ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನೈಸರ್ಗಿಕ ಅನಿಲ ಉತ್ಪಾದನೆಗೆ ಹೆಜ್ಜೆ

ಬಿಬಿಎಂಪಿ: 7 ತ್ಯಾಜ್ಯ ಸಂಸ್ಕರಣೆ ಘಟಕ ಕಾರ್ಯಾರಂಭ; ವಾಸನೆ ನಿವಾರಣೆಗೆ ಹೊಸ ಯತ್ನ 
Published 3 ಜುಲೈ 2023, 0:30 IST
Last Updated 3 ಜುಲೈ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ತ್ಯಾಜ್ಯ ಸಂಸ್ಕರಣೆ ಘಟಕಗಳನ್ನು ಸಂಪೂರ್ಣ ಸಾಮರ್ಥ್ಯದಲ್ಲಿ ಕಾರ್ಯಾಚರಣೆ ಆರಂಭಿಸಲು ಬಿಬಿಎಂಪಿ ಮುಂದಾಗಿದೆ. ಇದರೊಂದಿಗೆ, ವಾಸನೆ ಸಮಸ್ಯೆ ನಿವಾರಿಸಲು ನೈಸರ್ಗಿಕ ಅನಿಲ (ಸಿಎನ್‌ಜಿ) ಉತ್ಪಾದಿಸಲೂ ಚಿಂತನೆ ನಡೆಸಿದೆ.

ನಗರದಲ್ಲಿ ತ್ಯಾಜ್ಯ ಸಂಸ್ಕರಣೆ ಅತ್ಯಂತ ಸಮಸ್ಯೆಯನ್ನು ಉಂಟು ಮಾಡಿದ್ದು, ಹೈಕೋರ್ಟ್‌ ನಿರ್ದೇಶನದಂತೆ ಏಳು ಘಟಕಗಳಲ್ಲೂ ಹಸಿ ತ್ಯಾಜ್ಯ ಸಂಸ್ಕರಣೆಯನ್ನು ಬಿಬಿಎಂಪಿ ಮುಂದಿನ ವಾರದಿಂದ ಪೂರ್ಣ ಸಾಮರ್ಥ್ಯದಲ್ಲಿ ಕೈಗೊಳ್ಳಲಿದೆ.

ಪ್ರತಿನಿತ್ಯ ಸುಮಾರು 2700 ಮೆಟ್ರಿಕ್‌ ಟನ್‌ ಹಸಿ ತ್ಯಾಜ್ಯ ಉತ್ಪಾದನೆಯಾಗುತ್ತಿದೆ. ಸ್ಥಳೀಯರ ವಿರೋಧ, ಜನಪ್ರತಿನಿಧಿಗಳು ತಮ್ಮ ಕ್ಷೇತ್ರದಲ್ಲಿ ಬೇರೆಯವರ ಕಸ ತರಬೇಡಿ ಎಂದು ಒತ್ತಾಯಿಸುತ್ತಿದ್ದಾರೆ. ಚುನಾವಣೆ ಸಂದರ್ಭದಲ್ಲಿ 8 ಘಟಕಗಳಲ್ಲಿ ಮೂರು ಘಟಕಗಳು ಮುಚ್ಚಿದ್ದವು. ಮುಂದಿನ ಎರಡು ವಾರದಲ್ಲಿ ಎಲ್ಲ ಘಟಕಗಳೂ ಕಾರ್ಯಾರಂಭಿಸಬೇಕು ಎಂದು ಸಂಬಂಧಿಸಿದ ಜಂಟಿ ಆಯುಕ್ತರಿಗೆ ಘನತ್ಯಾಜ್ಯ ವಿಭಾಗದ ವಿಶೇಷ ಆಯುಕ್ತರು ಸೂಚನೆ ನೀಡಿದ್ದಾರೆ.

ಸಂಸ್ಕರಣೆ ಘಟಕಗಳಲ್ಲಿ ಇದೀಗ ಸುಮಾರು 1000 ಮೆಟ್ರಿಕ್‌ ಟನ್‌ನಷ್ಟು ಹಸಿ ಕಸ ಮಾತ್ರ ಸಂಸ್ಕರಿಸಲಾಗುತ್ತಿದೆ. ಉಳಿದದ್ದು ಮಿಶ್ರ ಕಸವಾಗಿ ಭೂಭರ್ತಿಯಾಗುತ್ತಿದೆ. ಇದನ್ನು ಬಹುತೇಕ ನಿಲ್ಲಿಸಬೇಕೆಂಬ ಉದ್ದೇಶದಿಂದ ಸಂಸ್ಕರಣೆ ಘಟಕಗಳನ್ನು ಆರಂಭಿಸಲಾಗುತ್ತಿದೆ. ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭವಾದರೆ ಇದರಿಂದ ಸುಮಾರು 2200 ಮೆಟ್ರಿಕ್ ಟನ್‌ಗೂ ಹೆಚ್ಚಿನ ಹಸಿ ಕಸವನ್ನು ಸಂಸ್ಕರಿಸಬಹುದಾಗಿದೆ.

ಸಿಎನ್‌ಜಿ ಉತ್ಪಾದನೆ: ಏಳೂ ಸಂಸ್ಕರಣೆ ಘಟಕಗಳು ಪ್ರಾರಂಭವಾದರೆ, ವಾಸನೆ ಖಚಿತ. ಹಸಿ ಕಸ ಗೊಬ್ಬರವಾಗಲು 40 ದಿನ ಬೇಕಾಗುತ್ತದೆ. ಇದರಿಂದ ಕೆಲವು ಸಮಸ್ಯೆಗಳು ಸೃಷ್ಟಿಯಾಗುತ್ತವೆ. ಆದ್ದರಿಂದ ಈ ಘಟಕಗಳನ್ನೇ ನೈಸರ್ಗಿಕ ಅನಿಲ (ಸಿಎನ್‌ಜಿ) ಉತ್ಪಾದನೆ ಘಟಕಗಳನ್ನಾಗಿ ಪರಿವರ್ತಿಸಲು ಬಿಬಿಎಂಪಿ ಯೋಜಿಸಿದೆ.

ಸಂಸ್ಕರಣೆ ಘಟಕಗಳು ಈಗಿನ ಪರಿಸ್ಥಿತಿಯಲ್ಲಿ ಅವುಗಳಿಗೆ ನಿಗದಿಪಡಿಸಿರುವ ಸಂಪೂರ್ಣ ಸಾಮರ್ಥ್ಯದಲ್ಲಿ ಸಂಸ್ಕರಣೆ ಮಾಡಲು ಸಾಧ್ಯವಿಲ್ಲ. ಯಂತ್ರಗಳು ತಮ್ಮ ಸಾಮರ್ಥ್ಯಗಳನ್ನು ಕಳೆದುಕೊಳ್ಳುತ್ತಿವೆ. ಶೇ 70ರಷ್ಟು ಸಂಸ್ಕರಣೆ ಮಾತ್ರ ಸಾಧ್ಯವಾಗುತ್ತಿದೆ. ಹೀಗಾಗಿ, ಈ ಘಟಕಗಳಲ್ಲಿ ಸಿಎನ್‌ಜಿ ಉತ್ಪಾದನೆ ಮಾಡಲು ಯೋಜನೆ ರೂಪಿಸಲಾಗಿದೆ. ಇದರಿಂದ ವಾಸನೆ ಸೇರಿದಂತೆ ಈಗ ಅನುಭವಿಸುತ್ತಿರುವ ಎಲ್ಲ ಸಮಸ್ಯೆಗಳೂ ನಿವಾರಣೆಯಾಗುತ್ತವೆ. ಅಲ್ಲದೆ, ಸಿಎನ್‌ಜಿಗೆ ಹೆಚ್ಚಿನ ಮೌಲ್ಯ ಇರುವುದರಿಂದ ಪಾಲಿಕೆಗೆ ಆರ್ಥಿಕವಾಗಿ ಲಾಭವೂ ಆಗಲಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ಮಂಡೂರಿನಲ್ಲಿ ‘ಗೇಲ್‌ ಇಂಡಿಯಾ’ ಸಂಸ್ಥೆ 300 ಮೆಟ್ರಿಕ್‌ ಟನ್‌ ಸಾಮರ್ಥ್ಯ ಹಸಿ ತ್ಯಾಜ್ಯದಿಂದ ಸಿಎನ್‌ಜಿ ಉತ್ಪಾದಿಸುವ ಘಟಕವನ್ನು ನಿರ್ಮಿಸಿದೆ. ಮುಂದಿನ ಕೆಲವು ವಾರಗಳಲ್ಲಿ ಇದು ಕಾರ್ಯಾರಂಭಿಸಲಿದೆ ಎಂದು ಹೇಳಿದರು.

ಕಸ ಇಲ್ಲಿಗೆ ತರಬೇಡಿ: ಶಾಸಕ ಸೋಮಶೇಖರ್‌

‘ಯಶವಂತಪುರ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಯಲ್ಲಿರುವ ದೊಡ್ಡಬಿದರಕಲ್ಲು ಕನ್ನಳ್ಳಿ ಸೀಗೇಹಳ್ಳಿ ಸಂಸ್ಕರಣೆ ಘಟಕಗಳು ಸೇರಿದಂತೆ ಕುಂಬಳಗೋಡು ಬನಶಂಕರಿ 6ನೇ ಹಂತದಲ್ಲಿ ನಗರದ ಇತರೆ ಪ್ರದೇಶದ ತ್ಯಾಜ್ಯ ವಿಲೇವಾರಿ ಮಾಡಬಾರದು. ಇವುಗಳನ್ನು ಸಂಪೂರ್ಣವಾಗಿ ಮುಚ್ಚಬೇಕು. ವಾರ್ಡ್‌ವಾರು ಹಾಗೂ ವಿಧಾನಸಭೆ ಕ್ಷೇತ್ರವಾರು ಸಂಸ್ಕರಣ ಘಕಟಗಳನ್ನು ಸ್ಥಾಪಿಸಬೇಕು’ ಎಂದು ಶಾಸಕ ಎಸ್.ಟಿ. ಸೋಮಶೇಖರ್‌ ಬಿಬಿಎಂಪಿ ಮುಖ್ಯ ಆಯುಕ್ತರಿಗೆ ಪತ್ರ ಬರೆದಿದ್ದಾರೆ.

‘ನಗರದ ಶಾಸಕರು ತಮ್ಮ ಕ್ಷೇತ್ರದ ಘಟಕಗಳಿಗೆ ಇತರೆ ಕಸ ಬರಬಾರದು ಎಂದು ಹೇಳಿದರೆ ಸಂಸ್ಕರಣೆ ಸಾಧ್ಯವಾಗುವುದಿಲ್ಲ. ಹೈಕೋರ್ಟ್‌ ಇದನ್ನು ಒಪ್ಪುವುದಿಲ್ಲ. ಹೀಗಾಗಿ ಎಲ್ಲ ತ್ಯಾಜ್ಯ ಸಂಸ್ಕರಣೆ ಘಟಕಗಳನ್ನೂ ಆರಂಭಿಸಲಾಗುವುದು’ ಎಂದು ಹರೀಶ್‌ ತಿಳಿಸಿದರು. ಜಂಟಿ ಆಯುಕ್ತರಿಗೆ ಜವಾಬ್ದಾರಿ! ‘ಸೀಗೆಹಳ್ಳಿ ಹಾಗೂ ಸುಬ್ರಾಯಪಾಳ್ಯ ಸಂಸ್ಕರಣೆ ಘಟಕಗಳು ಕೆಲವು ವರ್ಷದಿಂದ ಕಾರ್ಯನಿರ್ವಹಿಸದೆ ಯಂತ್ರಗಳು ಹಾಳಾಗಿವೆ. ಅವುಗಳನ್ನು ದುರಸ್ತಿಪಡಿಸಿ ಮುಂದಿನ ಎರಡು ವಾರಗಳಲ್ಲಿ ಸಂಪೂರ್ಣವಾಗಿ ಕಾರ್ಯಾರಂಭಿಸಲು ಸೂಚಿಸಲಾಗಿದೆ. ಹೈಕೋರ್ಟ್‌ ಆದೇಶವಿರುವುದರಿಂದ ನಾವು ಹಸಿ ಕಸವನ್ನು ಸಂಸ್ಕರಿಸಲೇಬೇಕಿದೆ. ಜಂಟಿ ಆಯುಕ್ತರಿಗೆ ಎಲ್ಲ ಅಧಿಕಾರ ನೀಡಿದ್ದು ಅವರೇ ಹೈಕೋರ್ಟ್‌ ಮಾಹಿತಿಯನ್ನೂ ನೀಡಬೇಕಾಗಿರುತ್ತದೆ. ಹೀಗಾಗಿ ಕೂಡಲೇ ಎಲ್ಲ ಸಂಸ್ಕರಣೆ ಘಟಕಗಳು ಕಾರ್ಯಾರಂಭ ಮಾಡುತ್ತವೆ. ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರೂ ಎಲ್ಲ ಘಟಕ ಆರಂಭಿಸಲು ಸೂಚಿಸಿದ್ದಾರೆ’ ಎಂದು ಬಿಬಿಎಂಪಿ ಘನತ್ಯಾಜ್ಯ ನಿರ್ವಹಣೆ ವಿಭಾಗದ ವಿಶೇಷ ಆಯುಕ್ತ ಡಾ. ಹರೀಶ್‌ಕುಮಾರ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT