ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸೇಫ್‌ ಸಿಟಿ’ ಅನುಷ್ಠಾನ: ಬೆಂಗಳೂರು ಮುಂಚೂಣಿ –ನಗರ ಪೊಲೀಸ್‌ ಕಮಿಷನರ್ ಬಿ.ದಯಾನಂದ

ಎಫ್‌ಕೆಸಿಸಿಐ ಸಂವಾದದಲ್ಲಿ ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಹೇಳಿಕೆ
Published 4 ಆಗಸ್ಟ್ 2023, 22:30 IST
Last Updated 4 ಆಗಸ್ಟ್ 2023, 22:30 IST
ಅಕ್ಷರ ಗಾತ್ರ

ಬೆಂಗಳೂರು: ‘ರಾಷ್ಟ್ರದ ಮಹಾನಗರಗಳ ಪೈಕಿ, ಬೆಂಗಳೂರು ನಗರವು ‘ಸೇಫ್‌ ಸಿಟಿ’ (ಸುರಕ್ಷತಾ ನಗರ) ಯೋಜನೆ ಅನುಷ್ಠಾನದಲ್ಲಿ ಮುಂಚೂಣಿಯಲ್ಲಿದೆ. ಸದ್ಯದಲ್ಲೇ ಈ ಯೋಜನೆ ಅನುಷ್ಠಾನ ಪೂರ್ಣಗೊಳಿಸಿದ ಮೊದಲ ನಗರ ಎನ್ನುವ ಹೆಗ್ಗಳಿಕೆಗೂ ಪಾತ್ರವಾಗಲಿದೆ’ ಎಂದು ನಗರ ಪೊಲೀಸ್‌ ಕಮಿಷನರ್‌ ಬಿ.ದಯಾನಂದ ಹೇಳಿದರು.

ನಗರದಲ್ಲಿ ಶುಕ್ರವಾರ ಕರ್ನಾಟಕ ವಾಣಿಜ್ಯ ಹಾಗೂ ಕೈಗಾರಿಕಾ ಮಹಾಸಂಸ್ಥೆ ಆಯೋಜಿಸಿದ್ದ ಸಂವಾದದಲ್ಲಿ ಅವರು ಮಾತನಾಡಿದರು.

‘ಸೇಫ್‌ ಸಿಟಿ ಯೋಜನೆ ಅಡಿ ಇದುವರೆಗೂ 4,500 ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗಿದೆ. ಮೂರು ಸಾವಿರ ಕ್ಯಾಮೆರಾ ಅಳವಡಿಕೆ ಬಾಕಿ ಇದೆ. ಕೃತಕ ಬುದ್ಧಿಮತ್ತೆ ಕ್ಯಾಮೆರಾ ವ್ಯವಸ್ಥೆ ನೆರವಿನಿಂದ ಸಂಚಾರ ನಿಯಮ ಉಲ್ಲಂಘಿಸಿದ ವಾಹನಗಳ ಫೋಟೊ ತೆಗೆದು ದಂಡ ವಿಧಿಸಲಾಗುತ್ತಿದೆ. ಇನ್ನೂ ಕೆಲವು ಸ್ಥಳಗಳಲ್ಲಿ ಕೃತಕ ಬುದ್ಧಿಮತ್ತೆ ಕ್ಯಾಮೆರಾ ಅಳವಡಿಕೆ ಕೆಲಸಗಳು ಬಾಕಿಯಿದೆ. ಅದನ್ನು ಪೂರ್ಣಗೊಳಿಸಿದರೆ ಬೆಂಗಳೂರು ಈ ಯೋಜನೆ ಅನುಷ್ಠಾನದಲ್ಲಿ ಮೊದಲ ಸ್ಥಾನಕ್ಕೇರಲಿದೆ. ಇತರೆ ಮಹಾನಗರಗಳಲ್ಲಿ ಯೋಜನೆ ಇನ್ನೂ ಟೆಂಡರ್‌ ಹಂತದಲ್ಲಿವೆ’ ಎಂದು ಹೇಳಿದರು.

‘ಸಮಾಜಘಾತುಕ ಕೃತ್ಯಗಳನ್ನು ಹತ್ತಿಕ್ಕಲು ಬೆಂಗಳೂರು ಪೊಲೀಸರು ಸಮರ್ಥರಿದ್ದಾರೆ. ಉತ್ತಮ ಬೆಂಗಳೂರು ನಿರ್ಮಾಣದತ್ತ ಪೊಲೀಸ್‌ ಇಲಾಖೆ ಹಲವು ಕ್ರಮ ಕೈಗೊಂಡಿದೆ. ನಗರ ಸುರಕ್ಷಿತವಾಗಿದ್ದರೆ ಮಾತ್ರ ಕೈಗಾರಿಕೆಗಳನ್ನು ಸೆಳೆಯಲು ಸಾಧ್ಯ’ ಎಂದು ಹೇಳಿದರು.

ತಂತ್ರಜ್ಞಾನ ಬಳಕೆ: ನಗರದಲ್ಲಿ ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯ ಜತೆಗೆ ತಂತ್ರಜ್ಞಾನವನ್ನೂ ಉತ್ತಮವಾಗಿ ಬಳಸಿಕೊಳ್ಳುತ್ತಿದ್ದೇವೆ. ತಂತ್ರಜ್ಞಾನದ ನೆರವಿನಿಂದ ಸಾಕಷ್ಟು ಪ್ರಕರಣಗಳನ್ನು ಪತ್ತೆ ಮಾಡಲು ಸಾಧ್ಯವಾಗಿದೆ. ಕಂಪನಿಗಳ ದತ್ತಾಂಶ ಕಳವು ಪ್ರಕರಣಗಳು ಹೆಚ್ಚುತ್ತಿವೆ. ದತ್ತಾಂಶ ಕಳವು ಪ್ರಕರಣದ ಆರೋಪಿಗಳ ಪತ್ತೆಗೆ ಸೈಬರ್‌ ವಿಭಾಗವನ್ನು ಬಲ ಪಡಿಸಲಾಗುತ್ತಿದೆ’ ಎಂದು ಮಾಹಿತಿ ನೀಡಿದರು.

‘ವ್ಯಾಪಾರಿಗಳು ತಮ್ಮ ಮಳಿಗೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಕೆ ಮಾಡಿಕೊಂಡರೆ ಪ್ರಕರಣಗಳನ್ನು ಸುಲಭವಾಗಿ ಪತ್ತೆ ಮಾಡಲು ಸಾಧ್ಯ. ಪಾದಚಾರಿ ಮಾರ್ಗದಲ್ಲಿ ವಾಹನ ನಿಲುಗಡೆ ಮಾಡಿದ್ದರೆ ತೆರವು ಮಾಡಲಾಗುತ್ತಿದೆ. ಬೀದಿಬದಿ ವ್ಯಾಪಾರಿಗಳ ಕಾಯ್ದೆಯಿದ್ದು, ಅವರ ಬದುಕು ಮುಖ್ಯ. ಎಲ್ಲರಿಗೂ ನ್ಯಾಯ ಸಿಗುವ ರೀತಿಯಲ್ಲಿ ಕ್ರಮ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದರು.

ಅಸೋಸಿಯೇಷನ್‌ ಸಮಿತಿ ಮುಖ್ಯಸ್ಥ ಪಿ.ಎಚ್‌.ರಾಜ್‌ ಪುರೋಹಿತ್‌ ಮಾತನಾಡಿ, ‘ಕೆಲವು ಠಾಣೆಗಳಲ್ಲಿ ಎಫ್‌ಐಆರ್ ದಾಖಲಿಸಲು ಪೊಲೀಸರು ಹಿಂದೇಟು ಹಾಕುತ್ತಿದ್ದಾರೆ. ತಕ್ಷಣವೇ ಎಫ್‌ಐಆರ್‌ ದಾಖಲಿಸಿದರೆ ಜನರಲ್ಲಿ ಪೊಲೀಸ್‌ ವ್ಯವಸ್ಥೆಯ ಬಗ್ಗೆ ನಂಬಿಕೆ ಮೂಡಲಿದೆ. ಜೆಸಿ ರಸ್ತೆ, ಚಿಕ್ಕಪೇಟೆ, ಮಲ್ಲೇಶ್ವರದಲ್ಲಿ ಫುಟ್‌ಪಾತ್‌ಗಳನ್ನು ಅತಿಕ್ರಮಿಸಿ ವ್ಯಾಪಾರ ನಡೆಸಲಾಗುತ್ತಿದೆ. ಬೀದಿಬದಿಯ ವ್ಯಾಪಾರಸ್ಥರನ್ನು ತೆರವುಗೊಳಿಸಬೇಕು’ ಎಂದರು.

‘ಉದ್ಯಮಿಗಳು ಜಿಎಸ್‌ಟಿ ಪಾವತಿಸಿಯೇ ವ್ಯಾಪಾರ ನಡೆಸುತ್ತಿದ್ದರೂ ಅನವಶ್ಯಕ ದಾಳಿಗಳು ನಡೆಯುತ್ತಿವೆ. ನೋಟಿಸ್‌ ಜಾರಿಗೊಳಿಸಿ ದಾಳಿ ನಡೆಸುವ ವ್ಯವಸ್ಥೆ ಜಾರಿಗೆ ಬರಬೇಕು’ ಎಂದು ಕೋರಿದರು.

ಎಫ್‌ಕೆಸಿಸಿಐ ಅಧ್ಯಕ್ಷ ಬಿ.ವಿ.ಗೋಪಾಲ ರೆಡ್ಡಿ ಹಾಜರಿದ್ದರು. 

‘ಎಫ್‌ಐಆರ್ ದಾಖಲಿಸಿಯೇ ತನಿಖೆ’‌

‘ಎಲ್ಲ ಸಿವಿಲ್‌ ಪ್ರಕರಣಗಳಲ್ಲೂ ಎಫ್‌ಐಆರ್‌ ದಾಖಲಿಸಿಯೇ ತನಿಖೆ ನಡೆಸಬೇಕು ಎಂದು ಸೂಚಿಸಲಾಗಿದೆ.  ಪೊಲೀಸ್ ಠಾಣೆಗಳು ಯಾವುದೇ ರೀತಿಯಾದ ಸೆಟಲ್‌ಮೆಂಟ್ ಕೇಂದ್ರಗಳು ಅಲ್ಲ. ನಿಯಮ ಉಲ್ಲಂಘಿಸುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಪೊಲೀಸ್‌ ಕಮಿಷನರ್‌ ಎಚ್ಚರಿಸಿದರು.

ಸಂವಾದದಲ್ಲಿ ಕೇಳಿಬಂದ ಅಹವಾಲುಗಳು...

* ಕೈಗಾರಿಕಾ ವಲಯದಲ್ಲಿ ಹೆಚ್ಚಿನ ಭದ್ರತೆ ಕಲ್ಪಿಸಬೇಕು. ವಸತಿಯುತ ಪ್ರದೇಶದಲ್ಲಿ ಪೊಲೀಸ್‌ ಗಸ್ತು ಹೆಚ್ಚಿಸಬೇಕು.

* ಸಿಟಿ ಮಾರುಕಟ್ಟೆ ಪ್ರದೇಶದಲ್ಲಿ ಪಾದಚಾರಿಗಳು ಮಾರ್ಗಗಳು ಒತ್ತುವರಿಯಾಗಿವೆ. ಮಳಿಗೆಗಳಲ್ಲಿ ವ್ಯಾಪಾರ ನಡೆಸುವವರಿಗೆ ತೊಂದರೆಯಾಗಿದೆ.

* ಕೆಲವು ಠಾಣೆಗಳಲ್ಲಿ ಸಿವಿಲ್‌ ಪ್ರಕರಣಗಳನ್ನು ಪೊಲೀಸರೇ ಇತ್ಯರ್ಥ ಪಡಿಸುತ್ತಿದ್ದಾರೆ. ಇದು ತಪ್ಪಬೇಕು. ಎಫ್‌ಐಆರ್‌ ದಾಖಲಿಸಿಯೇ ತನಿಖೆ ನಡೆಸಬೇಕು.

* ಕೆಲವು ಠಾಣೆಗಳು ಗೋದಾಮುಗಳಂತೆ ಕಾಣಿಸುತ್ತಿವೆ. ಸಿಎಸ್‌ಆರ್‌ ನಿಧಿಯಡಿ ದುರಸ್ತಿ ಪಡಿಸಬೇಕು.

* ಚಿಕ್ಕಪೇಟೆ ಮೆಜೆಸ್ಟಿಕ್‌ನಲ್ಲಿ ಭಯದ ವಾತಾವರಣ ಇದೆ. ಈ ಸ್ಥಳದಲ್ಲಿ ಹೆಚ್ಚಿನ ಪೊಲೀಸರನ್ನು ನೇಮಿಸಬೇಕು.

* ಸಂಚಾರ ವಿಭಾಗಕ್ಕೆ ಹಿಂದಿನಂತೆಯೇ ‘ವಿಶೇಷ ಕಮಿಷನರ್‌’ ನೇಮಿಸಬೇಕು.

*ನಿಯಮಿತವಾಗಿ ಸಾರ್ವಜನಿಕ ಕುಂದುಕೊರತೆ ಸಭೆ ನಡೆಸಬೇಕು. ಎರಡು ತಿಂಗಳಿಗೊಮ್ಮೆ ಉದ್ಯಮಿಗಳ ಜತೆಗೆ ಪೊಲೀಸರು ಸಭೆ ನಡೆಸಬೇಕು.

* ಆರ್‌ಎಂಸಿ ಯಾರ್ಡ್‌ ಎಪಿಎಂಸಿ ಆವರಣದಲ್ಲಿ ಗಾಂಜಾ ವ್ಯಸನಿಗಳ ಕಾಟ ಹೆಚ್ಚಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT