್ನ ಸುಪರ್ದಿಗೆ ಪಡೆಯಲು ಮುಂದಾಗಿದೆ. ಇದಕ್ಕೆ ಬಿಬಿಎಂಪಿ ಬೈ–ಲಾದಲ್ಲಿ ಕೂಡ ಅವಕಾಶ ಇಲ್ಲ’ ಎಂದರು.

ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಎಸ್.ಜಿ.ಸಿದ್ಧರಾಮಯ್ಯ , ಕನ್ನಡ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ಡಾ.ವಸುಂಧರಾ ಭೂಪತಿ, ಗ್ರಂಥಾಲಯ ಪುಸ್ತಕಗಳ ಆಯ್ಕೆ ಸಮಿತಿ ಸದಸ್ಯೆ ಆರ್.ಪೂರ್ಣಿಮಾ, ಪ್ರಕಾಶಕ ಪ್ರಕಾಶ್ ಕಂಬತ್ತಳ್ಳಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT