ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಯಾಣ–ಪ್ರಯಾಸ: ವಿಮಾನ ನಿಲ್ದಾಣ ರಸ್ತೆ, ‘ಅಪಘಾತ’ ಭಯ

ಎರಡು ತಿಂಗಳಿನಲ್ಲಿ 91 ಅಪಘಾತ l ಅತೀ ವೇಗ ಹಾಗೂ ನಿರ್ಲಕ್ಷ್ಯದ ಚಾಲನೆ l ನಿಯಮ ಪಾಲಿಸದ ಚಾಲಕರು
Last Updated 8 ಏಪ್ರಿಲ್ 2022, 20:41 IST
ಅಕ್ಷರ ಗಾತ್ರ

ಬೆಂಗಳೂರು: ನಗರದಿಂದ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (ಕೆಐಎ) ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮೇಲಿಂದ ಮೇಲೆ ಅಪಘಾತಗಳು ಸಂಭವಿಸುತ್ತಿದ್ದು, ಸಾವು– ನೋವುಗಳು ಹೆಚ್ಚುತ್ತಿವೆ. ಯಾವಾಗ? ಎಲ್ಲಿ ? ಹೇಗೆ ? ಅಪಘಾತವಾಗುತ್ತದೆ ಎಂಬ ಭಯ ಪ್ರಯಾಣಿಕರು ಹಾಗೂ ಪಾದಚಾರಿಗಳನ್ನು ಕಾಡುತ್ತಿದೆ.

ಅಂತರರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ವಿಮಾನ ನಿಲ್ದಾಣದಿಂದ ನಿತ್ಯವೂ ಸಾವಿರಾರು ಮಂದಿ, ಹೊರ ರಾಜ್ಯ ಹಾಗೂ ಹೊರ ದೇಶಗಳಿಗೆ ಪ್ರಯಾಣಿಸುತ್ತಿದ್ದಾರೆ. ನಗರದಿಂದ ನಿಲ್ದಾಣಕ್ಕೆ ಹೋಗಲು ಹಾಗೂ ನಿಲ್ದಾಣದಿಂದ ನಗರಕ್ಕೆ ಬರಲು ಸುಸಜ್ಜಿತ ರಸ್ತೆ ನಿರ್ಮಿಸಲಾಗಿದೆ. ಇದೇ ರಸ್ತೆ ಅಪಘಾತ ವಲಯವಾಗಿ ಮಾರ್ಪಡುತ್ತಿದ್ದು, ಈ ಬಗ್ಗೆ ಸಂಚಾರ ಪೊಲೀಸರೇ ಅಂಕಿ–ಅಂಶ ಬಿಡುಗಡೆ ಮಾಡಿದ್ದಾರೆ.

‘ನಗರದಿಂದ ವಿಮಾನ ನಿಲ್ದಾಣ, ಬಳ್ಳಾರಿ, ಹೈದರಾಬಾದ್‌ಗೆ ಸಂಪರ್ಕ ಕಲ್ಪಿಸುವ ರಸ್ತೆ ಇದಾಗಿದೆ. ನಿತ್ಯವೂ ಸಾವಿರಾರು ವಾಹನಗಳು ಸಂಚರಿಸುತ್ತವೆ. ಕೆಲವರ ಅತೀ ವೇಗದ ಚಾಲನೆ ಹಾಗೂ ನಿರ್ಲಕ್ಷ್ಯದಿಂದ ಅಪಘಾತಗಳು ಸಂಭವಿಸುತ್ತಿವೆ’ ಎಂದು ಸಂಚಾರ ವಿಭಾಗದ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದರು.

‘ನಗರದ ಬಸವೇಶ್ವರ ವೃತ್ತ, ಅರಮನೆ ರಸ್ತೆ, ಮೇಖ್ರಿ ವೃತ್ತ, ಹೆಬ್ಬಾಳ ಮಾರ್ಗವಾಗಿ ವಿಮಾನ ನಿಲ್ದಾಣಕ್ಕೆ ವಾಹನಗಳು ಹೋಗುತ್ತವೆ. ಹೆಬ್ಬಾಳದಿಂದ ವಿಮಾನ ನಿಲ್ದಾಣದವರೆಗಿನ ರಸ್ತೆಯಲ್ಲೇ ಹೆಚ್ಚು ಅ‍ಪಘಾತಗಳು ಆಗುತ್ತಿವೆ’ ಎಂದೂ ತಿಳಿಸಿದರು.

‘ಹೆಬ್ಬಾಳ, ಯಲಹಂಕ, ಚಿಕ್ಕಜಾಲ ಹಾಗೂ ದೇವನಹಳ್ಳಿ ಸಂಚಾರ ಠಾಣೆಗಳ ವ್ಯಾಪ್ತಿಯಲ್ಲಿ ರಸ್ತೆ ಹಾದು ಹೋಗಿದೆ. ಹಲವು ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು, ಸಂಚಾರ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸುವಂತೆ ರಸ್ತೆಯುದ್ದಕ್ಕೂ ಫಲಕಗಳನ್ನು ಅಳವಡಿಸಲಾಗಿದೆ. ಆದರೆ, ಬಹುತೇಕರು ನಿಯಮ ಪಾಲಿಸುತ್ತಿಲ್ಲ. ಇದುವೇ ಅಪಘಾತಕ್ಕೆ ಕಾರಣವಾಗುತ್ತಿದೆ’ ಎಂದೂ ಹೇಳಿದರು.

ಎರಡೇ ತಿಂಗಳಿನಲ್ಲಿ 91 ಅಪಘಾತ: 'ನಗರದಿಂದ ವಿಮಾನ ನಿಲ್ದಾಣವರೆಗಿನ ರಸ್ತೆಯಲ್ಲಿ ಪ್ರಸಕ್ತ ಜನವರಿಯಿಂದ ಫೆಬ್ರುವರಿಯವರೆಗೆ 91 ಅಪಘಾತಗಳು ಸಂಭವಿಸಿವೆ. ಅದರಲ್ಲಿ 21 ಮಂದಿ ಮೃತಪಟ್ಟಿದ್ದಾರೆ’ ಎಂದು ಪೊಲೀಸ್ ಅಧಿಕಾರಿ ತಿಳಿಸಿದರು.

‘ಪ್ರತಿ ಬಾರಿಯೂ ಅಪಘಾತವಾದ ಸ್ಥಳ ಪರಿಶೀಲನೆ ನಡೆಸಿ ವರದಿ ಸಿದ್ಧಪಡಿಸಲಾಗುತ್ತದೆ. ಚಾಲಕನ ನಿರ್ಲಕ್ಷ್ಯ ಹಾಗೂ ಅತೀ ವೇಗದ ಚಾಲನೆಯೇ ಅಪಘಾತಕ್ಕೆ ಕಾರಣವೆಂಬುದು ತಿಳಿಯುತ್ತದೆ. ಹೀಗಾಗಿ, ಈ ರಸ್ತೆಯಲ್ಲಿ ವಾಹನ ಗಳ ತಪಾಸಣೆ ಹೆಚ್ಚಿಸಲಾಗಿದೆ. ಅತೀ ವೇಗದಲ್ಲಿ ವಾಹನ ಚಲಾಯಿಸುವವರನ್ನು ಪತ್ತೆ ಮಾಡಿ ದಂಡ ವಿಧಿಸಲಾಗುತ್ತಿದೆ’ ಎಂದೂ ಹೇಳಿದರು.

‘ಹೆಬ್ಬಾಳ ಮೇಲ್ಸೇತುವೆಯಲ್ಲಿ ಸಂಚಾರ ದಟ್ಟಣೆ ಉಂಟಾಗಿ ವಾಹನಗಳು ಸಾಲುಗಟ್ಟಿ ನಿಂತಿರುತ್ತದೆ. ಇಲ್ಲಿಯೂ ಒಂದಕ್ಕೊಂದು ವಾಹನಗಳು ಡಿಕ್ಕಿ ಹೊಡೆದು ಸರಣಿ ಅಪಘಾತ ನಡೆದ ಪ್ರಕರಣಗಳಿಗೆ’ ಎಂದೂ ತಿಳಿಸಿದರು.

ಭಯದಲ್ಲೇ ಓಡಾಟ: ‘ವಿಮಾನ ನಿಲ್ದಾಣ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಕೆಲವರು, ‘ರೇಸ್‌’ ರೀತಿಯಲ್ಲಿ ವಾಹನಗಳನ್ನು ಚಲಾಯಿಸಿಕೊಂಡು ಹೋಗುತ್ತಿದ್ದಾರೆ’ ಎಂದು ಹೆಬ್ಬಾಳ ನಿವಾಸಿ ಚಂದ್ರಶೇಖರ್ ಹೇಳಿದರು.

‘ಗಾಂಧಿನಗರದ ಕಂಪನಿಯೊಂದರಲ್ಲಿ ಕೆಲಸ ಮಾಡುತ್ತಿದ್ದು, ನಿತ್ಯವೂ ಹೆಬ್ಬಾಳದಿಂದ ಬಸ್ಸಿನಲ್ಲಿ ಹೋಗಿ ಬರುತ್ತೇನೆ. ಹೆಬ್ಬಾಳ ಬಸ್‌ ನಿಲ್ದಾಣ ಬಳಿ ನನ್ನ ಕಣ್ಣೆದುರೇ ಅಪಘಾತಗಳು ನಡೆದಿವೆ. ಭಯದಲ್ಲೇ ಓಡಾಡುತ್ತಿದ್ದೇನೆ’ ಎಂದೂ ತಿಳಿಸಿದರು.

ಗಾರ್ಮೆಂಟ್ಸ್‌ ಕಾರ್ಖಾನೆ ಉದ್ಯೋಗಿಯೂ ಆದ ಯಲಹಂಕ ನಿವಾಸಿ ಪರಿಮಳಾ, ‘ವಿಮಾನ ನಿಲ್ದಾಣ ರಸ್ತೆ ಪಾದಚಾರಿಗಳಿಗೆ ಅಪಾಯಕಾರಿಯಾಗಿದೆ. ಇತ್ತೀಚೆಗೆ ರಸ್ತೆ ದಾಟುವ ವೇಳೆ ಸ್ನೇಹಿತೆಗೆ ಕಾರೊಂದು ಗುದ್ದಿತ್ತು. ಚಾಲಕ ಅತೀ ವೇಗದಿಂದ ಕಾರು ಚಲಾಯಿಸಿದ್ದನೆಂದು ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ’ ಎಂದರು.

ತಳ್ಳುಗಾಡಿ ವ್ಯಾಪಾರಿ ರಾಮಚಂದ್ರ, ‘ಯಲಹಂಕದ ರಸ್ತೆಬದಿ ನಾಲ್ಕು ವರ್ಷಗಳಿಂದ ತಿಂಡಿ ಮಾರಾಟ ಮಾಡುತ್ತಿದ್ದೇನೆ. ಮೇಲಿಂದ ಮೇಲೆ ಅಪಘಾತವಾಗುತ್ತಿರುವುದನ್ನು ಕಣ್ಣಾರೆ ಕಂಡಿದ್ದು, ಕೆಲ ಸಂದರ್ಭಗಳಲ್ಲಿ ನಾನೇ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದೇನೆ’ ಎಂದರು.

‘ಸಂಚಾರ ಪೊಲೀಸರು ಸೂಚನಾ ಫಲಕಗಳನ್ನು ಅಳವಡಿಸಿದ್ದಾರೆ. ಅದನ್ನು ಬಹುತೇಕರು ಪಾಲಿಸುತ್ತಿಲ್ಲ. ವಾಹನಗಳ ಅತೀ ವೇಗದ ಚಾಲನೆ ತಡೆಯಲು ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು’ ಎಂದೂ ಹೇಳಿದರು.

ಕೆಐಎ ರಸ್ತೆಯಲ್ಲಿ ಸಂಭವಿಸಿದ್ದ ಪ್ರಮುಖ ಅಪಘಾತಗಳು

l ಜನವರಿ 21: ಹೆಬ್ಬಾಳ ಮೇಲ್ಸೇತುವೆಯಲ್ಲಿ ಬೈಕ್‌ನಿಂದ ಆಯತಪ್ಪಿ ಬಿದ್ದಿದ್ದ ವಿದ್ಯಾರ್ಥಿನಿ ಮಹಶ್ರೀ ಮೇಲೆ ಹರಿದಿದ್ದ ಕ್ಯಾಂಟರ್ ವಾಹನ. ಸ್ಥಳದಲ್ಲೇ ಸಾವನ್ನಪ್ಪಿದ್ದ ಮಹಶ್ರೀ.

l ಫೆಬ್ರುವರಿ 26: ಬ್ಯಾಟರಾಯನಪುರ ಜಂಕ್ಷನ್‌ನಲ್ಲಿ ಕಾರು ಹಾಗೂ ಬೈಕ್ ನಡುವೆ ಅಪಘಾತ. ಎಂಜಿನಿಯರಿಂಗ್ ಪದವೀಧರರಾದ ಯತೀಶ್ (22) ಹಾಗೂ ಕಿರಣ್ (22) ಸಾವು.

l ಮಾರ್ಚ್ 21: ಹೆಬ್ಬಾಳ ಬಸ್ ನಿಲ್ದಾಣ ಎದುರಿನ ಮುಖ್ಯರಸ್ತೆಯಲ್ಲಿ ಬಿಬಿಎಂಪಿ ಕಸ ಸಾಗಣೆ ಲಾರಿ (ಕಾಂಪ್ಯಾಕ್ಟರ್‌) ಡಿಕ್ಕಿ ಹೊಡೆದು 9ನೇ ತರಗತಿ ವಿದ್ಯಾರ್ಥಿನಿ ಅಕ್ಷಯಾ (14) ಮೃತಪಟ್ಟಿದ್ದಳು. ಅಪಘಾತದಲ್ಲಿ ಸೌಮ್ಯಾ, ಸಂಧ್ಯಾ ಹಾಗೂ ವಿಕಾಸ್ ಎಂಬುವರು ಗಾಯಗೊಂಡಿದ್ದರು.

l ಮಾರ್ಚ್ 30: ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯ ಕೇಂದ್ರೀಯ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌) ಕ್ಯಾಂಪಸ್‌ ಎದುರು ಅಪಘಾತ. ಸಿಆರ್‌ಪಿಎಫ್‌ ಸಬ್‌ ಇನ್‌ಸ್ಪೆಕ್ಟರ್‌ ಸ್ವಾಮಿಗೌಡ (54) ಹಾಗೂ ಎಂಜಿನಿಯರಿಂಗ್ ವಿದ್ಯಾರ್ಥಿ ಅಮ್ಮರ್ ಸುಲೆಹಾ (22) ಸಾವು.

‘ಅವಸರವೇ ಅಪಘಾತಕ್ಕೆ ಕಾರಣ’

‘ವಿಮಾನ ನಿಲ್ದಾಣ ರಸ್ತೆಯಲ್ಲಿ ಅಪಘಾತ ಸಂಭವಿಸುವ ಸ್ಥಳಗಳನ್ನು ಗುರುತಿಸಿ, ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗುತ್ತಿದೆ. ಅವಸರದ ಪ್ರಯಾಣದಿಂದ ಹೆಚ್ಚು ಅಪಘಾತಗಳು ನಡೆಯುತ್ತಿದೆ’ ಎಂದು ಉತ್ತರ ವಿಭಾಗದ (ಸಂಚಾರ) ಡಿಸಿಪಿ ಎಸ್‌. ಸವಿತಾ ಹೇಳಿದರು.

‘ವಿಮಾನ ತಪ್ಪುವ ಹೆದರಿಕೆಯಲ್ಲಿ ಕೆಲವರು ಅತೀ ವೇಗದಲ್ಲಿ ವಾಹನ ಚಲಾಯಿಸಿಕೊಂಡು ಹೋಗುತ್ತಾರೆ. ಇದು ಅಪಘಾತಕ್ಕೆ ಕಾರಣವಾಗುತ್ತಿದೆ’ ಎಂದರು.

‘ಪ್ರತಿಬಾರಿ ಅಪಘಾತದ ಸ್ಥಳ ಪರಿಶೀಲನೆ ನಡೆಸುತ್ತೇವೆ. ಘಟನಾ ಸ್ಥಳದಲ್ಲಿ ಏನಾದರೂ ನ್ಯೂನತೆಗಳು ಇದ್ದರೆ, ಅದನ್ನು ಸರಿಪಡಿಸುವಂತೆ ಕೋರಿ ಸಂಬಂಧಪಟ್ಟ ಇಲಾಖೆಯವರಿಗೆ ಪತ್ರ ಬರೆಯುತ್ತೇವೆ’ ಎಂದೂ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT