ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ನೂತನ ಪೊಲೀಸ್ ಕಮಿಷನರ್ ಆಗಿ ಬಿ. ದಯಾನಂದ್ ನೇಮಕ

Published 30 ಮೇ 2023, 16:36 IST
Last Updated 30 ಮೇ 2023, 16:36 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರಿನ ನೂತನ ಕಮಿಷನರ್ ಆಗಿ ಬಿ. ದಯಾನಂದ್ ಅವರನ್ನು ವರ್ಗಾವಣೆ ಮಾಡಲಾಗಿದೆ.

ಪ್ರಸ್ತುತ ಕಮಿಷನರ್ ಆಗಿದ್ದ ಪ್ರತಾಪ್ ರೆಡ್ಡಿ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದೆ. ಜೊತೆಗೆ, ಆಂತರಿಕ ಭದ್ರತಾ ವಿಭಾಗಕ್ಕೆ (ಐಎಸ್‌ಡಿ) ವರ್ಗಾಯಿಸಲಾಗಿದೆ.

ವಿಜಯನಗರ ಜಿಲ್ಲೆಯ ಹಗರಿಬೊಮ್ಮನಹಳ್ಳಿ ತಾಲ್ಲೂಕಿನ ಬೆನ್ನಿಕಲ್ಲು ಗ್ರಾಮದ ದಯಾನಂದ್, 1994ನೇ ಬ್ಯಾಚ್‌ನ ಐಪಿಎಸ್‌ ಅಧಿಕಾರಿ. ಪುತ್ತೂರು ಉಪವಿಭಾಗದ ಸಹಾಯಕ ಎಸ್ಪಿ ಆಗಿ ವೃತ್ತಿ ಆರಂಭಿಸಿದ್ದರು. ವಿಜಯಪುರ, ಬೆಳಗಾವಿ, ಚಿತ್ರದುರ್ಗ, ದಕ್ಷಿಣ ಕನ್ನಡ, ಕೋಲಾರ ಜಿಲ್ಲಾ ಎಸ್ಪಿ ಆಗಿ ಕೆಲಸ ಮಾಡಿದ್ದರು.

ಮೈಸೂರು ನಗರ ಕಮಿಷನರ್, ಬೆಂಗಳೂರು ಸಿಸಿಬಿಯ ಜಂಟಿ ಕಮಿಷನರ್, ಸಂಚಾರ ವಿಭಾಗದ ಕಮಿಷನರ್ ಆಗಿ ಕೆಲಸ ಮಾಡಿದ್ದ ದಯಾನಂದ್, ಸದ್ಯ ರಾಜ್ಯ ಗುಪ್ತಚರ ಇಲಾಖೆಯ ಎಡಿಜಿಪಿ ಆಗಿದ್ದರು. ಬೆಂಗಳೂರಿನ 38ನೇ ಕಮಿಷನರ್ ಆಗಲಿರುವ ದಯಾನಂದ್ ಬುಧವಾರ ಅಧಿಕಾರ ವಹಿಸಿಕೊಳ್ಳುವ ಸಾಧ್ಯತೆ ಇದೆ.

ಸಿಐಡಿ ಡಿಜಿಪಿ ಸಲೀಂ

ಬೆಂಗಳೂರು ವಿಶೇಷ ಕಮಿಷ‌ನರ್ (ಸಂಚಾರ) ಎಂ.ಎ. ಸಲೀಂ ಅವರಿಗೆ ಡಿಜಿಪಿ ಹುದ್ದೆಗೆ ಬಡ್ತಿ ನೀಡಲಾಗಿದ್ದು, ಸಿಐಡಿ ಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಸಿಐಡಿಯ ಎಡಿಜಿಪಿ ಕೆ.ವಿ. ಶರತ್‌ಚಂದ್ರ ಅವರನ್ನು ಗುಪ್ತದಳದ ಎಡಿಜಿಪಿ ಆಗಿ ವರ್ಗಾಯಿಸಲಾಗಿದೆ.

ವಿಶೇಷ ಕಮಿಷನರ್ ಹುದ್ದೆ ಖಾಲಿ

ನಗರದ ಸಂಚಾರ ವ್ಯವಸ್ಥೆ ನಿರ್ವಹಣೆಗಾಗಿ ಬಿಜೆಪಿ ನೇತೃತ್ವದ ಸರ್ಕಾರ ವಿಶೇಷ ಕಮಿಷನರ್ ಹುದ್ದೆ ಸೃಷ್ಟಿಸಲಾಗಿತ್ತು. ಇದರ ಮೊದಲ ವಿಶೇಷ ಕಮಿಷನರ್ ಆಗಿ ಎಂ.ಎ. ಸಲೀಂ ಅಧಿಕಾರ ವಹಿಸಿಕೊಂಡಿದ್ದರು. ಇದೀಗ ಸಲೀಂ ಅವರನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿದೆ. ಆದರೆ ವಿಶೇಷ ಕಮಿಷನರ್ ಹುದ್ದೆಗೆ ಯಾರನ್ನೂ ವರ್ಗಾವಣೆ ಮಾಡಿಲ್ಲ. ಕಾಂಗ್ರೆಸ್ ಸರ್ಕಾರ ಹುದ್ದೆಯನ್ನೂ ರದ್ದುಪಡಿಸುವ ಸಾಧ್ಯತೆ ಬಗ್ಗೆ ಚರ್ಚೆಗಳು ನಡೆಯುತ್ತಿವೆ.

ಎಂ.ಎ. ಸಲೀಂ
ಎಂ.ಎ. ಸಲೀಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT