ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ಟೆಪ್ ಡೌನ್ ಆಸ್ಪತ್ರೆ: ಹಾಸಿಗೆ ಸಂಖ್ಯೆ 2200ಕ್ಕೆ ಹೆಚ್ಚಿಸಲು ಕ್ರಮ

ಕೋವಿಡ್‌ ರೋಗಿಗಳ ಚಿಕಿತ್ಸೆ * ಸೌಕರ್ಯ ಹೆಚ್ಚಳಕ್ಕೆ ಬಿಬಿಎಂಪಿ ಕ್ರಮ
Last Updated 12 ಮೇ 2021, 14:08 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಮುಖ ಆಸ್ಪತ್ರೆಗಳ ಆಸುಪಾಸಿನ ಹೋಟೆಲ್‌ಗಳನ್ನು ಸ್ಟೆಪ್‌ ಡೌನ್‌ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ಬಿಬಿಎಂಪಿ ಕ್ರಮ ಕೈಗೊಂಡಿದೆ. ಇಂತಹ ಆಸ್ಪತ್ರೆಗಳಲ್ಲಿ ಇದುವರೆಗೆ 1,200 ಹಾಸಿಗೆಗಳ ಸೌಕರ್ಯ ಕಲ್ಪಿಸಲಾಗಿದೆ. ಇನ್ನೂ 1,000 ಹಾಸಿಗೆಗಳ ಸೌಲಭ್ಯವನ್ನು ಹೆಚ್ಚುವರಿಯಾಗಿ ಒದಗಿಸಲು ಸಿದ್ಧತೆ ನಡೆದಿದೆ.

ಸ್ಟೆಪ್‌ ಡೌನ್‌ ಆಸ್ಪತ್ರೆಗಳ ಸಂಖ್ಯೆ ಹೆಚ್ಚಳ ಸಂಬಂಧ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಅವರು ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್‌ ಹೋಂಗಳ ಒಕ್ಕೂಟ (ಫಾನಾ) ಹಾಗೂ ಹೋಟೆಲ್‌ ಮಾಲೀಕರ ಸಂಘದ ಪದಾಧಿಕಾರಿಗಳ ಜೊತೆ ವರ್ಚುವಲ್‌ ರೂಪದಲ್ಲಿ ಬುಧವಾರ ಸಮಾಲೋಚನೆ ನಡೆಸಿದರು.

ಬಸವರಾಜ ಬೊಮ್ಮಾಯಿ, ‘ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್ ಸೋಂಕಿತರಿಗೆ ತುರ್ತಾಗಿ ಹಾಸಿಗೆ ಸೌಲಭ್ಯ ಕಲ್ಪಿಸುವ ಅಗತ್ಯವಿದೆ. ಇದಕ್ಕಾಗಿ ಖಾಸಗಿ ಆಸ್ಪತ್ರೆಗಳು ಸಮೀಪದ ಹೋಟೆಲ್‌ಗಳನ್ನು ಗುರುತಿಸಿ ಅವುಗಳನ್ನು ಸ್ಟೆಪ್ ಡೌನ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಲು ತ್ವರಿತವಾಗಿ ಕ್ರಮವಹಿಸಬೇಕು. ಅಗತ್ಯತೆ ನೋಡಿಕೊಂಡು ಹಂತ ಹಂತವಾಗಿ ಹಾಸಿಗೆಗಳ ಸಂಖ್ಯೆಯನ್ನು ಹೆಚ್ಚಳ ಮಾಡಬೇಕು’ ಎಂದು ಸೂಚನೆ ನೀಡಿದರು.

ಸ್ಟೆಪ್ ಡೌನ್ ಆಸ್ಪತ್ರೆಗಳ ಮೇಲ್ವಿಚಾರಣೆಗೂ ಸರ್ಕಾರದ ಅಧಿಕಾರಿಯನ್ನು ನಿಯೋಜನೆ ಮಾಡುವಂತೆ ಮುಖ್ಯ ಆಯುಕ್ತರಿಗೆ ತಿಳಿಸಿದರು.

ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಪ್ರಾರಂಭಿಸಲು ಫಾನಾ ಹಾಗೂ ಹೋಟೆಲ್‌ ಮಾಲೀಕರ ಸಂಘಗಳ ಸಹಕಾರವನ್ನು ಕೋರಿದ ಗೌರವ್ ಗುಪ್ತ, ‘ಕೆಪಿಎಂಇ ಕಾಯ್ದೆ ಅಡಿ ನೋಂದಣಿ ಆಗಿರುವ ಖಾಸಗಿ ಆಸ್ಪತ್ರೆಗಳ ಜೊತೆ ಹೋಟೆಲ್‌ಗಳು ಸಂಯೋಜನೆ ಮಾಡಿಕೊಂಡು ಸ್ಟೆಪ್ ಡೌನ್ ಆಸ್ಪತ್ರೆಗಳನ್ನು ಆರಂಭಿಸಬಹುದು. ಚಿಕಿತ್ಸೆಗೆ ಸ್ಪಂದಿಸಿ, ಆರೋಗ್ಯದಲ್ಲಿ ಸ್ವಲ್ಪ ಚೇತರಿಸಿಕೊಂಡ ಕೋವಿಡ್‌ ಸೋಂಕಿತರನ್ನು ಇಂತಹ ಆಸ್ಪತ್ರೆಗಳಿಗೆ ವರ್ಗಾಯಿಸುವ ಅಗತ್ಯವಿದೆ. ಆಗ ತುರ್ತು ಚಿಕಿತ್ಸೆಯ ಅವಶ್ಯಕತೆ ಇರುವ ರೋಗಿಗಳನ್ನು ಆಸ್ಪತ್ರೆಗಳಿಗೆ ದಾಖಲಿಸಲು ಅನುಕೂಲ ಆಗಲಿದೆ. ಇದರಿಂದ ನೂರಾರು ಮಂದಿಯ ಜೀವ ಉಳಿಸಬಹುದು’ ಎಂದರು.

‘ಸ್ಟೆಪ್ ಡೌನ್ ಆಸ್ಪತ್ರೆಗಳಿಗೆ ವೈದ್ಯರು, ಅರೆವೈದ್ಯಕೀಯ ಸಿಬ್ಬಂದಿ ಹಾಗೂ ಶುಶ್ರೂಷಕರ ಅಗತ್ಯವಿದೆ. ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆಯು ಅವಶ್ಯಕ ಸಿಬ್ಬಂದಿಯನ್ನು ಒದಗಿಸಲಿದೆ. ನಿವೃತ್ತ ವೈದ್ಯರು ಹಾಗೂ ವಿಜ್ಞಾನದ ವಿದ್ಯಾರ್ಥಿಗಳನ್ನೂ ಇವುಗಳ ನಿರ್ವಹಣೆಗೆ ಬಳಸಿಕೊಳ್ಳಬಹುದು. ಈ ಆಸ್ಪತ್ರೆಗಳಿಗೂ ಅಗತ್ಯಕ್ಕನುಗುಣವಾಗಿ ಆಮ್ಲಜನಕ ಸಾಂದ್ರೀಕರಣ ಸಾಧನ (ಆಕ್ಸಿಜನ್‌ ಕಾನ್ಸಂಟ್ರೇಟರ್‌) ಪೂರೈಸಲಾಗುತ್ತದೆ’ ಎಂದು ಅವರು ಮಾಹಿತಿ ನೀಡಿದರು.

ಹೋಟಲ್ ಮಾಲೀಕರ ಸಂಘದ ಅಧ್ಯಕ್ಷ ಪಿ.ಸಿ.ರಾವ್, ‘ನಗರದ 13 ಆಸ್ಪತ್ರೆಗಳ ಸಹಯೋಗದಲ್ಲಿ ಅನೇಕ ಹೋಟಲ್‌ಗಳನ್ನು ಈಗಾಗಲೇ ಸ್ಟೆಪ್ ಡೌನ್ ಆಸ್ಪತ್ರೆಗಳನ್ನಾಗಿ ಪರಿವರ್ತಿಸಿದ್ದೇವೆ. ಇಲ್ಲಿ 1,200 ಹಾಸಿಗೆಗಳ ವ್ಯವಸ್ಥೆ ಮಾಡಲಾಗಿದೆ. 15 ಹೋಟಲ್‌ಗಳನ್ನು ಸ್ಟೆಪ್ ಡೌನ್ ಆಸ್ಪತ್ರೆಗಳನ್ನಾಗಿ ರೂಪಿಸಲು ಕ್ರಮ ಕೈಗೊಳ್ಳಲಾಗಿದೆ. ಇವುಗಳಲ್ಲಿ ಮತ್ತೆ 1,000 ಹಾಸಿಗೆಗಳು ಹೆಚ್ಚುವರಿಯಾಗಿ ಲಭ್ಯ ಆಗಲಿವೆ’ ಎಂದು ಮಾಹಿತಿ ನೀಡಿದರು.

ಬಿಬಿಎಂಪಿ ವಿಶೇಷ ಆಯುಕ್ತ (ಆರೋಗ್ಯ) ರಾಜೇಂದ್ರ ಚೋಳನ್, ಮುಖ್ಯ ಆರೋಗ್ಯಾಧಿಕಾರಿ (ಸಾರ್ವಜನಿಕ ಆರೋಗ್ಯ) ಡಾ. ವಿಜಯೇಂದ್ರ, ವಲಯ ಆರೋಗ್ಯಾಧಿಕಾರಿಗಳು ಹಾಗೂ ಆರೋಗ್ಯ ವೈದ್ಯಾಧಿಕಾರಿಗಳು ಸಲಹೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT