ಶುಕ್ರವಾರ, ಮಾರ್ಚ್ 5, 2021
30 °C
ಕಬ್ಬನ್‌ ಉದ್ಯಾನದಲ್ಲಿ ಏಳು ಮಹಡಿ ಕಟ್ಟಡ ನಿರ್ಮಾಣ ವಿಚಾರ

ಆದೇಶಕ್ಕೂ ಮುನ್ನ ಧ್ವಂಸಕ್ಕೆ ಅನುಮತಿ!

ಮನೋಜ್‌ ಶರ್ಮಾ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಬ್ಬನ್‌ ಉದ್ಯಾನದಲ್ಲಿ ಏಳು ಅಂತಸ್ತುಗಳ ಕಟ್ಟಡ ನಿರ್ಮಾಣಕ್ಕೆ ಹೈಕೋರ್ಟ್‌ ಆದೇಶ ನೀಡುವುದಕ್ಕೂ ಮುನ್ನವೇ, ನ್ಯಾಯಾಲಯದ ಆಂತರಿಕ ಸಮಿತಿಯು, ಉದ್ದೇಶಿತ ಪ್ರದೇಶದಲ್ಲಿ ಇದ್ದ ಚುನಾವಣಾ ಆಯೋಗದ ಹಳೆಯ ಕಚೇರಿಯನ್ನು ನೆಲಸಮಗೊಳಿಸಲು ಅನುಮತಿ ನೀಡುವ ಆಡಳಿತಾತ್ಮಕ ತೀರ್ಮಾನ ತೆಗೆದುಕೊಂಡಿರುವುದು ಬೆಳಕಿಗೆ ಬಂದಿದೆ.

ಈ ಕುರಿತು ಸರ್ಕಾರಕ್ಕೆ ಪತ್ರ ಬರೆದಿದ್ದ ಹೈಕೋರ್ಟ್‌ ರಿಜಿಸ್ಟ್ರಾರ್‌ (ಮೂಲಸೌಕರ್ಯ ಮತ್ತು ನಿರ್ವಹಣೆ) ಎಂ. ಚಂದ್ರಶೇಖರ ರೆಡ್ಡಿ , ‘ಸಂಬಂಧಪಟ್ಟ ಪ್ರಾಧಿಕಾರ ಹಾಗೂ ನ್ಯಾಯಾಂಗವು ಅಗತ್ಯ ಅನುಮತಿಗಳನ್ನು ನೀಡಿದ ನಂತರ ಕಟ್ಟಡ ಧ್ವಂಸದ ಕುರಿತು ಮುಂದುವರಿಯಬಹುದು’ ಎಂದು ಹೇಳಿದ್ದಾರೆ.

2019ರ ಅ.1ರಂದು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿದ್ದ ಅವರು, ‘ಹೈಕೋರ್ಟ್‌ನ ಕಟ್ಟಡಗಳ ಸಮಿತಿಯು, ಕಬ್ಬನ್‌ ಉದ್ಯಾನದಲ್ಲಿ ಏಳು ಮಹಡಿಗಳ ಕಟ್ಟಡಗಳ ನಿರ್ಮಾಣಕ್ಕೆ ಒಪ್ಪಿದೆ’ ಎಂದು ತಿಳಿಸಿದ್ದಾರೆ. ಆದರೆ, ಹೈಕೋರ್ಟ್‌ನ ಏಕಸದಸ್ಯ ಪೀಠ, ಈ ಉದ್ಯಾನದಲ್ಲಿ ಏಳು ಮಹಡಿಗಳ ಕಟ್ಟಡ ನಿರ್ಮಾಣ ಕುರಿತಂತೆ ಅ.17ರಂದು ಆದೇಶ ನೀಡಿದೆ. ಹೈಕೋರ್ಟ್‌ ಆದೇಶ ನೀಡುವುದಕ್ಕೂ 16 ದಿನ ಮೊದಲೇ ರಿಜಿಸ್ಟ್ರಾರ್‌ ಅವರು ಲೋಕೋಪಯೋಗಿ ಇಲಾಖೆಗೆ ಪತ್ರ ಬರೆದಿರುವುದು ವಿವಾದಕ್ಕೆ ಕಾರಣವಾಗಿದೆ.

‘ಕಬ್ಬನ್‌ ಉದ್ಯಾನದಲ್ಲಿರುವ ಚುನಾವಣಾ ಆಯೋಗದ ಹಳೆಯ ಕಚೇರಿಯನ್ನು ನೆಲಸಮಗೊಳಿಸಲು ಸರ್ಕಾರದ ಆದೇಶದನ್ವಯ ನಿಮಗೆ ನಿರ್ದೇಶನ ನೀಡಲಾಗಿದೆ’ ಎಂದು ಲೋಕೋಪಯೋಗಿ ಇಲಾಖೆಗೆ ರಿಜಿಸ್ಟ್ರಾರ್‌ ಬರೆದಿರುವ ಪತ್ರದಲ್ಲಿ ಉಲ್ಲೇಖಿಸಲಾಗಿದೆ.

‘ಇದು ಆಡಳಿತಾತ್ಮಕ ವಿಚಾರ. ಸಚಿವ ಸಂಪುಟವು ತೆಗೆದುಕೊಂಡ ನಿರ್ಧಾರವನ್ನು ರಿಜಿಸ್ಟ್ರಾರ್‌ ಪಾಲಿಸಿದ್ದಾರೆ. ಈ ನಿರ್ಧಾರವು ಸಂಬಂಧಪಟ್ಟ ಪ್ರಾಧಿಕಾರದಿಂದ ಅನುಮೋದನೆ ಪಡೆಯುವ ನಿಬಂಧನೆಗೆ ಒಳಪಟ್ಟಿದೆ ಎಂಬುದನ್ನೂ ರಿಜಿಸ್ಟ್ರಾರ್ ತಿಳಿಸಿದ್ದಾರೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತೋಟಗಾರಿಕೆ ಇಲಾಖೆ ಅಸಮಾಧಾನ: ಉದ್ಯಾನದಲ್ಲಿ ಕಟ್ಟಡ ನಿರ್ಮಾಣಕ್ಕೆ ತೋಟಗಾರಿಕೆ ಇಲಾಖೆ ಅಧಿಕಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನೇತೃತ್ವದ ತೋಟಗಾರಿಕೆ ಇಲಾಖೆಯ ಸಮಿತಿಯು ಈ ಕುರಿತು ಸಭೆ ನಡೆಸಿದೆ. ಉದ್ಯಾನದಲ್ಲಿನ ಕಟ್ಟಡಗಳ ನವೀಕರಣ ಪ್ರಸ್ತಾವಗಳ ಪುನರ್‌ ಪರಿಶೀಲನೆಗಾಗಿ ಈ ಸಮಿತಿ ರಚಿಸಿದ್ದು, ಕೋರ್ಟ್‌ನ ಆದೇಶಕ್ಕೆ ಕೆಲವು ಅಧಿಕಾರಿಗಳು ಅತೃಪ್ತಿ ವ್ಯಕ್ತಪಡಿಸಿದ್ದಾರೆ. ಈಗಿರುವ ಕಟ್ಟಡದ ವಿಸ್ತೀರ್ಣಕ್ಕಿಂತಲೂ ಹೆಚ್ಚುವರಿ ಸ್ಥಳವನ್ನು ಹೊಸ ಕಟ್ಟಡಕ್ಕೆ ಬಳಸುವ ಅಂಶ ಸಭೆಯ ನಿರ್ಣಯದಲ್ಲಿದೆ. ಉತ್ತರದಿಂದ ದಕ್ಷಿಣಕ್ಕೆ 40.90 ಮೀಟರ್‌ ಹಾಗೂ ಪೂರ್ವದಿಂದ ಪಶ್ಚಿಮಕ್ಕೆ 26 ಮೀಟರ್‌ ಹೆಚ್ಚುವರಿ ಸ್ಥಳ ಸೇರ್ಪಡೆಯಾಗಲಿದೆ. ಇದರಿಂದ ವಿಧಾನಸೌಧದ ಸುರಕ್ಷತೆಗೆ ಅಪಾಯ ಎದುರಾಗುವುದಲ್ಲದೆ, ಪರಿಸರದ ಮೇಲೆ ಗಂಭೀರ ಪರಿಣಾಮಗಳು ಉಂಟಾಗಲಿವೆ ಎಂದು ಕೆಲವು ಅಧಿಕಾರಿಗಳು ಎಚ್ಚರಿಸಿದರು. 

ಹೊಸ ಕಟ್ಟಡವು ವಿಧಾನಸೌಧದ ಎರಡನೇ ಮಹಡಿಗಿಂತ ಹೆಚ್ಚು ಎತ್ತರವನ್ನು ಹೊಂದಿರಬಾರದು ಎಂದೂ ತೋಟಗಾರಿಕೆ ಇಲಾಖೆಯು ಹೇಳಿದೆ.

ಈ ಕುರಿತು ಪ್ರತಿಕ್ರಿಯಿಸಿದ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ. ವಿಜಯ್‌ ಭಾಸ್ಕರ್‌, ‘ಉದ್ಯಾನದಲ್ಲಿ ಹೊಸ ಕಟ್ಟಡ ನಿರ್ಮಿಸುವ ನಿರ್ಧಾರಕ್ಕೆ ಕಳೆದ ಸೆ.23ರಂದು ಸಚಿವ ಸಂಪುಟ ಸಭೆಯು ಒಪ್ಪಿಗೆ ನೀಡಿದೆ’ ಎಂದರು.

‘ಉದ್ಯಾನದ ಆಸುಪಾಸಿನಲ್ಲಿರುವ ಪ್ರಧಾನ ಅಂಚೆ ಕಚೇರಿ ಹಾಗೂ ಬಿಎಸ್‌ಎನ್‌ಎಲ್‌ ಕಟ್ಟಡಗಳ ಎತ್ತರ ಪರಿಗಣಿಸಿದ ಬಳಿಕವೇ, ತೀರ್ಮಾನ ತೆಗೆದುಕೊಳ್ಳಲಾಯಿತು’ ಎಂದರು.

ಪ್ರತಿಭಟನೆ ಇಂದು
ಕಬ್ಬನ್‌ ಉದ್ಯಾನದಲ್ಲಿ ಕರ್ನಾಟಕ ಸರ್ಕಾರಿ ವಿಮಾ ಇಲಾಖೆ (ಕೆಜಿಐಡಿ) ಏಳು ಅಂತಸ್ತಿನ ಕಟ್ಟಡ ನಿರ್ಮಿಸುವುದನ್ನು ವಿರೋಧಿಸಿ ಇದೇ 3ರಂದು ಬೆಳಿಗ್ಗೆ 7ರಿಂದ ಕಬ್ಬನ್‌ ಉದ್ಯಾನ ನಡಿಗೆದಾರರ ಸಂಘವು (ಸಿಪಿಡಬ್ಲ್ಯುಎ) ಉದ್ಯಾನದ ಮಹಾರಾಜ ಪ್ರತಿಮೆ ಎದುರು ಪ್ರತಿಭಟನೆ ಹಮ್ಮಿಕೊಂಡಿದೆ.
 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು