ಮಂಗಳವಾರ, ನವೆಂಬರ್ 29, 2022
29 °C

ವಸತಿ ಸಮುಚ್ಚಯಕ್ಕೆ ನಾಲೆ ಜಾಗ ಒತ್ತುವರಿ: ಎನ್‌ಜಿಟಿ ಮೆಟ್ಟಿಲೇರಿದ ಪ್ರಕರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ: ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆಯ (ಬಿಬಿಎಂಪಿ) ಮಹದೇವಪುರ ವಲಯದ ಕುಂಬೇನ ಅಗ್ರಹಾರದಲ್ಲಿ ವಸತಿ ಸಮುಚ್ಚಯದ ಮಾಲೀಕರು ನಾಲೆಯ ಜಾಗ ಒತ್ತುವರಿ ಮಾಡಿದ್ದು, ಈ ಪ್ರಕರಣ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಯ (ಎನ್‌ಜಿಟಿ) ದಕ್ಷಿಣ ವಲಯ ಪೀಠದ ಮೆಟ್ಟಿಲೇರಿದೆ.  

ಕುಂಬೇನ ಅಗ್ರಹಾರದ ಸರ್ವೆ ಸಂಖ್ಯೆ 2/1 ಹಾಗೂ 2/7ರಲ್ಲಿ ವೆಂಕಟೇಶ್ವರ ಬಿಲ್ಡರ್‌ (ಎಸ್‌.ವಿ.ಎಲಿಗೆಂಟ್) ವಸತಿ ಸಮುಚ್ಚಯ ನಿರ್ಮಾಣ ಮಾಡುತ್ತಿದೆ. ಈ ಬಿಲ್ಡರ್‌ ನಾಲೆಯ ಮೀಸಲು ಪ್ರದೇಶದಲ್ಲಿ 203 ಚದರ ಮೀಟರ್‌ನಲ್ಲಿ ಈಜುಕೊಳ, 20.50 ಚದರ ಮೀಟರ್‌ನಲ್ಲಿ ಸ್ನಾನದ ಕೊಠಡಿಗಳನ್ನು ನಿರ್ಮಾಣ ಮಾಡಿದ್ದಾರೆ. ಎನ್‌ಜಿಟಿಯಲ್ಲಿ ಪ್ರಕರಣ ದಾಖಲಾದ ಬೆನ್ನಲ್ಲೇ ಎಚ್ಚೆತ್ತಿರುವ ಪಾಲಿಕೆಯು, ಬಿಬಿಎಂಪಿ ಕಾಯ್ದೆ 2020ರ ಕಟ್ಟಡ ನಿಯಮಾವಳಿ ಹಾಗೂ ಬೈಲಾ ಉಲ್ಲಂಘಿಸಿ ಅನಧಿಕೃತ ಕಟ್ಟಡಗಳನ್ನು ನಿರ್ಮಾಣ ಮಾಡಲಾಗಿದೆ ಎಂದು ಹೇಳಿದೆ. ಜತೆಗೆ, ಅನಧಿಕೃತ ನಿರ್ಮಾಣಗಳನ್ನು ಕೂಡಲೇ ತೆರವು ಮಾಡಬೇಕು ಎಂದು ನಿರ್ದೇಶನ ನೀಡಿದೆ. ಅನಧಿಕೃತ ಕಟ್ಟಡ ನಿರ್ಮಾಣದ ತೆರವಿಗೆ ಕ್ರಮವನ್ನೂ ಕೈಗೊಳ್ಳಲಾಗಿದೆ ಎಂದೂ ಎನ್‌ಜಿಟಿಗೆ ವರದಿ ಸಲ್ಲಿಸಿದೆ. 

ನಾಲೆಯ ಮೀಸಲು ಪ್ರದೇಶದಲ್ಲಿ ನಿಯಮಬಾಹಿರವಾಗಿ ವಸತಿ ಸಮುಚ್ಚಯ ನಿರ್ಮಾಣ ಮಾಡಲಾಗುತ್ತಿದೆ ಎಂದು ಆರೋಪಿಸಿ ಸ್ಥಳೀಯ ನಿವಾಸಿ ಪರಮೇಶ್‌ ವಿ. ಎಂಬುವರು ಬಿಬಿಎಂಪಿಗೆ ದೂರು ಸಲ್ಲಿಸಿದ್ದರು. ಆದರೆ, ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಂಡಿರಲಿಲ್ಲ. ಬಳಿಕ ಪರಮೇಶ್, ಎನ್‌ಜಿಟಿಯಲ್ಲಿ ಪ್ರಕರಣ ದಾಖಲಿಸಿದ್ದರು. 

ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯ ಉಪ ಪರಿಸರ ಅಧಿಕಾರಿ 2022ರ ಏಪ್ರಿಲ್‌ 27ರಂದು ಸ್ಥಳ ಪರಿಶೀಲನೆ ನಡೆಸಿ ವರದಿ ಸಲ್ಲಿಸಿದ್ದರು. ಮಹಾಯೋಜನೆಯ ನಿಯಮಗಳನ್ನು ಉಲ್ಲಂಘಿಸಿ ನಿರ್ಮಾಣ ಚಟುವಟಿಕೆ ನಡೆಸಲಾಗಿದೆ ಎಂದು ವರದಿ ಸಲ್ಲಿಸಿದ್ದರು. ಎನ್‌ಜಿಟಿಯಲ್ಲಿ ಜುಲೈ 18ರಂದು ನಡೆದ ವಿಚಾರಣೆಯ ವೇಳೆ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧಿಕಾರಿಗಳು ಈ ಬಗ್ಗೆ ಮಾಹಿತಿ ನೀಡಿದ್ದರು. ಅನಧಿಕೃತವಾಗಿ ಕಟ್ಟಡ ನಿರ್ಮಾಣ ಮಾಡಿದ್ದರೂ ಬಿಬಿಎಂಪಿ ಅಧಿಕಾರಿಗಳು ಕ್ರಮ ಕೈಗೊಳ್ಳದ ಎನ್‌ಜಿಟಿ ಅಚ್ಚರಿ ವ್ಯಕ್ತಪಡಿಸಿತ್ತು. 

ಸೆಪ್ಟೆಂಬರ್‌ 19ರಂದು ನಡೆದ ಪ್ರಕರಣದ ವಿಚಾರಣೆಯ ವೇಳೆ ಬಿಬಿಎಂಪಿ ಅಧಿಕಾರಿಗಳು, ಅಕ್ರಮ ನಿರ್ಮಾಣಗಳನ್ನು ತೆರವು ಮಾಡಲಾಗಿದೆ ಎಂದು ಮಾಹಿತಿ ನೀಡಿದರು. ಈ ಸಂಬಂಧ ಕೈಗೊಂಡ ಕ್ರಮಗಳ ವರದಿಯನ್ನು ಎನ್‌ಜಿಟಿಗೆ ಸಲ್ಲಿಸಿದರು. ಅರ್ಜಿದಾರರ ವಕೀಲರು, ‘ನಾಲೆಯ ಮೀಸಲು ಪ್ರದೇಶ ಒತ್ತುವರಿ ಮಾಡಿ ಕಟ್ಟಡದ ಕಾಂಪೌಂಡ್‌ ನಿರ್ಮಾಣ ಮಾಡಲಾಗಿದೆ’ ಎಂದು ವಾದಿಸಿದರು. ಈ ಬಗ್ಗೆ ಅಧಿಕಾರಿಗಳು ಸರ್ವೆ ನಡೆಸಿ ವರದಿ ಸಲ್ಲಿಸಬೇಕು ಎಂದು ಎನ್‌ಜಿಟಿ ಆದೇಶ ಹೊರಡಿಸಿದೆ. ಪ್ರಕರಣದ ವಿಚಾರಣೆಯನ್ನು ಅಕ್ಟೋಬರ್‌ 10ಕ್ಕೆ ಮುಂದೂಡಲಾಗಿದೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು