ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ವಾಹನ ನಿಲುಗಡೆ ಪ್ರದೇಶಕ್ಕೆ ಶುಲ್ಕ

ಬಿಬಿಎಂಪಿ: ಕ್ಲಬ್‌ಹೌಸ್‌, ಈಜುಕೊಳ, ಆರೋಗ್ಯ ಕ್ಲಬ್‌, ಕ್ಯಾಂಟೀನ್‌ಗೆ ಶೇ 50ರಷ್ಟು ತೆರಿಗೆ
Published 22 ಫೆಬ್ರುವರಿ 2024, 0:30 IST
Last Updated 22 ಫೆಬ್ರುವರಿ 2024, 0:30 IST
ಅಕ್ಷರ ಗಾತ್ರ

ಬೆಂಗಳೂರು: ಮನೆ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿರುವ ವಾಹನ ನಿಲುಗಡೆ ಪ್ರದೇಶ, ಅಪಾರ್ಟ್‌ಮೆಂಟ್‌ಗಳಲ್ಲಿರುವ ಕ್ಲಬ್‌ಹೌಸ್‌, ಈಜುಕೊಳ, ಆರೋಗ್ಯ ಕ್ಲಬ್‌, ಕ್ಯಾಂಟೀನ್‌ಗಳಿಗೆ ಶುಲ್ಕ ವಿಧಿಸಲು ಬಿಬಿಎಂಪಿ ನಿರ್ಧರಿಸಿದೆ.

ವಸತಿ ಕಟ್ಟಡದಲ್ಲಿ ವಾಹನ ನಿಲುಗಡೆ ಪ್ರದೇಶವನ್ನು ಸ್ವಂತಕ್ಕೆ ಬಳಸಿಕೊಂಡರೆ, ಅದಕ್ಕೆ ವಸತಿ ಪ್ರದೇಶ ವರ್ಗದಲ್ಲಿ ಪ್ರತಿ ಚದರ ಅಡಿಗೆ ಮಾರ್ಗಸೂಚಿ ದರದಲ್ಲಿ ಶೇ 20ರಷ್ಟನ್ನು ಶುಲ್ಕವಾಗಿ ಪಾವತಿಸಬೇಕು. ಇತರರು ವಾಹನ ನಿಲುಗಡೆ ಪ್ರದೇಶ ಬಳಸಿಕೊಳ್ಳುತ್ತಿದ್ದರೆ, ವಾಣಿಜ್ಯ ಪ್ರದೇಶ ವರ್ಗದ ದರದಲ್ಲಿ ಶೇ 20ರಷ್ಟು ಶುಲ್ಕವಾಗಿ ನೀಡಬೇಕಾಗುತ್ತದೆ.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಎಲ್ಲ ಆಸ್ತಿಗಳಿಗೆ ಮಾರ್ಗಸೂಚಿ ದರ ಹಾಗೂ ಕಟ್ಟಡ ವೆಚ್ಚದ ಆಧಾರದಲ್ಲಿ ಆಸ್ತಿ ತೆರಿಗೆಯನ್ನು 2024–25ನೇ ಆರ್ಥಿಕ ವರ್ಷದಿಂದಲೇ ಜಾರಿಗೆ ತರಲು ಕರಡು ಅಧಿಸೂಚನೆ ಹೊರಡಿಸಲಾಗಿದೆ. ಇದರಲ್ಲಿ, ಕಟ್ಟಡ ಹಾಗೂ ಅಪಾರ್ಟ್‌ಮೆಂಟ್‌ಗಳಲ್ಲಿ ‘ಕಾಮನ್‌ ಏರಿಯಾ’ಗಳಾದ ವ್ಯವಸ್ಥಾಪಕರ ಕಚೇರಿ, ಕ್ಲಬ್‌ಹೌಸ್‌, ಈಜುಕೊಳ, ಆರೋಗ್ಯ ಕ್ಲಬ್‌, ಕ್ಯಾಂಟೀನ್‌ಗಳಿಗೆ ಮಾರ್ಗಸೂಚಿ ದರದಲ್ಲಿ ಪ್ರತಿ ಚದರ ಅಡಿಗೆ ಶೇ 50ರಷ್ಟು ತೆರಿಗೆ ವಿಧಿಸಲಾಗುತ್ತದೆ. ಉದ್ಯಾನ ಹಾಗೂ ಇತರೆ ತೆರೆದ ಪ್ರದೇಶಗಳಿಗೆ ಖಾಲಿ ಇರುವ ಪ್ರದೇಶಕ್ಕೆ ನಿಗದಿಪಡಿಸಿರುವ ಶುಲ್ಕ ಪಾವತಿಸಬೇಕಾಗುತ್ತದೆ.

ಹೊರಾಂಗಣ ಕ್ರೀಡಾಂಗಣಗಳಿಗೆ ವಸತಿಯೇತರ ವರ್ಗದಲ್ಲಿ ಆಸ್ತಿ ದರದ ಶೇ 20ರಷ್ಟು ತೆರಿಗೆ ನಿಗದಿಪಡಿಸಲಾಗುತ್ತದೆ. ಬಹು ಅಂತಸ್ತಿನ ವಾಹನ ನಿಲುಗಡೆ ಕಟ್ಟಡಗಳಿಗೆ ಶೇ 50,ಗ್ರಾನೈಟ್‌, ಟಿಂಬರ್‌, ಇಟ್ಟಿಗೆ, ಟೈಲ್ಸ್‌ನಂತಹ ಸಾಮಗ್ರಿ ದಾಸ್ತಾನಿನ ಪ್ರದೇಶಗಳಿಗೆ ವಸತಿಯೇತರ ವರ್ಗದಲ್ಲಿ ಶೇ 50ರಷ್ಟು ವಿಧಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ವಿವರಿಸಲಾಗಿದೆ.

ರೇಸ್‌ ಕೋರ್ಸ್‌, ಗಾಲ್ಫ್‌ ಕೋರ್ಸ್‌, ಬಸ್‌ ನಿಲ್ದಾಣಗಳಲ್ಲಿ ತೆರೆದ ಪ್ರದೇಶಗಳ ಹಾಗೂ ಇತರೆ ತೆರೆದ ವಾಣಿಜ್ಯ ಪ್ರದೇಶಗಳಿಗೆ ಖಾಲಿಯಿರುವ ವಾಣಿಜ್ಯ ಪ್ರದೇಶಗಳಿಗೆ ಅನ್ವಯವಾಗುವ ತೆರಿಗೆ ನಿಗದಿಪಡಿಸಲಾಗುತ್ತದೆ.

ಪರಿಷ್ಕರಣೆ: ನೋಂದಣಿ ಮತ್ತು ಮುದ್ರಾಂಕ ಇಲಾಖೆ ಆಗಾಗ್ಗೆ ನಿಗದಿಪಡಿಸುವ ಮಾರ್ಗಸೂಚಿ ದರದಂತೆ ಆಸ್ತಿ ತೆರಿಗೆ ಪರಿಷ್ಕರಣೆಯಾಗುತ್ತದೆ. ಇದನ್ನು ಸಾಫ್ಟ್‌ವೇರ್‌ನಲ್ಲಿ ಅಳವಡಿಸಲಾಗುತ್ತದೆ. ಮಾರ್ಗಸೂಚಿದ ದರ ಹೆಚ್ಚಳವಾಗದ ವರ್ಷದಲ್ಲಿ, ಆಸ್ತಿ ತೆರಿಗೆಯನ್ನು ಬಿಬಿಎಂಪಿ ಶೇ 5ರಷ್ಟು ಹೆಚ್ಚಿಸುತ್ತದೆ. ಪ್ರತಿ ವರ್ಷ ಏಪ್ರಿಲ್‌ನಿಂದ ಶೇ 5ರಷ್ಟು ಆಸ್ತಿ ತೆರಿಗೆಯನ್ನು ಹೆಚ್ಚಿಸಲಾಗುತ್ತದೆ. ಇದು 2025ರ ಏ‍ಪ್ರಿಲ್‌ನಿಂದಲೇ ಜಾರಿಯಾಗಲಿದೆ.

ಕಟ್ಟಡ ನಿರ್ಮಾಣ ವೆಚ್ಚವನ್ನೂ 2025–26ರಿಂದ ಪ್ರತಿ ವರ್ಷ ಶೇ 5ರಷ್ಟು ಹೆಚ್ಚಿಸಲಾಗುತ್ತದೆ. ಎ ಖಾತಾ ಅಥವಾ ಬಿ– ಖಾತಾ ಎಂಬ ಭೇದವಿಲ್ಲದೆ, ಎಲ್ಲ ಆಸ್ತಿಗಳಿಗೂ ಏಕರೂಪದ ತೆರಿಗೆ ವಿಧಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT