ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಕಾವೇರಿ’ ಜೊತೆ ಬಿಡಿಎ ‘ಇ–ಖಾತಾ’ ಸೇವೆ ಜೋಡಣೆ

ಕೆಂಗೇರಿ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಪ್ರಾಯೋಗಿಕ ಬಳಕೆ
Last Updated 4 ಮಾರ್ಚ್ 2020, 20:11 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರವು (ಬಿಡಿಎ) ಸೇವೆಯಲ್ಲಿ ಪಾರದರ್ಶಕತೆ ತರುವ ನಿಟ್ಟಿನಲ್ಲಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟಿದೆ. ಪ್ರಾಧಿಕಾರದಇ–ಖಾತಾ ಸೇವೆಗಳನ್ನು ರಾಜ್ಯ ಮುದ್ರಾಂಕ ಮತ್ತು ನೋಂದಣಿ ಇಲಾಖೆಯ 'ಕಾವೇರಿ' ತಂತ್ರಾಂಶದ ಜೊತೆ ಜೋಡಿಸಲಾಗಿದೆ.

ಬಿಡಿಎ ಅಭಿವೃದ್ಧಿಪಡಿಸಿದ ಬಡಾವಣೆ ಹಾಗೂ ಬಿಡಿಎಯಿಂದ ಅನುಮೋದನೆ ಪಡೆದ ಖಾಸಗಿ ಬಡಾವಣೆಗಳ ನಿವೇಶನಗಳು ಮತ್ತು ಆಸ್ತಿಗಳ ನೋಂದಣಿ ಇದರಿಂದಾಗಿ ಇನ್ನಷ್ಟು ಸುಲಭವಾಗಲಿದೆ. ಖಾತಾ ನೋಂದಣಿಗೆ ಸಂಬಂಧಿಸಿದ ಮೂರು ವಹಿವಾಟುಗಳನ್ನು ಕೆಂಗೇರಿಯ ಉಪನೋಂದಣಾಧಿಕಾರಿ ಕಚೇರಿಯಲ್ಲಿ ಬುಧವಾರ ಪ್ರಾಯೋಗಿಕವಾಗಿ ಹೊಸ ವ್ಯವಸ್ಥೆಯಡಿ ಅನುಷ್ಠಾನಗೊಳಿಸಲಾಯಿತು.

‘ಕಾವೇರಿ ತಂತ್ರಾಂಶ ಹಾಗೂ ಬಿಡಿಎ ಇ–ಖಾತಾ ಸೇವೆಗಳ ಜೋಡಣೆ ಯಶಸ್ವಿಯಾಗಿದೆ. ಬಿಡಿಎ ಆಡಳಿತದಲ್ಲಿ ಪಾರದರ್ಶಕತೆ ತರುವಲ್ಲಿ ಇದೊಂದು ಮೈಲುಗಲ್ಲು’ ಎಂದು ಆಯುಕ್ತ ಜಿ.ಸಿ.ಪ್ರಕಾಶ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಬಿಡಿಎ ಒಂದೂವರೆ ವರ್ಷಗಳ ಹಿಂದೆ ಇ–ಖಾತಾ ಸೇವೆಯನ್ನು ಆರಂಭಿಸಿತ್ತು. ಇದನ್ನು ‘ಕಾವೇರಿ’ ಜೊತೆ ಜೋಡಿಸಲು ಪ್ರಾಧಿಕಾರವು ತನ್ನ ವ್ಯಾಪ್ತಿಯ 99 ಸಾವಿರ
ಆಸ್ತಿ ದಾಖಲೆಗಳನ್ನು ಡಿಜಿಟಲೀಕರಣಗೊಳಿಸಿತ್ತು.

‘ಇ–ಖಾತಾ ಸೇವೆಯನ್ನು ಕಾವೇರಿ ಜೊತೆ ಜೋಡಿಸುವ ಕಾರ್ಯ ಮೂರು ತಿಂಗಳುಗಳಿಂದ ನಡೆದಿತ್ತು. ನಮ್ಮ ಇ–ಖಾತಾ ಹಾಗೂ ಕಾವೇರಿ ತಂತ್ರಾಂಶಗಳ ಪರಿಭಾಷೆ ಬೇರೆ. ಅವುಗಳನ್ನು ಒಂದಕ್ಕೊಂದು ಹೊಂದಿಕೆಯಾಗುವಂತೆ ಮಾಡಲು ಹೊಸ ತಂತ್ರಾಂಶ ಸಿದ್ಧಡಿಸಿದ್ದೇವೆ. ಆರಂಭದಲ್ಲಿ ಎದುರಾದ ಲೋಪಗಳನ್ನು ಸರಿಪಡಿಸಿದ್ದೇವೆ. ಯಾವುದೇ ಲೋಪವಿಲ್ಲದೇ ಖಾತಾ ನೋಂದಣಿ ಸಾಧ್ಯವಾಗಿದೆ. ಆಯುಕ್ತರು ಹಾಗೂ ಕಾರ್ಯದರ್ಶಿ ಸಹಕಾರದಿಂದಾಗಿ ನಮ್ಮ ಪರಿಶ್ರಮ ಸಾರ್ಥಕವಾಗಿದೆ’ ಎಂದು ಬಿಡಿಎ ಸಿಸ್ಟಮ್ಸ್‌ ವ್ಯವಸ್ಥಾಪಕ ಕೆ.ಚೇತನ್‌ ‘ಪ್ರಜಾವಾಣಿ’ಗೆ ತಿಳಿಸಿದರು.

‘ಇನ್ನು ಆಸ್ತಿ ನೋಂದಣಿಗೆ ಆನ್‌ಲೈನ್ ಮೂಲಕವೇ ಎಲ್ಲ ದಾಖಲೆಗಳನ್ನು ಪಡೆಯಬಹುದು. ಬಿಡಿಎ ವ್ಯಾಪ್ತಿಯ ಎಲ್ಲ ಉಪನೋಂದಣಾಧಿಕಾರಿ ಕಚೇರಿಗಳಲ್ಲೂ ಒಂದೆರಡು ವಾರಗಳಲ್ಲೇ ಹೊಸ ವ್ಯವಸ್ಥೆ ಬಳಕೆ ಸಾಧ್ಯವಾಗಲಿದೆ’ ಎಂದರು.

ಪ್ರಯೋಜನಗಳೇನು?
* ಒಂದೇ ನಿವೇಶನ/ಆಸ್ತಿಯನ್ನು ಒಂದಕ್ಕಿಂತ ಹೆಚ್ಚು ಮಂದಿಗೆ ನೋಂದಣಿ ಮಾಡಿಸಿಕೊಡುವಂತಹ ವಂಚನೆಗಳಿಗೆ ಕಡಿವಾಣ ಬೀಳಲಿದೆ.
* ಖಾಸಗಿ ಸಂಸ್ಥೆಗಳು ನಿರ್ಮಿಸುವ ಬಡಾವಣೆಗಳಲ್ಲಿ ಉದ್ಯಾನ, ಮೈದಾನ, ರಸ್ತೆ ಮುಂತಾದ ಮೂಲಸೌಕರ್ಯಗಳಿಗೆ ಜಾಗವನ್ನು ಕಾಯ್ದಿರಿಸಲಾಗುತ್ತದೆ. ಆದರೆ, ಮಾಲೀಕರು ಬಡಾವಣೆ ಯೋಜನೆಗಳಿಗೆ ಬಿಡಿಎ ಅನುಮೋದನೆ ಪಡೆದ ಬಳಿಕ ಮೂಲಸೌಕರ್ಯಕ್ಕೆ ಕಾಯ್ದಿರಿಸಬೇಕಾದ ಜಾಗದಲ್ಲೂ ನಿವೇಶನಗಳನ್ನು ನಿರ್ಮಿಸಿ ಅಕ್ರಮವಾಗಿ ಮಾರಾಟ ಮಾಡುತ್ತಿದ್ದರು. ಇಂತಹ ಆಸ್ತಿ ಖರೀದಿಸಿದವರು ಅದಕ್ಕೆ ಖಾತಾ ಮಾಡಿಸಲಾಗದೇ ಸಮಸ್ಯೆಯಲ್ಲಿ ಸಿಲುಕುತ್ತಿದ್ದರು. ಇಂತಹ ಅಕ್ರಮಗಳಿಗೂ ಅವಕಾಶ ಇರುವುದಿಲ್ಲ.
* ಖಾತಾ ನೋಂದಣಿ ಮಾಡಿಸಲು ಬಿಡಿಎ ಕಚೇರಿಯಿಂದ ಪಡೆದ ನಿರಾಕ್ಷೇಪಣಾ ಪತ್ರ ಹಾಗೂ ಖಾತಾ ಪ್ರಮಾಣಪತ್ರದ ಪ್ರತಿ ನೀಡಬೇಕಾಗಿತ್ತು. ಜನರು ಇಂತಹ ದಾಖಲೆಗಳಿಗಾಗಿ ಅಲೆಯಬೇಕಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT