ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಕಾಸ್ಮೊಪಾಲಿಟನ್‌ ಕ್ಲಬ್‌ಗೆ ಬಿಡಿಎ ನೋಟಿಸ್‌

Published 22 ಆಗಸ್ಟ್ 2023, 16:01 IST
Last Updated 22 ಆಗಸ್ಟ್ 2023, 16:01 IST
ಅಕ್ಷರ ಗಾತ್ರ

ಬೆಂಗಳೂರು: ಜಯನಗರ ಮೂರನೇ ಬ್ಲಾಕ್‌ನಲ್ಲಿರುವ ಕಾಸ್ಮೊಪಾಲಿಟನ್‌ ಕ್ಲಬ್‌ಗೆ ಬಿಡಿಎ ಸೋಮವಾರ ನೋಟಿಸ್‌ ಜಾರಿ ಮಾಡಿದ್ದು, ಗುತ್ತಿಗೆ ಕರಾರು ಉಲ್ಲಂಘನೆ ಬಗ್ಗೆ ವಿವರ ನೀಡುವಂತೆ ಸೂಚಿಸಿದೆ.

ಕಾಸ್ಮೊಪಾಲಿಟನ್‌ ಕ್ಲಬ್‌ನ ಸ್ಥಳದ ಜಂಟಿ ತನಿಖೆ ನಡೆಸಿ ಎರಡು ದಿನದಲ್ಲಿ ವರದಿ ನೀಡುವಂತೆ ಬಿಡಿಎ ದಕ್ಷಿಣ ವಿಭಾಗದ ಕಾರ್ಯಪಾಲಕ ಎಂಜಿನಿಯರ್‌ ಹಾಗೂ ಕಂದಾಯ ಅಧಿಕಾರಿಗಳಿಗೂ ಆದೇಶಿಸಲಾಗಿದೆ.

ಸಿ.ಎ (ನಾಗರಿಕ ಸೌಲಭ್ಯ) ನಿವೇಶನ ಸಂಖ್ಯೆ 1 (ಪಿ01) ಹಳೆ ನಂ.22) ಅನ್ನು ಕ್ಲಬ್‌ ಪರವಾಗಿ ಹಂಚಿಕೆ ಮಾಡಲಾಗಿದೆ. ಪ್ರಾಧಿಕಾರಕ್ಕೆ ಕ್ಲಬ್‌ನವರು ಬರೆದುಕೊಟ್ಟಿರುವ ‘ಅಧಿಕೃತ ಮುಚ್ಚಳಿಕೆ ಪತ್ರ’ದ ಎಲ್ಲ ಷರತ್ತುಗಳನ್ನು ಉಲ್ಲಂಘಿಸಿರುವ ಬಗ್ಗೆ ಬೆಂಗಳೂರು ನಾಗರಿಕ ಹಕ್ಕು ಹೋರಾಟ ಸಮಿತಿ ವತಿಯಿಂದ ಬಿಡಿಎ ಕಾರ್ಯದರ್ಶಿ ಅವರಿಗೆ ದೂರು ಸಲ್ಲಿಸಲಾಗಿದೆ. ಕಟ್ಟಡ ನಕ್ಷೆ ಮಂಜೂರು ಸಮಯದಲ್ಲಿ ಕ್ಲಬ್‌ ಆಡಳಿತ ಮಂಡಳಿಯವರು ನೀಡಿರುವ ಮುಚ್ಚಳಿಕೆ ಪತ್ರದಲ್ಲಿರುವ ಅಂಶಗಳು ಉಲ್ಲಂಘನೆಯಾಗಿರುವುದಾಗಿ ತಿಳಿಸಿದ್ದಾರೆ. ‘ಪ್ರಜಾವಾಣಿ’ಯಲ್ಲಿ ಈ ಬಗ್ಗೆ ಆಗಸ್ಟ್‌ 22ರಂದು ವರದಿ ಪ್ರಕಟವಾಗಿದೆ.

ಹೀಗಾಗಿ, ’ಬಿಡಿಎನೊಂದಿಗೆ ಮಾಡಿಕೊಂಡಿರುವ ಗುತ್ತಿಗೆ ಕರಾರು ಪತ್ರದ ಉಲ್ಲಂಘನೆ ಬಗ್ಗೆ ನಿಮ್ಮ ಸಂಸ್ಥೆಯಿಂದ ಏಳು ದಿನಗಳಲ್ಲಿ ವರದಿ ನೀಡಬೇಕು. ಇಲ್ಲದಿದ್ದರೆ ಬಿಡಿಎ ನಾಗರಿಕ ಸೌಲಭ್ಯ ನಿವೇಶನ ಹಂಚಿಕೆ ನಿಯಮಗಳು– 1989ರನ್ವಯ ಸೂಕ್ತ ಕ್ರಮ ಕೈಗೊಳ್ಳಲಾಗುವುದು' ಎಂದು ಬಿಡಿಎ ಎಸ್ಟೇಟ್‌ ಅಧಿಕಾರಿಗಳು ಕಾಸ್ಮೊಪಾಲಿಟನ್‌ ಕ್ಲಬ್‌ ಕಾರ್ಯದರ್ಶಿಗೆ ಆಗಸ್ಟ್‌ 22ರಂದು ನೋಟಿಸ್‌ ಜಾರಿ ಮಾಡಿದ್ದಾರೆ.

ಜಂಟಿ ಸ್ಥಳ ತನಿಖೆ

ಜಯನಗರ 3ನೇ ಬ್ಲಾಕ್‌ ಸಿ.ಎ. ನಿವೇಶನ ಸಂಖ್ಯೆ 1ರಲ್ಲಿ (ಪಿ–1) ಎಷ್ಟು ವಿಸ್ತೀರ್ಣವನ್ನು ಯಾವ ಉದ್ದೇಶಗಳಿಗೆ ಬಳಸಲಾಗುತ್ತಿದೆ, ಕಟ್ಟಡವನ್ನು ಅನುಮೋದಿತ ನಕ್ಷೆಯಂತೆ ನಿರ್ಮಿಸಲಾಗಿದೆಯೇ? ಉಲ್ಲಂಘನೆಯಾಗಿದೆಯೇ? ಯಾವ ಉದ್ದೇಶಕ್ಕೆ ಎಷ್ಟು ಪ್ರಮಾಣದ ಕಟ್ಟಡ ಬಳಸಲಾಗುತ್ತಿದೆ ಎಂಬ ವಿವರವನ್ನು ಜಂಟಿ ಸ್ಥಳ ತನಿಖೆ ನಡೆಸಿ ವರದಿ ಸಲ್ಲಿಬೇಕು ಎಂದು ಎಸ್ಟೇಟ್‌ ಅಧಿಕಾರಿಯವರು ಮುಖ್ಯ ಎಂಜಿನಿಯರ್, ಕಂದಾಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ವಾಣಿಜ್ಯ ಉದ್ದೇಶಗಳಿಗಾಗಿ ಬಳಸುತ್ತಿರುವ ಕಟ್ಟಡ ವಿಸ್ತೀರ್ಣ ಹಾಗೂ ಅವುಗಳಿಂದ ಸಂಗ್ರಹಿಸುತ್ತಿರುವ ಆದಾಯ, ಪೊಲೀಸ್‌ ಠಾಣೆ, ನ್ಯಾಯಾಲಯದಲ್ಲಿ ಪ್ರಕರಣಗಳಿದ್ದರೆ ವಿವರ, ಸಿ.ಎ ನಿವೇಶನದ ಮೇಲೆ ಸಾಲ ಪಡೆದಿರುವ ವಿವರ, ಗುತ್ತಿಗೆ ಕರಾರಿನ ನಿಬಂಧನೆಗಳನ್ನು ಕಾಸ್ಮೊಪಾಲಿಟನ್‌ ಕ್ಲಬ್ ಉಲ್ಲಂಘಿಸಿದೆಯೇ ಎಂಬ ವಿವರವನ್ನು ನೀಡಲು ಆದೇಶಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT