ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: 4 ನಿವೇಶನಗಳಿಗೆ ಅಕ್ರಮವಾಗಿ ಶುದ್ಧ ಕ್ರಯಪತ್ರ ನೋಂದಣಿ

Last Updated 6 ಫೆಬ್ರುವರಿ 2022, 21:15 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಉಪಕಾರ್ಯದರ್ಶಿ–4ಹಾಗೂ ಅವರ ಕಚೇರಿಯಇಬ್ಬರು ಸಿಬ್ಬಂದಿ ಸೇರಿಕೊಂಡುಎಚ್.ಬಿ.ಆರ್ ಒಂದನೇ ಹಂತ, 5ನೇ ಬ್ಲಾಕ್‌ನ ನಾಲ್ಕು ನಿವೇಶನಗಳಿಗೆ ನಕಲಿ ದಾಖಲೆಗಳ ಆಧಾರದಲ್ಲಿ ಶುದ್ಧ ಕ್ರಯಪತ್ರ ಮಾಡಿಕೊಟ್ಟಿರುವುದು ಕಂಡು ಬಂದಿದೆ.

ಇದರಿಂದ ಬಿಡಿಎಗೆ ಕೋಟ್ಯಂತರ (ಅಂದಾಜು ₹ 3.70 ಕೋಟಿ) ರೂಪಾಯಿ ಆರ್ಥಿಕ ನಷ್ಟ ಉಂಟಾಗಿದೆ ಎಂದು ಅಂದಾಜಿಸಲಾಗಿದೆ.

ಈ ಬಡಾವಣೆಯಲ್ಲಿನ ನಿವೇಶನ ಸಂಖ್ಯೆ:1003, 1008, 1113 ಮತ್ತು 1102ಕ್ಕೆ ಸಂಬಂಧಿಸಿ ಗುತ್ತಿಗೆ ಮತ್ತು ಮಾರಾಟ ಒಪ್ಪಂದ ಪತ್ರ (ಎಲ್‌ಸಿಎಸ್‌ಎ), ಹಂಚಿಕೆ ಪತ್ರ, ಖಚಿತ ಅಳತೆ (ಸಿ.ಡಿ) ವರದಿ, ಹಣ ಪಾವತಿಯ ಚಲನ್, ಸ್ವಾಧೀನ ಪತ್ರಗಳು ಮುಂತಾದ ದಾಖಲೆಗಳನ್ನು ನಕಲಿಯಾಗಿ ಸೃಷ್ಟಿಸಲಾಗಿದೆ. ಈ ಕೃತ್ಯದಲ್ಲಿ ಉಪಕಾರ್ಯದರ್ಶಿ-4 ಆಗಿ ಕಾರ್ಯನಿರ್ವಹಿಸಿದ್ದ ಕೆಎಸ್‌ಎಸ್‌ ಅಧಿಕಾರಿ ಮಂಗಳಾ, ಅವರ ಕಚೇರಿಯ ವಿಷಯ ನಿರ್ವಾಹಕಿ ಎಚ್.ಬಿ.ಕಮಲಮ್ಮ, ಮೇಲ್ವಿಚಾರಕಿ ಕಮಲಮ್ಮ ಅವರು ಕರ್ತವ್ಯಲೋಪವೆಸಗಿರುವುದು ಪ್ರಾಧಿಕಾರದ ವಿಶೇಷ ಕಾರ್ಯಪಡೆ ಮತ್ತು ಜಾಗೃತ ದಳದಿಂದ ನಡೆಸಿರುವ ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ.ಈ ನಾಲ್ಕೂ ಅಕ್ರಮಗಳಲ್ಲಿ ಆರ್ಥಿಕ ವಿಭಾಗದ ಅಧಿಕಾರಿಗಳೂ ಶಾಮೀಲಾಗಿರುವ ಶಂಕೆ ವ್ಯಕ್ತವಾಗಿದೆ.

