ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಅಧ್ವಾನವಾದ ಜೆ.ಪಿ. ಉದ್ಯಾನ: 1 ವರ್ಷದಿಂದ ಸ್ಥಗಿತಗೊಂಡ ಅಭಿವೃದ್ಧಿ ಕಾಮಗಾರಿಗಳು

Published 3 ಏಪ್ರಿಲ್ 2024, 0:20 IST
Last Updated 3 ಏಪ್ರಿಲ್ 2024, 0:20 IST
ಅಕ್ಷರ ಗಾತ್ರ

ಬೆಂಗಳೂರು: ಮುರಿದಿರುವ ಆಟಿಕೆ ಸಾಮಾನುಗಳು, ಬತ್ತಿದ ಕೆರೆ, ಒಣಗಿದ ಗಿಡಮರಗಳು, ಅಲ್ಲಲ್ಲಿ ಕಿತ್ತುಹೋದ ನಡಿಗೆ ಪಥ, ನೆಪಮಾತ್ರಕ್ಕೆ ಇರುವ ಕಸದ ಬುಟ್ಟಿಗಳು...

ಇದು ಜೀವವೈವಿಧ್ಯದ ತಾಣವಾಗಿದ್ದ ಮತ್ತಿಕೆರೆಯ ಜಯಪ್ರಕಾಶ ನಾರಾಯಣ (ಜೆ.ಪಿ) ಉದ್ಯಾನ ದುಃಸ್ಥಿತಿ. ಸದ್ಯ ಈ ಉದ್ಯಾನ ತನ್ನ ಹಳೆಯ ವೈಭವವನ್ನು ಕಳೆದುಕೊಂಡಿದೆ. ಶುದ್ಧಗಾಳಿಯೊಂದಿಗೆ ವಾಯುವಿಹಾರ ಮಾಡುತ್ತಿದ್ದ ಜನರೀಗ ಮೂಗು ಮುಚ್ಚಿಕೊಂಡು ಓಡಾಡುವ ಸ್ಥಿತಿ ನಿರ್ಮಾಣವಾಗಿದೆ. ಉದ್ಯಾನದ ತುಂಬೆಲ್ಲ ದೂಳು ತುಂಬಿಕೊಂಡಿದೆ.

ಉದ್ಯಾನದ ಒಳಗೆ ಕಾಲಿಟ್ಟ ಕೂಡಲೇ ಎದುರುಗೊಳ್ಳುತ್ತಿದ್ದ ದಟ್ಟ ಹಸಿರು ಈಗ ಕಣ್ಮರೆಯಾಗಿದೆ. ಪ್ರಾಣಿಗಳು ಮತ್ತು ಜಾನಪದ ಸಂಸ್ಕೃತಿಯನ್ನು ಪ್ರತಿಬಿಂಬಿಸುತ್ತಿದ್ದ ಕಲಾಕೃತಿಗಳಿಗೂ ಮಣ್ಣು ಮೆತ್ತಿಕೊಂಡಿದೆ. ಸಂಗೀತ ಕಾರಂಜಿ ಹಾಳಾಗಿದೆ.

ಜೆ.ಪಿ. ಉದ್ಯಾನದ ಮುಖ್ಯ ದ್ವಾರದ ಮುಂಭಾಗದಲ್ಲಿರುವ ಪುಟಾಣಿ ರೈಲು ‌ಇನ್ನೂ ಹಳಿಗೆ ಇಳಿದಿಲ್ಲ. ಉದ್ಯಾನದಲ್ಲಿ ಹಳಿಗಳನ್ನು ಜೋಡಿಸುವ ಕೆಲಸ ನಡೆಯುತ್ತಿರುವ ಕಾರಣ ಚಿಣ್ಣರಿಗೆ ಇದರ ಸೌಲಭ್ಯ ಸಿಗುತ್ತಿಲ್ಲ.

‘85 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಜೆ.ಪಿ. ಉದ್ಯಾನವನ್ನು 2018–19ರಲ್ಲಿ ‘ಮುಖ್ಯಮಂತ್ರಿಗಳ ನಗರೋತ್ಥಾನ’ ಕ್ರಿಯಾ ಯೋಜನೆಯಲ್ಲಿ ₹37.50 ಕೋಟಿ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿಯನ್ನು ಪ್ರಾರಂಭಿಸಲಾಗಿತ್ತು. ಇದರಲ್ಲಿ ಪಾದಚಾರಿ ಮಾರ್ಗ, ಕೆರೆ ಅಭಿವೃದ್ಧಿಯ, ಕಲ್ಯಾಣಿ ನಿರ್ಮಾಣ, ಸಾರ್ವಜನಿಕರ ಮನೋರಂಜನೆಗೆ ಪುಟಾಣಿ ರೈಲು ಮಾರ್ಗ, ಸೇರಿದಂತೆ ಉದ್ಯಾನದ ವಿದ್ಯುದೀಕರಣ ಕಾಮಗಾರಿಗಳನ್ನು ಕೈಗೊಳ್ಳಲಾಗಿದೆ’ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದರು.

ನಾಲ್ಕೈದು ವರ್ಷಗಳ ಹಿಂದೆಯೇ ಕಾಮಗಾರಿಗಳನ್ನು ಪ್ರಾರಂಭಿಸಿದ್ದರೂ, ಇನ್ನೂ ಮುಗಿದಿಲ್ಲ. ಸದ್ಯ ಲೋಕಸಭಾ ಚುನಾವಣೆ ನೀತಿಸಂಹಿತೆ ಜಾರಿಯಲ್ಲಿರುವ ಕಾರಣ ಎಲ್ಲ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ. ಉದ್ಯಾನದ ವಿವಿಧ ಭಾಗಗಳಲ್ಲಿ ಹಳೆಯ ಉಪಕರಣಗಳು ಬಿದ್ದಿದ್ದು, ಉದ್ಯಾನದ ಸೌಂದರ್ಯಕ್ಕೆ ಕಪ್ಪುಚುಕ್ಕೆ ಆಗಿದೆ. ಶಿಲಾವನ ಭಾಗದಲ್ಲಿ ಒಳಚರಂಡಿ ಕಾಮಗಾರಿ ನಡೆಯುತ್ತಿದ್ದು, ಕೊಳಚೆ ನೀರು ಕಟ್ಟಿಕೊಂಡು ಇಡೀ ಪ್ರದೇಶ ಗಬ್ಬೆದ್ದು ನಾರುತ್ತಿದೆ.

‘ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ, ಈಜುಕೊಳ ಮತ್ತು ಗೋಪುರದಲ್ಲಿರುವ ಗಡಿಯಾರ ಕಾರ್ಯನಿರ್ವಹಿಸುತ್ತಿಲ್ಲ. ನಿರ್ವಹಣೆ ಇಲ್ಲದ ಶೌಚಾಲಯಗಳು ಗಬ್ಬೆದ್ದು ನಾರುತ್ತಿವೆ. ಮೊದಲು ಜೆ.ಪಿ. ಉದ್ಯಾನವೆಂದರೆ ಮಕ್ಕಳಿಗೆ ಅಚ್ಚುಮೆಚ್ಚಾಗಿತ್ತು. ಇಲ್ಲಿದ್ದ ಜೋಕಾಲಿ, ಜಾರುಬಂಡೆ, ಆಟಿಕೆಗಳು ಮತ್ತು ಸಂಗೀತ ಕಾರಂಜಿ ಮಕ್ಕಳನ್ನು ಆಕರ್ಷಿಸಿತ್ತಿದ್ದವು. ಈಗ ಉದ್ಯಾನದಲ್ಲಿದ್ದ ಎಲ್ಲ ಆಟಿಕೆಗಳನ್ನು ಕಿತ್ತು ಹಾಕಲಾಗಿದೆ’ ಎಂದು ಮತ್ತೀಕೆರೆಯ ನಿವಾಸಿ ರಾಹುಲ್‌ ಬೇಸರ ವ್ಯಕ್ತಪಡಿಸಿದರು.

ಜೆ.ಪಿ. ಉದ್ಯಾನದಲ್ಲಿರುವ ಕೆರೆ ಬತ್ತಿ ಹೋಗಿರುವುದು 
ಜೆ.ಪಿ. ಉದ್ಯಾನದಲ್ಲಿರುವ ಕೆರೆ ಬತ್ತಿ ಹೋಗಿರುವುದು 
ಅರ್ಧಕ್ಕೆ ನಿಂತ ರೈಲು ಹಳಿಯ ಕಾಮಗಾರಿ
ಅರ್ಧಕ್ಕೆ ನಿಂತ ರೈಲು ಹಳಿಯ ಕಾಮಗಾರಿ

‘ಉದ್ಯಾನದಲ್ಲಿ ಸ್ವಚ್ಛತೆ ಕಣ್ಮರೆ’

ಜೆ.ಪಿ. ಉದ್ಯಾನದಲ್ಲಿದ್ದ ಸ್ವಚ್ಛತಾ ಸಿಬ್ಬಂದಿ ಸಂಖ್ಯೆ ಕಡಿತಗೊಳಿಸಲಾಗಿದೆ. ಇದರಿಂದ ಉದ್ಯಾನದಲ್ಲಿನ ಸ್ವಚ್ಛತೆಯೂ ಕಣ್ಮರೆ ಆಗಿದೆ’ ಎಂದು ಜೆ.ಪಿ. ಪಾರ್ಕ್‌ ವೆಲ್ಫೇರ್‌ ಅಸೋಸಿಯೇಷನ್‌ ಸದಸ್ಯ ಪಿ.ವಿ. ಕೊಣ್ಣೂರು ದೂರಿದರು. ‘ಉದ್ಯಾನದಲ್ಲಿದ್ದ ಎಲ್ಲ ಆಟಿಕೆಗಳನ್ನು ಕಿತ್ತು ಹಾಕಲಾಗಿದೆ. ಇದರಿಂದ ಉದ್ಯಾನಕ್ಕೆ ಬರುತ್ತಿದ್ದ ಮಕ್ಕಳ ಸಂಖ್ಯೆ ಕಡಿಮೆ ಆಗಿದೆ. ಕಳೆದ ಒಂದು ವರ್ಷದಿಂದ ಉದ್ಯಾನದಲ್ಲಿ ನಡೆಯುತ್ತಿರುವ ಕಾಮಗಾರಿಗಳನ್ನು ಸ್ಥಗಿತಗೊಳಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT