ಭಾನುವಾರ, 28 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪಬ್ ಪಾರ್ಟಿ: ಮಹಿಳೆಯರಿಗೆ ಉಚಿತ ಮದ್ಯ- ಪುರುಷರ ಸೆಳೆಯಲು ಮಾಲೀಕರ ತಂತ್ರ

ವಾರಾಂತ್ಯದ ಔತಣಕೂಟಗಳಿಗೆ ಬೇಡಿಕೆ
Published 23 ಜೂನ್ 2023, 23:31 IST
Last Updated 23 ಜೂನ್ 2023, 23:31 IST
ಅಕ್ಷರ ಗಾತ್ರ

ಬೆಂಗಳೂರು: ಸಾರಿಗೆ ನಿಗಮಗಳ ಬಸ್‌ಗಳಲ್ಲಿ ಮಹಿಳೆಯರ ಉಚಿತ ಪ್ರಯಾಣಕ್ಕೆ ‘ಶಕ್ತಿ’ ಯೋಜನೆ ಜಾರಿಯಾದ ಬೆನ್ನಲ್ಲೇ, ನಗರದ ಹಲವು ಪಬ್‌ಗಳಲ್ಲಿ ಮಹಿಳೆಯರಿಗೆ ಉಚಿತ ಮದ್ಯ ನೀಡಲು ಮಾಲೀಕರು ಮುಂದಾಗಿದ್ದಾರೆ.

ನಗರದ ಕೋರಮಂಗಲ, ಇಂದಿರಾನಗರ, ವೈಟ್‌ಫೀಲ್ಡ್, ಬ್ರಿಗೇಡ್ ರಸ್ತೆ, ಚರ್ಚ್‌ಸ್ಟ್ರೀಟ್, ಎಂ.ಜಿ.ರಸ್ತೆ ಹಾಗೂ ಇತರೆ ಪ್ರಮುಖ ಪ್ರದೇಶಗಳಲ್ಲಿ ಪಬ್‌ಗಳ ಸಂಖ್ಯೆ ಹೆಚ್ಚಿದೆ. ಈ ಪಬ್‌ಗಳಲ್ಲಿ ನಿತ್ಯವೂ ಪಾರ್ಟಿಗಳನ್ನು ಆಯೋಜಿಸಲಾಗುತ್ತಿದ್ದು, ವಾರಂತ್ಯದಲ್ಲೂ ವಿಶೇಷ ಪಾರ್ಟಿ ಸಂಘಟಿಸಲಾಗುತ್ತಿದೆ.

ಕೋವಿಡ್ ಸಂದರ್ಭದಲ್ಲಿ ಪಬ್‌ಗಳು ಬಂದ್ ಆಗಿದ್ದರಿಂದ ಮಾಲೀಕರು ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದರು. ಕೋವಿಡ್ ನಂತರದ ದಿನಗಳಲ್ಲೂ ಗ್ರಾಹಕರ ಸಂಖ್ಯೆ ಕಡಿಮೆ ಇದ್ದು, ನಿಗದಿಯಷ್ಟು ವಹಿವಾಟು ನಡೆಯುತ್ತಿಲ್ಲ. ಹೀಗಾಗಿ, ಗ್ರಾಹಕರನ್ನು ಸೆಳೆಯಲು ಮಾಲೀಕರು ನಾನಾ ಕೊಡುಗೆಗಳನ್ನು ನೀಡುತ್ತಿದ್ದಾರೆ.

ಬಹುತೇಕ ಪಬ್‌ಗಳಲ್ಲಿ ಮದ್ಯ ಮಾರಾಟ ಹಾಗೂ ಊಟ ಪೂರೈಕೆಗೆ ಅನುಮತಿ ಇದೆ. ತರಹೇವಾರಿ ಮದ್ಯ ಹಾಗೂ ಊಟವನ್ನು ಸಿದ್ಧಪಡಿಸಿಕೊಂಡು ಪಬ್‌ ಸಿಬ್ಬಂದಿ ಗ್ರಾಹಕರಿಗಾಗಿ ಕಾಯುತ್ತಿದ್ದಾರೆ.

ಸೋಮವಾರದಿಂದ ಗುರುವಾರದವರೆಗೆ ಗ್ರಾಹಕರ ಸಂಖ್ಯೆ ಕಡಿಮೆ ಇದೆ. ಶುಕ್ರವಾರ, ಶನಿವಾರ ಹಾಗೂ ಭಾನುವಾರ ರಾತ್ರಿ ತಕ್ಕಮಟ್ಟಿಗೆ ಪಬ್‌ಗಳತ್ತ ಮುಖ ಮಾಡುತ್ತಿದ್ದಾರೆ. ಆದರೆ, ಗ್ರಾಹಕರ ಸಂಖ್ಯೆಯು ಮಾಲೀಕರಿಗೆ ತೃಪ್ತಿ ತರುತ್ತಿಲ್ಲ. ಗ್ರಾಹಕರ ಸಂಖ್ಯೆ ಹೆಚ್ಚಿಸುವ ಉದ್ದೇಶದಿಂದ, ಮಹಿಳೆಯರಿಗೆ ಉಚಿತ ಮದ್ಯ ನೀಡಲು ಮಾಲೀಕರು ತೀರ್ಮಾನಿಸಿದ್ದಾರೆ.

‘ನಗರದಲ್ಲಿ ಪಬ್‌ಗಳು ಹೆಚ್ಚಾಗಿದ್ದು, ಪೈಪೋಟಿಯೂ ಇದೆ. ವಾರಾಂತ್ಯದ ಹಾಗೂ ವಿಶೇಷ ಪಾರ್ಟಿಗಳಲ್ಲಿ ಭಾಗವಹಿಸುವ ಮಹಿಳೆಯರಿಗೆ ಉಚಿತ ಮದ್ಯ ಪೂರೈಸಲಾಗುತ್ತಿದೆ. ಈ ಬಗ್ಗೆ ಜಾಹೀರಾತುಗಳನ್ನು ನೀಡಲಾಗಿದೆ. ಉಚಿತ ಮದ್ಯ ನೀಡುವುದರಿಂದ ಪಬ್ ಆದಾಯ ವೃದ್ಧಿಸುವ ಭರವಸೆ ಇದೆ’ ಎಂದು ಕೋರಮಂಗಲದ ಪಬ್‌ವೊಂದರ ವ್ಯವಸ್ಥಾಪಕ ರಾಬರ್ಟ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪುರುಷರ ಸೆಳೆಯಲು ತಂತ್ರ: ‘ಮಹಿಳೆಯರು ಇರುವ ಪಬ್‌ಗಳಿಗೆ ಮಾತ್ರ ಪುರುಷರು ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಾರೆ. ಮಹಿಳೆಯರು ಇಲ್ಲದಿದ್ದರೆ ಬರುವುದಿಲ್ಲ. ಮದ್ಯ ಉಚಿತವಿದ್ದರೆ, ಮಹಿಳೆಯರು ಪಬ್‌ಗಳಿಗೆ ಬರುತ್ತಾರೆ. ಅವರ ಜೊತೆ ಪುರುಷ ಗ್ರಾಹಕರ ಸಂಖ್ಯೆಯೂ ಹೆಚ್ಚಾಗುತ್ತದೆ’ ಎಂದು ಇಂದಿರಾನಗರದ ಪಬ್‌ವೊಂದರ ಉದ್ಯೋಗಿ ಹೇಳಿದರು.

‘ಎರಡು–ಮೂರು ಪಬ್‌ಗಳಲ್ಲಿ ಕೆಲ ವರ್ಷಗಳಿಂದ ಉಚಿತ ಮದ್ಯ ನೀಡುವ ಪದ್ಧತಿಯಿತ್ತು. ಆದರೆ, ಈಗ ಪೈಪೋಟಿ ಹೆಚ್ಚಾಗಿದೆ. ಹೀಗಾಗಿ, ಬಹುತೇಕ ಪಬ್‌ಗಳಲ್ಲಿ ಮಹಿಳೆಯರಿಗೆ ಉಚಿತ ಮದ್ಯ ಪೂರೈಸಲಾಗುತ್ತಿದೆ. ಆದರೆ, ಪಾರ್ಟಿಗಳಲ್ಲಿ ಪಾಲ್ಗೊಳ್ಳುವ ಮುನ್ನ ಟಿಕೆಟ್ ಕಾಯ್ದಿರಿಸುವುದು ಕಡ್ಡಾಯ ಮಾಡಲಾಗಿದೆ’ ಎಂದು ತಿಳಿಸಿದರು.

ಬೆಂಗಳೂರಿನ ಹಲವು ಪಬ್‌ಗಳಲ್ಲಿ ಕೊಡುಗೆ ಜಾಹೀರಾತು ನೀಡಿ ಗ್ರಾಹಕರಿಗೆ ಆಹ್ವಾನ ಪಾರ್ಟಿಗಳಲ್ಲಿ ಡಿ.ಜೆ.ಗೂ ಅವಕಾಶ

‘ಹೊರೆಯಲ್ಲ ಆದಾಯ ವೃದ್ಧಿ’

‘ಹೊರ ರಾಜ್ಯಗಳ ಯುವತಿಯರು ಹೆಚ್ಚಾಗಿ ಪಬ್‌ಗಳಿಗೆ ಆಗಾಗ ಬಂದು ಹೋಗುತ್ತಾರೆ. ಪಾರ್ಟಿ ವೇಳೆ ಚೆಂದದ ಉಡುಗೆ ತೊಟ್ಟು ಇತರರನ್ನು ಆಕರ್ಷಿಸುತ್ತಾರೆ. ಉಚಿತ ಮದ್ಯವಿದ್ದರೂ ಮಹಿಳೆಯರು ಮಿತಿ ಮೀರುವುದಿಲ್ಲ. ಆದರೆ ಪುರುಷರು ಹೆಚ್ಚು ಕುಡಿಯುತ್ತಾರೆ. ಇದರಿಂದ ಪಬ್‌ ಆದಾಯ ಹೆಚ್ಚಾಗುತ್ತದೆ’ ಎಂದು ಇಂದಿರಾನಗರದ ಪಬ್‌ವೊಂದರ ವ್ಯವಸ್ಥಾಪಕ ಎಚ್. ಗೌತಮ್‌ ಅಭಿಪ್ರಾಯಪಟ್ಟರು. ‘ಶುಕ್ರವಾರ ಶನಿವಾರ ಹಾಗೂ ಭಾನುವಾರ ರಾತ್ರಿ ವಾರಾಂತ್ಯದ ಪಾರ್ಟಿಗಳಲ್ಲಿ ಮಹಿಳೆಯರಿಗೆ ಉಚಿತ ಮದ್ಯ ನೀಡಲಾಗುತ್ತಿದೆ. ಹೀಗಾಗಿ ಪುರುಷರೂ ಪಾರ್ಟಿಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುತ್ತಿದ್ದಾರೆ. ಇಂಥ ಪಾರ್ಟಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT