ಭಾನುವಾರ, ಮಾರ್ಚ್ 7, 2021
29 °C
ಮತ್ತೆ 554 ನಿವಾಸಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಿದ ಬಿಬಿಎಂಪಿ

ಬೆಳ್ಳಂದೂರು: ಕೋವಿಡ್‌ ಪ್ರಕರಣಗಳ ಸಂಖ್ಯೆ 20ಕ್ಕೆ ಏರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬೆಳ್ಳಂದೂರು ವಾರ್ಡ್ ವ್ಯಾಪ್ತಿಯ ಎಸ್‌ಜೆಆರ್‌ ವಾಟರ್‌ಮಾರ್ಕ್‌ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳಲ್ಲಿ ಕೋವಿಡ್‌ ಪತ್ತೆಯಾದವರ ಸಂಖ್ಯೆ 20ಕ್ಕೆ ಹೆಚ್ಚಳವಾಗಿದೆ. 

ಈ ಅಪಾರ್ಟ್‌ಮೆಂಟ್‌ ಸಮುಚ್ಚಯದ ನಿವಾಸಿಗಳಲ್ಲಿ 10 ಮಂದಿಗೆ ಸೋಂಕು ಇರುವುದು ಸೋಮವಾರ ದೃಢಪಟ್ಟಿತ್ತು. ಹಾಗಾಗಿ 501 ನಿವಾಸಿಗಳನ್ನು ಬಿಬಿಎಂಪಿ ಸೋಮವಾರ ಕೋವಿಡ್‌ ಪರೀಕ್ಷೆಗೆ ಒಳಪಡಿಸಿತ್ತು. ಅವರಲ್ಲಿ 10 ಮಂದಿ ಸೋಂಕು ಹೊಂದಿರುವುದು ಮಂಗಳವಾರ ಪತ್ತೆಯಾಗಿದೆ. ಹಾಗಾಗಿ ಮತ್ತೆ ಇಲ್ಲಿನ 554 ನಿವಾಸಿಗಳನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದ್ದು, ಅದರ ಫಲಿತಾಂಶ ಇನ್ನಷ್ಟೇ ಬರಬೇಕಿದೆ.

ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಒಂಬತ್ತು ಬ್ಲಾಕ್‌ಗಳಿದ್ದು, ಒಟ್ಟು 504 ವಸತಿಗಳಿವೆ. ಇವುಗಳಲ್ಲಿ 470 ಫ್ಲ್ಯಾಟ್‌ಗಳಲ್ಲಿ ಕುಟುಂಬಗಳು ವಾಸ ಇವೆ. ಆರು ಬ್ಲಾಕ್‌ಗಳಲ್ಲಿ ಈ ಪ್ರಕರಣಗಳು ವರದಿಯಾಗಿವೆ. ಈ ಆರು ಬ್ಲಾಕ್‌ಗಳನ್ನು ಕಂಟೈನ್‌ಮೆಂಟ್ ವಲಯ ಎಂದು ಘೋಷಿಸಲಾಗಿದೆ. ನಿವಾಸಿಗಳ ಗಂಟಲು ದ್ರವದ ಮಾದರಿ ಪಡೆಯಲು ಬಿಬಿಎಂಪಿ 9 ತಂಡಗಳನ್ನು ನಿಯೋಜಿಸಿದೆ.

‘ಒಂದೇ ಕ್ಲಸ್ಟರ್‌ನಲ್ಲಿ ಐದಕ್ಕಿಂತ ಹೆಚ್ಚು ಕೋವಿಡ್‌ ಪ್ರಕರಣಗಳು ಪತ್ತೆಯಾದರೆ ಅದನ್ನು ಕಂಟೈನ್‌ಮೆಂಟ್ ಪ್ರದೇಶ ಎಂದು ಗುರುತಿಸುತ್ತೇವೆ. ಅದರೆ, ಹಿಂದಿನಂತೆ ಅಲ್ಲಿ ಬ್ಯಾರಿಕೇಡ್‌ ಅಳವಡಿಸುವುದಿಲ್ಲ. ಭಿತ್ತಿಪತ್ರಗಳನ್ನು ಅಂಟಿಸುವುದಿಲ್ಲ. ಸೋಂಕಿತರಲ್ಲಿ ರೋಗ ಲಕ್ಷಣ ಇರುವವರನ್ನು ಆಸ್ಪತ್ರೆಗೆ ದಾಖಲಿಸುತ್ತೇವೆ. ರೋಗ ಲಕ್ಷಣಗಳಿಲ್ಲದ ಸೋಂಕಿತರು ಮನೆಯಲ್ಲೇ ಪ್ರತ್ಯೇಕವಾಸಕ್ಕೆ ಒಳಗಾಗಲು ಅವಕಾಶ ಕಲ್ಪಿಸಲಾಗುತ್ತದೆ’ ಬಿಬಿಎಂಪಿ ಆಯುಕ್ತ ಎನ್. ಮಂಜುನಾಥಪ್ರಸಾದ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲಿ ಸೋಂಕು ಹೊಂದಿರುವವರ ನೇರ ಹಾಗೂ ಪರೋಕ್ಷ ಸಂಪರ್ಕಕ್ಕೆ ಬಂದವರನ್ನೂ ಪತ್ತೆ ಹಚ್ಚಿ ಅವರನ್ನೂ ಕೋವಿಡ್‌ ಪರೀಕ್ಷೆಗೆ ಒಳಪಡಿಸಲಿದ್ದೇವೆ. ಪರೀಕ್ಷೆಯ ಫಲಿತಾಂಶ ಬರುವವರೆಗೆ ಅವರು ಹೊರಗಡೆ ಅಡ್ಡಾಡದಂತೆ ಸೂಚನೆ ನೀಡುತ್ತೇವೆ. ಅವರ ಮೇಲೂ ನಿಗಾ ಇಡುತ್ತೇವೆ’ ಎಂದರು.

ಬೆಳ್ಳಂದೂರಿನಲ್ಲಿ ಸೋಂಕು ಪತ್ತೆಯಾದವರು ಕೇರಳ ಅಥವಾ ಮಹಾರಾಷ್ಟ್ರದಿಂದ ಬಂದವರಲ್ಲ ಎಂದು ಬಿಬಿಎಂಪಿ ಹೇಳಿದೆ.

ಸೋಂಕು ನಿಯಂತ್ರಣಕ್ಕೆ– ಅಧಿಕಾರಿಗಳ ನಿಟ್ಟುಸಿರು

ಈ ತಿಂಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೋವಿಡ್‌ ಪತ್ತೆಯಾದ ಎರಡು ಪ್ರಕರಣಗಳಲ್ಲೂ ಸೋಂಕು ಹರಡುವಿಕೆ ನಿಯಂತ್ರಣಕ್ಕೆ ಬಂದಿರುವುದು ಬಿಬಿಎಂಪಿ ಅಧಿಕಾರಿಗಳು ತುಸು ನಿಟ್ಟುಸಿರು ಬಿಡುವಂತೆ ಮಾಡಿದೆ.

ಕಾವಲ್‌ಬೈರಸಂದ್ರದ ನರ್ಸಿಂಗ್‌ ಕಾಲೇಜಿನಲ್ಲಿ 40 ವಿದ್ಯಾರ್ಥಿಗಳಲ್ಲಿ ಕೊರೊನಾ ಸೋಂಕು ಕಂಡುಬಂದಿದ್ದು ಹಾಗೂ ಬೊಮ್ಮನಹಳ್ಳಿ ವಲಯದ ಅಪಾರ್ಟ್‌ಮೆಂಟ್‌ ಸಮುಚ್ಚಯವೊಂದರಲ್ಲಿ 103 ಮಂದಿಯಲ್ಲಿ ಕೋವಿಡ್‌ ಪತ್ತೆಯಾಗಿದ್ದು ಅಧಿಕಾರಿಗಳ ಆತಂಕಕ್ಕೆ ಕಾರಣವಾಗಿತ್ತು.

‘ಕಾವಲ್‌ಭೈರಸಂದ್ರದ ಕಾಲೇಜಿನ ಬೇರೆ ವಿದ್ಯಾರ್ಥಿಗಳಲ್ಲಿ ಯಾರಲ್ಲೂ ಸೋಂಕು ಪತ್ತೆಯಾಗಿಲ್ಲ. ಬೊಮ್ಮನಹಳ್ಳಿಯ ಅಪಾರ್ಟ್‌ಮೆಂಟ್‌ ಸಮುಚ್ಚಯದಲ್ಲೂ ಬಳಿಕ ಯಾವುದೇ ವ್ಯಕ್ತಿಗಳಲ್ಲೂ ಸೊಂಕು ಕಂಡುಬಂದಿಲ್ಲ’ ಎಂದು ಮಂಜುನಾಥ ಪ್ರಸಾದ್‌ ತಿಳಿಸಿದರು.

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು