ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕನ್ನಡಿಗ ವಿದ್ಯಾರ್ಥಿಗಳನ್ನು ತವರಿಗೆ ಕರೆತನ್ನಿ: ಜಿ.ಸಿ.ಚಂದ್ರಶೇಖರ್‌ ಆಗ್ರಹ

Last Updated 29 ಜೂನ್ 2020, 20:38 IST
ಅಕ್ಷರ ಗಾತ್ರ

ಬೆಂಗಳೂರು: ‘ಕೊರೊನಾ ಕಾರಣದಿಂದ ರಷ್ಯಾದಲ್ಲಿ ಕನ್ನಡಿಗ ವಿದ್ಯಾರ್ಥಿಗಳು ಸಂಕಷ್ಟ ಅನುಭವಿಸುತ್ತಿದ್ದು, ಅವರನ್ನು ತಕ್ಷಣ ತವರಿಗೆ ಕರೆದುಕೊಂಡು ಬರಲು ವ್ಯವಸ್ಥೆ ಮಾಡಬೇಕು’ ಎಂದು ರಾಜ್ಯಸಭೆಯ ಕಾಂಗ್ರೆಸ್‌ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರು ‌ಪ್ರಧಾನಿ ನರೇಂದ್ರ ಮೋದಿ ಮತ್ತು ವಿದೇಶಾಂಗ ಸಚಿವ ಎಸ್‌. ಜೈಶಂಕರ್‌ಗೆ ಮನವಿ ಮಾಡಿದ್ದಾರೆ.

ಇಬ್ಬರಿಗೂ ಪತ್ರ ಬರೆದಿರುವ ಚಂದ್ರಶೇಖರ್‌, ‘ಹೊರ ದೇಶಗಳಲ್ಲಿರುವ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಓದಲು ತೆರಳಿದ ವಿದ್ಯಾರ್ಥಿಗಳು ಕೊರೊನಾದಿಂದ ದಿಗ್ಭ್ರಮೆಗೆ ಒಳಗಾಗಿದ್ದಾರೆ. ಕನ್ನಡಿಗ ವಿದ್ಯಾರ್ಥಿಗಳನ್ನು ಅಲ್ಲಿಂದ ಕರೆದುಕೊಂಡು ಬರುವ ವಿಷಯದಲ್ಲಿ ಕೇಂದ್ರ ಸರ್ಕಾರ ತಾರತಮ್ಯ ಅನುಸರಿಸುತ್ತಿದೆ’ ಎಂದು ದೂರಿದ್ದಾರೆ.

‘ರಷ್ಯಾದಿಂದ ವಿದ್ಯಾರ್ಥಿಗಳನ್ನು ಹೊತ್ತ ಮೊದಲ ವಿಮಾನ ಜೂನ್‌ 30ರಂದು ಬರಲಿದೆ. ಈ ವಿಮಾನ ದೆಹಲಿ ಮಾರ್ಗವಾಗಿ ಬೆಂಗಳೂರಿಗೆ ಬರುವ ಕಾರಣ ಎಲ್ಲ ವಿದ್ಯಾರ್ಥಿಗಳನ್ನು ಕರೆದುಕೊಂಡು ಬರಲು ಸಾಧ್ಯವಾಗುವುದಿಲ್ಲ. ಅಲ್ಲಿ ಇನ್ನೂ 80ರಿಂದ 100 ವಿದ್ಯಾರ್ಥಿಗಳು ಊಟ, ವಸತಿ ವ್ಯವಸ್ಥೆ ಇಲ್ಲದೆ ನಲುಗಿದ್ದು, ವಿಡಿಯೊ ಕಾಲ್‌ ಮತ್ತು ವಾಟ್ಸ್‌ಆ್ಯಪ್‌ ಕರೆ ಮಾಡಿ ಅಳಲು ತೋಡಿಕೊಂಡಿದ್ದಾರೆ.’

‘ಕನ್ನಡಿಗ ವಿದ್ಯಾರ್ಥಿಗಳ ಸುರಕ್ಷತೆಗೆ ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ಮತ್ತು ಅವರನ್ನು ತವರಿಗೆ ವಾಪಸು ಕಳುಹಿಸಲು ಅಗತ್ಯ ಕ್ರಮ ತೆಗೆದುಕೊಳ್ಳುವಂತೆ ರಷ್ಯಾದಲ್ಲಿರುವ ಭಾರತೀಯ ರಾಯಭಾರಿ ಕಚೇರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕು’ ಎಂದೂ ಚಂದ್ರಶೇಖರ್ ‌ಪತ್ರದಲ್ಲಿ ಕೋರಿದ್ದಾರೆ.

**

ಜಯನಗರ ಅಂಚೆಕಚೇರಿ ವಹಿವಾಟು ಸ್ಥಗಿತ
ಬೆಂಗಳೂರು: ಜಯನಗರದ ಪ್ರಧಾನ ಅಂಚೆ ಕಚೇರಿಯ 35 ವರ್ಷದ ಸಿಬ್ಬಂದಿ
ಯೊಬ್ಬರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಹಾಗಾಗಿ ಈ ಅಂಚೆ ಕಚೇರಿಯ ವಹಿವಾಟುಗಳನ್ನು ಮೂರು ದಿನಗಳ ಕಾಲ ಸ್ಥಗಿತಗೊಳಿಸಲಾಗಿದೆ.

‘ನಮ್ಮ ಸಿಬ್ಬಂದಿಯೊಬ್ಬರಲ್ಲಿ ಕೊರೊನಾ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಗುರುವಾರ ಅವರ ಗಂಟಲ ದ್ರವ ಪಡೆದು ಪರೀಕ್ಷೆಗೆ ಕಳುಹಿಸಲಾಗಿದ್ದು, ಸೋಂಕು ಇರುವುದು ಭಾನುವಾರ ದೃಢಪಟ್ಟಿದೆ. ಅವರನ್ನು ಶ್ರೀ ಶ್ರೀ ರವಿಶಂಕರ್‌ ಗುರೂಜಿ ಆಯುರ್ವೇದ ಆಸ್ಪತ್ರೆಯ ಕೋವಿಡ್‌ ಆರೈಕೆ ಕೇಂದ್ರಕ್ಕೆ ಕರೆದೊಯ್ಯಲಾಗಿದೆ’ ಎಂದು ಅಂಚೆ ಕಚೇರಿಯ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ಮಾಹಿತಿ ನೀಡಿದರು.

‘ಬಿಬಿಎಂ‍ಪಿ ಸಿಬ್ಬಂದಿ ಅಂಚೆ ಕಚೇರಿಗೆ ಸೋಂಕು ನಿವಾರಕ ದ್ರಾವಣವನ್ನು ಸೋಮವಾರ ಸಿಂಪಡಿಸಿದ್ದಾರೆ. ಇಲ್ಲಿನ ಎಲ್ಲ ಸಿಬ್ಬಂದಿಯನ್ನು ಕೋವಿಡ್‌ ಪರೀಕ್ಷೆಗೆ ಒಳಪಡಿಸಲಾಗಿದೆ’ ಎಂದರು.

**

ಆಸ್ಪತ್ರೆ ಸೀಲ್‌ಡೌನ್
ಕೆ.ಆರ್. ಪುರ: ಕೊರೊನಾ ಸೋಂಕಿತ ವ್ಯಕ್ತಿ ಓಡಾಡಿದ ಹಿನ್ನೆಲೆಯಲ್ಲಿ ಇಲ್ಲಿನ ಸಾರ್ವಜನಿಕ ಆಸ್ಪತ್ರೆಯನ್ನು ಸೀಲ್‌ಡೌನ್‌ ಮಾಡಲಾಯಿತು.

‘ಕೊರೊನಾ ಸೋಂಕಿತ ವ್ಯಕ್ತಿಯು ಆಸ್ಪತ್ರೆಯ ಪ್ರಯೋಗಾಲಯ, ಎಕ್ಸ್‌ರೇ ಕೊಠಡಿ, ಒಪಿಡಿ ಸೇರಿದಂತೆ ಹಲವು ಕಡೆ ಸುತ್ತಾಡಿರುವ ಶಂಕೆ ಇದೆ. ಈ ನಿಟ್ಟಿನಲ್ಲಿ ಆಸ್ಪತ್ರೆಯನ್ನು ಮಂಗಳವಾರದವರೆಗೆ (ಜೂನ್‌ 30) ಸೀಲ್‌ಡೌನ್‌ ಮಾಡಲಾಗಿದೆ’ ಎಂದು ತಾಲ್ಲೂಕು ವೈದ್ಯಾಧಿಕಾರಿ ಡಾ. ಚಂದ್ರಶೇಖರ್ ತಿಳಿಸಿದ್ದಾರೆ.

‘ಆಸ್ಪತ್ರೆಯಲ್ಲಿದ್ದ ರೋಗಿಗಳನ್ನು ಹತ್ತಿರದ ಸರ್ಕಾರಿ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ. ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದವರನ್ನು ಕ್ವಾರಂಟೈನ್‌ನಲ್ಲಿಡಲು ವ್ಯವಸ್ಥೆ ಮಾಡಲಾಗಿದೆ’ ಎಂದು ಹೇಳಿದ್ದಾರೆ.

**

ಕೋವಿಡ್‌ ಪರೀಕ್ಷೆಗೆ ಸೂಚಿಸಿದ್ದ ವೈದ್ಯರ ಮೇಲೆಯೇ ಹಲ್ಲೆ
ಬೆಂಗಳೂರು: ಕೊರೊನಾ ಸೋಂಕು ಪರೀಕ್ಷೆ ಮಾಡಿಸಿಕೊಳ್ಳುವಂತೆ ಸೂಚಿಸಿದ್ದ ಆಸ್ಪತ್ರೆ ಸಿಬ್ಬಂದಿ ಹಾಗೂ ವೈದ್ಯರ ಮೇಲೆಯೇ ಅಪರಿಚಿತನೊಬ್ಬ ಹಲ್ಲೆ ಮಾಡಿದ್ದು, ಈ ಸಂಬಂಧ ಕೊಡಿಗೇಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಘಟನೆ ಸಂಬಂಧ ಸಹಕಾರ ನಗರದ ಆಸ್ಪತ್ರೆಯೊಂದರ ವೈದ್ಯ ಜಗನ್ನಾಥ್ ಎಂಬುವರು ದೂರು ನೀಡಿದ್ದಾರೆ. ಕೃತ್ಯ ಎಸಗಿದ ನಂತರ ಆರೋಪಿ ಪರಾರಿಯಾಗಿದ್ದಾನೆ’ ಎಂದು ಪೊಲೀಸರು ಹೇಳಿದರು.

‘ರಕ್ತದೊತ್ತಡದಿಂದ ಬಳಲುತ್ತಿದ್ದ ಆರೋಪಿ, ಭಾನುವಾರ (ಜೂ. 28) ರಾತ್ರಿ 11 ಗಂಟೆಗೆ ಆಸ್ಪತ್ರೆಗೆ ಬಂದಿದ್ದ. ಆಸ್ಪತ್ರೆಯ ಸಿಬ್ಬಂದಿ, ‘ಮೊದಲು ಕೊರೊನಾ ಪರೀಕ್ಷೆ ಮಾಡಿಸಿಕೊಳ್ಳಿ. ನಂತರ ಚಿಕಿತ್ಸೆ ಕೊಡುತ್ತೇವೆ’ ಎಂದಿದ್ದರು. ಅದನ್ನು ನಿರಾಕರಿಸಿದ್ದ ಆರೋಪಿ, ‘ನನಗೆ ಕೊರೊನಾ ಬಂದಿಲ್ಲ. ಹಣ ಮಾಡುವುದಕ್ಕಾಗಿ ಸುಖಾಸುಮ್ಮನೇ ಪರೀಕ್ಷೆ ಮಾಡಿಸಿಕೊಳ್ಳಲು ಹೇಳುತ್ತಿದ್ದೀರಾ’ ಎಂದು ಗಲಾಟೆ ಮಾಡಿದ್ದ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT