ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಅಭಿವೃದ್ಧಿಗೆ ಅಡ್ಡಿಪಡಿಸಿದರೆ ಕಾನೂನು ಕ್ರಮ’

ಬಸವೇಶ್ವರ ವೃತ್ತ– ಹೆಬ್ಬಾಳ ಎತ್ತರಿಸಿದ ರಸ್ತೆ ನಿರ್ಮಿಸಿಯೇ ಸಿದ್ಧ: ಉಪಮುಖ್ಯಮಂತ್ರಿ ಪರಮೇಶ್ವರ
Last Updated 28 ಜನವರಿ 2019, 19:41 IST
ಅಕ್ಷರ ಗಾತ್ರ

ಬೆಂಗಳೂರು: ‘ಅಭಿವೃದ್ಧಿ ಕೆಲಸಗಳಿಗೆ ಯಾರೇ ಅಡ್ಡಿಪಡಿಸಿದರೂ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ’ ಎಂದು ಉಪಮುಖ್ಯಮಂತ್ರಿ ಜಿ.ಪರಮೇಶ್ವರ ಎಚ್ಚರಿಕೆ ನೀಡಿದರು.

ಬಸವೇಶ್ವರ ವೃತ್ತದಿಂದ ಹೆಬ್ಬಾಳ ಮೇಲ್ಸೇತುವೆವರೆಗೆ ಎತ್ತರಿಸಿದ ರಸ್ತೆ ನಿರ್ಮಿಸುವ ಯೋಜನೆಯನ್ನು ಸಮರ್ಥಿಸಿಕೊಳ್ಳುವ ವೇಳೆ ಅವರು ಈ ಮಾತು ಹೇಳಿದರು.

ಶಂಕರಮಠ ವಾರ್ಡ್‌ನಲ್ಲಿ ವಿವಿಧ ಕಾಮಗಾರಿಗಳನ್ನುಸೋಮವಾರ ಉದ್ಘಾಟಿಸಿದ ಬಳಿಕ ಮಾತನಾಡಿದ ಅವರು ‘ಯಾರೋ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎಂಬ ಕಾರಣಕ್ಕೆ ಈ ಯೋಜನೆ ಕೈಬಿಡುವ ಪ್ರಶ್ನೆಯೇ ಇಲ್ಲ’ ಎಂದು ಸ್ಪಷ್ಟಪಡಿಸಿದರು.

‘ಇದು ಕೂಡ ಎತ್ತರಿಸಿದ ರಸ್ತೆಯೇ. ಆದರೆ, ಇದಕ್ಕೆ ಸ್ವಲ್ಪ ಪ್ರಮಾಣದಲ್ಲಿ ಉಕ್ಕು ಬಳಸಲಾಗುತ್ತದೆ. ಹಾಗಾಗಿ ಇದನ್ನು ಉಕ್ಕಿನ ಸೇತುವೆ ಎಂದು ಕರೆಯಲಾಗುತ್ತಿದೆ. ಈ ಯೋಜನೆಯ ಎಲ್ಲ ವಿವರಗಳನ್ನು ಪಾರದರ್ಶಕವಾಗಿ ಜನರ ಮುಂದಿಡಲಿದ್ದೇವೆ. ಇದರಲ್ಲಿ ಭ್ರಷ್ಟಾಚಾರವಿದ್ದರೆ ಜನರೇ ಹೇಳಲಿ. ಯೋಜನೆಯಲ್ಲಿ ಏನೇ ವ್ಯತ್ಯಾಸವಿದ್ದರೂ ನೇರವಾಗಿ ಪ್ರಶ್ನಿಸಲಿ’ ಎಂದರು.

‘ಬೆಂಗಳೂರು ಕ್ಷಿಪ್ರಗತಿಯಲ್ಲಿ ಬೆಳೆಯುತ್ತಿರುವ ನಗರ. ಇದನ್ನು ಅಂತರರಾಷ್ಟ್ರೀಯ ಮಟ್ಟದ ನಗರವನ್ನಾಗಿ ರೂಪಿಸುವುದು ಸರ್ಕಾರದ ಉದ್ದೇಶ. ನಗರವನ್ನು ಐದು ವರ್ಷಗಳಲ್ಲಿ ಸಮಗ್ರ ಅಭಿವೃದ್ಧಿಗೊಳಿಸಲು ರೂಪರೇಷೆ ತಯಾರಿಸುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಇದಕ್ಕಾಗಿ ₹ 50 ಸಾವಿರ ಕೋಟಿ ಮೀಸಲಿಡಲಿದ್ದೇವೆ. ಒಟ್ಟು ₹ 25 ಸಾವಿರ ಕೋಟಿ ವೆಚ್ಚದಲ್ಲಿ ಎರಡು ಎಲಿವೇಟೆಡ್‌ ಕಾರಿಡಾರ್‌ಗಳನ್ನು ನಿರ್ಮಿಸಲಿದ್ದೇವೆ’ ಎಂದು ತಿಳಿಸಿದರು.

‘ನಗರದಲ್ಲಿ ಕುಡಿಯುವ ನೀರು ಪೂರೈಕೆಗೆ ಬೇರೆ ಜಲಮೂಲಗಳ ಹುಡುಕಾಟ ನಡೆಯುತ್ತಿದೆ. ಕಾವೇರಿ ಐದನೇ ಹಂತ ಪೂರ್ಣಗೊಂಡ ಬಳಿಕ ನಗರಕ್ಕೆ ಆ ನದಿಯ ನೀರು ತರಲು ಸಾಧ್ಯವಿಲ್ಲ. ಹೀಗಾಗಿ ಪರ್ಯಾಯ ಕಂಡುಕೊಳ್ಳುವುದು ಅನಿವಾರ್ಯ’ ಎಂದರು.

‘ನಗರದಲ್ಲಿ ಎಲ್‌ಇಡಿ ಬಲ್ಬ್‌ಗಳ ಅಳವಡಿಕೆಗೆ ಕಳೆದ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ. ಇದರಿಂದ ಪಾಲಿಕೆಗೆ ತಿಂಗಳಿಗೆ ₹ 18 ಕೋಟಿ ವಿದ್ಯುತ್‌ ಬಿಲ್‌ ಉಳಿತಾಯವಾಗಲಿದೆ’ ಎಂದು ಮಾಹಿತಿ ನೀಡಿದರು.

75 ಕೋಟಿ ವೆಚ್ಚದ ಕಾಮಗಾರಿಗೆ ಚಾಲನೆ
ಶಂಕರ ಮಠ ವರ್ಡ್‌ನಲ್ಲಿ ಒಟ್ಟು 75 ಕೋಟಿ ವೆಚ್ಚದ ಕಾಮಗಾರಿಗಳನ್ನು ಜಿ.ಪರಮೇಶ್ವರ ಅವರು ಉದ್ಘಾಟಿಸಿದರು.

ಕಿರ್ಲೋಸ್ಕರ್‌ ಕಾಲೊನಿಯ ಉದಯರವಿ ಉದ್ಯಾನದಲ್ಲಿ ಕಿರ್ಲೋಸ್ಕರ್‌ ಕಾರ್ಖಾನೆಯ ಮಾಲೀಕ ರವಿ ರ್ಲೋಸ್ಕರ್‌ ಅವರ ಪ್ರತಿಮೆಯನ್ನು ಅನಾವರಣ ಮಾಡಲಾಯಿತು. ಇದೇ ಕಾಲೊನಿಯಲ್ಲಿ ಬ್ಯಾಡ್ಮಿಂಟನ್‌ ಕೋರ್ಟ್‌ ಹಾಗೂ ಹೊರಾಂಗಣ ವ್ಯಾಯಾಮಸಲಕರಣೆ ಮತ್ತು ಮಕ್ಕಳಆಟೋಪಕರಣಗಳನ್ನುಲೋಕಾರ್ಪಣೆಗೊಳಿಸಲಾಯಿತು.

ವಾರ್ಡ್‌ ಪಾಲಿಕೆ ಸದಸ್ಯರ ಕಚೇರಿ, ಬೆಂಗಳೂರು ವನ್‌ ಕೇಂದ್ರ ಹಾಗೂ ಹೊಲಿಗೆ ತರಬೇತಿ ಕೇಂದ್ರದ ಕಟ್ಟಡವನ್ನು ಉದ್ಘಾಟಿಸಲಾಯಿತು.

ಶುದ್ಧ ಕುಡಿಯುವ ನೀರಿನ ಘಟಕ, ಟೀಚರ್ಸ್‌ ಕಾಲೊನಿಯಲ್ಲಿ ವ್ಯಾಯಾಮ ಪರಿಕರಗಳು ಹಾಗೂ ಕೆಂಪೇಗೌಡ ಆಟದ ಮೈದಾನದಲ್ಲಿ ಟೆನ್ಸಿಲ್‌ ಚಾವಣಿವನ್ನು ಸಚಿವರು ಉದ್ಘಾಟಿಸಿದರು.

‘ಆಸ್ತಿ ತೆರಿಗೆ ಕಟ್ಟದವರ ಹೆಸರು ಬಹಿರಂಗ’

‘ನಗರದ ಅಭಿವೃದ್ದಿಗೆ ಆಸ್ತಿ ತೆರಿಗೆ ಸಂಗ್ರಹವೂ ಬಹಳ ಮುಖ್ಯ. ತೆರಿಗೆ ಬಾಕಿ ಉಳಿಸಿಕೊಂಡವರ ಹೆಸರುಗಳನ್ನು ಬಹಿರಂಗಪಡಿಸಲಾಗುತ್ತದೆ’ ಎಂದು ಜಿ.ಪರಮೇಶ್ವರ ಹೇಳಿದರು.

‘ಜನ ತೆರಿಗೆ ಕಟ್ಟದಿದ್ದರೆ ಪಾಲಿಕೆಯನ್ನು ನಿರ್ವಹಿಸುವುದಾದರೂ ಹೇಗೆ. ಹೀಗಾಗಿ ತೆರಿಗೆ ವಂಚಿತರ ಮೇಲೆ ಕಠಿಣ ಕ್ರಮಕ್ಕೆ ಮುಂದಾಗಿದ್ದೇವೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT