ಶನಿವಾರ, ಅಕ್ಟೋಬರ್ 19, 2019
27 °C
ಕಾಂಗ್ರೆಸ್‌ ದಾಳ ಉರುಳಿಸುವ ಮುನ್ನವೇ ಎಚ್ಚೆತ್ತ ಕಮಲ ಪಾಳಯ

ಪಕ್ಷೇತರರ ಮತ ಬುಟ್ಟಿಗೆ ಬಿಜೆಪಿ ಗಾಳ?

Published:
Updated:

ಬೆಂಗಳೂರು: ಕಳೆದ ನಾಲ್ಕು ಅವಧಿಗಳಲ್ಲಿ ಮೇಯರ್‌ ಚುನಾವಣೆ ಸಂದರ್ಭದಲ್ಲಿ ಕೊನೆ ಕ್ಷಣದ ಎಡವಟ್ಟಿನಿಂದಾಗಿ ಬಿಬಿಎಂಪಿಯಲ್ಲಿ ಅಧಿಕಾರ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ಎಚ್ಚರಿಕೆಯ ನಡೆ ಇಟ್ಟಿದೆ.

ಅಂತಿಮ ಹಂತದ ರಾಜಕೀಯ ಬೆಳವಣಿಗೆಯಿಂದ ಏನು ಬೇಕಾದರೂ ಆಗಬಹುದು ಎಂಬ ಪಾಠ ಕಲಿತಿರುವ ಕಮಲ ಪಾಳಯ ಈ ಬಾರಿ ಪಕ್ಷೇತರರ ಮತ ಕೈಜಾರದಂತೆ ನೋಡಿಕೊಳ್ಳಲು ಈಗಾಗಲೇ ಕಾರ್ಯತಂತ್ರ ರೂಪಿಸಿದೆ.

ಒಟ್ಟು ಸಂಖ್ಯಾಬಲದ ಪ್ರಕಾರ ಅಭ್ಯರ್ಥಿಯ ಗೆಲುವಿಗೆ 129 ಮತಗಳ ಅಗತ್ಯವಿದೆ. ಸದ್ಯಕ್ಕೆ ಬಿಜೆಪಿ ಹೊಂದಿರುವ ಅಧಿಕೃತ ಮತಗಳ ಸಂಖ್ಯೆ 125 ಮಾತ್ರ. ಹಾಗಾಗಿ, ಪಾಲಿಕೆಯ ಚುಕ್ಕಾಣಿ ಹಿಡಿಯಲು ಬಿಜೆಪಿಗೆ ಪಕ್ಷೇತರ ಸದಸ್ಯರ ಅಥವಾ ಅನರ್ಹಗೊಂಡ ಶಾಸಕರ ಕ್ಷೇತ್ರಗಳಲ್ಲಿನ ಕಾಂಗ್ರೆಸ್‌ ಅಥವಾ ಜೆಡಿಎಸ್‌ ಕಾರ್ಪೊರೇಟರ್‌ಗಳ ಬೆಂಬಲವೂ ಅತ್ಯಗತ್ಯ.

ಕಳೆದ ವರ್ಷ, ಆರು ಪಕ್ಷೇತರ ಸದಸ್ಯರಲ್ಲಿ ಮಾರತ್ತಹಳ್ಳಿಯ ರಮೇಶ್‌ ಹಾಗೂ ಹಲಸೂರು ವಾರ್ಡ್‌ನ ಮಮತಾ ಸರವಣ ಬಿಜೆಪಿ ಪರ ವಹಿಸಿದ್ದರು. ಕೊನೆ ಕ್ಷಣದವರೆಗೂ ಬಿಜೆಪಿ ಜೊತೆಗಿದ್ದ ಹೊಯ್ಸಳನಗರದ ಎಸ್‌.ಆನಂದ ಕುಮಾರ್‌ ಮತದಾನದ ಸಂದರ್ಭದಲ್ಲಿ ದಿಢೀರ್‌ ಕಾಂಗ್ರೆಸ್‌ನತ್ತ ಜಿಗಿದಿದ್ದರು. ಆರಂಭದಲ್ಲಿ ಬಿಜೆಪಿ ಜೊತೆ ಗುರುತಿಸಿಕೊಂಡಿದ್ದ ಮೂವರು ಪಕ್ಷೇತರ ಸದಸ್ಯರು ಬಳಿಕ ಮೈತ್ರಿಕೂಟದ ಜೊತೆ ಗುರುತಿಸಿಕೊಂಡರು. ಈ ಬೆಳವಣಿಗೆಗಳಿಂದಾಗಿ ಬಿಜೆಪಿಗೆ ಅಧಿಕಾರದ ಚುಕ್ಕಾಣಿ ಕೈತಪ್ಪಿತ್ತು.

ಕಳೆದ ಬಾರಿ ಕಾಂಗ್ರೆಸ್‌ ಜೊತೆ ಗುರುತಿಸಿಕೊಂಡಿದ್ದ ಪಕ್ಷೇತರ ಸದಸ್ಯರಾದ ಕೊನೇನ ಅಗ್ರಹಾರ ವಾರ್ಡ್‌ನ ಚಂದ್ರಪ್ಪ ರೆಡ್ಡಿ, ದೊಮ್ಮಲೂರು ವಾರ್ಡ್‌ನ ಲಕ್ಷ್ಮೀನಾರಾಯಣ, ಕೆಂಪಾಪುರ ಅಗ್ರಹಾರ ವಾರ್ಡ್‌ನ ಎಂ.ಗಾಯತ್ರಿ ಅವರನ್ನು ಸೆಳೆಯುವಲ್ಲಿ ಬಿಜೆಪಿ ಮುಖಂಡರು ಬಹುತೇಕ ಯಶಸ್ವಿಯಾಗಿದ್ದಾರೆ. ಆನಂದ್‌ ಅವರ ನಡೆ ಇನ್ನೂ ನಿಗೂಢ. ಲಕ್ಷ್ಮೀನಾರಾಯಣ ಹಾಗೂ ಗಾಯತ್ರಿ ಅವರನ್ನು ಈಗಾಗಲೇ ಗೋವಾದ ರೆಸಾರ್ಟ್‌ಗೆ ಕರೆಯದೊಯ್ಯಲಾಗಿದೆ ಎಂಬ ಮಾತುಗಳು ಪಾಲಿಕೆ ಪಡಸಾಲೆಯಲ್ಲಿ ಕೇಳಿಬರುತ್ತಿವೆ.‌

‘ಈ ಹಿಂದೆ ಮಾಡಿದ ತಪ್ಪಿನಿಂದ ಪಾಠ ಕಲಿತಿದ್ದೇವೆ. ರಾಜ್ಯದಲ್ಲೂ ನಮ್ಮದೇ ಸರ್ಕಾರವಿದೆ. ಸದ್ಯಕ್ಕೆ ನಮಗೆ ಬಹುಮತಕ್ಕೆ ಐದು ಮತಗಳ ಕೊರತೆ ಇದೆ. ಈ ಕೊರತೆ ನೀಗಿಸಲು ಬೇಕಾದ ಸಿದ್ಧತೆ ಮಾಡಿಕೊಂಡಿದ್ದೇವೆ’ ಎಂದು ಶಾಸಕ ಸತೀಶ ರೆಡ್ಡಿ ‘ಪ್ರಜಾವಾಣಿ’ಗೆ ತಿಳಿಸಿದರು.

ವಿಪ್‌ ನೀಡಲು ಕಾಂಗ್ರೆಸ್‌ ಸಿದ್ಧತೆ

ಅನರ್ಹಗೊಂಡಿರುವ ಶಾಸಕರ ಬೆಂಬಲಿಗ ಕಾರ್ಪೊರೇಟರ್‌ಗಳು ಬಿಜೆಪಿ ಅಭ್ಯರ್ಥಿಯನ್ನು ಬೆಂಬಲಿಸುವುದನ್ನು ತಪ್ಪಿಸುವ ಸಲುವಾಗಿ ಕಾಂಗ್ರೆಸ್‌ ಎಲ್ಲ ಮತದಾರರಿಗೂ ವಿಪ್‌ ನೀಡಲು ಸಿದ್ಧತೆ ನಡೆಸಿದೆ.

‘ವಿಪ್‌ ಉಲ್ಲಂಘಿಸುವವರ ಸದಸ್ಯತ್ವ ಅನರ್ಹಗೊಳ್ಳುವಂತೆ ಮಾಡುತ್ತೇವೆ’ ಎಂದು ಕಾಂಗ್ರೆಸ್‌ನ ಹಿರಿಯ ಕಾರ್ಪೊರೇಟರ್‌ ಒಬ್ಬರು ಎಚ್ಚರಿಕೆ ನೀಡಿದರು.

‘ವಿಪ್‌ ಉಲ್ಲಂಘಿಸಿದರೂ ಸದಸ್ಯರನ್ನು ಅನರ್ಹಗೊಳಿಸುವ ಬಗ್ಗೆ ತೀರ್ಮಾನ ಕೈಗೊಳ್ಳಬೇಕಾಗಿರುವುದು ಮೇಯರ್‌. ಕಾಂಗ್ರೆಸ್‌ನವರಿಗೆ ಮೇಯರ್ ಹುದ್ದೆ ಒಲಿಯದಿದ್ದರೆ ವಿಪ್‌ ಪರಿಸ್ಥಿತಿ ಏನಾಗಬಹುದು ಎಂದು ಯಾರು ಬೇಕಾದರೂ ಊಹಿಸಬಹುದು’ ಎಂದು ಅನರ್ಹ ಶಾಸಕರ ಜೊತೆ ಗುರುತಿಸಿಕೊಂಡಿರುವ ಕಾಂಗ್ರೆಸ್‌ನ ಇನ್ನೊಬ್ಬ ಕಾರ್ಪೊರೇಟರ್ ತಿಳಿಸಿದರು. 

ಪದ್ಮನಾಭ ರೆಡ್ಡಿ ಪರ ಒಲವು

ಶಾಸಕ ಸತೀಶ್‌ ರೆಡ್ಡಿ ಮುಂದಾಳತ್ವದಲ್ಲಿ ಪಕ್ಷೇತರ ಸದಸ್ಯರನ್ನು ಸೆಳೆಯುವ ಪ್ರಯತ್ನ ನಡೆದಿದೆ. ಬಿಜೆಪಿಯನ್ನು ಬೆಂಬಲಿಸಲು ಒಪ್ಪಿರುವ ಪಕ್ಷೇತರ ಸದಸ್ಯರು ಪದ್ಮನಾಭ ರೆಡ್ಡಿ ನಾಯಕತ್ವದ ಬಗ್ಗೆ ಒಲವು ತೋರಿದ್ದಾರೆ.

‘ನಾವೆಲ್ಲ ಪದ್ಮನಾಭ ರೆಡ್ಡಿ ಅವರನ್ನೇ ಅಭ್ಯರ್ಥಿ ಮಾಡುವಂತೆ ಕೋರಿದ್ದೇವೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಪಕ್ಷೇತರ ಸದಸ್ಯರೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ಮೀಸಲಾತಿ ಬದಲಾಯಿಸದಿರಿ–ಹೊಸ ಬೇಡಿಕೆ

ಇದುವರೆಗೆ ಮೇಯರ್‌ ಚುನಾವಣೆಯಲ್ಲಿ ನಿರ್ದಿಷ್ಟ ಪಕ್ಷಕ್ಕೆ ಬೆಂಬಲ ನೀಡಲು ಪಕ್ಷೇತರ ಸದಸ್ಯರು ಪ್ರಮುಖ ಸ್ಥಾಯಿ ಸಮಿತಿಗಳ ಅಧ್ಯಕ್ಷ ಸ್ಥಾನದ ಬೇಡಿಕೆ ಇಡುತ್ತಿದ್ದರು. ಆದರೆ, ಈ ಬಾರಿ ಅದಕ್ಕಿಂತಲೂ ತಮ್ಮ ಕ್ಷೇತ್ರವನ್ನು ಉಳಿಸಿಕೊಳ್ಳುವ ಬಗ್ಗೆ ಹೆಚ್ಚು ಚಿಂತಿತರಾಗಿದ್ದಾರೆ. ‘ಪಾಲಿಕೆ ವಾರ್ಡ್‌ಗಳ ಮರುವಿಂಗಡಣೆ ನಡೆಯುತ್ತಿದೆ. ಮುಂದಿನ ಅವಧಿಗೆ ವಾರ್ಡ್‌ನ ಮೀಸಲಾತಿ ಬದಲಾಗುವ ಸಾಧ್ಯತೆಯೂ ಇದೆ. ಹಾಗಾಗಿ, ನಾವು ಪ್ರತಿನಿಧಿಸುವ ವಾರ್ಡ್‌ಗಳ ಮೀಸಲಾತಿ ಬದಲಾಯಿಸದಂತೆ ಬಿಜೆಪಿ ಮುಖಂಡರನ್ನು ಒತ್ತಾಯಿಸಿದ್ದೇವೆ’ ಎಂದು ಪಕ್ಷೇತರ ಸದಸ್ಯರೊಬ್ಬರು ತಿಳಿಸಿದರು. 

Post Comments (+)