ಬೆಂಗಳೂರು: ಯುವತಿಯೊಬ್ಬರಿಗೆ ಸಂದೇಶ ಕಳುಹಿಸಿದ್ದ ವಿಚಾರ ಸಂಬಂಧ ಜಗಳ ತೆಗೆದು ಬಿ.ಕಾಂ ವಿದ್ಯಾರ್ಥಿ ಮಾರ್ವೇಶ್ (19) ಅವರನ್ನು ಕೊಲೆ ಮಾಡಿದ್ದ ಆರೋಪದಡಿ ರೌಡಿ ಸೇರಿ ಐವರನ್ನು ಹೆಣ್ಣೂರು ಠಾಣೆ ಪೊಲೀಸರು ಬಂಧಿಸಿದ್ದಾರೆ.
‘ರೌಡಿ ಕಾರ್ತಿಕ್, ಅಭಿಷೇಕ್, ಯೊಹಾನ್ ಫ್ರಾಂಕ್ಲೆ, ಅಂಟೊನಿ ಡ್ಯಾನಿಯಲ್ ಹಾಗೂ ಶ್ರೀಕಾಂತ್ ಬಂಧಿತರು. ಇವರೆಲ್ಲರೂ ಸೇರಿ, ಮಾರ್ವೇಶ್ ಅವರನ್ನು ಜುಲೈ 26ರಂದು ಬೆಳಿಗ್ಗೆ ಕೊಲೆ ಮಾಡಿ ಪರಾರಿಯಾಗಿದ್ದರು. ಸೂಕ್ತ ಪುರಾವೆಗಳನ್ನು ಸಂಗ್ರಹಿಸಿ ಆರೋಪಿಗಳನ್ನು ಸೆರೆ ಹಿಡಿಯಲಾಗಿದೆ’ ಎಂದು ಪೊಲೀಸರು ಹೇಳಿದರು.
‘ಐವರು ಆರೋಪಿಗಳು, ಅಪರಾಧ ಹಿನ್ನೆಲೆಯುಳ್ಳವರು. ರಾಮಮೂರ್ತಿನಗರ ಠಾಣೆಯ ರೌಡಿ ಪಟ್ಟಿಯಲ್ಲಿ ಕಾರ್ತಿಕ್ ಹೆಸರಿದೆ. ಅಭಿಷೇಕ್ ಹಾಗೂ ನೆಲ್ಸನ್ ವಿರುದ್ಧವೂ ಕೊಲೆ ಯತ್ನ ಪ್ರಕರಣಗಳು ದಾಖಲಾಗಿವೆ. ಇವರಿಬ್ಬರ ಹೆಸರನ್ನು ರೌಡಿ ಪಟ್ಟಿಗೆ ಸೇರಿಸಲು ಕ್ರಮ ಕೈಗೊಳ್ಳಲಾಗುವುದು’ ಎಂದು ತಿಳಿಸಿದರು.
ಸ್ನೇಹಿತನಿಂದ ಗಲಾಟೆ: ‘ಮಾರ್ವೇಶ್ ಅವರ ಸ್ನೇಹಿತನೊಬ್ಬ, ಯುವತಿಯೊಬ್ಬರ ಹಿಂದೆ ಬಿದ್ದಿದ್ದ. ಸಂದೇಶ ಕಳುಹಿಸಿ ಕಿರುಕುಳ ನೀಡುತ್ತಿದ್ದ. ಬೇಸತ್ತಿದ್ದ ಯುವತಿ, ಸ್ನೇಹಿತನಾಗಿದ್ದ ಆರೋಪಿ ಶ್ರೀಕಾಂತ್‌ಗೆ ವಿಷಯ ತಿಳಿಸಿದ್ದರು. ಸ್ನೇಹಿತನಿಗೆ ಎಚ್ಚರಿಕೆ ನೀಡಲು ಮುಂದಾಗಿದ್ದ ಶ್ರೀಕಾಂತ್, ರೌಡಿ ಕಾರ್ತಿಕ್ ಸಹಾಯ ಕೋರಿದ್ದ’ ಎಂದು ಪೊಲೀಸ್ ಮೂಲಗಳು ಹೇಳಿವೆ.
‘ಐವರು ಆರೋಪಿಗಳು, ಮಾರ್ವೇಶ್ ಮೂಲಕ ಸ್ನೇಹಿತನನ್ನು ಕರೆಸಿ ಹಲ್ಲೆ ಮಾಡಲು ಸಂಚು ರೂಪಿಸಿದ್ದರು. ಅದರಂತೆ ಬುಧವಾರ ಬೆಳಿಗ್ಗೆ ಕಾಲೇಜು ಬಳಿ ಬಂದಿದ್ದ ಆರೋಪಿಗಳು, ಮಾರ್ವೇಶ್ ಜೊತೆ ಜಗಳ ತೆಗೆದು ಹಲ್ಲೆ ಮಾಡಿದ್ದರು. ಪೈಪ್‌ನಿಂದ ಹೊಡೆದಿದ್ದರು. ಸ್ನೇಹಿತನಿಗೆ ಕರೆ ಮಾಡಿ ಸ್ಥಳಕ್ಕೆ ಕರೆಸುವಂತೆ ಪೀಡಿಸಿದ್ದರು. ಆದರೆ, ಸ್ನೇಹಿತ ಕರೆ ಸ್ವೀಕರಿಸಿರಲಿಲ್ಲ. ಆರೋಪಿಗಳು ಸ್ಥಳದಿಂದ ಹೊರಟು ಹೋಗಿದ್ದರು.’
‘ತೀವ್ರ ಹಲ್ಲೆಯಿಂದಾಗಿ ಮಾರ್ವೇಶ್ ಸ್ಥಳದಲ್ಲಿಯೇ ಕುಸಿದು ಬಿದ್ದಿದ್ದರು. ಸಹಪಾಠಿಗಳೇ ಅವರನ್ನು ಆಸ್ಪತ್ರೆಗೆ ಕರೆದೊಯ್ದಿದ್ದರು. ಅವರು ಮೃತಪಟ್ಟಿರುವುದಾಗಿ ವೈದ್ಯರು ಹೇಳಿದ್ದರು’ ಎಂದು ಮೂಲಗಳು ವಿವರಿಸಿವೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.