ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | ಲಾರಿ ಚಕ್ರ ಸ್ಫೋಟ: ಚಹಾ ಕುಡಿಯುತ್ತಿದ್ದ ಕಾರ್ಮಿಕ ಸಾವು

* ಕೆ.ಆರ್. ಪುರ ಸಂಚಾರ ಠಾಣೆ * ಕಾಂಕ್ರೀಟ್ ಮಿಕ್ಸರ್ ಲಾರಿ ಚಾಲಕ ಪರಾರಿ
Published 26 ಜುಲೈ 2023, 0:30 IST
Last Updated 26 ಜುಲೈ 2023, 0:30 IST
ಅಕ್ಷರ ಗಾತ್ರ

ಬೆಂಗಳೂರು: ಕೆ.ಆರ್. ಪುರ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಕಾಂಕ್ರೀಟ್ ಮಿಕ್ಸರ್ ಲಾರಿಯ ಚಕ್ರ ಸ್ಫೋಟಗೊಂಡು ಚಕ್ರದಿಂದ ಹಾರಿದ ಕಬ್ಬಿಣದ ರಿಂಗ್ ತಲೆಗೆ ಬಡಿದು ಕಾರ್ಮಿಕ ಅರೂಫ್ ಹಲ್ದಾರ್ (38) ಸ್ಥಳದಲ್ಲೇ ಮೃತಪಟ್ಟಿದ್ದಾರೆ.

‘ಪಶ್ಚಿಮ ಬಂಗಾಳದ ಅರೂಫ್ ಕಟ್ಟಡ ನಿರ್ಮಾಣ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದರು. ಪತ್ನಿ ಹಾಗೂ ಮಕ್ಕಳ ಜೊತೆ ನೆಲೆಸಿದ್ದರು’ ಎಂದು ಕೆ.ಆರ್.‍ಪುರ ಸಂಚಾರ ಪೊಲೀಸರು ಹೇಳಿದರು.

‘ಸ್ಫೋಟದ ನಂತರ ಲಾರಿ ಸ್ಥಳದಲ್ಲೇ ಬಿಟ್ಟು ಚಾಲಕ ಪರಾರಿಯಾಗಿದ್ದಾನೆ. ಆತನ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಲಾರಿ ಜಪ್ತಿ ಮಾಡಲಾಗಿದ್ದು, ಚಾಲಕನ ಪತ್ತೆಗೆ ತನಿಖೆ ಮುಂದುವರಿಸಲಾಗಿದೆ’ ಎಂದು ತಿಳಿಸಿದರು.

ಚಹಾ ಅಂಗಡಿ ಎದುರು ಸಾವು: ‘ಅಲ್ಟಿಮಾ ಕಾನ್‌ಮಿಕ್ಸ್ (ಇಂಡಿಯಾ) ಕಂಪನಿಗೆ ಸೇರಿದ್ದ ಕಾಂಕ್ರೀಟ್ ಮಿಕ್ಸರ್ ಲಾರಿ (ಕೆಎ 53 ಡಿ 0963), ದೊಡ್ಡ ಬಾಣಸವಾಡಿ ರಸ್ತೆಯಲ್ಲಿ ಮಂಗಳವಾರ ಮಧ್ಯಾಹ್ನ ಹೊರಟಿತ್ತು. ಇದೇ ರಸ್ತೆಯಲ್ಲಿರುವ ‘ಶ್ರೀ ದುರ್ಗಾ ಚಹಾ ಅಂಗಡಿ’ ಎದುರು ಅರೂಫ್‌ ಚಹಾ ಕುಡಿಯುತ್ತ ಕುಳಿತಿದ್ದರು’ ಎಂದು ಪೊಲೀಸರು ಹೇಳಿದರು.

‘ಚಾಲಕ, ಲಾರಿಯನ್ನು ಅತೀ ವೇಗ ಹಾಗೂ ನಿರ್ಲಕ್ಷ್ಯದಿಂದ ಚಲಾಯಿಸಿದ್ದ. ಲಾರಿಯ ಮುಂಭಾಗದ ಎಡಬದಿಯ ಚಕ್ರ ಏಕಾಏಕಿ ಸ್ಫೋಟಗೊಂಡು ದೊಡ್ಡ ಶಬ್ದ ಬಂದಿತ್ತು. ಚಕ್ರದಿಂದ ಹಾರಿಹೋಗಿದ್ದ ಕಬ್ಬಿಣದ ರಿಂಗ್, ಅಂಗಡಿ ಎದುರು ಕುಳಿತಿದ್ದ ಅರೂಫ್‌ ತಲೆಗೆ ಬಡಿದಿತ್ತು. ತೀವ್ರ ಪೆಟ್ಟು ಬಿದ್ದು ತಲೆ ಇಬ್ಭಾಗವಾಗಿತ್ತು. ಕುಸಿದು ಬಿದ್ದ ಅರೂಫ್, ತೀವ್ರ ರಕ್ತಸ್ರಾವದಿಂದಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕಂಪನಿ ಆಡಳಿತ ಮಂಡಳಿ ಸದಸ್ಯರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲಾಗುವುದು’ ಎಂದು ಹೇಳಿದರು.

ವಿಶ್ರಾಂತಿಗೆಂದು ಬಂದಿದ್ದ ಕಾರ್ಮಿಕ: ‘ಅರೂಫ್ ಅವರು ಮಂಗಳವಾರ ಬೆಳಿಗ್ಗೆ ಎಂದಿನಂತೆ ಕಟ್ಟಡ ನಿರ್ಮಾಣ ಕೆಲಸಕ್ಕೆ ಹಾಜರಾಗಿದ್ದರು. ಮಧ್ಯಾಹ್ನ ಊಟದ ಸಮಯದಲ್ಲಿ ವಿಶ್ರಾಂತಿ ಪಡೆಯುತ್ತಿದ್ದರು. ಚಹಾ ಕುಡಿಯಲೆಂದು ಅಂಗಡಿಗೆ ಬಂದಿದ್ದಾಗಲೇ ಈ ಅವಘಡ ಸಂಭವಿಸಿದೆ’ ಎಂದು ತಿಳಿಸಿದರು.

ಕಾಂಕ್ರೀಟ್ ಮಿಕ್ಸರ್ ಲಾರಿಯ ಚಕ್ರ ಸ್ಪೋಟಗೊಂಡಿರುವುದು
ಕಾಂಕ್ರೀಟ್ ಮಿಕ್ಸರ್ ಲಾರಿಯ ಚಕ್ರ ಸ್ಪೋಟಗೊಂಡಿರುವುದು

ಸ್ಥಳೀಯರಲ್ಲಿ ಆತಂಕ: ‘ಈ ಅವಘಡದಿಂದಾಗಿ ಸ್ಥಳೀಯರಲ್ಲಿ ಆತಂಕ ಮೂಡಿದೆ. ಸಾವು ಯಾವ ಕಡೆಯಿಂದ ಹೇಗೆ ಬರುತ್ತದೆ ಎಂದು ಗೊತ್ತಾಗುವುದಿಲ್ಲ. ಈ ಭಾಗದಲ್ಲಿ ಕಾಂಕ್ರೀಟ್ ಮಿಕ್ಸರ್‌ ಲಾರಿಗಳು ಹೆಚ್ಚಾಗಿ ಸಂಚರಿಸುತ್ತವೆ. ಚಾಲಕರ ನಿರ್ಲಕ್ಷ್ಯದಿಂದ ಅಪಘಾತಗಳು ಮೇಲಿಂದ ಮೇಲೆ ಸಂಭವಿಸುತ್ತಿವೆ. ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು’ ಎಂದು ಸ್ಥಳೀಯರು ಆಗ್ರಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT