ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧಿಕ ರಸಗೊಬ್ಬರ, ಕೀಟನಾಶಕ ಬಳಕೆ: ಥಾವರಚಂದ್‌ ಗೆಹಲೋತ್‌ ಕಳವಳ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವ
Published 4 ಮಾರ್ಚ್ 2024, 23:30 IST
Last Updated 4 ಮಾರ್ಚ್ 2024, 23:30 IST
ಅಕ್ಷರ ಗಾತ್ರ

ಬೆಂಗಳೂರು: ‘ಹೆಚ್ಚು ಆಹಾರವನ್ನು ಉತ್ಪಾದಿಸಲು ಅಧಿಕ ರಸಗೊಬ್ಬರ, ಕೀಟನಾಶಕಗಳ ಬಳಕೆ ಮಾಡಲಾಗುತ್ತಿದೆ. ಇದರಿಂದ ಮಾನವನ ಆರೋಗ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತಿದೆ’ ಎಂದು ರಾಜ್ಯಪಾಲ ಥಾವರಚಂದ್‌ ಗೆಹಲೋತ್‌ ಕಳವಳ ವ್ಯಕ್ತಪಡಿಸಿದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯದ 58ನೇ ಘಟಿಕೋತ್ಸವದಲ್ಲಿ ವಿದ್ಯಾರ್ಥಿಗಳಿಗೆ ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಿ ಅವರು ಮಾತನಾಡಿದರು.

‘ಅತಿಯಾದ ರಸಗೊಬ್ಬರ ಬಳಕೆಯಿಂದ ನೈಸರ್ಗಿಕ ಸಂಪನ್ಮೂಲಗಳಾದ ಮಣ್ಣು, ನೀರು, ಪರಿಸರ ಕಲುಷಿತಗೊಳ್ಳುತ್ತಿವೆ’ ಎಂದು ಹೇಳಿದರು.

‘ಪ್ರಧಾನಿ ನರೇಂದ್ರ ಮೋದಿ ಅವರು ಮಣ್ಣಿನ ರಕ್ಷಣೆಗಾಗಿ 2015ರಲ್ಲಿ ಮಣ್ಣಿನ ಆರೋಗ್ಯ ಕಾರ್ಡ್ ಯೋಜನೆ ಪ್ರಾರಂಭಿಸಿದ್ದರು. ಇದರ ಅಡಿಯಲ್ಲಿ ದೇಶದಾದ್ಯಂತ 28 ಕೋಟಿ ರೈತ ಕುಟುಂಬಗಳಿಗೆ ಮಣ್ಣಿನ ‘ಆರೋಗ್ಯ ಕಾರ್ಡ್’ ವಿತರಿಸಲಾಗಿದೆ’ ಎಂದರು. ‘ಈಗ ರಸಗೊಬ್ಬರ, ರಾಸಾಯನಿಕ ಕೀಟನಾಶಕ ಬಳಸದಿರುವ ನೈಸರ್ಗಿಕ ಕೃಷಿಯನ್ನು ಉತ್ತೇಜಿಸುವ ಅವಶ್ಯಕತೆಯಿದೆ’ ಎಂದು ಅವರು ಪ್ರತಿಪಾದಿಸಿದರು.

ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಮಾತನಾಡಿ, ‘ಕೃಷಿಯನ್ನು ಲಾಭದಾಯಕ ಉದ್ದಿಮೆಯನ್ನಾಗಿಸಲು, ರೈತರ ಆದಾಯ ಹೆಚ್ಚಿಸಲು ರಾಜ್ಯ ಸರ್ಕಾರವು ಅನೇಕ ಯೋಜನೆ ಹಮ್ಮಿಕೊಂಡಿದೆ. ಅಧಿಕಾರಿಗಳು, ಕೃಷಿಯಲ್ಲಿನ ಹೊಸ ತಂತ್ರಜ್ಞಾನಗಳ ಬಗ್ಗೆ ರೈತರಿಗೆ ಮಾಹಿತಿ ನೀಡಬೇಕು. ಈ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು, ತಾವು ಪಡೆದ ಜ್ಞಾನ ಮತ್ತು ಕೌಶಲಗಳ ಬಲದ ಮೇಲೆ ಕೃಷಿಯಲ್ಲಿರುವ ಸವಾಲುಗಳನ್ನು ಪರಿಹರಿಸಬೇಕು’ ಎಂದು ಹೇಳಿದರು.

ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಹಾಗೂ ಚಿನ್ನದ ಪ್ರಮಾಣ ಪತ್ರ ಸ್ವೀಕರಿಸುವುದಕ್ಕೂ ಮೊದಲು ವಿದ್ಯಾರ್ಥಿಗಳು ಪರಸ್ಪರ ಸಂಭ್ರಮಿಸಿದರು. –ಪ್ರಜಾವಾಣಿ ಚಿತ್ರ
ಘಟಿಕೋತ್ಸವದಲ್ಲಿ ಪದವಿ ಪ್ರಮಾಣ ಪತ್ರ ಹಾಗೂ ಚಿನ್ನದ ಪ್ರಮಾಣ ಪತ್ರ ಸ್ವೀಕರಿಸುವುದಕ್ಕೂ ಮೊದಲು ವಿದ್ಯಾರ್ಥಿಗಳು ಪರಸ್ಪರ ಸಂಭ್ರಮಿಸಿದರು. –ಪ್ರಜಾವಾಣಿ ಚಿತ್ರ
ಅತಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದ ಎಸ್‌.ಸ್ನೇಹಶ್ರೀ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಿದರು. ಸಚಿವ ಎನ್.ಚಲುವರಾಯಸ್ವಾಮಿ ಕುಲಪತಿ ಎಸ್‌.ವಿ. ಸುರೇಶ ಪಾಲ್ಗೊಂಡಿದ್ದರು.

ಅತಿ ಹೆಚ್ಚು ಚಿನ್ನದ ಪದಕಗಳನ್ನು ಪಡೆದ ಎಸ್‌.ಸ್ನೇಹಶ್ರೀ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಪದವಿ ಹಾಗೂ ಚಿನ್ನದ ಪದಕ ಪ್ರದಾನ ಮಾಡಿದರು. ಸಚಿವ ಎನ್.ಚಲುವರಾಯಸ್ವಾಮಿ ಕುಲಪತಿ ಎಸ್‌.ವಿ. ಸುರೇಶ ಪಾಲ್ಗೊಂಡಿದ್ದರು. 

– ಪ್ರಜಾವಾಣಿ ಚಿತ್ರ

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸೋಮವಾರ ಆಯೋಜಿಸಿದ್ದ 58ನೇ ಘಟಿಕೋತ್ಸವದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದ ಪ್ರಗತಿಪರ ರೈತ ಎಂ.ಸಿ. ರಂಗಸ್ವಾಮಿ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು. ಸಚಿವ ಎನ್.ಚಲುವರಾಯಸ್ವಾಮಿ ಕುಲಪತಿ ಎಸ್‌.ವಿ. ಸುರೇಶ ಉಪಸ್ಥಿತರಿದ್ದರು.

ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ಸೋಮವಾರ ಆಯೋಜಿಸಿದ್ದ 58ನೇ ಘಟಿಕೋತ್ಸವದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದ ಪ್ರಗತಿಪರ ರೈತ ಎಂ.ಸಿ. ರಂಗಸ್ವಾಮಿ ಅವರಿಗೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರು ಗೌರವ ಡಾಕ್ಟರೇಟ್‌ ಪ್ರದಾನ ಮಾಡಿದರು. ಸಚಿವ ಎನ್.ಚಲುವರಾಯಸ್ವಾಮಿ ಕುಲಪತಿ ಎಸ್‌.ವಿ. ಸುರೇಶ ಉಪಸ್ಥಿತರಿದ್ದರು.

– ಪ್ರಜಾವಾಣಿ ಚಿತ್ರ

ಮಳೆ ಕೊರತೆ: ಶೇ 50ರಷ್ಟು ಉತ್ಪಾದನೆ ಕುಸಿತ

‘ಕಳೆದ ವರ್ಷ ಮುಂಗಾರು ಅವಧಿಯಲ್ಲಿ ವಾಡಿಕೆಗಿಂತ ಕಡಿಮೆ ಮಳೆಯಾಗಿತ್ತು. 1153 ಮಿ.ಮೀ ರಾಜ್ಯದ ವಾಡಿಕೆ ಮಳೆ. ಆದರೆ 872 ಮಿ.ಮೀ ಮಳೆಯಾಗಿತ್ತು. ನೈರುತ್ಯ ಮುಂಗಾರಿನಲ್ಲಿ ಶೇ 25ರಷ್ಟು ಮಳೆ ಕೊರತೆಯಾಗಿತ್ತು’ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ಹೇಳಿದರು. ‘ರಾಜ್ಯದ 31 ಜಿಲ್ಲೆಗಳಲ್ಲಿ 216 ತಾಲ್ಲೂಕು ಪರಪೀಡಿತ ಎಂದು ಘೋಷಿಸಲಾಗಿದೆ. ಕಳೆದ ವರ್ಷ 73 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಬಿತ್ತನೆಯಾಗಿತ್ತು. ಶೇ 50ರಷ್ಟು ಉತ್ಪಾದನೆ ಕುಸಿತವಾಗಿದೆ’ ಎಂದು ಮಾಹಿತಿ ನೀಡಿದರು.

ಕಂಡಕ್ಟರ್‌ ಪುತ್ರಿಗೆ 7 ಚಿನ್ನದ ಪದಕ

ಬೆಂಗಳೂರು: ಬೆಂಗಳೂರು ಮಹಾನಗರ ಸಾರಿಗೆ ನಿಗಮದ(ಬಿಎಂಟಿಸಿ) ಕಂಡಕ್ಟರ್‌ ಶ್ರೀಧರ್‌ ಅವರ ಪುತ್ರಿ ಎಸ್‌.ನಂದಿತಾ ಅವರು ಬಿಎಸ್ಸಿ ಕೃಷಿಯಲ್ಲಿ (ಆನರ್ಸ್‌) 7 ಚಿನ್ನದ ಪದಕಗಳನ್ನು ಪಡೆದಿದ್ದಾರೆ. ಪುತ್ರಿಯ ಸಾಧನೆಯಿಂದ ಇಡೀ ಕುಟುಂಬ ಸಂಭ್ರಮದಲ್ಲಿತ್ತು. ವೇದಿಕೆ ಮೇಲೇರಿ ಚಿನ್ನದ ಪದಕಗಳಿಗೆ ನಂದಿತಾ ಕೊರಳೊಡ್ಡುತ್ತಿದ್ದಂತೆಯೇ ಪೋಷಕರು ಸಂತಸಪಟ್ಟರು.

ಬಿಎಸ್ಸಿ (ಆನರ್ಸ್‌) ಕೃಷಿ ವಿಭಾಗದಲ್ಲಿ 13 ಚಿನ್ನದ ಪದಕ ಪಡೆದ ಬೆಂಗಳೂರು ಕೃಷಿ ವಿ.ವಿ ಎಸ್‌.ಸ್ನೇಹಾ ಅವರು ‘ಚಿನ್ನದ ಪದಕಗಳು ಬಂದಿದ್ದು ಸಂಭ್ರಮ ಹೆಚ್ಚಿಸುವ ಜೊತೆಗೆ ಜವಾಬ್ದಾರಿಯನ್ನೂ ತಂದಿದೆ’ ಎಂದು ಸಂತಸ ಹಂಚಿಕೊಂಡರು. ಘಟಿಕೋತ್ಸವದಲ್ಲಿ ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ದೊಡ್ಡಮಗ್ಗೆ ಗ್ರಾಮದ ಬಿ.ಎ ಪದವೀಧರ ಎಂ.ಸಿ.ರಂಗಸ್ವಾಮಿ ಅವರಿಗೆ ಗೌರವ ಡಾಕ್ಟರೇಟ್‌ ಪ್ರದಾನ ಮಾಡಲಾಯಿತು.

ಸಾವಯವ ಗೊಬ್ಬರಗಳ ಬಳಕೆಯಿಂದ ಭೂಮಿ ಗುಣಮಟ್ಟ ಸುಧಾರಿಸುತ್ತದೆ. ಜೊತೆಗೆ ಉತ್ಪಾದನಾ ವೆಚ್ಚ ಕಡಿಮೆ ಮಾಡಿ ಆದಾಯ ಹೆಚ್ಚಿಸುತ್ತದೆ.
-ಥಾವರಚಂದ್‌ ಗೆಹಲೋತ್‌, ರಾಜ್ಯಪಾಲ
ರೈತರಿಗೆ ಅಗತ್ಯವಿರುವ ಗುಣಮಟ್ಟದ ಬಿತ್ತನೆ ಬೀಜವನ್ನು ಪೂರೈಸಲು ರಾಜ್ಯದಲ್ಲಿ ಬಿತ್ತನೆ ಬೀಜ ಕಾಯ್ದೆ ಅನುಷ್ಠಾನಕ್ಕೆ ತರಲಾಗುತ್ತಿದೆ.
-ಎನ್‌.ಚಲುವರಾಯಸ್ವಾಮಿ, ಕೃಷಿ ಸಚಿವ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT