ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಬಂದ್‌ ವೇಳೆ ಪೊಲೀಸರಿಗೆ ಇಲಿ ಬಿದ್ದಿದ್ದ ಆಹಾರ ಪೂರೈಕೆ: ಹೋಟೆಲ್‌ಗೆ ಬೀಗ

Published 26 ಸೆಪ್ಟೆಂಬರ್ 2023, 16:09 IST
Last Updated 26 ಸೆಪ್ಟೆಂಬರ್ 2023, 16:09 IST
ಅಕ್ಷರ ಗಾತ್ರ

ಬೆಂಗಳೂರು: ‘ಬೆಂಗಳೂರು ಬಂದ್’ ಕರ್ತವ್ಯದಲ್ಲಿದ್ದ ಸಂಚಾರ ಪೊಲೀಸರಿಗೆ ಸತ್ತ ಇಲಿ ಬಿದ್ದಿದ್ದ ಆಹಾರ ಪೂರೈಕೆ ಮಾಡಿದ್ದ ಆರೋಪದಡಿ ‘ಅಶೋಕ ಟಿಫಿನ್ ರೂಮ್’ ಹೋಟೆಲ್ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಪರಿಶೀಲನೆ ನಡೆಸಿದ್ದ ಬಿಬಿಎಂಪಿ ಅಧಿಕಾರಿಗಳು, ಹೋಟೆಲ್‌ಗೆ ಬೀಗ ಹಾಕಿದ್ದಾರೆ.

ಆರ್‌ಎಂಸಿ ಯಾರ್ಡ್ ಠಾಣೆ ವ್ಯಾಪ್ತಿಯಲ್ಲಿ ಕರ್ತವ್ಯದಲ್ಲಿದ್ದ ಸಿಬ್ಬಂದಿಗೆ ಪೂರೈಸಲಾದ ರೈಸ್ ಬಾತ್‌ ಪೊಟ್ಟಣವೊಂದರಲ್ಲಿ ಸತ್ತ ಇಲಿ ಪತ್ತೆಯಾಗಿತ್ತು. ಇದನ್ನು ನೋಡಿ ಸಿಬ್ಬಂದಿ ಆತಂಕಕ್ಕೆ ಒಳಗಾಗಿದ್ದರು. ಆಹಾರ ಪೊಟ್ಟಣದ ಫೋಟೊ ತೆಗೆದು ವಾಟ್ಸ್‌ಆ್ಯಪ್ ಗ್ರೂಪ್‌ಗಳಲ್ಲಿ ಹಂಚಿಕೊಂಡಿದ್ದರು. ಇದೇ ಫೋಟೊ, ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡಿತ್ತು.

ಆಹಾರ ವಿಚಾರವನ್ನು ಗಂಭೀರವಾಗಿ ಪರಿಗಣಿಸಿದ್ದ ಸಂಚಾರ ವಿಭಾಗದ ಜಂಟಿ ಕಮಿಷನರ್, ಆಹಾರ ಸಿದ್ಧಪಡಿಸಿ ವಿತರಿಸಿದ್ದ ಅಶೋಕ ಟಿಫಿನ್ ರೂಮ್ ಹೋಟೆಲ್ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸುವಂತೆ ಸೂಚಿಸಿದ್ದರು. ಅದರಂತೆ, ಹೋಟೆಲ್ ಮಾಲೀಕರು ಹಾಗೂ ಇತರರ ವಿರುದ್ಧ ಆರ್‌ಎಂಸಿ ಯಾರ್ಡ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದೆ.

ಆಹಾರ ಸುರಕ್ಷತಾ ಅಧಿಕಾರಿಗಳು ಹಾಗೂ ಬಿಬಿಎಂಪಿ ಆರೋಗ್ಯ ವಿಭಾಗದ ಅಧಿಕಾರಿಗಳು ಹೋಟೆಲ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆದರೆ, ಹೋಟೆಲ್‌ ಅಡುಗೆ ತಯಾರಿ ಸ್ಥಳದಲ್ಲಿ ಸ್ವಚ್ಛತೆ ಇರಲಿಲ್ಲ. ಮಾಲೀಕರನ್ನು ತರಾಟೆಗೆ ತೆಗೆದುಕೊಂಡ ಅಧಿಕಾರಿಗಳು, ಹೋಟೆಲ್‌ಗೆ ತಾತ್ಕಾಲಿಕವಾಗಿ ಬೀಗ ಹಾಕಿದ್ದಾರೆ. ಮಾಲೀಕರಿಗೆ ನೋಟಿಸ್ ನೀಡಿದ್ದಾರೆ.

ಇನ್‌ಸ್ಪೆಕ್ಟರ್ ವಿರುದ್ಧ ಶಿಸ್ತುಕ್ರಮ: ‘ಬಂದ್ ಕರ್ತವ್ಯದಲ್ಲಿರುವ ಪೊಲೀಸರಿಗೆ ಊಟ ಹಾಗೂ ಅಗತ್ಯ ವಸ್ತುಗಳನ್ನು ಪೂರೈಸುವ ಜವಾಬ್ದಾರಿಯನ್ನು ಆಯಾ ಠಾಣೆ ಇನ್‌ಸ್ಪೆಕ್ಟರ್‌ಗಳಿಗೆ ವಹಿಸಲಾಗಿದೆ. ಒಬ್ಬರಿಗೆ ಒಂದು ದಿನಕ್ಕೆ ತಲಾ ₹ 200 ಖರ್ಚು ಮಾಡಲು ಇಲಾಖೆಯಿಂದ ಹಣ ನೀಡಲಾಗುತ್ತದೆ. ಊಟದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸಿದ್ದ ಇನ್‌ಸ್ಪೆಕ್ಟರ್ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ’ ಎಂದು ಜಂಟಿ ಕಮಿಷನರ್ ಎಂ.ಎನ್. ಅನುಚೇತ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ವಿಷಯದಲ್ಲಿ ಇನ್‌ಸ್ಪೆಕ್ಟರ್ ಅವರಿಂದ ಲೋಪವಾಗಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಹೋಟೆಲ್ ಆಯ್ಕೆ ಹಾಗೂ ಆಹಾರ ಪೂರೈಕೆ ವಿಚಾರದಲ್ಲಿ ನಡೆದಿರುವ ಲೋಪದ ಬಗ್ಗೆಯೂ ತನಿಖೆ ನಡೆಸಿ, ತಪ್ಪಿತಸ್ಥರ ವಿರುದ್ಧ ಕ್ರಮ ಜರುಗಿಸಲಾಗುವುದು’ ಎಂದು ಹೇಳಿದರು.

180 ಪೊಟ್ಟಣ ಸಿದ್ಧಪಡಿಸಿದ್ದ ಹೋಟೆಲ್: ‘ಪೊಲೀಸರಿಗೆ 180 ಆಹಾರ ಪೊಟ್ಟಣ ಪೂರೈಕೆ ಮಾಡಲಾಗಿತ್ತು. ಈ ಪೈಕಿ ಒಂದು ಪೊಟ್ಟಣದಲ್ಲಿ ಇಲಿ ಪತ್ತೆಯಾಗಿದೆ. ಉಳಿದ ಆಹಾರದಲ್ಲೂ ಸತ್ತ ಇಲಿಯ ಅಂಶ ಇರುವ ಅನುಮಾನವಿತ್ತು. ಹೀಗಾಗಿ, ಎಲ್ಲ ಪೊಟ್ಟಣಗಳನ್ನು ವಾಪಸು ಕಳುಹಿಸಲಾಯಿತು’ ಎಂದು ಪೊಲೀಸ್ ಕಾನ್‌ಸ್ಟೆಬಲ್‌ವೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT