ಮಂಗಳವಾರ, ಜೂನ್ 22, 2021
22 °C

ಕೊಲೆ ಆರೋಪಿ ಕಾಲಿಗೆ ಗುಂಡೇಟು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕೊಲೆ ಪ್ರಕರಣದ ಮಹಜರು ವೇಳೆ ಪೊಲೀಸರ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ ರೌಡಿ ದಿನೇಶ್ ಅಲಿಯಾಸ್ ಕ್ರೇಜಿ ಕ್ರಷ್‌ ಎಂಬಾತನ ಕಾಲಿಗೆ ಇನ್‌ಸ್ಪೆಕ್ಟರ್ ಭರತ್‌ ಗುಂಡು ಹಾರಿಸಿದ್ದಾರೆ.

’ಅಶೋಕನಗರ ಠಾಣೆ ವ್ಯಾಪ್ತಿಯಲ್ಲಿ ರವಿಮರ್ಮ್ ಅಲಿಯಾಸ್ ಅಪ್ಪು (29) ಎಂಬುವರನ್ನು ಏಪ್ರಿಲ್ 20ರಂದು ಕೊಲೆ ಮಾಡಲಾಗಿತ್ತು. ತಲೆಮರೆಸಿಕೊಂಡಿದ್ದ ದಿನೇಶ್ ಸೇರಿದಂತೆ ಆರು ಆರೋಪಿಗಳನ್ನು ಶನಿವಾರ ಬಂಧಿಸಲಾಗಿತ್ತು’ ಎಂದು ಪೊಲೀಸರು ಹೇಳಿದರು.

‘ಕೃತ್ಯಕ್ಕೆ ಬಳಸಿದ್ದ ಮಾರಕಾಸ್ತ್ರಗಳನ್ನು ಜಪ್ತಿ ಮಾಡಲು ಹಾಗೂ ಮಹಜರು ನಡೆಸಲು ಆರೋಪಿ ದಿನೇಶ್‌ನನ್ನು ಲ್ಯಾಂಗ್‌ಫೋರ್ಡ್‌ ರಸ್ತೆಯಲ್ಲಿರುವ ಕ್ರಿಶ್ಚಿಯನ್ ಸೆಮೆಟ್ರಿಗೆ ಭಾನುವಾರ ಕರೆದೊಯ್ಯಲಾಗಿತ್ತು.’

‘ಮುಚ್ಚಿಟ್ಟಿದ್ದ ಮಾರಕಾಸ್ತ್ರ ಹುಡುಕಿಕೊಟ್ಟಿದ್ದ ಆರೋಪಿ ದಿನೇಶ್, ಅದೇ ಮಾರಕಾಸ್ತ್ರದಿಂದ ಕಾನ್‌ಸ್ಟೆಬಲ್ ವಸಂತ್‌ ಮೇಲೆ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದ. ಅದೇ ಸಂದರ್ಭದಲ್ಲಿ ಇನ್‌ಸ್ಪೆಕ್ಟರ್ ಭರತ್, ಆರೋಪಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿದಿದ್ದಾರೆ’ ಎಂದೂ ಪೊಲೀಸರು ತಿಳಿಸಿದರು.

‘ಗಾಯಗೊಂಡಿರುವ ದಿನೇಶ್‌ನನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿಸಲಾಗಿದೆ. ಕಾನ್‌ಸ್ಟೆಬಲ್‌ ವಸಂತ್‌ ಅವರನ್ನೂ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ’ ಎಂದೂ ಹೇಳಿದರು.

ರೌಡಿ ಪಟ್ಟಿಯಲ್ಲಿ ದಿನೇಶ್: ‘ಬಂಧಿತ ಆರೋಪಿ ದಿನೇಶ್ ಹೆಸರು ರೌಡಿ ಪಟ್ಟಿಯಲ್ಲಿದೆ. ಹಲವು ವರ್ಷಗಳಿಂದ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ ಆತ, ಹಳೇ ವೈಷಮ್ಯದಿಂದಾಗಿ ಸಹಚರರ ಜೊತೆ ಸೇರಿ ಅಪ್ಪು ಅವರನ್ನು ಕೊಂದಿದ್ದ’ ಎಂದೂ ತಿಳಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು