ಶುಕ್ರವಾರ, ನವೆಂಬರ್ 22, 2019
23 °C
ಯಡಿಯೂರು ವಾರ್ಡ್‌ನ ಪಟಾಲಮ್ಮ ರಸ್ತೆ: ಅನುಮಾನಕ್ಕೆಡೆ ಮಾಡಿಕೊಟ್ಟ ಕಾಮಗಾರಿ

ವೈಟ್‌ಟಾಪಿಂಗ್‌ ಸಿದ್ಧತೆ ನಡುವೆ ಕೊಳವೆ ಅಳವಡಿಕೆ

Published:
Updated:
Prajavani

ಬೆಂಗಳೂರು: ಯಡಿಯೂರು ವಾರ್ಡ್‌ನ ಪಟಾಲಮ್ಮ ರಸ್ತೆಗೆ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳುವ ಪ್ರಸ್ತಾವ ಮುನ್ನೆಲೆಗೆ ಬರುತ್ತಿದ್ದಂತೆಯೇ ಈ ರಸ್ತೆ ಇಕ್ಕೆಲಗಳಲ್ಲಿ ಕುಡಿಯುವ ನೀರಿನ ಕೊಳವೆ ಅಳವಡಿಸಲಾಗುತ್ತಿದೆ. ಎರಡು ದಿನಗಳಿಂದ ಈ ಕಾಮಗಾರಿ ನಡೆಯುತ್ತಿದೆ.

ಪದ್ಮನಾಭನಗರ ಕ್ಷೇತ್ರದ ಪಟಾಲಮ್ಮ ರಸ್ತೆ (ಆರ್ಮುಗಂ ವೃತ್ತದಿಂದ ಸೌಂತ್‌ ಎಂಡ್‌ ವೃತ್ತ, ಅಲ್ಲಿಂದ 9ನೇ ಮುಖ್ಯರಸ್ತೆಯ 22ನೇ ಅಡ್ಡರಸ್ತೆವರೆಗೆ) ಹಾಗೂ ನ್ಯಾಷನಲ್‌ ಕೋ–ಆಪರೇಟಿವ್‌ ಬ್ಯಾಂಕ್‌ನಿಂದ 36ನೇ ಅಡ್ಡರಸ್ತೆವರೆಗೆ ಜಯನಗರ 4ನೇ ಮುಖ್ಯರಸ್ತೆಗಳಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ಕೈಗೆತ್ತಿಕೊಳ್ಳಲು ಬಿಬಿಎಂಪಿ ತಯಾರಿ ನಡೆಸಿದೆ. ಈ ಹಂತದಲ್ಲೇ ಕುಡಿಯುವ ನೀರಿನ ಕೊಳವೆ ಅಳವಡಿಕೆಗೆ ಕ್ರಮ ಕೈಗೊಂಡಿರುವುದು ಅನುಮಾನ ಮೂಡಿಸಿದೆ.

ಇದುವರೆಗೆ ಬಿಬಿಎಂಪಿ, ವೈಟ್‌ಟಾಪಿಂಗ್‌ ಕಾಮಗಾರಿ ಜೊತೆಗೇ ಕುಡಿಯುವ ನೀರಿನ ಕೊಳವೆಗಳು ಹಾಗೂ ಒಳಚರಂಡಿಯಂತಹ ಮೂಲಸೌಕರ್ಯ ಕೊಳವೆಮಾರ್ಗಗಳ ಸ್ಥಳಾಂತರವನ್ನೂ ಸೇರಿಸಿ ಸಮಗ್ರ ಟೆಂಡರ್‌ ಪ್ಯಾಕೇಜ್‌ ರೂಪಿಸುತ್ತಾ ಬಂದಿತ್ತು.

‘ಈ ರಸ್ತೆಯಲ್ಲಿ ವೈಟ್‌ಟಾಪಿಂಗ್‌ ಕಾಮಗಾರಿ ನಡೆಸುವ ಪ್ರಸ್ತಾವದ ಬಗ್ಗೆ ನಮಗೆ ತಿಳಿದಿಲ್ಲ. ಆದರೆ, ಇಲ್ಲಿ ನೀರು ಪೂರೈಕೆ ಸಮಸ್ಯೆಗೆ ಸಂಬಂಧಿಸಿ ಸ್ಥಳೀಯರಿಂದ ದೂರುಗಳು ಬಂದಿದ್ದವು. ಅದಕ್ಕಾಗಿ ರಸ್ತೆ ಇಕ್ಕೆಲಗಳಲ್ಲಿ ಹೊಸ ಪೈಪ್‌ಲೈನ್‌ ಅಳವಡಿಸಲು ವರ್ಷದ ಹಿಂದೆಯೇ ಟೆಂಡರ್‌ ಕರೆದಿದ್ದೆವು. 2019ರ ಜ. 7ರಂದು ಗುತ್ತಿಗೆದಾರರಿಗೆ ಈ ಕಾಮಗಾರಿಯ ಕಾರ್ಯಾದೇಶವನ್ನು ನೀಡಿದ್ದೆವು. ಆದರೆ, ಬಿಬಿಎಂಪಿಯಿಂದ ರಸ್ತೆ ಅಗೆಯಲು 10 ತಿಂಗಳಿಂದ ಅನುಮತಿ ಸಿಕ್ಕಿರಲಿಲ್ಲ. ಈಗ ಸಿಕ್ಕಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಜಲಮಂಡಳಿ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ವೈಟ್‌ಟಾಪಿಂಗ್‌ ಕಾಮಗಾರಿಯ ಅಂದಾಜು ಪಟ್ಟಿ ಅಂತಿಮಗೊಳಿಸುವ ಮುನ್ನವೇ ನೀರಿನ ಕೊಳವೆಗಳನ್ನು ಅಳವಡಿಸಿದರೆ, ಮೂಲಸೌಕರ್ಯ ಸ್ಥಳಾಂತರಕ್ಕೆ ತಗಲುವ ವೆಚ್ಚ ಉಳಿತಾಯವಾಗುತ್ತದೆ. ಇದರಿಂದ ವೈಟ್‌ಟಾಪಿಂಗ್‌ ಯೋಜನೆಯ ವೆಚ್ಚ ಸಹಜವಾಗಿಯೇ ಕಡಿಮೆಯಾಗುತ್ತದೆ. ಹಾಗಾಗಿಯೇ ಪಟಾಲಮ್ಮ ರಸ್ತೆಯಲ್ಲಿ ನೀರಿನ ಕೊಳವೆಗಳನ್ನು ಅಳವಡಿಸಲಾಗುತ್ತಿದೆ’ ಎಂದು ಹೆಸರು ಬಹಿರಂಗಪಡಿಸಲು ಬಯಸದ ಅಧಿಕಾರಿಯೊಬ್ಬರು ಮಾಹಿತಿ ನೀಡಿದರು.

‘ಒಂದು ವೇಳೆ ಈ ಹಿಂದೆಯೇ ಜಲಮಂಡಳಿ ಇಲ್ಲಿ ಕೊಳವೆ ಅಳವಡಿಸಲು ನಿರ್ಧರಿಸಿದ್ದರೂ, ವೈಟ್‌ಟಾಪಿಂಗ್‌ನಂತಹ ಪ್ರಮುಖ ಕಾಮಗಾರಿ ನಡೆಸುವ ತೀರ್ಮಾನವನ್ನು ಬಿಬಿಎಂಪಿ ಕೈಗೊಂಡಾಗ ಅದನ್ನು ಸ್ಥಗಿತಗೊಳಿಸಬಹುದು. ವೈಟ್‌ಟಾಪಿಂಗ್‌ ಹಾಗೂ ಅಗತ್ಯ ಮೂಲಸೌಕರ್ಯಗಳ ಸ್ಥಳಾಂತರ ಒಂದೇ ಪ್ಯಾಕೇಜ್‌ ಅಡಿ ಕೈಗೊಳ್ಳುವುದು ಹೆಚ್ಚು ಸೂಕ್ತ’ ಎಂದು ಅವರು ಅಭಿಪ್ರಾಯಪಟ್ಟರು.

‘ನಗರದಲ್ಲಿ ಈ ಹಿಂದೆ ನಡೆದಿರುವ ವೈಟ್‌ಟಾಪಿಂಗ್ ಕಾಮಗಾರಿಗಳಲ್ಲಿ ಅಕ್ರಮ ನಡೆದಿದೆ’ ಎಂದು ಬಿಜೆಪಿ ಆರೋಪ ಮಾಡಿತ್ತು. ಈ ಕಾಮಗಾರಿಗಳನ್ನು ತನಿಖೆ ನಡೆಸಲು ಸರ್ಕಾರ ತಜ್ಞರ ಸಮಿತಿಯನ್ನು ನೇಮಕ ಮಾಡಿತ್ತು. ಈ ನಡುವೆ ಬಿಜೆಪಿ ನಗರ ಘಟಕದ ವಕ್ತಾರ ಎನ್‌.ಆರ್‌.ರಮೇಶ್‌, ‘ವೈಟ್‌ಟಾಪಿಂಗ್‌ ರಸ್ತೆಯನ್ನು ಪ್ರತಿ ಕಿ.ಮೀ.ಗೆ ₹ 4 ಕೋಟಿ ವೆಚ್ಚದಲ್ಲಿ ಮಾಡಿ ತೋರಿಸುತ್ತೇನೆ’ ಎಂದು ಸವಾಲು ಹಾಕಿದ್ದರು.

ಈ ಬೆಳವಣಿಗೆ ನಡುವೆ ಯಡಿಯೂರು ವಾರ್ಡ್‌ನಲ್ಲಿ ನಡೆಸಲು ಉದ್ದೇಶಿಸಿರುವ ವೈಟ್‌ಟಾಪಿಂಗ್‌ ಕಾಮಗಾರಿಗಳಿಗೆ 1999ರ ಕರ್ನಾಟಕ ಸಾರ್ವಜನಿಕ ಸಂಗ್ರಹಣೆಗಳಲ್ಲಿ ಪಾರದರ್ಶಕತೆ ಕಾಯ್ದೆಯ ಕಲಂ 4 (ಜಿ) ಅಡಿ ವಿನಾಯಿತಿ ಕೋರಿ ಬಿಬಿಎಂಪಿ ನಗರಾಭಿವೃದ್ಧಿ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಟೆಂಡರ್‌ ಕರೆಯದೆಯೇ ಬಿಜೆಪಿ ಮುಖಂಡರು ಸೂಚಿಸಿದ ಗುತ್ತಿಗೆದಾರರಿಗೆ ಕಾಮಗಾರಿಯ ಗುತ್ತಿಗೆ ನೀಡಲು ಸಿದ್ಧತೆ ನಡೆದಿರುವ ಬಗ್ಗೆ ಹಾಗೂ ಕಾಮಗಾರಿಗಳ ಅಂದಾಜುಪಟ್ಟಿಗೆ ಬಿಬಿಎಂಪಿಯ ತಾಂತ್ರಿಕ ಸಲಹಾ ಸಮಿತಿಯ ಅನುಮೋದನೆ ಪಡೆಯದ ಬಗ್ಗೆ ‘ಪ್ರಜಾವಾಣಿ’ ವಿಶೇಷ ವರದಿಗಳ ಮೂಲಕ ಗಮನ ಸೆಳೆದಿತ್ತು.

ಪ್ರತಿಕ್ರಿಯಿಸಿ (+)