ಕೆಎಎಸ್‌ ಅಧಿಕಾರಿ ಮಂಗಳಾ ಹಾಗೂ ಇನ್ನಿಬ್ಬರು ನೌಕರರನ್ನು ಭ್ರಷ್ಟಾಚಾರ ತಡೆ ಕಾಯ್ದೆ 1988ರ ನಿಯಮ 17(ಎ) ರನ್ವಯ ವಿಸ್ತೃತ ವಿಚಾರಣೆ ನಡೆಸಲು ಎಸಿಬಿಗೆಅನುಮತಿ ನೀಡಬಹುದು ಎಂದು ಬಿಡಿಎ ಆಯುಕ್ತರು 2022ರ ಜ.17ರಂದು ನಗರಾಭಿವೃದ್ಧಿ ಇಲಾಖೆಗೆ ಬರೆದಿರುವ ಪತ್ರದಲ್ಲಿ ಶಿಫಾರಸು ಮಾಡಿದ್ದಾರೆ.

ನಾಲ್ಕು ಅಕ್ರಮ: ₹3.70 ಕೋಟಿ ನಷ್ಟ

ಅಕ್ರಮ 1: ಎಚ್.ಬಿ.ಆರ್ ಒಂದನೇ ಹಂತದ 5ನೇ ಬ್ಲಾಕ್‌ನ 30X40 ಅಡಿ ವಿಸ್ತೀರ್ಣದ ನಿವೇಶನವನ್ನು (ಸಂಖ್ಯೆ 1003) 2016ರ ಮಾರ್ಚ್‌ 23ರಂದು ಹಂಚಿಕೆದಾರರಾದ ಶಾಂತ ಕುಮಾರಿ ಅವರಿಗೆ ಪ್ರಾಧಿಕಾರದ ಉಪಕಾರ್ಯದರ್ಶಿ-4 ಮಂಗಳಾ, ಅವರ ಕಚೇರಿಯ ವಿಷಯ ನಿರ್ವಾಹಕಿ ಎಚ್.ಬಿ.ಕಮಲಮ್ಮ, ಮೇಲ್ವಿಚಾರಕಿ ಕಮಲಮ್ಮ ಸೇರಿ ಶುದ್ಧ ಕ್ರಯಪತ್ರವನ್ನು ನೋಂದಾಯಿಸಿಕೊಟ್ಟಿದ್ದಾರೆ. ಬೆಂಗಳೂರು ನಗರ ಜಿಲ್ಲೆಯ ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿಯವರಿಂದ ಪಡೆದಿರುವ ಧೃಢೀಕೃತ ದಾಖಲೆಗಳ ಪ್ರಕಾರ ಈ ಶುದ್ಧಕ್ರಯಪತ್ರಕ್ಕೆ ಸಂಬಂಧಿಸಿದ ನಿವೇಶನದ ಎಲ್‌ಸಿಎಸ್‌ಎಯನ್ನು (ದಸ್ತಾವೇಜು ಸಂಖ್ಯೆ 5794/1988-89) 1988ರ ನ.17ರಂದು ಬೆಂಗಳೂರು ದಕ್ಷಿಣದ ಉಪನೋಂದಣಾಧಿಕಾರಿಯವರ ಕಚೇರಿಯಲ್ಲಿ ನಾರಾಯಣ ರೆಡ್ಡಿ ಅವರಿಗೆ ನೋಂದಣಿ ಮಾಡಲಾಗಿತ್ತು.

ಹಂಚಿಕೆದಾರರು ಒದಗಿಸಿರುವ ಋಣಭಾರರಾಹಿತ್ಯ ಪ್ರಮಾಣಪತ್ರದಲ್ಲಿ (ಇ.ಸಿ) 2016 ಜೂನ್‌ 26 ರಂದು ತೋರಿಸಿರುವ ವ್ಯವಹಾರಗಳು ಧೃಢೀಕೃತ ಇ.ಸಿಯಲ್ಲಿ ಇಲ್ಲ. ನಿವೇಶನ ಹಂಚಿಕೆಯ ನೋಂದಣಿ ಕಡತಗಳನ್ನು ಪರಿಶೀಲಿಸಿದಾಗ ಈ ಹಂಚಿಕೆದಾರರಿಗೆ ನಿವೇಶನ ಹಂಚಿಕೆಯಾದ ಕುರಿತು ನಕಲಿ ದಾಖಲೆ ಸೃಷ್ಟಿಸಿರುವುದು ಕಂಡುಬಂದಿದೆ. ನಕಲಿ ಎಲ್‌ಸಿಎಸ್‌ಎ ಆಧಾರದಲ್ಲಿ ಉಪಕಾರ್ಯದರ್ಶಿ 4 ಮಂಗಳಾ ಹಾಗೂ ಅವರ ಕಚೇರಿಯವರು ಅಕ್ರಮವಾಗಿ ಶುದ್ಧ ಕ್ರಯಪತ್ರವನ್ನು ನೋಂದಾಯಿಸುವ ಮೂಲಕ ಪ್ರಾಧಿಕಾರಕ್ಕೆ ₹ 73.86 ಲಕ್ಷಕ್ಕೂ ಅಧಿಕ ಆರ್ಥಿಕ ನಷ್ಟ ಉಂಟು ಮಾಡಿದ್ದಾರೆ. ಆರ್ಥಿಕ ವಿಭಾಗದ ಸಿ.ಎ ಕಡತಗಳ ಧೃಢೀಕೃತ ಪ್ರತಿಯಲ್ಲಿ ಈ ನಿವೇಶನದ ಮೌಲ್ಯವನ್ನು ತಿದ್ದುಪಡಿ ಮಾಡಿರುವುದು ಅಕೌಂಟೆಂಟ್‌ ಜನರಲ್ ಅವರ ಲೆಕ್ಕ ಪರಿಶೋಧನೆಯ ಟಿಪ್ಪಣಿಯಲ್ಲಿ ಉಲ್ಲೇಖಿಸಲಾಗಿದೆ.

ಅಕ್ರಮ 2: ಇದೇ ಬಡಾವಣೆಯ ಒಂದನೇ ಹಂತ, 5ನೇ ಬ್ಲಾಕ್ 30x40 ಅಡಿ ವಿಸ್ತೀರ್ಣದ ನಿವೇಶನದ (ಸಂಖ್ಯೆ 1013) ಶುದ್ಧ ಕ್ರಯಪತ್ರವನ್ನು 2016ರ ಜೂನ್‌ 23ರಂದು ಎ.ಡಿ.ವಿಲಿಯಂ ಕುಮಾರ್ ಅವರಿಗೆ ನೋಂದಾಯಿಸಿಕೊಟ್ಟಿದ್ದಾರೆ. ಇದರಲ್ಲಿ ಉಲ್ಲೇಖಿಸಿದಂತೆ 1988ರ ಫೆ. 12ರಂದು ಬೆಂಗಳೂರು ದಕ್ಷಿಣದಉಪನೋಂದಣಾಧಿಕಾರಿ ಕಚೇರಿಯಿಂದ ಪಡೆದ ದಸ್ತಾವೇಜಿನಲ್ಲಿ (ಸಂಖ್ಯೆ 8991/1988-89) ಈ ಎಲ್‌ಎಸ್‌ಡಿಎ ಶಾಂತಾಬಾಯಿ ನೇಮಿಚಂದ್ರ ಹೆಸರಿನಲ್ಲಿರುವುದು ಕಂಡುಬಂದಿದೆ. ಇದರ ಇ.ಸಿಯ ದೃಢೀಕೃತ ಮಾಹಿತಿಯ ಪ್ರಕಾರ ಈ ಯಾವುದೇ ವ್ಯವಹಾರಗಳು ನಡೆದಿಲ್ಲ. ನಕಲಿ ಎಲ್‌ಸಿಎಸ್‌ಎ ಆಧಾರದ ಮೇಲೆ,ಉಪಕಾರ್ಯದರ್ಶಿ-4 ವಿಭಾಗದ ಈ ಮೂವರು ನೌಕರರು ಸೇರಿ ಅಕ್ರಮವಾಗಿ ಶುದ್ಧ ಕ್ರಯಪತ್ರವನ್ನು ನೋಂದಾ
ಯಿಸಿಕೊಟ್ಟಿದ್ದು ಕಂಡುಬಂದಿದೆ. ಇದರಿಂದ ಪ್ರಾಧಿಕಾರಕ್ಕೆ ₹ 73.86 ಲಕ್ಷಕ್ಕೂ ಅಧಿಕ ನಷ್ಟ ಉಂಟಾಗಿದೆ.

ಅಕ್ರಮ 3:‌ ಇದೇ ಬಡಾವಣೆಯ ಒಂದನೇ ಹಂತದ 5ನೇ ಬ್ಲಾಕ್‌ನಲ್ಲಿ 40x60 ಅಡಿ ವಿಸ್ತೀರ್ಣದ ನಿವೇಶನವನ್ನು (ಸಂಖ್ಯೆ 1102) 2016ರ ಸೆ. 27ರಂದು ರಾಜೇಂದ್ರ ಕುಮಾರ್‌ ಅವರಿಗೆ ಉಪಕಾರ್ಯದರ್ಶಿ– 4 ವಿಭಾಗದ ಅಧಿಕಾರಿಗಳು ಶುದ್ಧ ಕ್ರಯಪತ್ರ ಮಾಡಿಕೊಟ್ಟಿದ್ದಾರೆ. ಜಿಲ್ಲಾ ಹೆಚ್ಚುವರಿ ನೋಂದಣಾಧಿಕಾರಿಗಳ ಕಚೇರಿಯ ದಾಖಲೆಗಳ ಪ್ರಕಾರ ಈ ನಿವೇಶನವ ಎಚ್‌.ಸಿ.ಕೃಷ್ಣಪ್ಪ ಅವರ ಹೆಸರಿಗೆ ನೋಂದಣಿಯಾಗಿದೆ. ಈ ಅಕ್ರಮದಿಂದಾಗಿ ಪ್ರಾಧಿಕಾರಕ್ಕೆ ₹ 147.72 ಲಕ್ಷಕ್ಕೂ ಅಧಿಕ ಆರ್ಥಿಕ ನಷ್ಟ ಉಂಟಾಗಿದೆ.

ಅಕ್ರಮ 4: ಇದೇ ಬಡಾವಣೆಯ ಒಂದನೇ ಹಂತದ 5ನೇ ಬ್ಲಾಕ್ 30x40 ಅಡಿ ವಿಸ್ತೀರ್ಣದ ನಿವೇಶನಕ್ಕೆ (ಸಂಖ್ಯೆ 1008) ಸಂಬಂಧಿಸಿ 2016ರ ಜುಲೈ26ರಂದು ಶ್ರೀನಿವಾಸ ರೆಡ್ಡಿ ಅವರಿಗೆ ಶುದ್ಧ ಕ್ರಯಪತ್ರ ನೋಂದಣಿ ಮಾಡಿಕೊಡಲಾಗಿದ್ದು, ಇದರಲ್ಲೂ ಅಕ್ರಮ ನಡೆದಿರುವುದು ಪತ್ತೆಯಾಗಿದೆ. ಈ ನಿವೇಶನದ ಮೂಲ ದಾಖಲೆಗಳಲ್ಲಿ ಇದು ಗುರುಮೂರ್ತಿ ಅವರಿಗೆ ಹಂಚಿಕೆಯಾಗಿರುವುದು ಕಂಡುಬಂದಿದೆ. ಈ ಅಕ್ರಮದಿಂದ ಪ್ರಾಧಿಕಾರಕ್ಕೆ ₹ 73.86 ಲಕ್ಷಕ್ಕೂ ಅಧೀಕ ಮೊತ್ತ ನಷ್ಟವಾಗಿದೆ ಎಂದು ಬಿಡಿಎ ಆಂತರಿಕ ತನಿಖೆಯಲ್ಲಿ ದೃಢಪಟ್ಟಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT