ಮಂಗಳವಾರ, ಜೂನ್ 15, 2021
26 °C
ಸಂಕಷ್ಟದಲ್ಲಿ ಹಾಲಿನ ವಿತರಕರು *ಸರ್ಕಾರದಿಂದ ವಿಶೇಷ ನೆರವಿಗೆ ಮನವಿ

ಕೋವಿಡ್: ಬೆಂಗಳೂರು ನಗರದಲ್ಲಿ ಹಾಲು ವಿತರಣೆ ಕುಸಿತ

ಮನೋಹರ್ ಎಂ. Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಲಾಕ್‌ಡೌನ್‌ ಅವಧಿಯಲ್ಲಿ ಅಗತ್ಯ ಸೇವೆಯಡಿ ನಗರದಾದ್ಯಂತ ಕಾರ್ಯನಿರ್ವಹಿಸುತ್ತಿರುವ ಹಾಲಿನ ವಿತರಕರು ಒಂದು ವರ್ಷದಿಂದ ಹಾಲು ಸಮರ್ಪಕವಾಗಿ ವಿತರಣೆಯಾಗದೆ ಸಂಕಷ್ಟದಲ್ಲಿ ಸಿಲುಕಿದ್ದಾರೆ.

ಸರ್ಕಾರ ವಿವಿಧ ವಲಯಗಳ ದುಡಿಯುವ ವರ್ಗಕ್ಕೆ ನೀಡಿರುವಂತೆ ಹಾಲಿನ ವಿತರಕರಿಗೂ ವಿಶೇಷ ಪ್ಯಾಕೇಜ್ ನೀಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ. 

‘ಹಾಲು ಪ್ರತಿನಿತ್ಯ ಬಳಸುವ ಪ್ರಮುಖ ಉತ್ಪನ್ನ. ಹಾಗಾಗಿ, ಹಾಲಿಗೆ ಬೇಡಿಕೆ ಕಡಿಮೆಯಾಗುತ್ತಿರಲಿಲ್ಲ. ಕೊರೊನಾ ಬಂದ ನಂತರ ಹಲವರು ನಗರ ತೊರೆದಿದ್ದಾರೆ. ಇದರಿಂದ ಒಂದು ವರ್ಷದಿಂದ ಹಾಲಿನ ವಿತರಣೆ ಕಡಿಮೆಯಾಗಿದೆ’ ಎಂದು ಚಾಮರಾಜಪೇಟೆಯ ಹಾಲಿನ ವಿತರಕ ಶಿವಣ್ಣ ತಿಳಿಸಿದರು.

‘ಲಾಕ್‌ಡೌನ್ ಅವಧಿಯಲ್ಲೂ ಹಾಲಿನ ವ್ಯಾಪಾರಕ್ಕೆ ಹಾಗೂ ವಿತರಣೆಗೆ ಯಾವುದೇ ಅಡೆತಡೆಗಳಿಲ್ಲ. ಆದರೆ, ಹಾಲು ತರಿಸಿಕೊಳ್ಳುವವರು ಕಡಿಮೆಯಾಗಿದ್ದಾರೆ. ಸಂಜೆವರೆಗೂ ತೆರೆದಿರುವ ಬೂತ್‌ಗೆ ಬಂದು ಹಾಲು ಖರೀದಿಸಲು ಗ್ರಾಹಕರಿಗೆ ನಿರ್ಬಂಧವಿದೆ’ ಎಂದು ಬೇಸರ ವ್ಯಕ್ತಪಡಿಸಿದರು.

‘ಒಂದು ಬೂತ್‌ನಲ್ಲಿ ವಿತರಕರು ಹಾಗೂ ಮನೆ ಮನೆಗೆ ಹಾಲು ಹಂಚುವವರು ಸೇರಿದಂತೆ ಕನಿಷ್ಠ ಮೂರು ಮಂದಿ ಕೆಲಸ ಮಾಡುತ್ತಾರೆ. ಕೊರೊನಾ ನಂತರ ಮೊದಲಿನಷ್ಟೇ ಪ್ರಮಾಣದಲ್ಲಿ ಹಾಲು ಖರೀದಿಯಾಗುತ್ತಿಲ್ಲ. ಇದರಿಂದ ಕೆಲಸಗಾರರಿಗೆ ಸಂಬಳ ನೀಡಲೂ ಹಣ ಸಾಕಾಗುತ್ತಿಲ್ಲ’ ಎಂದು ಮಲ್ಲೇಶ್ವರದ ಹಾಲಿನ ವಿತರಕ ಜ್ಞಾನೇಗೌಡ ಅಳಲು ತೋಡಿಕೊಂಡರು. 

‘ಬೂತ್‌ನಲ್ಲಿ ಹಾಲನ್ನು ಶೇಖರಿಸಿ ಇಡುವ ವ್ಯವಸ್ಥೆ ಹಾಗೂ ವಿದ್ಯುತ್‌ ಬಿಲ್ ಎಂದು ತಿಂಗಳಿಗೆ ಕನಿಷ್ಠ ₹1,500 ಖರ್ಚು ಬರುತ್ತದೆ. ಒಂದು ವರ್ಷದಿಂದ ಹಾಲಿನ ಬೂತ್‌ ನಷ್ಟದಲ್ಲೇ ಸಾಗುತ್ತಿದೆ. ಸರ್ಕಾರ ವಿತರಕರು ಹಾಗೂ ಮನೆಗಳಿಗೆ ಹಾಲು ಹಂಚುವ ಹುಡುಗರಿಗೆ ಸಹಾಯಧನ ನೀಡಿದರೆ ಅನುಕೂಲ’ ಎಂದು ಮನವಿ ಮಾಡಿದರು.

‘ಎರಡನೇ ಅಲೆ ಬಂದ ನಂತರ ಮನೆಗಳಿಗೆ ತೆರಳಿ ಹಾಲು ವಿತರಿಸುವುದು ಸವಾಲಾಗಿದೆ. ವಿತರಣೆಗೆಂದು ಹೊರಗಡೆ ಸಂಚರಿಸುವ ಸಂದರ್ಭದಲ್ಲಿ ಸೋಂಕು ಹರಡುವ ಭೀತಿಯಲ್ಲೇ ಕೆಲಸ ಮಾಡುತ್ತೇವೆ. ಮನೆಯಿಂದ ಹೊರಗೆ ಹೋಗದಂತೆ ಮನೆಯವರು ಮನವಿ ಮಾಡುತ್ತಾರೆ. ಬರುವ ಸಂಬಳ ಸಣ್ಣ ಪುಟ್ಟ ಖರ್ಚುಗಳನ್ನು ನಿಭಾಯಿಸುತ್ತಿವೆ. ಜೀವನ ಸಾಗಿಸಲು ಈಗ ಕೆಲಸ ಮಾಡಲೇಬೇಕು. ನಮ್ಮಂತಹ ಅಸಂಘಟಿತರಿಗೆ ಸರ್ಕಾರ ಆರೋಗ್ಯ ಭದ್ರತೆ ನೀಡಬೇಕು. ಉಚಿತವಾಗಿ ಚಿಕಿತ್ಸೆ ಹಾಗೂ ಕೊರೊನಾದಿಂದ ಮೃತಪಟ್ಟರೆ ಆರ್ಥಿಕ ನೆರವು ಒದಗಿಸಬೇಕು’ ಎನ್ನುತ್ತಾರೆ ರಾಜಾಜಿನಗರದಲ್ಲಿ ಮನೆಗಳಿಗೆ ಹಾಲು ತಲುಪಿಸುವ ಶಿವನಂಜಪ್ಪ.

ಅಂಕಿ ಅಂಶ

1,200 -  ನಗರದಲ್ಲಿರುವ ಹಾಲಿನ ಬೂತ್‌ಗಳು

3,600 - ಹಾಲು ವಿತರಣೆ ಕೆಲಸ ಮಾಡುವವರು

9 ಲಕ್ಷ ಲೀಟರ್ - ಪ್ರತಿದಿನ ಮಾರಾಟವಾಗುತ್ತಿರುವ ಹಾಲು (ಬೆಂಗಳೂರು)

ಶೇ 50ರಷ್ಟು ಹಾಲು ವಿತರಣೆ ಕ್ಷೀಣ

‘ಗ್ರಾಹಕರಿಗೆ ಮಾರುವ ಪ್ರಮಾಣದಷ್ಟೇ ಹಾಲನ್ನು ಹೋಟೆಲ್‌ಗಳು, ಶುಭ ಸಮಾರಂಭಗಳಿಗೆ ಹಾಗೂ ಕೇಟರಿಂಗ್‌ನವರೂ ಖರೀದಿಸುತ್ತಿದ್ದರು. ಮನೆಗಳಿಗೆ ವಿತರಣೆಗಿಂತ ಹೆಚ್ಚಾಗಿ ಹಾಲಿಗೆ ಬೇಡಿಕೆ ಇರುತ್ತಿತ್ತು. ಕೊರೊನಾದಿಂದಾಗಿ ಬಹುತೇಕ ಹೋಟೆಲ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಶುಭಸಮಾರಂಭಗಳು ಸರಳವಾಗಿ ನಡೆಯುತ್ತಿವೆ. ಕೇಟರಿಂಗ್ ಉದ್ದಿಮೆ ಸ್ತಬ್ಧವಾಗಿದೆ. ಇದರ ಪರಿಣಾಮ ಸರಾಸರಿ ಶೇ 50ರಷ್ಟು ಹಾಲಿನ ವಿತರಣೆ ಕಡಿಮೆಯಾಗಿದೆ’ ಬೆಂಗಳೂರು ಡೈರಿ ಏಜೆಂಟರ ಸಂಘದ ಅಧ್ಯಕ್ಷ ಎಚ್.ಎಸ್.ರಂಗಸ್ವಾಮಿ ‘ಪ್ರಜಾವಾಣಿ’ಗೆ ತಿಳಿಸಿದರು.

‘ಸರ್ಕಾರ ಹಾಲಿನ ವಿತರಕರಿಗೆ ತಲಾ ₹15 ಸಾವಿರ ಕೋವಿಡ್ ಸಹಾಯಧನ ನೀಡಬೇಕು. ₹20 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಬೇಕು. ಒಂದು ವರ್ಷದವರೆಗೆ ಬೂತ್‌ಗಳ ವಿದ್ಯುತ್‌ ಶುಲ್ಕ ಮನ್ನಾ ಮಾಡಬೇಕು. ಕಮಿಷನ್ ಪ್ರಮಾಣವನ್ನು ಲೀಟರ್‌ಗೆ ₹3ಕ್ಕೆ ಏರಿಸಬೇಕು ಹಾಗೂ ಹಾಲು ವಿತರಕರಿಗೆ ಉಚಿತ ಚಿಕಿತ್ಸೆ ಹಾಗೂ ಲಸಿಕೆ ನೀಡಬೇಕು’ ಎಂದು ಒತ್ತಾಯಿಸಿದರು.

***

ಜೂನ್‌ ತಿಂಗಳಲ್ಲಿ 20 ಲಕ್ಷ ಲೀಟರ್‌ನಷ್ಟು ಹಾಲು ಉತ್ಪಾದನೆ ನಿರೀಕ್ಷೆಯಿದೆ. ಮೊದಲು ದಿನಕ್ಕೆ 18 ಲಕ್ಷ ಲೀ. ಹಾಲು ಸರಬರಾಜು ಆಗುತ್ತಿತ್ತು. ಈಗ ಅರ್ಧಕ್ಕೆ ಇಳಿದಿದೆ.

–ನರಸಿಂಹಮೂರ್ತಿ, ಬೆಂಗಳೂರು ಹಾಲು ಉತ್ಪಾದಕರ ಒಕ್ಕೂಟದ (ಬಮೂಲ್)‌ ಅಧ್ಯಕ್ಷ

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು