ಸೋಮವಾರ, ಜುಲೈ 4, 2022
24 °C
₹180 ಕೋಟಿ ಮೊತ್ತದಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಯೋಜನೆ ಸಿದ್ಧ

ಹೊರ ವಲಯದ ಆರೋಗ್ಯ ಕೇಂದ್ರಗಳಿಗೆ ಸ್ವಂತ ಕಟ್ಟಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ನಗರದ ಹೊರ ವಲಯದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಖಾಸಗಿ ಕಟ್ಟಡಗಳಲ್ಲಿ ನಡೆಯುತ್ತಿದ್ದು, ₹180 ಕೋಟಿ ಮೊತ್ತದಲ್ಲಿ ಸ್ವಂತ ಕಟ್ಟಡ ನಿರ್ಮಿಸಲು ಯೋಜನೆ ಸಿದ್ಧಪಡಿಸಲಾಗಿದೆ’ ಎಂದು ಬಿಬಿಎಂಪಿ ವಿಶೇಷ ಆಯುಕ್ತ(ಆರೋಗ್ಯ) ಡಾ.ಕೆ.ವಿ. ತ್ರಿಲೋಕಚಂದ್ರ ತಿಳಿಸಿದರು.

‘ಕೋವಿಡ್ ಸಂದರ್ಭದಲ್ಲಿ 57 ಕಡೆ ಖಾಸಗಿ ಕಟ್ಟಡದಲ್ಲಿ ಆರೋಗ್ಯ ಕೇಂದ್ರಗಳನ್ನು ತೆರೆಯಲಾಗಿತ್ತು. ಅವುಗಳಿಗೆ ಈಗ ಸ್ವಂತ ಕಟ್ಟಡ ನಿರ್ಮಿಸಲು ಯೋಜನೆ ರೂಪಿಸಿ ಪ್ರಸ್ತಾವನೆ ಸಲ್ಲಿಸಲಾಗಿದೆ’ ಎಂದು ಶುಕ್ರವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ನಗರದೊಳಗಿನ 141 ಪ್ರಾಥಮಿಕ ಆರೋಗ್ಯ ಕೇಂದ್ರಗಳನ್ನು ಭಾರತೀಯ ಸಾರ್ವಜನಿಕ ಆರೋಗ್ಯ ಗುಣಮಟ್ಟ (ಐಪಿಎಚ್‌ಎಸ್‌) ಮಾರ್ಗಸೂಚಿ ಪ್ರಕಾರ ಮೇಲ್ದರ್ಜೆಗೆ ಏರಿಸಲಾಗುತ್ತಿದೆ. ಸಿಬ್ಬಂದಿ ನೇಮಕಾತಿ ಸೇರಿ ಎಲ್ಲ ರೀತಿಯ ಮೂಲಸೌಕರ್ಯ ಹೆಚ್ಚಿಸಲಾಗುವುದು ಎಂದು ಹೇಳಿದರು.

ಕೋವಿಡ್‌ ಪ್ರಮಾಣ ಹತೋಟಿಯಲ್ಲಿದೆ. ದಿನಕ್ಕೆ ಸರಾಸರಿ 15 ಸಾವಿರ ಮಂದಿಯನ್ನು ಪರೀಕ್ಷೆ ಮಾಡಲಾಗುತ್ತಿದ್ದು, 120 ರಿಂದ 140 ಪ್ರಕರಣಗಳಷ್ಟೇ ದಾಖಲಾಗುತ್ತಿವೆ. ಕೋವಿಡ್‌ ಬೂಸ್ಟರ್ ಡೋಸ್ ಲಸಿಕೆಯನ್ನು 6 ಲಕ್ಷ ಜನರಿಗೆ ನೀಡಲಾಗಿದೆ. ಶಾಲೆಗಳು ಆರಂಭ ಆಗಿರುವುದರಿಂದ ಮುಂದಿನ ತಿಂಗಳಲ್ಲಿ ಎಲ್ಲ ಮಕ್ಕಳಿಗೂ ಲಸಿಕೆ ನೀಡಲಾಗುವುದು ಎಂದು ಹೇಳಿದರು.

‘ಶೇಷಾದ್ರಿ ರಸ್ತೆ: 20 ದಿನದಲ್ಲಿ ಕಾಮಗಾರಿ ಪೂರ್ಣ’
‘ಶೇಷಾದ್ರಿ ರಸ್ತೆ ವೈಟ್‌ಟಾಪಿಂಗ್ ಕಾಮಗಾರಿ ಇನ್ನು 10 ದಿನಗಳಲ್ಲಿ ಪೂರ್ಣಗೊಳ್ಳಲಿದ್ದು, 20 ದಿನಗಳಲ್ಲಿ ಸಂಚಾರಕ್ಕೆ ಮುಕ್ತವಾಗಲಿದೆ’ ಎಂದು ತ್ರಿಲೋಕಚಂದ್ರ ಅವರು ತಿಳಿಸಿದರು.

₹16 ಕೋಟಿ ಮೊತ್ತದಲ್ಲಿ 1.2 ಕಿಲೋ ಮೀಟರ್‌ ಉದ್ದದ ರಸ್ತೆಗೆ ವೈಟ್‌ಟಾಪಿಂಗ್ ಮಾಡಲಾಗುತ್ತಿದೆ. ಶೇ 70ರಷ್ಟು ಕಾಮಗಾರಿ ಪೂರ್ಣಗೊಂಡಿದ್ದು, ಸಂಚಾರ ದಟ್ಟಣೆ ಹೆಚ್ಚಿರುವ ರಸ್ತೆ ಆಗಿರುವುದರಿಂದ ತ್ವರಿತಗತಿಯಲ್ಲಿ ಕಾಮಗಾರಿ ನಿರ್ವಹಿಸಲಾಗುತ್ತಿದೆ ಎಂದು ಅವರು ಹೇಳಿದರು.

‘ಎಲ್ಲ ವಲಯಗಳಲ್ಲೂ ರಸ್ತೆ ಗುಂಡಿ ಮುಚ್ಚುವ ಕೆಲಸವನ್ನು ಯುದ್ಧೋಪಾದಿಯಲ್ಲಿ ಮಾಡಲಾಗುತ್ತಿದ್ದು, 11,454 ಗುಂಡಿ ಮುಚ್ಚಲಾಗಿದೆ. ಬಾಕಿ 5 ಸಾವಿರದಷ್ಟು ಗುಂಡಿ ಮುಚ್ಚುವ ಕಾಮಗಾರಿ ಆರಂಭವಾಗಿದೆ. ಗುಣಮಟ್ಟ ಕಾಯ್ದುಕೊಳ್ಳಲು ಆದ್ಯತೆ ನೀಡಲಾಗುತ್ತಿದೆ’ ಎಂದು ಅವರು ಹೇಳಿದರು.

‘503 ಶಿಥಿಲ ಕಟ್ಟಡ’
ನಗರದಲ್ಲಿ ಶಿಥಿಲಾವಸ್ಥೆಯಲ್ಲಿರುವ 503 ಕಟ್ಟಡಗಳನ್ನು ಗುರುತಿಸಲಾಗಿದ್ದು, ನೋಟಿಸ್‌ ನೀಡುವ ಪ್ರಕ್ರಿಯೆ ಆರಂಭವಾಗಿದೆ ಎಂದು ತ್ರಿಲೋಕಚಂದ್ರ ತಿಳಿಸಿದರು.

ಇವುಗಳ ತೆರವಿಗೆ ಬಜೆಟ್‌ನಲ್ಲಿ ಹಣ ಮೀಸಲಿಟ್ಟಿಲ್ಲ. ಆದರೆ, ತುರ್ತಾಗಿ ತೆರವಾಗಬೇಕಿದ್ದರೆ, ಹಣದ ತೊಂದರೆ ಎದುರಾಗುವುದಿಲ್ಲ ಎಂದರು.

‌‘ಅಕ್ರಮ ಕಟ್ಟಡಗಳ ತೆರವು ವಿಷಯದಲ್ಲಿ ಹೈಕೋರ್ಟ್‌ ಮೇಲುಸ್ತುವಾರಿ ವಹಿಸುತ್ತಿದೆ. ನಕ್ಷೆ ಉಲ್ಲಂಘನೆ ಮಾಡಿ ಕಟ್ಟಿರುವ ಕಟ್ಟಡ, ನಕ್ಷೆಗೆ ಮಂಜೂರಾತಿಯನ್ನೇ ಪಡೆಯದ ಕಟ್ಟಡ, ಸರ್ಕಾರಿ ಜಾಗದಲ್ಲಿ ನಿರ್ಮಿಸಿರುವ ಕಟ್ಟಡ ಹೀಗೆ ಮೂರು ರೀತಿ ಕಟ್ಟಡಗಳನ್ನು ಪಟ್ಟಿ ಮಾಡಲಾಗಿದೆ. ಈವರೆಗೆ 13 ಕಟ್ಟಡ ತೆರವುಗೊಳಿಸಲಾಗಿದೆ’ ಎಂದು ವಿವರಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು