ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು: ಪ್ರಕರಣ ಇತ್ಯರ್ಥವಾದ ಬಳಿಕ 309 ಎಕರೆ ಅಭಿವೃದ್ಧಿ

ಮಳೆಗಾಲ: ಕೆಂಪೇಗೌಡ ಬಡಾವಣೆಯ 35 ಸೇತುವೆ ನಿರ್ಮಾಣಕ್ಕೆ ವೇಗ – ಬಿಡಿಎ ಭರವಸೆ
Published 23 ಮೇ 2023, 1:20 IST
Last Updated 23 ಮೇ 2023, 1:20 IST
ಅಕ್ಷರ ಗಾತ್ರ

ಬೆಂಗಳೂರು: ‘ಕೆಂಪೇಗೌಡ ಬಡಾವಣೆಯ ನಿವೇಶನಗಳ ಹಂಚಿಕೆದಾರರು ಆತಂಕ ಪಡುವ ಅಗತ್ಯವಿಲ್ಲ. ನಾನಾ ಕಾರಣಕ್ಕೆ ವಿಳಂಬವಾಗಿದ್ದ ಕಾಮಗಾರಿಗೆ ವೇಗ ನೀಡಲಾಗುವುದು’ ಎಂದು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಎಂಜಿನಿಯರಿಂಗ್‌ ಸದಸ್ಯ ಶಾಂತರಾಜಣ್ಣ ಅವರು ಭರವಸೆ ನೀಡಿದ್ದಾರೆ.

ಮೇ 18ರಂದು ‘ಪ್ರಜಾವಾಣಿ’ಯಲ್ಲಿ ಪ್ರಕಟವಾಗಿದ್ದ ‘ದರ ವ್ಯತ್ಯಾಸ: ಕಾಮಗಾರಿ ಸ್ಥಗಿತ’ ವಿಶೇಷ ವರದಿಗೆ ಪ್ರತಿಕ್ರಿಯಿಸಿರುವ ಅವರು, ‘ಬೆಂಗಳೂರು ಉತ್ತರ ತಾಲ್ಲೂಕಿನ ಯಶವಂತಪುರ ಹೋಬಳಿಯ ನಾಲ್ಕು ಗ್ರಾಮಗಳಾದ ಸೀಗೆಹಳ್ಳಿ, ಕನ್ನಲ್ಲಿ, ಕೊಡಿಗೇಹಳ್ಳಿ, ಮಂಗನಹಳ್ಳಿ ಮತ್ತು ಬೆಂಗಳೂರು ದಕ್ಷಿಣ ತಾಲ್ಲೂಕಿನ ಕಂಗೇರಿ ಹೋಬಳಿಯ 8 ಗ್ರಾಮಗಳಾದ ಕೊಮ್ಮಘಟ್ಟ, ಭೀಮನಕುಪ್ಪೆ–ರಾಮಸಾಗರ, ಸೂಲಿಕೆರೆ, ಕೆಂಚನಪುರ, ರಾಮಸಂದ್ರ ಕೊಮ್ಮಘಟ್ಟ, ಕೃಷ್ಣಸಾಗರ, ಚಲ್ಲಘಟ್ಟ ವ್ಯಾಪ್ತಿಯಲ್ಲಿ ಒಟ್ಟು 4,043 ಎಕರೆ ಜಮೀನನ್ನು ಈ ಬಡಾವಣೆ ಒಳಗೊಂಡಿದೆ. ಅದರಲ್ಲಿ ಪ್ರಸ್ತುತ 2,694 ಎಕರೆಯಷ್ಟು ಜಮೀನು ಸ್ವಾಧೀನ ಪಡಿಸಿಕೊಂಡು ಎಂಜಿನಿಯರಿಂಗ್‌ ವಿಭಾಗಕ್ಕೆ ಹಸ್ತಾಂತರಿಸಲಾಗಿದೆ' ಎಂದು ವಿವರಿಸಿದ್ದಾರೆ.

‘ಹಸ್ತಾಂತರವಾದ 2,217 ಎಕರೆ ಜಮೀನಿನಲ್ಲಿ ಬಡಾವಣೆ ನಿರ್ಮಾಣ ಕಾಮಗಾರಿ ಭೌತಿಕವಾಗಿ ಪೂರ್ಣಗೊಳಿಸಲಾಗಿದೆ. ಉಳಿದ 167 ಎಕರೆಯಲ್ಲಿ ಬಡಾವಣೆ ನಿರ್ಮಾಣ ಕಾಮಗಾರಿ ಪ್ರಗತಿಯಲ್ಲಿದೆ. 309 ಎಕರೆ 13 ಗುಂಟೆ ಜಮೀನಿನ ಮೇಲೆ ವಿವಿಧ ನ್ಯಾಯಾಲಯದಲ್ಲಿ ಮೊಕದ್ದಮೆಗಳು ವಿಚಾರಣೆ ಹಂತದಲ್ಲಿವೆ. ನ್ಯಾಯಾಲಯದಲ್ಲಿ ಇತ್ಯರ್ಥವಾದ ಮೇಲೆ ಅಲ್ಲಿ ಅಭಿವೃದ್ಧಿ ಕೆಲಸ ಕೈಗೊಳ್ಳಲಾಗುವುದು’ ಎಂದು ಭರವಸೆ ನೀಡಿದ್ದಾರೆ.

‘2014ರ ಮಾರ್ಚ್‌ ವರೆಗೆ ಹಸ್ತಾಂತರಿಸಿದ 2,080 ಎಕರೆ ಜಮೀನು ಅಭಿವೃದ್ಧಿ ಪಡಿಸಲು ಒಟ್ಟು 10 ಪ್ಯಾಕೇಜ್‌ಗಳಾಗಿ ವಿಂಗಡಿಸಲಾಗಿತ್ತು. ₹ 768.18 ಕೋಟಿಗಳಲ್ಲಿ ಗುತ್ತಿಗೆ ಕಾಮಗಾರಿಯನ್ನು ವಿವಿಧ ಕಂಪನಿಗಳಿಗೆ ವಹಿಸಲಾಗಿತ್ತು. ಪ್ಯಾಕೇಜ್‌–1 ಅನ್ನು ಕೆಎಂಸಿ ಸಂಸ್ಥೆಗೆ ಹಾಗೂ ಪ್ಯಾಕೇಜ್‌– 2, 3ರ ಕಾಮಗಾರಿಯನ್ನು ರಾಮಲಿಂಗಂ ಕನ್‌ಸ್ಟ್ರಕ್ಷನ್‌ ಕಂಪನಿ’ಗೆ (ಆರ್‌ಸಿಸಿ) ನೀಡಲಾಗಿದೆ. ಗುತ್ತಿಗೆದಾರರು ₹ 564 ಕೋಟಿ ಮೊತ್ತದ ಕಾಮಗಾರಿ ನಿರ್ವಹಿಸಿದ್ದಾರೆ. ಬಾಕಿಯಿರುವ ₹ 212 ಕೋಟಿ ಮೊತ್ತದ ಕಾಮಗಾರಿ ಪ್ರಗತಿಯಲ್ಲಿದೆ’ ಎಂದು ವಿವರಿಸಿದ್ದಾರೆ.

‘ದರ ವ್ಯತ್ಯಾಸದ ಬಗ್ಗೆ ಗುತ್ತಿಗೆದಾರರು ಪ್ರಾಧಿಕಾರದ ಜತೆಗೆ ಪತ್ರ ವ್ಯವಹಾರ ನಡೆಸಿಲ್ಲ. ನ್ಯಾಯಾಲಯದಲ್ಲಿ ಪ್ರಕರಣಗಳಿರುವ ಕಾರಣಕ್ಕೆ ಕಾಮಗಾರಿ ಕುಂಠಿತವಾಗಿದೆ. ಜಮೀನು ಹಸ್ತಾಂತರ ವಿಳಂಬದಿಂದಲೂ ಕಾಮಗಾರಿಗೆ ತೊಡಕಾಗಿದೆ. ಅಧಿಕಾರಿಗಳನ್ನು ಚುನಾವಣೆ ಕರ್ತವ್ಯಕ್ಕೆ ನಿಯೋಜಿಸಿದ್ದರಿಂದಲೂ ಕಾಮಗಾರಿ ಅಡಚಣೆಯಾಗಿದೆ. ಮಳೆಗಾಲ ಸಮೀಪಿಸಿದ್ದು ಬಡಾವಣೆಯ 35 ಸೇತುವೆಗಳ ನಿರ್ಮಾಣ ಕಾಮಗಾರಿಗೆ ವೇಗ ಪಡೆದುಕೊಂಡಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.

‘ಮಾಗಡಿ ಮುಖ್ಯರಸ್ತೆಯಿಂದ ಮೈಸೂರು ಮುಖ್ಯರಸ್ತೆ ತನಕ ಪ್ರಾಧಿಕಾರದಿಂದ ₹ 588.79 ಕೋಟಿ ವೆಚ್ಚದಲ್ಲಿ 100 ಮೀಟರ್ ಅಗಲದ ಮುಖ್ಯರಸ್ತೆ ನಿರ್ಮಿಸಲಾಗುತ್ತಿದೆ. ಈಗಾಗಲೇ ₹ 418.30 ಕೋಟಿ ವೆಚ್ಚದಲ್ಲಿ ಕಾಮಗಾರಿ ನಡೆಸಲಾಗಿದೆ. ಉಳಿದ ₹ 170.49 ಕೋಟಿ ವೆಚ್ಚದ ಕಾಮಗಾರಿ ಮುಂದುವರಿದಿದೆ. ಬಡಾವಣೆಯ ವಿವಿಧ ಬ್ಲಾಕ್‌ಗಳಿಗೆ ಸಂಪರ್ಕ ಕಲ್ಪಿಸುವ ರಸ್ತೆ ಕಾಮಗಾರಿಗೆ ಟೆಂಡರ್ ಹಂತದಲ್ಲಿದೆ’ ಎಂದು ಶಾಂತರಾಜಣ್ಣ ಪ್ರಕಟಣೆಯಲ್ಲಿ ಸ್ಪಷ್ಟನೆ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT