ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ತಾಕತ್ತಿದ್ದರೆ ಬಂಧಿಸಿ’ ಎಂದಿದ್ದ ರೌಡಿ ರಾಹುಲ್ ಅಲಿಯಾಸ್ ಸ್ಟಾರ್‌ಗೆ ಗುಂಡೇಟು

Last Updated 17 ಜನವರಿ 2022, 14:01 IST
ಅಕ್ಷರ ಗಾತ್ರ

ಬೆಂಗಳೂರು: ಡ್ರಗ್ಸ್ ಮಾರಾಟ ಹಾಗೂ ವಿವಿಧ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿದ್ದ ರೌಡಿ ರಾಹುಲ್ ಅಲಿಯಾಸ್ ಸ್ಟಾರ್‌ನನ್ನು ಕಾಲಿಗೆ ಗುಂಡು ಹಾರಿಸಿ ಸೋಮವಾರ ಸೆರೆ ಹಿಡಿಯಲಾಗಿದೆ.

‘ರೌಡಿ ಕುಳ್ಳ ರಿಜ್ವಾನ್ ಸಹಚರನಾಗಿದ್ದ ರಾಹುಲ್ ವಿರುದ್ಧ 20 ಪ್ರಕರಣಗಳು ದಾಖಲಾಗಿದ್ದವು. ನ್ಯಾಯಾಲಯದ 8 ವಾರೆಂಟ್‌ಗಳು ಸಹ ಬಾಕಿ ಇದ್ದವು. ಬಂಧಿಸಲು ಹೋಗಿದ್ದ ಪೊಲೀಸರ ಮೇಲೆ ಆತ ಹಲ್ಲೆ ಮಾಡಿದ್ದ. ಹನುಮಂತನಗರ ಠಾಣೆ ಪಿಎಸ್‌ಐ ಬಸವರಾಜ್ ಪಾಟೀಲ ಆತ್ಮರಕ್ಷಣೆಗಾಗಿ ಆತನ ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ’ ಎಂದು ದಕ್ಷಿಣ ವಿಭಾಗದ ಡಿಸಿಪಿ ಹರೀಶ್ ಪಾಂಡೆ ಹೇಳಿದರು.

‘ಗುಂಡೇಟು ತಿಂದಿರುವ ರೌಡಿಯನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆತನ ಹಲ್ಲೆಯಿಂದ ಗಾಯಗೊಂಡಿರುವ ಹೆಡ್‌ ಕಾನ್‌ಸ್ಟೆಬಲ್ ನಿಂಗಪ್ಪ ಅವರೂ ಚಿಕಿತ್ಸೆ ಪಡೆಯುತ್ತಿದ್ದಾರೆ’ ಎಂದು ತಿಳಿಸಿದರು.

ವಿಡಿಯೊ ಹರಿಬಿಟ್ಟಿದ್ದ: ‘ಡ್ರಗ್ಸ್ ಮಾರಾಟ ಸಂಬಂಧ ರೌಡಿ ರಾಹುಲ್ ಹಾಗೂ ಇತರ ವಿರುದ್ಧ ಕೆಂಪೇಗೌಡನಗರ ಠಾಣೆಯಲ್ಲಿ ಇತ್ತೀಚೆಗಷ್ಟೇ ಎಫ್‌ಐಆರ್ ದಾಖಲಾಗಿತ್ತು. ಕೃತ್ಯದ ಬಳಿಕ ತಲೆಮರೆಸಿಕೊಂಡಿದ್ದ ರೌಡಿ ಹಾಗೂ ಆತನ ಸಹಚರರು, ತೆರೆಮರೆಯಲ್ಲಿ ಡ್ರಗ್ಸ್ ಮಾರುತ್ತಿದ್ದರು. ಈ ಬಗ್ಗೆ ಮಾಹಿತಿ ಬರುತ್ತಿದ್ದಂತೆ ದಕ್ಷಿಣ ವಿಭಾಗದ ಪೊಲೀಸರ ವಿಶೇಷ ತಂಡ ರಚಿಸಲಾಗಿತ್ತು’ ಎಂದೂ ಹರೀಶ್ ಪಾಂಡೆ ಹೇಳಿದರು.

‘ನನ್ನನ್ನು ಬಂಧಿಸಲು ಯಾರಿಗೂ ಆಗುವುದಿಲ್ಲ. ಪೊಲೀಸರಿಗೆ ತಾಕತ್ತಿದ್ದರೆ ನನ್ನ ಬಳಿ ಬಂದು ಬಂಧಿಸಲಿ’ ಎಂಬುದಾಗಿ ರೌಡಿ ರಾಹುಲ್ ವಿಡಿಯೊವೊಂದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹರಿಬಿಟ್ಟಿದ್ದ. ಅದನ್ನು ಗಮನಿಸಿದ್ದ ಪೊಲೀಸರು, ಆತನಿಗಾಗಿ ತೀವ್ರ ಶೋಧ ನಡೆಸಿದ್ದರು.’

‘ಕೋಣನಕುಂಟೆ ಠಾಣೆ ವ್ಯಾಪ್ತಿಯ ನಾರಾಯಣನಗರ ಬಳಿಯ ನಿರ್ಜನ ಪ್ರದೇಶದಲ್ಲಿ ಶನಿವಾರ ರಾಹುಲ್ ಕಾಣಿಸಿಕೊಂಡಿದ್ದ. ಪಿಎಸ್ಐ ಬಸವರಾಜ್ ನೇತೃತ್ವದ ತಂಡ ಸ್ಥಳಕ್ಕೆ ಹೋಗಿತ್ತು. ಪೊಲೀಸರನ್ನು ನೋಡಿದ್ದ ರೌಡಿ, ಅವರ ಮೇಲೆ ಹಲ್ಲೆಗೆ ಮುಂದಾಗಿದ್ದ. ನಿಂಗಪ್ಪ ಅವರಿಗೆ ಲಾಂಗ್‌ನಿಂದ ಹೊಡೆದಿದ್ದ’ ಎಂದೂ ಡಿಸಿಪಿ ತಿಳಿಸಿದರು.

‘ರಕ್ಷಣೆಗೆ ಹೋದ ಪಿಎಸ್‌ಐ, ಒಂದು ಸುತ್ತಿನ ಗುಂಡು ಹಾರಿಸಿ ಎಚ್ಚರಿಕೆ ನೀಡಿದ್ದರು. ಅದಕ್ಕೆ ಬಗ್ಗದ ರೌಡಿ, ಪಿಎಸ್‌ಐ ಮೇಲೆ ಹಲ್ಲೆ ಮಾಡಲು ಮುಂದಾಗಿದ್ದ. ಅದೇ ವೇಳೆ ಪಿಎಸ್ಐ, ಆತನ ಬಲಗಾಲಿಗೆ ಗುಂಡು ಹೊಡೆದಿದ್ದಾರೆ’ ಎಂದೂ ವಿವರಿಸಿದರು.

4 ಕೊಲೆ ಪ್ರಕರಣದಲ್ಲಿ ಭಾಗಿ; ‘ರಾಹುಲ್, ರೌಡಿ ಕುಳ್ಳ ರಿಜ್ವಾನ್ ಜೊತೆ 4 ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿದ್ದಾನೆ. ಡ್ರಗ್ಸ್ ಮಾರಾಟ ಹಾಗೂ ಜೂಜಾಟದಲ್ಲೂ ತೊಡಗಿಸಿಕೊಂಡಿದ್ದ. ಆತನ ಆರೋಗ್ಯದಲ್ಲಿ ಚೇತರಿಕೆ ಕಂಡುಬಂದ ನಂತರ, ಕಸ್ಟಡಿಗೆ ಪಡೆದು ವಿಚಾರಣೆ ನಡೆಸಲಾಗುವುದು’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT