ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ಹೊಸೂರು ರಸ್ತೆಯಿಂದ ಮೈಸೂರು ರಸ್ತೆವರೆಗೆ ‘ಬ್ಯುಸಿನೆಸ್‌ ಕಾರಿಡಾರ್‌’

ಪಿಆರ್‌ಆರ್–2ಗೆ ಡಿಪಿಆರ್
Published 5 ಮಾರ್ಚ್ 2024, 5:15 IST
Last Updated 5 ಮಾರ್ಚ್ 2024, 5:15 IST
ಅಕ್ಷರ ಗಾತ್ರ

ಬೆಂಗಳೂರು: ಹೊಸೂರು ರಸ್ತೆಯಿಂದ ಬನ್ನೇರುಘಟ್ಟ ರಸ್ತೆ, ಕನಕಪುರ ರಸ್ತೆ ಮೂಲಕ ಮೈಸೂರು ರಸ್ತೆವರೆಗೆ ‘ಪೆರಿಫೆರಲ್‌ ವರ್ತುಲ ರಸ್ತೆ–2’ (ಬೆಂಗಳೂರು ಬ್ಯುಸಿನೆಸ್ ಕಾರಿಡಾರ್) ನಿರ್ಮಿಸಲು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಸಜ್ಜಾಗಿದೆ.

100 ಮೀಟರ್‌ ಅಗಲದಲ್ಲಿ 30 ಕಿ.ಮೀ ಉದ್ದ ನಿರ್ಮಾಣವಾಗುವ ಈ ಕಾರಿಡಾರ್‌ನ ಎರಡೂ ಬದಿಯಲ್ಲಿ ತಲಾ 24 ಮೀಟರ್‌ ವಾಣಿಜ್ಯ ನಿವೇಶನಗಳನ್ನು ರಚಿಸಲಾಗುತ್ತದೆ. ಈ ವಾಣಿಜ್ಯ ಪ್ರದೇಶವನ್ನು ಮಾರಾಟ ಮಾಡಿ ವ್ಯವಹಾರಕ್ಕೆ ಉತ್ತೇಜನ ನೀಡಲಾಗುತ್ತದೆ. ಹೀಗಾಗಿಯೇ ಇದನ್ನು ‘ಬೆಂಗಳೂರು ಬ್ಯುಸಿನೆಸ್ ಕಾರಿಡಾರ್‌’ ಎಂದು ಕರೆಯಲಾಗುತ್ತದೆ. ರಾಜ್ಯದಲ್ಲಿ ಇದೇ ಮೊದಲ ಬಾರಿಗೆ ಈ ರೀತಿಯ ಕಾರಿಡಾರ್‌ ನಿರ್ಮಾಣಗೊಳ್ಳಲಿದೆ.

43 ಅಂಡರ್‌ ಪಾಸ್‌, ಮೇಲ್ಸೇತುವೆ ಹಾಗ್ರೂ ಗ್ರೇಡ್‌ ಸೆಪರೇಟರ್‌ಗಳು ಈ ಕಾರಿಡಾರ್‌ನಲ್ಲಿ ನಿರ್ಮಾಣವಾಗಲಿವೆ. ಇವುಗಳನ್ನು ಬಿಡಿಎ ವತಿಯಿಂದ ನಿರ್ವಹಣೆ ಮಾಡಲಾಗುತ್ತದೆ. ₹ 1,569 ಕೋಟಿ ಅಂದಾಜು ವೆಚ್ಚದ ಈ ಕಾರಿಡಾರ್‌ ಅನ್ನು 30 ತಿಂಗಳಲ್ಲಿ ನಿರ್ಮಿಸಲು ಯೋಜಿಸಲಾಗಿದೆ. ವಿಸ್ತೃತ ಯೋಜನಾ ವರದಿ (ಡಿಪಿಆರ್) ಸೇರಿದಂತೆ ಟೆಂಡರ್‌ ಆಹ್ವಾನ, ಕಾರ್ಯಾದೇಶ, ಕಾಮಗಾರಿಯನ್ನು ಈ ಅವಧಿಯಲ್ಲಿ ಮುಗಿಸಲು ಬಿಡಿಎ ಯೋಜನೆ ರೂಪಿಸಿ, ಯೋಜನಾ ನಿರ್ವಹಣೆ ಸಲಹಾ (ಪಿಎಂಸಿ) ಸೇವೆಗೆ ಟೆಂಡರ್‌ ಆಹ್ವಾನಿಸಿದೆ.

‘ಹೊಸೂರು ರಸ್ತೆಯಲ್ಲಿರುವ ಎಲೆಕ್ಟ್ರಾನಿಕ್‌ ಸಿಟಿ ಸಂಪರ್ಕದಿಂದ ಆರಂಭವಾಗುವ ‘ಬ್ಯುಸಿನೆಸ್‌ ಕಾರಿಡಾರ್’, ಆನೇಕಲ್‌ನ ಅತ್ತಿಬೆಲೆ, ಜಿಗಣಿ ಕೈಗಾರಿಕೆ ಪ್ರದೇಶಗಳಿಗೂ ಸಂಪರ್ಕ ಕಲ್ಪಿಸಲಿದೆ. ಬನ್ನೇರುಘಟ್ಟ ರಸ್ತೆ ಹಾಗೂ ಕನಕಪುರ ರಸ್ತೆಗೂ ಟ್ರಕ್ ಟರ್ಮಿನಲ್‌ಗಳನ್ನು ಒದಗಿಸಲಿದ್ದು, ಅಲ್ಲಿನ ಉದ್ಯಮಗಳಿಗೂ ಅನುಕೂಲವಾಗಲಿದೆ. ನಗರ ಕೇಂದ್ರ ಭಾಗದಲ್ಲಿ ಟ್ರಕ್‌ನಂತಹ ಸಾಗಣೆ ವಾಹನಗಳಿಂದ ಉಂಟಾಗುತ್ತಿದ್ದ ದಟ್ಟಣೆ ಇದರಿಂದ ನಿವಾರಣೆಯಾಗಲಿದ್ದು, ಪ್ರತ್ಯೇಕ ಮಾರ್ಗವನ್ನೇ ರಚಿಸಿ, ವಾಣಿಜ್ಯ ವ್ಯವಹಾರವನ್ನೂ ಉತ್ತೇಜಿಸಲಾಗುತ್ತದೆ’ ಎಂದು ಬಿಡಿಎ ಎಂಜಿನಿಯರ್‌ಗಳು ಮಾಹಿತಿ ನೀಡಿದರು.

ಹೊಸೂರು ರಸ್ತೆಯಿಂದ ತುಮಕೂರು ರಸ್ತೆಗೆ ಸಂಪರ್ಕ ಕಲ್ಪಿಸುವ ಉದ್ದೇಶವನ್ನು ಪಿಆರ್‌ಆರ್‌–2 ಯೋಜನೆ ಹೊಂದಿದೆ. ನಾಡಪ್ರಭು ಕೆಂಪೇಗೌಡ ಬಡಾವಣೆಯಲ್ಲಿ ಮೈಸೂರು ರಸ್ತೆಯಿಂದ ಮಾಗಡಿ ರಸ್ತೆವರೆಗೆ ನಿರ್ಮಾಣವಾಗುತ್ತಿರುವ 10 ಕಿ.ಮೀ ಪ್ರಮುಖ ರಸ್ತೆ (ಎಂಎಆರ್‌) ಈ ಪಿಆರ್‌ಆರ್–2ನ ಭಾಗವಾಗಿದೆ. ಹೊಸೂರು ರಸ್ತೆಯಿಂದ ಮೈಸೂರು ರಸ್ತೆವರೆಗಿನ ‘ಬ್ಯುಸಿನೆಸ್‌ ಕಾರಿಡಾರ್‌’ ಅನ್ನು ಎಂಎಆರ್‌ಗೆ ಸಂಪರ್ಕಿಸಲಾಗುತ್ತದೆ. ಈ ಎಂಎಆರ್‌ 9 ಕಿ.ಮೀ ನಿರ್ಮಾಣ ಕಾರ್ಯ ಅಂತಿಮ ಘಟ್ಟದಲ್ಲಿದ್ದು, ಒಂದು ಕಿ.ಮೀ ವ್ಯಾಪ್ತಿಯ ಪ್ರದೇಶದ ವ್ಯಾಜ್ಯ ನ್ಯಾಯಾಲಯದಲ್ಲಿದೆ. ಅದು ಇತ್ಯರ್ಥವಾದ ಕೂಡಲೇ ನಿರ್ಮಾಣ ಕಾಮಗಾರಿ ಕೈಗೊಳ್ಳಲಾಗುತ್ತದೆ. ನಂತರ, ಮಾಗಡಿ ರಸ್ತೆಯಿಂದ ತುಮಕೂರು ರಸ್ತೆಗೆ ‘ಬ್ಯುಸಿನೆಸ್‌ ಕಾರಿಡಾರ್‌’ಗೆ ಸಂಪರ್ಕ ಕಲ್ಪಿಸಲು ಎರಡನೇ ಹಂತದಲ್ಲಿ ಯೋಜನೆಯನ್ನು ಕೈಗೊಳ್ಳಲಾಗುತ್ತದೆ ಎಂದು ಬಿಡಿಎ ಎಂಜಿನಿಯರ್‌ಗಳು ಮಾಹಿತಿ ನೀಡಿದರು.

‘ಭೂಸ್ವಾಧೀನ ಪ್ರಕ್ರಿಯೆಗಳು ಮುಗಿದಿದ್ದು, ಅಂತಿಮ ಆದೇಶಗಳಾಗಬೇಕಿವೆ. ಈ ಬಗ್ಗೆ ನ್ಯಾಯಾಲಯದ ಆದೇಶವೂ ನಮ್ಮ ಪರವಾಗಿಯೇ ಇದೆ’ ಎಂದು ಹೇಳಿದರು.

ಆನೇಕಲ್‌ ತಾಲ್ಲೂಕು

ಅತ್ತಿಬೆಲೆ ಹೋಬಳಿ: ಹೆಬ್ಬಗೋಡಿ, ವೀರಸಂದ್ರ, ಗೊಲ್ಲಹಳ್ಳಿ. 

ಜಿಗಣಿ ಹೋಬಳಿ: ಮಾರಗೊಂಡನಹಳ್ಳಿ, ಹುಲಿಮಂಗಲ, ಬಿಂಗಿಪುರ, ಹುಲ್ಲಹಳ್ಳಿ, ಬಿಲ್ವಾರದಹಳ್ಳಿ, ಭೂತನಹಳ್ಳಿ, ಕನ್ನಿಕನ ಅಗ್ರಹಾರ.

ಬೆಂಗಳೂರು ದಕ್ಷಿಣ ತಾಲ್ಲೂಕು

ಬೇಗೂರು ಹೋಬಳಿ: ಹೊಮ್ಮದೇವನಹಳ್ಳಿ, ಬಸವನಪುರ.

ಉತ್ತರಹಳ್ಳಿ ಹೋಬಳಿ: ಗೊಟ್ಟಿಗೆರೆ, ಪಿಳ್ಳಗಾನಹಳ್ಳಿ, ಗುಳಕಮಲೆ, ಕಗ್ಗಲಿಪುರ, ಉತ್ತರಿ.

ಕೆಂಗೇರಿ ಹೋಬಳಿ: ಬಿ.ಎಂ. ಕಾವಲ್‌, ಅಗರ, ದೇವಗೆರೆ, ಗುಡಿಮಾವು, ಕಂಬೀಪುರ, ಚಲ್ಲಘಟ್ಟ, ಕೆ. ಕೃಷ್ಣಸಾಗರ, ಭೀಮನಕುಪ್ಪೆ, ಕೊಮ್ಮಘಟ್ಟ, ಸೂಲಿಕೆರೆ, ಕೆಂಚನಪುರ.

ಯಶವಂತಪುರ ಹೋಬಳಿ: ಕನ್ನಲ್ಲಿ, ಸೀಗೇಹಳ್ಳಿ.

ದಾಸನಪುರ ಹೋಬಳಿ: ಮಾಚೋಹಳ್ಳಿ, ವಡ್ಡರಹಳ್ಳಿ, ಲಕ್ಷ್ಮಿಪುರ, ಕದರೇನಹಳ್ಳಿ, ಹಾರೊಕ್ಯಾತನಹಳ್ಳಿ, ದೊಂಬರಹಳ್ಳಿ, ಸಿದ್ದನಹೊಸಹಳ್ಳಿ, ಮಾದನಾಯಕನಹಳ್ಳಿ.

‘ರಸ್ತೆ ಬಳಕೆ ಶುಲ್ಕ ಇರುವುದಿಲ್ಲ!’

100 ಮೀಟರ್‌ ಅಗಲದ ಕಾರಿಡಾರ್‌ನಲ್ಲಿ 3 ಮೀಟರ್‌ ವಿಭಜಕ ಸೇರಿದಂತೆ 25 ಮೀಟರ್‌ನಲ್ಲಿ ಪ್ರಮುಖ ರಸ್ತೆ ನಿರ್ಮಾಣವಾಗಲಿದೆ. ತಲಾ 10 ಮೀಟರ್‌ಗಳ ಎರಡು ಸರ್ವೀಸ್‌ ನಿರ್ಮಿಸಲಾಗುತ್ತದೆ. ಇಕ್ಕೆಲಗಳಲ್ಲಿ 24 ಮೀಟರ್‌ ಅಗಲದಲ್ಲಿ ವಾಣಿಜ್ಯ ನಿವೇಶನಗಳನ್ನು ರಚಿಸಲಾಗುತ್ತದೆ. ಕಾರಿಡಾರ್ ನಿರ್ಮಾಣದ ಹಂತದಲ್ಲೇ ಈ ನಿವೇಶನಗಳನ್ನು ರಚಿಸಿ ಮಾರಾಟ ಮಾಡಲು ಉದ್ದೇಶಿಸಲಾಗಿದ್ದು, ಇದರಿಂದ ಸಾಕಷ್ಟು ಹಣವೂ ಸಂಗ್ರಹವಾಗುತ್ತದೆ. ಹೀಗಾಗಿ, ಬ್ಯುಸಿನೆಸ್‌ ಕಾರಿಡಾರ್‌ಗೆ ಯಾವುದೇ ರೀತಿಯ ಹಣದ ಕೊರತೆ ಉಂಟಾಗುವುದಿಲ್ಲ. ಶೀಘ್ರವಾಗಿ ನಿರ್ಮಿಸಲು ಯೋಜಿಸಲಾಗಿದೆ. ವಾಣಿಜ್ಯ ಕಾರಿಡಾರ್‌ ಆಗಿರುವುದರಿಂದ, ರಸ್ತೆ ಬಳಕೆಗೆ ಶುಲ್ಕವನ್ನು ವಿಧಿಸುವ ಯೋಚನೆ ಇಲ್ಲ’ ಎಂದು ಬಿಡಿಎ ಎಂಜಿನಿಯರ್‌ಗಳು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT