ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು | 'ನಮ್ಮ ಮೆಟ್ರೊ' ಹಳದಿ ಮಾರ್ಗ: ಸಿವಿಲ್ ಕಾಮಗಾರಿ ಅಂತಿಮ ಹಂತಕ್ಕೆ

ಜುಲೈ ಅಥವಾ ಆಗಸ್ಟ್‌ನಲ್ಲಿ ಸಂಚಾರ ಆರಂಭಿಸಲು ಬಿಎಂಆರ್‌ಸಿಎಲ್ ಗುರಿ
Last Updated 28 ಡಿಸೆಂಬರ್ 2022, 5:26 IST
ಅಕ್ಷರ ಗಾತ್ರ

ಬೆಂಗಳೂರು: ‘ನಮ್ಮ ಮೆಟ್ರೊ’ ಎರಡನೇ ಹಂತದಲ್ಲಿ ಆರ್‌.ವಿ.ರಸ್ತೆ– ಬೊಮ್ಮಸಂದ್ರ ಮಾರ್ಗದ (ರೀಚ್‌–5) ಸಿವಿಲ್ ಕಾಮಗಾರಿ ಮೂರು ಪ್ಯಾಕೇಜ್‌ಗಳಲ್ಲಿ ನಡೆಯುತ್ತಿದ್ದು, ಎಲ್ಲಾ ಪ್ಯಾಕೇಜ್‌ ಕಾಮಗಾರಿಗಳೂ ಅಂತಿಮ ಹಂತಕ್ಕೆ ತಲುಪಿವೆ.

ಬೆಂಗಳೂರು ಮೆಟ್ರೊ ರೈಲು ನಿಗಮವು(ಬಿಎಂಆರ್‌ಸಿಎಲ್‌) ರೀಚ್‌–5 ಕಾಮಗಾರಿಯನ್ನು ಮೂರು ಪ್ಯಾಕೇಜ್‌ಗಳನ್ನಾಗಿ ವಿಂಗಡಿಸಿ, 2018ರ ಏಪ್ರಿಲ್‌ನಲ್ಲಿ ಕಾಮಗಾರಿ ಆರಂಭಿಸಿದೆ. ಮಳೆ ಮತ್ತು ಕೋವಿಡ್ ಅಲೆಗಳ ನಡುವೆ ಪಿಲ್ಲರ್‌ಗಳ ನಿರ್ಮಾಣ ಮತ್ತು ವಯಡಕ್ಟ್ ಅಳವಡಿಕೆ ಕಾಮಗಾರಿ ಕುಂಟುತ್ತಾ ಸಾಗಿ ಈಗ ಅಂತಿಮ ಹಂತಕ್ಕೆ ಬಂದಿದೆ. ಹಳಿಗಳ ಜೋಡಣೆ ಕಾಮಗಾರಿಯೂ ಪೂರ್ಣಗೊಂಡಿದೆ.

ಬೊಮ್ಮಸಂದ್ರದಿಂದ ಬಿರಟೇನ ಅಗ್ರಹಾರ ತನಕದ ಮೊದಲ ಪ್ಯಾಕೇಜ್‌ನ ಸಿವಿಲ್ ಕಾಮಗಾರಿ ಶೇ 98.95ರಷ್ಟು ಪೂರ್ಣಗೊಂಡಿದ್ದರೆ, ಬಿರಟೇನ ಅಗ್ರಹಾರದಿಂದ ಬೊಮ್ಮನಹಳ್ಳಿ ತನಕದ ಎರಡನೇ ಪ್ಯಾಕೇಜ್‌ ಸಿವಿಲ್ ಕಾಮಗಾರಿ ಶೇ 98.97ರಷ್ಟು ಪೂರ್ಣಗೊಂಡಿದೆ.

ಬೊಮ್ಮನಹಳ್ಳಿಯಿಂದ ಆರ್.ವಿ.ರಸ್ತೆ ತನಕದ ಮೂರನೇ ಪ್ಯಾಕೇಜ್ ಕಾಮಗಾರಿ ಶೇ 96.27ರಷ್ಟು ಪೂರ್ಣಗೊಂಡಿದೆ. ಮೊದಲ ಎರಡು ಪ್ಯಾಕೇಜ್‌ಗಳಲ್ಲಿ ಪಿಲ್ಲರ್‌ ಮತ್ತು ವಯಡಕ್ಟ್‌ ಅಳವಡಿಕೆ ಕಾಮಗಾರಿಯಾದರೆ, ಮೂರನೇ ಪ್ಯಾಕೇಜ್‌ನಲ್ಲಿ ಅವುಗಳ ಜತೆಗೆ ಮೆಟ್ರೊ ರೈಲು ಮಾರ್ಗದ ಕೆಳಗೆ ಕಾರು ಮತ್ತು ಬಸ್‌ಗಳ ಸಂಚಾರಕ್ಕೂ ಮಾರ್ಗಗಳನ್ನು(ಡಬಲ್ ಡೆಕ್ಕರ್) ನಿರ್ಮಿಸಲಾಗುತ್ತಿದೆ.

ಒಂದೇ ಪಿಲ್ಲರ್‌ ಮೇಲೆ ಮೆಟ್ರೊ ರೈಲು ಮತ್ತು ವಾಹನಗಳ ಸಂಚಾರಕ್ಕೆ ಮಾರ್ಗಗಳನ್ನು ನಿರ್ಮಿಸುತ್ತಿರುವುದು ದಕ್ಷಿಣ ಭಾರತದಲ್ಲೇ ಮೊದಲು ಎಂಬ ಹೆಗ್ಗಳಿಕೆಯನ್ನೂ ಈ ಮಾರ್ಗ ಒಳಗೊಂಡಿದೆ. ನಿಲ್ದಾಣಗಳ ನಿರ್ಮಾಣ ಸೇರಿ ಅಂತಿಮ ಹಂತದಲ್ಲಿರುವ ಸಿವಿಲ್ ಕಾಮಗಾರಿ ಪೂರ್ಣಗೊಂಡರೆ, ಸಿಗ್ನಲಿಂಗ್ ಅಳವಡಿಕೆ ಕಾಮಗಾರಿ ಚುರುಕಾಗಲಿದೆ. ಎಲ್ಲಾ ಕಾಮಗಾರಿಗಳು ಅಂತಿಮ ಹಂತಕ್ಕೆ ತಲುಪಿದಾಗ ಪರೀಕ್ಷಾರ್ಥ ಸಂಚಾರ ಆರಂಭಿಸುವ ಬಗ್ಗೆ ಆಡಳಿತ ಮಂಡಳಿ ಆಲೋಚನೆ ನಡೆಸುತ್ತದೆ ಎನ್ನುತ್ತಾರೆ ಬಿಎಂಆರ್‌ಸಿಎಲ್ ಅಧಿಕಾರಿಗಳು.

ಹೊಸೂರಿಗೆ ವಿಸ್ತರಣೆ: ತಮಿಳುನಾಡಿನ ಹೊಣೆ

ಬೊಮ್ಮಸಂದ್ರದಿಂದ ಹೊಸೂರು ತನಕ ಈ ಮಾರ್ಗವನ್ನು ವಿಸ್ತರಣೆ ಮಾಡುವ ಪ್ರಸ್ತಾಪ ಇದ್ದು, ಕಾರ್ಯಸಾಧ್ಯತಾ ಅಧ್ಯಯನವೇ ಇನ್ನೂ ಆರಂಭವಾಗಿಲ್ಲ.

‘ಹೊಸೂರು ತನಕ ಮೆಟ್ರೊ ರೈಲು ಮಾರ್ಗ ವಿಸ್ತರಣೆಗೆ ಕರ್ನಾಟಕದಿಂದ ನಿರಾಕ್ಷೇಪಣೆಯನ್ನಷ್ಟೇ ನೀಡಲು ಸಾಧ್ಯ. ಕಾರ್ಯಸಾಧ್ಯತಾ ಅಧ್ಯಯನ ಸೇರಿ ಬೇರೆಲ್ಲಾ ಜವಾಬ್ದಾರಿಯನ್ನು ತಮಿಳುನಾಡು ಸರ್ಕಾರವೇ ನೋಡಿಕೊಳ್ಳಬೇಕಾಗುತ್ತದೆ’ ಎಂದು ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಂಜುಂ ಪರ್ವೇಜ್‌ ಹೇಳಿದರು.

ನಿಲ್ದಾಣಗಳೆಲ್ಲಾ ಹಳದಿ

ಈ ಮಾರ್ಗದ ಎಲ್ಲಾ 14 ನಿಲ್ದಾಣಗಳ ಚಾವಣಿಗಳೂ ಹಳದಿ ಬಣ್ಣದಿಂದಲೇ ಕೂಡಿವೆ. ಎಲೆಕ್ಟ್ರಾನಿಕ್ ಸಿಟಿ ಬಳಿ ನಿರ್ಮಾಣವಾಗುತ್ತಿರುವ ನಿಲ್ದಾಣ ಮಾತ್ರ ವಿಶೇಷ ವಿನ್ಯಾಸ ಒಳಗೊಂಡಿದೆ.

ಈ ನಿಲ್ದಾಣವನ್ನು ಇನ್ಫೊಸಿಸ್‌ ಸಹಭಾಗಿತ್ವದಲ್ಲಿ ನಿರ್ಮಾಣ ಮಾಡುತ್ತಿದ್ದು, ಐ.ಟಿ ಕಂಪನಿಗಳ ಕಟ್ಟಡಗಳನ್ನು ಹೋಲುವಂತೆಯೇ ವಿನ್ಯಾಸಗೊಳಿಸಿ ನಿರ್ಮಿಸಲಾಗುತ್ತಿದೆ.

ಹಳದಿ ಮಾರ್ಗದ ನಿಲ್ದಾಣಗಳು

ಆರ್.ವಿ.ರಸ್ತೆ

ಬಿಟಿಎಂ ಬಡಾವಣೆ

ಸಿಲ್ಕ್‌ ಬೋರ್ಡ್

ಎಚ್‌ಎಸ್‌ಆರ್‌ ಬಡಾವಣೆ

ಆಕ್ಸ್‌ಫರ್ಡ್‌ ಕಾಲೇಜು

ಮುನೇಶ್ವರ ನಗರ

ಚಿಕ್ಕಬೇಗೂರು

ಬಸಾ‍ಪುರ ರಸ್ತೆ

ಹೊಸ ರೋಡ್‌

ಎಲೆಕ್ಟ್ರಾನಿಕ್ ಸಿಟಿ–1

ಎಲೆಕ್ಟ್ರಾನಿಕ್‌ ಸಿಟಿ–2

ಹುಸ್ಕೂರು ರಸ್ತೆ

ಹೆಬ್ಬಗೋಡಿ

ಬೊಮ್ಮಸಂದ್ರ

ಅಂಕಿ ಅಂಶ

₹ 468 ಕೋಟಿ
ಪ್ಯಾಕೇಜ್‌1ರ (ಬೊಮ್ಮಸಂದ್ರ– ಬಿರಟೇನ ಅಗ್ರಹಾರ) ಕಾಮಗಾರಿಯ ಅಂದಾಜು ವೆಚ್ಚ

₹ 492 ಕೋಟಿ
ಪ್ಯಾಕೇಜ್‌–2ರ (ಬಿರಟೇನ ಅಗ್ರಹಾರ–ಬೊಮ್ಮನಹಳ್ಳಿ) ಅಂದಾಜು ವೆಚ್ಚ

₹ 797.29 ಕೋಟಿ
ಪ್ಯಾಕೇಜ್‌–3ರ (ಬೊಮ್ಮಹಳ್ಳಿ–ಆರ್‌.ವಿ.ರಸ್ತೆ) ಅಂದಾಜು ವೆಚ್ಚ

18 ಕಿ.ಮೀ
ಆರ್.ವಿ. ರಸ್ತೆ–ಬೊಮ್ಮಸಂದ್ರ ಕಾರಿಡಾರ್ ಉದ್ದ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT