ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನನ್ನ ಹತ್ಯೆಗೆ ಕಾಂಗ್ರೆಸ್ ನಾಯಕನಿಂದ ಸಂಚು: ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್

Last Updated 1 ಡಿಸೆಂಬರ್ 2021, 15:21 IST
ಅಕ್ಷರ ಗಾತ್ರ

ಬೆಂಗಳೂರು: ಕಾಂಗ್ರೆಸ್ ನಾಯಕ ಎಂ.ಎನ್.ಗೋಪಾಲಕೃಷ್ಣ ತಮ್ಮ ಹತ್ಯೆಗೆ ಸಂಚು ರೂಪಿಸಿದ್ದರು ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ಅಧ್ಯಕ್ಷ, ಯಲಹಂಕ ಬಿಜೆಪಿ ಶಾಸಕ ಎಸ್.ಆರ್.ವಿಶ್ವನಾಥ್ ಪೊಲೀಸರಿಗೆ ಹಾಗೂ ಗೃಹ ಸಚಿವರಿಗೆ ದೂರು ನೀಡಿದ್ದಾರೆ.

ತಮ್ಮ ಹತ್ಯೆಗೆ ಸುಪಾರಿ ನೀಡಿರುವ ಕುರಿತ ಸಂಭಾಷಣೆಯ ವಿಡಿಯೊ ತುಣುಕನ್ನು ಹಾಗೂ ಕ್ಷಮಾಪಣಾ ಪತ್ರವನ್ನು ದೇವರಾಜ್ ಎಂಬವರು ಕಳುಹಿಸಿದ್ದರು. ಇದರಿಂದ ಮಾಹಿತಿ ದೊರೆತಿದೆ ಎಂದು ವಿಶ್ವನಾಥ್ ಹೇಳಿಕೊಂಡಿದ್ದಾರೆ.

‘ನನಗೆ ಆಘಾತವಾಯಿತು. ಒಬ್ಬ ಶಾಸಕನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಬಹುದು ಎಂಬ ಯೋಚನೆ ಬಂದಿರುವುದೇ ಅಪಾಯಕಾರಿ ಪ್ರವೃತ್ತಿಯಾಗಿದೆ’ ಎಂದು ವಿಶ್ವನಾಥ್ ಹೇಳಿದ್ದಾರೆ.

‘ದೇವರಾಜ್ ಜತೆ ಮಾತನಾಡುತ್ತಾ ನನ್ನ ಹತ್ಯೆಗೆ ಸುಪಾರಿ ನೀಡುವ ಬಗ್ಗೆ ಎಂ.ಎನ್.ಗೋಪಾಲಕೃಷ್ಣ ಅವರು ಮಾತನಾಡುತ್ತಿರುವ ವಿಡಿಯೊ ಹಾಗೂ ಆಡಿಯೊ ತುಣುಕುಗಳು ಇವೆ. ಈ ಕುರಿತು ರಾಜಾನಕುಂಟೆ ಪೊಲೀಸರಿಗೆ ದೂರು ನೀಡಿದ್ದೇನೆ’ ಎಂದು ಅವರು ತಿಳಿಸಿದ್ದಾರೆ.

ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ವಿಶ್ವನಾಥ್ ವಿರುದ್ಧ ಎರಡು ಬಾರಿ ಗೋಪಾಲಕೃಷ್ಣ ಅವರು ಸೋಲನುಭವಿಸಿದ್ದಾರೆ.

‘ಆಂಧ್ರ ಪ್ರದೇಶದಿಂದ ಸುಪಾರಿ ಹಂತಕರನ್ನು ಕರೆಸಿಕೊಂಡು ನನ್ನನ್ನು ಫಾರ್ಮ್‌ಹೌಸ್‌ನಲ್ಲಿ ಹತ್ಯೆ ಮಾಡಲು ಅವರು ಸಂಚು ಹೂಡಿದ್ದರು’ ಎಂದೂ ವಿಶ್ವನಾಥ್ ಆರೋಪಿಸಿದ್ದಾರೆ.

ಈ ವಿಚಾರವಾಗಿ ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಯಿಕ್ರಿಯಿಸಿದ್ದು, ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಲಾಗಿದೆ. ತನಿಖೆ ಪ್ರಾಥಮಿಕ ಹಂತದಲ್ಲಿದೆ ಎಂದು ತಿಳಿಸಿದ್ದಾರೆ.

ಆರೋಪ ನಿರಾಕರಿಸಿದ ಗೋಪಾಲಕೃಷ್ಣ

ಆದರೆ, ವಿಶ್ವನಾಥ್ ಮಾಡಿರುವ ಆರೋಪಗಳನ್ನು ಗೋಪಾಲಕೃಷ್ಣ ನಿರಾಕರಿಸಿದ್ದಾರೆ. ಹತ್ಯೆಗೆ ಸುಪಾರಿ ನೀಡಿರುವ ಕುರಿತು ಆರೋಪಿಸಿ ಸುದ್ದಿವಾಹಿನಿಗಳಲ್ಲಿ ಪ್ರಕಟಗೊಂಡಿರುವ ವಿಡಿಯೊ ತುಣುಕುಗಳೆಲ್ಲ ನಕಲಿ. ಇದೆಲ್ಲವೂ ಶಾಸಕರ ಕುತಂತ್ರ ಎಂದು ಗೋಪಾಲಕೃಷ್ಣ ಪ್ರತ್ಯಾರೋಪ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT