ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅವೈಜ್ಞಾನಿಕವಾಗಿ ರಸ್ತೆ ಗುಂಡಿ ಮುಚ್ಚಿದರೆ ₹1,000 ದಂಡ

ಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿರುವ ಗುಂಡಿಗೆ ಎಇ, ಎಇಇ ನೇರ ಹೊಣೆ
Last Updated 20 ಆಗಸ್ಟ್ 2019, 20:15 IST
ಅಕ್ಷರ ಗಾತ್ರ

ಬೆಂಗಳೂರು: ‘ಬಿಬಿಎಂಪಿ ವ್ಯಾಪ್ತಿಯ ರಸ್ತೆಗಳಲ್ಲಿರುವ ಗುಂಡಿಗಳನ್ನು ವೈಜ್ಞಾನಿಕವಾಗಿ ಮುಚ್ಚಲು ತಕ್ಷಣವೇ ಕ್ರಮ ಕೈಗೊಳ್ಳಬೇಕು. ರಸ್ತೆ ಗುಂಡಿಗಳನ್ನು ಅವೈಜ್ಞಾನಿಕವಾಗಿ ಮುಚ್ಚಿರುವುದು ಕಂಡು ಬಂದರೆ ಆ ವಾರ್ಡ್‌ಗೆ ಸಂಬಂಧಿಸಿದ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ಗೆ (ಎಇಇ) ಹಾಗೂ ಸಹಾಯಕ ಎಂಜಿನಿಯರ್‌ಗೆ (ಎಇ) ತಲಾ ₹1 ಸಾವಿರ ದಂಡ ವಿಧಿಸಲಾಗುವುದು’

ಪಾಲಿಕೆ ಎಂಜಿನಿಯರಿಂಗ್‌ ವಿಭಾಗದ ಮುಖ್ಯಸ್ಥ ಎಂ.ಆರ್.ವೆಂಕಟೇಶ್ ಅವರು ನೀಡಿರುವ ಎಚ್ಚರಿಕೆ ಇದು.

ಬಿಬಿಎಂಪಿ ದಕ್ಷಿಣ ವಲಯ ವ್ಯಾಪ್ತಿಯಲ್ಲಿ ರಸ್ತೆ ಗುಂಡಿ, ರಸ್ತೆ ಪಕ್ಕದಲ್ಲಿ ಮಣ್ಣಿನ ರಾಶಿ, ಪಾದಚಾರಿ ಮಾರ್ಗದ ಸಮಸ್ಯೆಗಳ ಬಗ್ಗೆ ಚರ್ಚಿಸುವ ಸಲುವಾಗಿ ಮಂಗಳವಾರ ಮೇಯರ್‌ ಗಂಗಾಂಬಿಕೆ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಅವರು ಈ ವಿಚಾರ ತಿಳಿಸಿದರು.‌

‘ನಗರದ ಯಾವುದೇ ವಾರ್ಡ್‌ನಲ್ಲೂ ರಸ್ತೆ ಗುಂಡಿ ಇರಬಾರದು. ಎಷ್ಟು ಗುಂಡಿಗಳನ್ನುಅವೈಜ್ಞಾನಿಕವಾಗಿ ಮುಚ್ಚಲಾಗುತ್ತದೋ ಅಷ್ಟಕ್ಕೂ ಎಇಇ ಹಾಗೂ ಎಇ ದಂಡ ಪಾವತಿಸಬೇಕಾಗುತ್ತದೆ’ ಎಂದು ಸ್ಪಷ್ಟಪಡಿಸಿದರು.

ಮೇಯರ್‌ ಗಂಗಾಂಬಿಕೆ, ‘ವಾರ್ಡ್ ಸಾರ್ವಜನಿಕ ಸೌಕರ್ಯಗಳ ನಿರ್ವಹಣೆ ಜವಾಬ್ದಾರಿ ಸಹಾಯಕ‌ ಎಂಜಿನಿಯರ್‌ಗಳದ್ದು. ನಿತ್ಯ ಒಂದು ಗಂಟೆ ವಾರ್ಡ್ ರಸ್ತೆಗಳಲ್ಲಿ ಸಂಚರಿಸಿದರೆ ಯಾವೆಲ್ಲ ಸಮಸ್ಯೆಗಳಿವೆ ಎಂಬುದು ತಿಳಿಯುತ್ತದೆ. ರಸ್ತೆ ಗುಂಡಿ, ಪಾದಚಾರಿ ಮಾರ್ಗದ ಸಮಸ್ಯೆ, ರಸ್ತೆ ಪಕ್ಕ ಕಸ ಸುರಿಯುವುದು (ಬ್ಲಾಕ್ ಸ್ಪಾಟ್), ರಸ್ತೆಯಲ್ಲಿ ಮಳೆ ನೀರು ನಿಂತಿರುವುದು, ಬೀದಿದೀಪ ಕೆಟ್ಟು ಹೋಗಿರುವುದು, ಒಳಚರಂಡಿ ಹದಗೆಟ್ಟಿರುವುದು ಹಾಗೂ ಮಳೆ ನೀರು ಚರಂಡಿಯ ಸ್ಲಾಬ್ ಕುಸಿದಿರುವುದು ಹಾಗೂ ಅದರ ಹೂಳೆತ್ತದೇ ಇರುವುದು... ಮುಂತಾದ ಸಮಸ್ಯೆಗಳನ್ನು ‌‌‌‌‌ಪಟ್ಟಿ ಮಾಡಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರಬೇಕು. ಅವುಗಳನ್ನು ತಕ್ಷಣವೇ ಬಗೆಹರಿಸಲು ಕ್ರಮಕೈಗೊಳ್ಳಬೇಕು’ ಎಂದು ಸೂಚಿಸಿದರು.

‘ಇಂತಹ ಸಮಸ್ಯೆಗಳು ಕಂಡುಬಂದರೆ ಆ ವಾರ್ಡ್‌ನ ಸಹಾಯಕ‌ ಎಂಜಿನಿಯರ್ ಅವರನ್ನು ಅಮಾನತು ಮಾಡಲು ಶಿಫಾರಸು ಮಾಡುತ್ತೇನೆ’ ಎಂದು ಎಚ್ಚರಿಕೆ ನೀಡಿದರು.

‘ಪಾದಚಾರಿ ಮಾರ್ಗದಲ್ಲಿ ಶಾಶ್ವತ ಮಳಿಗೆ ನಿರ್ಮಿಸಿಕೊಂಡಿರುವ ವ್ಯಾಪಾರಿಗಳನ್ನು ತೆರವುಗೊಳಿಸಬೇಕು. ರಸ್ತೆ ಇಕ್ಕೆಲಗಳಲ್ಲಿ ಸ್ವಚ್ಛತೆ ಕಾಪಾಡಬೇಕು. ರಸ್ತೆಯಲ್ಲಿ ಮಳೆ ನೀರು ನಿಲ್ಲದಂತೆ ನೋಡಿ
ಕೊಳ್ಳಬೇಕು’ ಎಂದು ಸೂಚಿಸಿದರು.

ಮುಖ್ಯರಸ್ತೆ ನಿರ್ವಹಣೆಗೆ 24 ತಂಡಗಳನ್ನು ನಿಯೋಜನೆ ಮಾಡಲಾಗಿದೆ ಎಂದು ತಿಳಿಸಿದರು.

‘ಮಾದರಿ ವಾರ್ಡ್‌ ಎ.ಇ.ಗೆ ಪ್ರಶಸ್ತಿ’

‘ತಮ್ಮ ಪಾಲಿನ ಕೆಲಸವನ್ನು ಶ್ರದ್ಧೆಯಿಂದ ಮಾಡಿ, ವಾರ್ಡ್‌ನಲ್ಲಿ ಸಮಸ್ಯೆಗಳೇ ಇಲ್ಲದಂತೆ ನೋಡಿಕೊಳ್ಳುವ ಸಹಾಯಕ‌ ಎಂಜಿನಿಯರ್‌ಗಳಿಗೆ ಪ್ರಶಸ್ತಿ ನೀಡಲಾಗುವುದು’ ಎಂದು ಮೇಯರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT