ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ವಲಗೇರಹಳ್ಳಿಯಲ್ಲಿ ಶೀಘ್ರದಲ್ಲೇ 200 ಫ್ಲ್ಯಾಟ್‌ ನಿರ್ಮಾಣ

7ನೇ ಹಂತದ ಯೋಜನೆಗೆ ಟೆಂಡರ್‌, 2 ವರ್ಷದಲ್ಲಿ ಪೂರ್ಣ
ಆರ್‌. ಮಂಜುನಾಥ್‌
Published 29 ಜನವರಿ 2024, 23:30 IST
Last Updated 29 ಜನವರಿ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ತನ್ನ ಬಹುಬೇಡಿಕೆಯ ವಲಗೇರಹಳ್ಳಿ (ಜ್ಞಾನಭಾರತಿ) ವಸತಿ ಬಡಾವಣೆಯಲ್ಲಿ 200 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಮುಂದಾಗಿದೆ.

ಮೈಸೂರು ರಸ್ತೆಯಲ್ಲಿ ಆರ್‌.ವಿ. ಕಾಲೇಜು ಹಾಗೂ ಕೆಂಗೇರಿ ಮಧ್ಯಭಾಗದಲ್ಲಿರುವ ಜ್ಞಾನಭಾರತಿ ವಸತಿ ಬಡಾವಣೆಯಲ್ಲಿ ಈಗಾಗಲೇ ಆರು ಹಂತದಲ್ಲಿ 2,700ಕ್ಕೂ ಹೆಚ್ಚು ಫ್ಲ್ಯಾಟ್‌ಗಳನ್ನು ಮಾರಾಟ ಮಾಡಲಾಗಿದೆ. ಈ ಪ್ರದೇಶದಲ್ಲಿ ಇನ್ನಷ್ಟು ಫ್ಲ್ಯಾಟ್‌ಗಳಿಗೆ ಬೇಡಿಕೆ ಇದೆ. ಹೀಗಾಗಿ, ಮೂರು ಎಕರೆ ಪ್ರದೇಶದಲ್ಲಿ ಏಳನೇ ಹಂತದಲ್ಲಿ 200 ಫ್ಲ್ಯಾಟ್‌ಗಳನ್ನು ನಿರ್ಮಿಸಲು ಬಿಡಿಎ ಟೆಂಡರ್‌ ಆಹ್ವಾನಿಸಿದೆ.

‘ಲಂಪ್‌ ಸಮ್‌ ಟರ್ನ್‌ ಕೀ’ ಆಧಾರದಲ್ಲಿ ಏಳನೇ ಹಂತದಲ್ಲಿ ಫ್ಲ್ಯಾಟ್‌ಗಳನ್ನು ನಿರ್ಮಿಸಲಾಗುತ್ತಿದೆ. ಗುತ್ತಿಗೆದಾರರು ನಿಗದಿಪಡಿಸಲಾಗಿರುವ ₹81 ಕೋಟಿಗೆ ಎರಡು ವರ್ಷಗಳಲ್ಲಿ ಯೋಜನೆಯನ್ನು ಮುಗಿಸಬೇಕು. ಫೆಬ್ರುವರಿ 5ರಂದು ತಾಂತ್ರಿಕ ಬಿಡ್‌ ತೆರೆಯಲಾಗುತ್ತದೆ. ಅದಾದ ನಂತರ ಪರಿಶೀಲನೆ, ಟೆಂಡರ್‌ ಸಮ್ಮತಿ ಸೇರಿದಂತೆ ಕಾರ್ಯಾದೇಶ ನೀಡಲು ಒಂದು ತಿಂಗಳಾಗುತ್ತದೆ. ಎಲ್ಲ ಪ್ರಕ್ರಿಯೆಗಳನ್ನು ಮುಗಿಸಿ ಮಾರ್ಚ್‌ನಲ್ಲಿ ಕಾಮಗಾರಿ ಆರಂಭಿಸಲು ಯೋಜಿಸಲಾಗಿದೆ ಎಂದು ಬಿಡಿಎ ಅಧಿಕಾರಿಗಳು ತಿಳಿಸಿದರು.

ಏಳನೇ ಹಂತದಲ್ಲಿ ಎರಡು ಬ್ಲಾಕ್‌ಗಳಿರಲಿದ್ದು, ಪ್ರತಿ ಬ್ಲಾಕ್‌ ನೆಲ ಮಹಡಿ ಸೇರಿದಂತೆ 10 ಅಂತಸ್ತುಗಳನ್ನು ಒಳಗೊಂಡಿರುತ್ತದೆ. ಒಂದನೇ ಬ್ಲಾಕ್‌ನಲ್ಲಿ 2.5 ಬಿಎಚ್‌ಕೆಯ 100 ಫ್ಲ್ಯಾಟ್‌ಗಳಿರುತ್ತವೆ. ಎರಡು ಕೊಠಡಿ ಜೊತೆಗೆ ಒಂದು ‘ಸ್ಟಡಿ ರೂಂ’ ಅನ್ನು ಇದು ಒಳಗೊಂಡಿರುತ್ತದೆ. ಇದರ ಕಾರ್ಪೆಟ್‌ ಏರಿಯಾ 70 ಚದರ ಮೀಟರ್‌. ಎರಡನೇ ಬ್ಲಾಕ್‌ನಲ್ಲಿ 58 ಚದರ ಮೀಟರ್‌ ಕಾರ್ಪೆಟ್‌ ಏರಿಯಾದ 2 ಬಿಎಚ್‌ಕೆಯ 100 ಫ್ಲ್ಯಾಟ್‌ಗಳಿರುತ್ತವೆ.‌

ಎರಡೂ ಬ್ಲಾಕ್‌ಗಳ ಬೇಸ್‌ಮೆಂಟ್‌ ಹಾಗೂ ಮೇಲ್ಮೈ ಹಂತದಲ್ಲಿ ಒಟ್ಟು 200 ಕಾರ್‌ಗಳಿಗೆ ಪಾರ್ಕಿಂಗ್‌ ವ್ಯವಸ್ಥೆ ಇರುತ್ತದೆ. ಒಟ್ಟಾರೆ ಅಪಾರ್ಟ್‌ಮೆಂಟ್‌ 33.6 ಮೀಟರ್‌ ಎತ್ತರವಿರುತ್ತದೆ. 2027ರ ಆರಂಭದಲ್ಲಿ ಈ ಫ್ಲ್ಯಾಟ್‌ಗಳು ಸಿದ್ಧವಾಗಲಿವೆ ಎಂದು ಎಂಜಿನಿಯರ್‌ಗಳು ಮಾಹಿತಿ ನೀಡಿದರು.

2018ರಲ್ಲಿ 2ಬಿಎಚ್‌ಕೆ ಫ್ಲ್ಯಾಟ್‌ಗಳನ್ನು ₹44 ಲಕ್ಷಕ್ಕೆ ಮಾರಾಟ ಮಾಡಲಾಗಿತ್ತು. ಈ ಬಾರಿ ನಿರ್ಮಾಣ ವೆಚ್ಚ (ಎಸ್‌ಆರ್‌ ದರ) ಹೆಚ್ಚಾಗಿರುವುದರಿಂದ ಸುಮಾರು ₹60 ಲಕ್ಷ ದರದಲ್ಲಿ ಮಾರಾಟ ಮಾಡುವ ಯೋಜನೆ ಹೊಂದಲಾಗಿದೆ ಎಂದರು.

ಆರಂಭ ಪೂರ್ವ ಕೊಡುಗೆ!

‘ಖಾಸಗಿ ಅಪಾರ್ಟ್‌ಮೆಂಟ್‌ಗಳ ಮಾಲೀಕರು ಫ್ಲ್ಯಾಟ್‌ಗಳ ಮಾರಾಟಕ್ಕೆ ಆರಂಭ ಪೂರ್ವ ಕೊಡುಗೆ(ಪ್ರೀ ಲಾಂಚ್‌ ಆಫರ್‌) ನೀಡುತ್ತಾರೆ. ಮೊದಲೇ ಬುಕಿಂಗ್‌ ಹಣ ಪಾವತಿಸಿಕೊಳ್ಳುತ್ತಾರೆ. ಅದರಂತೆಯೇ ಬಿಡಿಎ ಕೂಡ ಇಂತಹ ಮಾರುಕಟ್ಟೆ ಪ್ರಯೋಗಗಳನ್ನು ನಡೆಸಬೇಕು’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದ್ದರು. ಜ್ಞಾನಭಾರತಿ ವಸತಿ ಬಡಾವಣೆಯ 7ನೇ ಹಂತದ ಫ್ಲ್ಯಾಟ್‌ಗಳ ಮಾರಾಟಕ್ಕೆ ಬಿಡಿಎ ಮೊದಲ ಬಾರಿಗೆ ‘ಪ್ರೀ ಲಾಂಚ್‌ ಆಫರ್‌’ ಪ್ರಯೋಗ ಮಾಡುವ ಸಾಧ್ಯತೆ ಇದೆ. ಡಿಸಿಎಂ ಹಾಗೂ ಬಿಡಿಎ ಅಧ್ಯಕ್ಷರು ಈ ಬಗ್ಗೆ ಅಂತಿಮ ನಿರ್ಧಾರ ಕೈಗೊಂಡರೆ ಕಾಮಗಾರಿ ಆರಂಭವಾಗುವ ಸಂದರ್ಭದಲ್ಲಿ ನಾಗರಿಕರಿಗೆ ಈ ಕೊಡುಗೆ ನೀಡಬಹುದು ಎಂದು ಎಂಜಿನಿಯರ್‌ಗಳು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT