ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ರೌಡಿ ಸೇರಿ ಇಬ್ಬರ ಕೊಲೆ

ನೃತ್ಯದ ವೇಳೆ ಮೈ ತಾಗಿದ್ದಕ್ಕೆ ಶುರುವಾದ ಜಗಳ, ಚಾಕು ಇರಿತ
Published 9 ಮಾರ್ಚ್ 2024, 16:15 IST
Last Updated 9 ಮಾರ್ಚ್ 2024, 16:15 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಪ್ರತ್ಯೇಕ ಪ್ರಕರಣಗಳಲ್ಲಿ ರೌಡಿ ಸೇರಿ ಇಬ್ಬರನ್ನು ಶುಕ್ರವಾರ ಕೊಲೆ ಮಾಡಲಾಗಿದೆ.

ಫ್ಲವರ್‌ ಗಾರ್ಡನ್‌ನ ರೌಡಿ ಶಿವ ಅಲಿಯಾಸ್ ಶರತ್ (35) ಹಾಗೂ ಶ್ರೀನಗರದ ಯೋಗೇಶ್ (23) ಕೊಲೆಯಾದವರು. ಕಾಟನ್‌ಪೇಟೆ ಹಾಗೂ ಬ್ಯಾಟರಾಯನಪುರ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣಗಳು ದಾಖಲಾಗಿವೆ.

ಮಾರಕಾಸ್ತ್ರಗಳಿಂದ ಹೊಡೆದು ಕೊಲೆ: ‘ರೌಡಿ ಶಿವ ಹಾಗೂ ಎದುರಾಳಿ ತಂಡದವರ ನಡುವೆ ವೈಷಮ್ಯ ಇತ್ತು. ಸ್ಥಳೀಯ ವ್ಯಾಪಾರಿಗಳನ್ನು ಶಿವ ಬೆದರಿಸುತ್ತಿದ್ದನೆಂದು ಗೊತ್ತಾಗಿತ್ತು. ಇದೇ ಕಾರಣಕ್ಕೆ ಎದುರಾಳಿ ತಂಡದವರು ಶಿವನನ್ನು ಮಾರಕಾಸ್ತ್ರಗಳಿಂದ ಹೊಡೆದು ಕೊಂದಿದ್ದಾರೆ’ ಎಂದು ಪೊಲೀಸರು ಹೇಳಿದರು.

‘ರೌಡಿ ಶಿವ ಶುಕ್ರವಾರ ತಡರಾತ್ರಿ ಆಂಜನಪ್ಪ ಗಾರ್ಡನ್‌ಗೆ ಹೋಗಿದ್ದ. ಇದೇ ಸಂದರ್ಭದಲ್ಲಿ ದಾಳಿ ಮಾಡಿದ್ದ ದುಷ್ಕರ್ಮಿಗಳ ತಂಡ, ಶಿವನನ್ನು ಕೊಲೆ ಮಾಡಿ ಪರಾರಿಯಾಗಿದೆ. ಕೊಲೆ ಸಂಬಂಧ ಪ್ರಕರಣ ದಾಖಲಿಸಿಕೊಂಡು, ತನಿಖೆ ಮುಂದುವರಿಸಲಾಗಿದೆ. ಸ್ಥಳೀಯ ಸಿ.ಸಿ.ಟಿ.ವಿ ಕ್ಯಾಮೆರಾ ದೃಶ್ಯ ಪರಿಶೀಲಿಸಲಾಗುತ್ತಿದೆ’ ಎಂದರು.

ಮೈ ತಾಗಿದ್ದಕ್ಕೆ ಕೊಲೆ: ‘ನೃತ್ಯ ಮಾಡುವ ಸಂದರ್ಭದಲ್ಲಿ ಮೈ ತಾಗಿದ್ದಕ್ಕೆ ಶುರುವಾರ ಗಲಾಟೆ, ಯೋಗೇಶ್ ಅವರ ಕೊಲೆಯಲ್ಲಿ ಅಂತ್ಯವಾಗಿದೆ’ ಎಂದು ಪೊಲೀಸರು ಹೇಳಿದರು.

‘ಬೈಕ್ ರಿಪೇರಿ ಹಾಗೂ ತೊಳೆಯುವ ಕೆಲಸ ಮಾಡುತ್ತಿದ್ದ ಯೋಗೇಶ್, ಗಿರಿನಗರ ಬಳಿಯ ದೇವಸ್ಥಾನವೊಂದರಲ್ಲಿ ಶಿವರಾತ್ರಿ ಪೂಜೆಗೆ ಶುಕ್ರವಾರ ಹೋಗಿದ್ದರು. ಸ್ಥಳೀಯ ಯುವಕರು ನೃತ್ಯ ಮಾಡುತ್ತಿದ್ದರು. ಯೋಗೇಶ್ ಸಹ ನೃತ್ಯ ಮಾಡಲಾರಂಭಿಸಿದ್ದರು. ಇದೇ ಸಂದರ್ಭದಲ್ಲಿ ಆರೋಪಿಯೊಬ್ಬನಿಗೆ ಯೋಗೇಶ್ ಅವರ ಮೈ ತಾಗಿತ್ತು’ ಎಂದು ತಿಳಿಸಿದರು.

‘ಮೈ ತಾಗಿದ್ದ ಕಾರಣಕ್ಕೆ ಜಗಳ ಶುರುವಾಗಿತ್ತು. ಯೋಗೇಶ್ ಹಾಗೂ ಆರೋಪಿಗಳು ಪರಸ್ಪರ ಕೈ ಕೈ ಮಿಲಾಯಿಸಿದ್ದರು. ಸ್ಥಳೀಯರು ಜಗಳ ಬಿಡಿಸಿ ಎಲ್ಲರನ್ನೂ ಸ್ಥಳದಿಂದ ಕಳುಹಿಸಿದ್ದರು’ ಎಂದರು.

‘ಯೋಗೇಶ್‌ ಬೈಕ್‌ನಲ್ಲಿ ತಮ್ಮ ಮನೆಯತ್ತ ಹೊರಟಿದ್ದರು. ಈ ಸಂದರ್ಭದಲ್ಲಿ ಹಿಂಬಾಲಿಸಿದ್ದ ಆರೋಪಿಗಳು, ಮಾರ್ಗಮಧ್ಯೆ ಯೋಗೇಶ್ ಬೈಕ್‌ ಅಡ್ಡಗಟ್ಟಿದ್ದರು. ಚಾಕುವಿನಿಂದ ಇರಿದು ಯೋಗೇಶ್ ಅವರನ್ನು ಕೊಂದಿದ್ದಾರೆ’ ಎಂದು ಹೇಳಿದರು.

‘ನೃತ್ಯ ಮಾಡುವಾಗ ನಡೆದ ಗಲಾಟೆಯಿಂದ ಕೊಲೆ ನಡೆದಿರುವುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ. ಕೊಲೆ ಪ್ರಕರಣ ದಾಖಲಿಸಿಕೊಂಡು, ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ’ ಎಂದು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT