ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಬಿಡಿಎ ನಿವೇಶನಕ್ಕೆ ಇನ್ನು ಮುಂದೆ ₹59 ಲಕ್ಷ!

ಡಾ. ಶಿವರಾಮ ಕಾರಂತ ಬಡಾವಣೆ: ದರ ಅನುಷ್ಠಾನಕ್ಕೆ ಸರ್ಕಾರಕ್ಕೆ ಪ್ರಸ್ತಾವ
Published 22 ಡಿಸೆಂಬರ್ 2023, 23:30 IST
Last Updated 22 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಡಾ. ಶಿವರಾಮ ಕಾರಂತ ಬಡಾವಣೆಯಲ್ಲಿನ ನಿವೇಶನಗಳ ದರ ನಿಗದಿಪಡಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ, ಅದರ ಅನುಷ್ಠಾನಕ್ಕೆ ಸರ್ಕಾರದ ಅನುಮೋದನೆಗಾಗಿ ಕಾಯುತ್ತಿದೆ.

ಶಿವರಾಮ ಕಾರಂತ ಬಡಾವಣೆಯಲ್ಲಿನ 30x40 ಅಡಿ ಹಾಗೂ ನಂತರದ ಎಲ್ಲ ಅಳತೆಯ ನಿವೇಶನಗಳಿಗೆ ಪ್ರತಿ ಚದರ ಅಡಿಗೆ ₹4,900 ನಿಗದಿಪಡಿಸಬೇಕು ಎಂದು ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಲಾಗಿದೆ. ಆರ್ಥಿಕವಾಗಿ ಹಿಂದುಳಿದವರಿಗೆ ಅನುಕೂಲವಾಗುವಂತರೆ 20x30 ಅಡಿ ಅಳತೆಯ ನಿವೇಶನಗಳಿಗೆ ₹3,850 ದರ ನಿಗದಿಪಡಿಸಲು ಉದ್ದೇಶಿಸಲಾಗಿದೆ.

‘ಬಡಾವಣೆಯಲ್ಲಿ 34 ಸಾವಿರ ನಿವೇಶನಗಳಿದ್ದು, ಇದರಲ್ಲಿ ಸುಮಾರು ಅರ್ಧದಷ್ಟು ನಿವೇಶನಗಳನ್ನು ರೈತರಿಗೆ ಮೀಸಲಿಡಬೇಕಿದೆ. ಹೀಗಾಗಿ, ಅಭಿವೃದ್ಧಿ ವೆಚ್ಚವನ್ನು ಸರಿದೂಗಿಸುವ ನಿಟ್ಟಿನಲ್ಲಿ ಹಿಂದಿನ ಬಡಾವಣೆಗಳಿಗಿಂತ ಹೆಚ್ಚು ದರವನ್ನು ಶಿವರಾಮ ಕಾರಂತ ಬಡಾವಣೆಯ ನಿವೇಶನ ಗಳಿಗೆ ನಿಗದಿಪಡಿಸಲು ಬಿಡಿಎ ನಿರ್ಧರಿಸಿ, ಸರ್ಕಾರದ ಅನುಮೋದನೆ ಕೇಳಿದೆ. ಬಡಾವಣೆಯ ಸುತ್ತಮುತ್ತಲಿನ ಮಾರುಕಟ್ಟೆ ದರಕ್ಕಿಂತ ಕಡಿಮೆ ದರವನ್ನೇ ಪ್ರಸ್ತಾಪಿಸಲಾಗಿದೆ’ ಎಂದು ಬಿಡಿಎ ಹಿರಿಯ ಅಧಿಕಾರಿಗಳು ತಿಳಿಸಿದರು.

ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ 2016ರಿಂದ ನಿವೇಶನಗಳನ್ನು ಹಂಚಿಕೆ ಮಾಡಲಾಗುತ್ತಿದ್ದು, ಚದರ ಅಡಿಗೆ ₹2,200ರಿಂದ ₹2,400 ನಿಗದಿಪಡಿಸಲಾಗಿತ್ತು. ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಉದ್ದೇಶಿತ ಪೆರಿಫೆರಲ್‌ ವರ್ತುಲ ರಸ್ತೆ (ಪಿಆರ್‌ಆರ್‌) ಸಮೀಪವಿರುವ ಶಿವರಾಮ ಕಾರಂತ ಬಡಾವಣೆಗೆ ಬೇಡಿಕೆ ಹೆಚ್ಚಾಗಿದ್ದು, ಮಾರುಕಟ್ಟೆಯ ಲಾಭ ಗಳಿಸಲು ಬಿಡಿಎ ನಿರ್ಧರಿಸಿದೆ.

ಸುಪ್ರೀಂಕೋರ್ಟ್‌ ಸಮಿತಿಯ ನೇತೃತ್ವದಲ್ಲಿ ಶಿವರಾಮ ಕಾರಂತ ಬಡಾವಣೆ ಅಭಿವೃದ್ಧಿಯಾಗುತ್ತಿದ್ದು, 17 ಹಳ್ಳಿಗಳಲ್ಲಿ ವಿಸ್ತರಿಸಿಕೊಂಡಿದೆ. ಈವರೆಗೆ ಸುಮಾರು 30 ಸಾವಿರ ನಿವೇಶನಗಳನ್ನು ಅಭಿವೃದ್ಧಿಪಡಿಸಿದ್ದು, ಸುಮಾರು 25 ಸಾವಿರ ನಿವೇಶನಗಳಿಗೆ ಸಂಖ್ಯೆ ನಿಗದಿಪಡಿಸಲಾಗಿದೆ. ಸೆಪ್ಟೆಂಬರ್‌ನಲ್ಲಿಯೇ ನಿವೇಶನಗಳ ಹಂಚಿಕೆ ಪ್ರಕ್ರಿಯೆ ಆರಂಭವಾಗುತ್ತದೆ ಎಂದು ಸುಪ್ರೀಂ ಕೋರ್ಟ್‌ ಸಮಿತಿ ಸದಸ್ಯರು, ಉಪಮುಖ್ಯಮಂತ್ರಿ ಹೇಳಿದ್ದರು. ಆದರೆ, ಈವರೆಗೆ ಆ ಪ್ರಕ್ರಿಯೆಗೆ ಚಾಲನೆ ಸಿಕ್ಕಿಲ್ಲ.

ಫ್ಲ್ಯಾಟ್‌ಗಳ ದರ ಶೇ 3ರಿಂದ ಶೇ 8ರಷ್ಟು ಹೆಚ್ಚಳ

ಬಿಡಿಎ ನಿರ್ಮಿಸಿರುವ ಮಾರಾಟಕ್ಕೆ ಲಭ್ಯವಿರುವ ಏಳು ಯೋಜನೆಗಳ ಫ್ಲ್ಯಾಟ್‌ ದರ ಸದ್ಯದಲ್ಲಿಯೇ ಶೇ 3ರಿಂದ ಶೇ 8ರಷ್ಟು ಹೆಚ್ಚಳವಾಗಲಿವೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೊಂದಿಗೆ ನಡೆದ ಸಭೆಯಲ್ಲಿ ಮಾರ್ಗಸೂಚಿ ದರ ಹೆಚ್ಚಳವಾದ ಹಿನ್ನೆಲೆಯಲ್ಲಿ ಫ್ಲ್ಯಾಟ್‌ಗಳ ಅಧಿಸೂಚಿತ ದರವನ್ನು ಹೆಚ್ಚಿಸುವ ಬಗ್ಗೆ ಮಾತುಕತೆ ನಡೆದಿದೆ. ಈ ಬಗ್ಗೆ ಸ್ಪಷ್ಟ ನಿರ್ಧಾರ ಕೈಗೊಳ್ಳಲೂ ಡಿಸಿಎಂ ಸೂಚಿಸಿದ್ದಾರೆ.

ಬಿಡಿಎ ವಸತಿ ವಿಭಾಗ ಎಂಜಿನಿಯರ್‌ಗಳು ಫ್ಲ್ಯಾಟ್‌ಗಳ ದರವನ್ನು ಹೆಚ್ಚಿಸುವ ಪ್ರಸ್ತಾವನೆಯನ್ನು ಸಿದ್ಧಪಡಿಸಿದ್ದು ಇದಕ್ಕೆ ಬಿಡಿಎ ಆಯುಕ್ತರ ಸಮ್ಮತಿ ಪಡೆದು ಪ್ರಾಧಿಕಾರದ ಮಂಡಳಿ ಸಭೆಯಲ್ಲಿರಿಸಲಾಗುವುದು. ಅಲ್ಲಿ ಸಮ್ಮತಿ ದೊರೆತ ಮೇಲೆ ಅಧಿಸೂಚಿತ ದರ ಜಾರಿಗೆ ಬರಲಿದೆ. ಮಾರ್ಗಸೂಚಿ ದರದಂತೆ ಫ್ಲ್ಯಾಟ್‌ಗಳ ದರ ಮರುನಿಗದಿಯಾಗಲಿದ್ದು ನಾಗರಬಾವಿಯಲ್ಲಿರುವ ಫ್ಲ್ಯಾಟ್‌ಗಳ ದರ ಶೇ 8ರಷ್ಟು ಹೆಚ್ಚಾಗಲಿದೆ. ಕಣ್ಮಿಣಿಕೆಯಲ್ಲಿ ಫ್ಲ್ಯಾಟ್‌ಗಳ ದರ ಕನಿಷ್ಠ ಶೇ 3ರಷ್ಟು ಅಧಿಕವಾಗಲಿದೆ. ಉಳಿದ ಯೋಜನೆಗಳ ಫ್ಲ್ಯಾಟ್‌ ಶೇ 3ರಿಂದ ಶೇ 8ರಷ್ಟು ಹೆಚ್ಚಾಗಲಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ಅಂಕಿ –ಅಂಶಗಳು

34,000: ಶಿವರಾಮ ಕಾರಂತ ಬಡಾವಣೆಯಲ್ಲಿರುವ ಒಟ್ಟು ನಿವೇಶನಗಳು

₹4,900: ಚದರ ಅಡಿಗೆ ಪ್ರಸ್ತಾವಿತ ದರ

₹ 58.9 ಲಕ್ಷ: 30x40 ಅಡಿ ನಿವೇಶನದ ದರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT