ಸೋಮವಾರ, ಸೆಪ್ಟೆಂಬರ್ 27, 2021
21 °C

ಐದು ಸಾವಿರ ಇಂಗುಗುಂಡಿ ನಿರ್ಮಿಸುವ ಯೋಜನೆಗೆ ಬಿಬಿಎಂಪಿ ಚಾಲನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: 75ನೇ ಸ್ವಾತಂತ್ರ್ಯೋತ್ಸವದ ಅಂಗವಾಗಿ ಮಹಾನಗರದ ವ್ಯಾಪ್ತಿಯಲ್ಲಿ 75 ಸಾವಿರ ಸಸಿಗಳನ್ನು ನೆಡಲು ಬಿಬಿಎಂಪಿ ಮುಂದಾಗಿದೆ. ಅಲ್ಲದೆ, ಐದು ಸಾವಿರ ಇಂಗುಗುಂಡಿಗಳನ್ನು ನಿರ್ಮಿಸುವ ಯೋಜನೆಯನ್ನೂ ಮಹಾನಗರ ಪಾಲಿಕೆ ರೂಪಿಸಿದೆ. 

ಪಾಲಿಕೆಯ ಅರಣ್ಯ ವಿಭಾಗ, ತೋಟಗಾರಿಕಾ ಹಾಗೂ ಕೆರೆಗಳ ವಿಭಾಗ ಸೇರಿ ನಗರದಲ್ಲಿರುವ ಉದ್ಯಾನಗಳು, ಕೆರೆಗಳ ಸುತ್ತಮುತ್ತಲಿನ ಖಾಲಿ ಸ್ಥಳದಲ್ಲಿ 75,000 ಸಸಿಗಳನ್ನು ನೆಡಲಿವೆ. ನಾಗರಿಕರು, ಸಂಘ-ಸಂಸ್ಥೆಗಳ ಸಹಯೋಗದಲ್ಲಿ ಕೈಗೊಂಡಿರುವ ಈ ಅಭಿಯಾನಕ್ಕೆ ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಶನಿವಾರ ಚಾಲನೆ ನೀಡಿದರು. 

ಇಂಗು ಗುಂಡಿ ನಿರ್ಮಾಣ: 

ಬಿಬಿಎಂಪಿ ವ್ಯಾಪ್ತಿಯಲ್ಲಿ 1,300 ಉದ್ಯಾನಗಳಿದ್ದು, ಇವುಗಳಲ್ಲಿ ಬೀಳುವ ಮಳೆ ನೀರನ್ನು ಅಲ್ಲೇ ಇಂಗುವಹಾಗೆ ಮಾಡುವ ನಿಟ್ಟಿನಲ್ಲಿ ‘ಯುನೈಟೆಡ್ ವೇ ಆಫ್ ಬೆಂಗೂರು’ ಸಹಯೋದಲ್ಲಿ ವೈಜ್ಞಾನಿಕವಾಗಿ ಐದು ಸಾವಿರ ಇಂಗು ಗುಂಡಿಗಳನ್ನು ನಿರ್ಮಿಸಲಾಗುತ್ತಿದೆ.

ಸ್ವಾತಂತ್ರ್ಯ ಉದ್ಯಾನದಲ್ಲಿ ಈಗಾಗಲೇ 24 ಇಂಗು ಗುಂಡಿಗಳನ್ನು ನಿರ್ಮಿಸಲಾಗಿದ್ದು, ಇನ್ನೂ 6 ಇಂಗು ಗುಂಡಿಗಳನ್ನು ಇಲ್ಲಿ ನಿರ್ಮಿಸಲಾಗುತ್ತದೆ.

ಪ್ರತಿ ಇಂಗು ಗುಂಡಿಯೂ 12 ಅಡಿ ಆಳ ಹಾಗು 4 ಅಡಿ ಸುತ್ತಳತೆ ಹೊಂದಿರುತ್ತದೆ. ಒಂದು ಇಂಗುಗುಂಡಿಯಲ್ಲಿ ಸುಮಾರು 4000 ಲೀಟರ್‌  ಮಳೆನೀರನ್ನು ಸಂಗ್ರಹಿಸಿ ಇಂಗಿಸಬಹುದಾಗಿದೆ. ಒಟ್ಟಾರೆ 5000 ಗುಂಡಿಗಳಲ್ಲಿ 2 ಕೋಟಿ ಲೀಟರ್‌ನಷ್ಟು ನೀರನ್ನು ಸಂಗ್ರಹಿಸಿ ಇಂಗಿಸಬಹುದಾಗಿದೆ.

ಒಂದು ಇಂಗು ಗುಂಡಿಗೆ ಸುಮಾರು ₹32 ಸಾವಿರ ವೆಚ್ಚವಾಗಲಿದ್ದು, ಈ ಮೊತ್ತವನ್ನು ‘ಯುನೈಟೆಡ್ ವೇ ಆಫ್ ಬೆಂಗಳೂರು’ ಸಂಸ್ಥೆಯೇ ಭರಿಸಲಿದೆ. ಪಾಲಿಕೆಯಿಂದ ಇಂಗು ಗುಂಡಿ ನಿರ್ಮಿಸಲು ಸ್ಥಳಾವಕಾಶ ನೀಡಲಾಗುತ್ತದೆ.

‘ನೀರು ಸಂಗ್ರಹಿಸಿ ಇಂಗಿಸುವುದರಿಂದ ಅಂತರ್ಜಲ ಮಟ್ಟವು ಏರಿಕೆಯಾಗುತ್ತದೆ ಮತ್ತು ಉದ್ಯಾನಗಳಲ್ಲಿರುವ ವಿವಿಧ ಸಸ್ಯ ಪ್ರಭೇದಗಳಿಗೆ ನೀರಿನ ಕೊರತೆಯನ್ನು ನೀಗಿಸಲು ಸಹಕಾರಿಯಾಗುತ್ತದೆ’ ಎಂದು ಗೌರವ್ ಗುಪ್ತ ಹೇಳಿದರು. 

ವಿಶೇಷ ಆಯುಕ್ತರಾದ ರೆಡ್ಡಿ ಶಂಕರ ಬಾಬು, ತುಳಸಿ ಮದ್ದಿನೇನಿ, ಪಶ್ಚಿಮ ವಲಯದ ಜಂಟಿ ಆಯುಕ್ತ ಶಿವಸ್ವಾಮಿ, ಕೆರೆಗಳ ವಿಭಾಗ ಮುಖ್ಯ ಎಂಜಿನಿಯರ್‌ ಬಿ.ಟಿ. ಮೋಹನ್‌ ಕೃಷ್ಣ ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು