ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಬಿಎಂಪಿ ಪ್ರೌಢ ಶಾಲೆ, ಪಿ.ಯು. ಕಾಲೇಜು ಆರಂಭ ಇಂದಿನಿಂದ

ಕೋವಿಡ್‌ ಹರಡದಂತೆ ತಡೆಯಲು ಕಠಿಣ ಕ್ರಮ
Last Updated 22 ಆಗಸ್ಟ್ 2021, 18:50 IST
ಅಕ್ಷರ ಗಾತ್ರ

ಬೆಂಗಳೂರು: ಬಿಬಿಎಂಪಿ ಅಧೀನದ ಪ್ರೌಢಶಾಲೆಗಳಲ್ಲಿ 9ನೇ ಮತ್ತು 10ನೇ ತರಗತಿ ಹಾಗೂ ಪದವಿ ಪೂರ್ವ ಕಾಲೇಜುಗಳಲ್ಲಿ ಪ್ರಥಮ ಮತ್ತು ದ್ವಿತೀಯ ಪಿ.ಯು. ತರಗತಿಗಳನ್ನು ಸೋಮವಾರದಿಂದ ಆರಂಭಿಸಲು ಸಿದ್ಧತೆ ನಡೆದಿದೆ. ಕೋವಿಡ್‌ ಹರಡದಂತೆ ತಡೆಯಲು ಪಾಲಿಕೆ ಕಠಿಣ ಕ್ರಮಗಳನ್ನು ಕೈಗೊಂಡಿದೆ.

9ನೇ ತರಗತಿ, 10ನೇ ತರಗತಿ, ಪ್ರಥಮ ಮತ್ತು ದ್ವಿತೀಯ ಪಿ.ಯು ತರಗತಿಗಳಲ್ಲಿ 10,200 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ತರಗತಿಗೆ ಹಾಜರಾಗುವ ನಿರೀಕ್ಷೆಯನ್ನು ಬಿಬಿಎಂಪಿ ಹೊಂದಿದೆ. ತರಗತಿಗಳಿಗೆ ಸೋಂಕು ನಿವಾರಕ ದ್ರಾವಣ ಸಿಂಪಡಿಸುವುದು, ಸ್ಯಾನಿಟೈಸರ್‌ಗಳನ್ನು ಒದಗಿಸುವುದು, ಮಾಸ್ಕ್‌ ವಿತರಣೆ ಮುಂತಾದ ಅನೇಕ ಕ್ರಮಗಳನ್ನು ಪಾಲಿಕೆ ಕೈಗೊಂಡಿದೆ. ವಿದ್ಯಾರ್ಥಿಗಳ ದೇಹದ ಉಷ್ಣಾಂಶ ತಪಾಸಣೆಗೂ ವ್ಯವಸ್ಥೆ ಮಾಡಿ‌ದೆ.

‘ತರಗತಿಗೆ ಹಾಜರಾಗುವ ಎಲ್ಲ ವಿದ್ಯಾರ್ಥಿಗಳ, ಅಧ್ಯಾಪಕರ ಹಾಗೂ ಶಾಲಾ ಸಿಬ್ಬಂದಿಯ ದೇಹದ ಉಷ್ಣಾಂಶ ತಪಾಸಣೆ ಮಾಡುವುದು ಕಡ್ಡಾಯ. ಇದಕ್ಕಾಗಿ ಎಲ್ಲ ಶಾಲಾ ಕಾಲೇಜುಗಳಿಗೂ ಉಷ್ಣತಾ ಮಾಪಕ ಒದಗಿಸಿದ್ದೇವೆ. ತರಗತಿ ಕೊಠಡಿಗಳನ್ನು ಸೋಂಕು ನಿವಾರಕ ಸಿಂಪಡಿಸಿ ಸ್ವಚ್ಛಗೊಳಿಸಲು ಕ್ರಮ ಕೈಗೊಂಡಿದ್ದೇವೆ. ಶೌಚಾಲಯಗಳನ್ನೂ ಸ್ವಚ್ಛಗೊಳಿಸಿದ್ದೇವೆ’ ಎಂದು ಬಿಬಿಎಂಪಿ ಶಿಕ್ಷಣ ವಿಭಾಗದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಪದವಿ ಕಾಲೇಜುಗಳಲ್ಲಿ ಸದ್ಯಕ್ಕೆ ತರಗತಿಗಳು ನಡೆಯುತ್ತಿಲ್ಲ. ಬಹುತೇಕ ಶಾಲಾ ಕಾಲೇಜುಗಳಲ್ಲಿ ತರಗತಿ ಕೊಠಡಿ ಸಮಸ್ಯೆ ಇಲ್ಲ. ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚು ಇರುವ ಕ್ಲೀವ್‌ಲ್ಯಾಂಡ್‌ನಂತಹ ಪಿ.ಯು. ಕಾಲೇಜುಗಳಲ್ಲಿ ತರಗತಿ ಕೊಠಡಿಗಳ ಕೊರತೆ ಇದೆ. ಸದ್ಯಕ್ಕೆ ಇಲ್ಲಿಗೆ ಸಮೀಪದ ಪದವಿ ಕಾಲೇಜಿನ ಕೊಠಡಿಗಳನ್ನು ಬಳಸಿಕೊಂಡು ತರಗತಿ ನಡೆಸಲು ಕ್ರಮ ಕೈಗೊಂಡಿದ್ದೇವೆ’ ಎಂದು ಅವರು ವಿವರಿಸಿದರು.

‘ಒಂದು ತರಗತಿ ಕೊಠಡಿಯಲ್ಲಿ 20ಕ್ಕಿಂತ ಹೆಚ್ಚು ವಿದ್ಯಾರ್ಥಿಗಳು ಇರಬಾರದು. ವಿದ್ಯಾರ್ಥಿಗಳು ಪರಸ್ಪರ ಅಂತರ ಕಾಯ್ದುಕೊಂಡು ಪಾಠ ಕೇಳುವುದಕ್ಕೆ ವ್ಯವಸ್ಥೆ ಕಲ್ಪಿಸಬೇಕು ಎಂದು ಎಲ್ಲ ಪ್ರೌಢಶಾಲೆಗಳ ಮುಖ್ಯೋಪಾಧ್ಯಾಯರಿಗೆ ಹಾಗೂ ಪಿ.ಯು ಕಾಲೇಜುಗಳ ಪ್ರಾಂಶುಪಾಲರಿಗೆ ಸೂಚನೆ ನೀಡಿದ್ದೇವೆ’ ಎಂದರು.

ಬಿಬಿಎಂಪಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳಿಗೆ ಪ್ರತಿ ವರ್ಷವೂ ಸಮವಸ್ತ್ರ, ಶೂಗಳು, ಸಾಕ್ಸ್‌ಗಳು, ಸ್ವೆಟರ್‌, ಬ್ಲೇಸರ್‌, ಪಠ್ಯಪುಸ್ತಕ, ಬ್ಯಾಗ್‌, ಟಿಪ್ಪಣಿ ಪುಸ್ತಕದಂತಹ ಕಲಿಕಾ ಸಾಮಗ್ರಿಗಳನ್ನು ಬಿಬಿಎಂಪಿ ವತಿಯಿಂದಲೇ ಪೂರೈಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT