ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನ ಹಲವೆಡೆ ಜೋರು ಮಳೆ: ಧರೆಗುರುಳಿದ ಮರ

ನಗರದಲ್ಲಿ ಬಿರುಗಾಳಿ ಸಹಿತ ಮಳೆಯಿಂದ ಸಂಚಾರ ಅಸ್ತವ್ಯಸ್ತ l ವ್ಯಾಪಾರಿಗಳ ಪರದಾಟ
Last Updated 13 ಏಪ್ರಿಲ್ 2022, 19:19 IST
ಅಕ್ಷರ ಗಾತ್ರ

ಬೆಂಗಳೂರು: ತಾಪಮಾನ ಏರಿಕೆ ಯಿಂದಾಗಿ ನಗರದಲ್ಲಿ ಬುಧವಾರ ಸಂಜೆ ಬಿರುಗಾಳಿ ಸಹಿತ ಧಾರಾಕಾರ ಮಳೆ ಸುರಿಯಿತು. ಹಲವೆಡೆ ಮರಗಳು ಧರೆ ಗುರುಳಿದ್ದರಿಂದ ಸಂಚಾರ ಅಸ್ತವ್ಯಸ್ತಗೊಂಡಿತು.

ಬೆಳಿಗ್ಗೆಯಿಂದ ಮೋಡ ಕವಿದ ವಾತಾವರಣವಿತ್ತು. ಆಗಾಗ ಬಿಸಿಲಿನ ದರ್ಶನವೂ ಆಗುತ್ತಿತ್ತು. ಸಂಜೆ 4.30ರ ಸುಮಾರಿಗೆ ಕಾರ್ಮೋಡಗಳು ದಟ್ಟೈಸಿ ಜೋರು ಮಳೆ ಶುರುವಾಯಿತು.
ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿಯಿತು. ದಿಢೀರ್‌ ಮಳೆಯಿಂದಾಗಿ ಚಳಿಯ ಅನುಭವವೂ ಆಯಿತು.

ಶಾಂತಿನಗರ, ಮೆಜೆಸ್ಟಿಕ್‌, ಕಾರ್ಪೊ ರೇಷನ್‌ ವೃತ್ತ, ಕೆ.ಆರ್‌.ವೃತ್ತ, ಮೈಸೂರು ಬ್ಯಾಂಕ್‌ ವೃತ್ತ ಸೇರಿದಂತೆ ವಿವಿಧೆಡೆ ತಗ್ಗು ಪ್ರದೇಶಗಳಲ್ಲಿ ನೀರು ಸಂಗ್ರಹಣೆಯಾಗಿತ್ತು. ಹೀಗಾಗಿ ವಾಹನ ಸವಾರರು ಹಾಗೂ ಪಾದಚಾರಿಗಳು ಪರದಾಡುವಂತಾಯಿತು.

ಮೈಸೂರು ಮತ್ತು ಮಾಗಡಿ ರಸ್ತೆ, ಜೆ.ಸಿ.ನಗರದಲ್ಲಿರುವ ದೂರ ದರ್ಶನ ಕೇಂದ್ರ, ಸಂಜಯನಗರ, ಗಂಗಾನಗರ, ಆರ್‌.ಟಿ.ನಗರ, ಹೆಬ್ಬಾಳ, ಚಾಮರಾಜಪೇಟೆ, ಕೆ.ಆರ್‌.ಮಾರುಕಟ್ಟೆ, ವಿಜಯನಗರ, ನಾಯಂಡಹಳ್ಳಿ, ಕೆಂಗೇರಿ, ಬ್ಯಾಟರಾಯನಪುರ, ಗಿರಿನಗರ, ಹೊಸಕೆರೆಹಳ್ಳಿ, ಶ್ರೀನಿವಾಸನಗರ, ಕತ್ರಿಗುಪ್ಪೆ, ಹನುಮಂತ ನಗರ, ರಾಜ ರಾಜೇಶ್ವರಿ ನಗರ, ದಾಸರಹಳ್ಳಿ, ಮಲ್ಲೇಶ್ವರ, ಮಹಾಲಕ್ಷ್ಮಿ ಬಡಾವಣೆ, ಎಂ.ಜಿ.ರಸ್ತೆ, ಇಂದಿರಾನಗರ, ಬ್ರಿಗೇಡ್‌ ರಸ್ತೆ, ಹಲಸೂರು, ಜೀವನ್‌ಬಿಮಾ ನಗರ, ಕಸ್ತೂರಿನಗರ, ಬಾಣಸವಾಡಿ, ಕೋರಮಂಗಲ, ಎಚ್‌ಎಸ್‌ಆರ್‌ ಬಡಾವಣೆ, ಬೊಮ್ಮನಹಳ್ಳಿ, ಕೆ.ಆರ್‌.ಪುರ, ನಾಗರಬಾವಿ, ರಾಮಮೂರ್ತಿ ನಗರ ಸೇರಿದಂತೆ ಹಲವೆಡೆಯೂ ಧಾರಾಕಾರ ಮಳೆ ಸುರಿಯಿತು. ಕೆಲವೆಡೆ ಸಂಚಾರ ದಟ್ಟಣೆಯೂ ಉಂಟಾಯಿತು.

ಗುಂಡಿ ಬಿದ್ದಿದ್ದ ರಸ್ತೆಗಳು ಮಳೆನೀರಿನಿಂದ ತುಂಬಿದ್ದರಿಂದ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಎದುರಿಸಿದರು. ನಗರದ ಹಲವೆಡೆ ನೆಲದಡಿಯಲ್ಲಿ ವಿದ್ಯುತ್‌ ಕೇಬಲ್‌ ಅಳವಡಿಕೆ ಕಾರ್ಯ ಪ್ರಗತಿಯಲ್ಲಿದ್ದು, ಇದಕ್ಕಾಗಿ ಅಗೆಯಲಾಗಿದ್ದ ಗುಂಡಿಗಳಲ್ಲೂ ಮಳೆ ನೀರು ಸಂಗ್ರಹವಾಗಿತ್ತು. ಅಲ್ಲಲ್ಲಿ ರಾಶಿ ಹಾಕಿದ್ದ ಮಣ್ಣು ಮಳೆಗೆ ಕೊಚ್ಚಿಕೊಂಡು ರಸ್ತೆ ಮೇಲೆ ಹರಡಿಕೊಂಡಿತ್ತು. ಆ ಮಾರ್ಗದಲ್ಲಿ ಸಾಗುವವರಿಗೆ ಕೆಸರಿನ ಸಿಂಚನವಾಯಿತು.

ವ್ಯಾಪಾರಿಗಳ ಪರದಾಟ: ಮಳೆ ಯಿಂದಾಗಿ ಕೆ.ಆರ್‌.ಮಾರುಕಟ್ಟೆ ಸೇರಿ ಪ್ರಮುಖ ಮಾರುಕಟ್ಟೆಗಳಲ್ಲಿನ ವರ್ತ ಕರು ಹಾಗೂ ನಗರದಾದ್ಯಂತ ಬೀದಿಬದಿ ವ್ಯಾಪಾರಿಗಳು ಸಂಕಷ್ಟ ಎದುರಿಸಿದರು. ಮಳೆಯಲ್ಲಿ ಮಿಂದ ಯುವತಿಯರು: ಬ್ರಿಗೇಡ್ ರಸ್ತೆ ಹಾಗೂ ಚರ್ಚ್‌ಸ್ಟ್ರೀಟ್‌ ನಲ್ಲಿ ಯುವತಿಯರು ಮಳೆಗೆ ಮೈಯೊಡ್ಡಿ ಸಂಭ್ರಮಿಸಿದರು. ಸೆಲ್ಫಿ ಕ್ಲಿಕ್ಕಿಸಿಕೊಂಡು ಖುಷಿಪಡುತ್ತಿದ್ದ ದೃಶ್ಯಗಳೂ ಕಂಡುಬಂದವು.

12 ಕಡೆ ನೆಲಕ್ಕುರುಳಿದ ಮರ:

ಬಿರುಗಾಳಿ ಸಹಿತ ಮಳೆಯಿಂದಾಗಿ ಟಿ.ಆರ್.ಮಿಲ್‌ನ ರಾಮಚಂದ್ರ ಅಗ್ರಹಾರದ ಪೆಟ್ರೋಲ್‌ ಬಂಕ್ ಬಳಿ, ಜೆ.ಪಿ ನಗರ 2ನೇ ಹಂತದ 7ನೇ ತಿರುವಿನಲ್ಲಿರುವ ಪೊಲೀಸ್ ಠಾಣೆ ಎದುರು, ಚಾಮರಾಜಪೇಟೆ 4ನೇ ಮುಖ್ಯ ರಸ್ತೆಯ 9ನೇ ತಿರುವು,ಕಸ್ತೂರಬಾ ರಸ್ತೆ, ಇಂದಿರಾನಗರದ ಡಿಫೆನ್ಸ್ ಕಾಲೊನಿ 2ನೇ ಹಂತದ 6ನೇ ಮುಖ್ಯ ರಸ್ತೆ,ಗಂಗೊಂಡಹಳ್ಳಿ 2ನೇ ಮುಖ್ಯ ರಸ್ತೆ,ಪಾಲಿಕೆ ಕೇಂದ್ರ ಕಛೇರಿಯ ಆವರಣ, ಹಲಸೂರು ಕೆರೆ ಬಳಿ,ವಿಲ್ಸನ್ ಗಾರ್ಡನ್ 4ನೇ ತಿರುವು,ಅತ್ತಿಗುಪ್ಪೆ ಮೆಟ್ರೊ ನಿಲ್ದಾಣದ ಬಳಿ,ನಾಗರಬಾವಿ 9ನೇ ಬ್ಲಾಕ್‌ನ 4ನೇ ಮುಖ್ಯ ರಸ್ತೆ ಹತ್ತಿರ, ರಿಮ್ಕೊ ಲೇಔಟ್ ಹಾಗೂ ಆರ್.ಪಿ.ಸಿ ಬಡಾವಣೆಯಲ್ಲಿ ಮರಗಳು ನೆಲಕ್ಕುರುಳಿದ್ದವು.

ವಿದ್ಯುತ್‌ ಪ್ರವಹಿಸಿ ಯುವಕ ಸಾವು:

ಬೆಂಗಳೂರು: ವಿದ್ಯುತ್‌ ಪ್ರವಹಿಸಿ ಮಂಗನಪಾಳ್ಯ ನಿವಾಸಿ ವಸಂತ್‌ (21) ಎಂಬುವರು ಮೃತಪಟ್ಟಿದ್ದಾರೆ. ಈ ಸಂಬಂಧ ಚಂದ್ರಾಲೇಔಟ್‌ ‍ಪೊಲೀಸ್‌ ಠಾಣೆಯಲ್ಲಿ ಪ್ರಕರಣ
ದಾಖಲಾಗಿದೆ.

‘ಮೃತ ವಸಂತ್‌, ಜೀವನೋಪಾಯಕ್ಕಾಗಿ ರಸ್ತೆಬದಿಯಲ್ಲಿ ಹಣ್ಣಿನ ಅಂಗಡಿಯೊಂದನ್ನು ಇಟ್ಟುಕೊಂಡಿದ್ದರು’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ‘ವೆಸ್ಟ್‌ ಆಫ್‌ ಕಾರ್ಡ್‌ ರಸ್ತೆ ಬದಿಯಲ್ಲಿ ಸಾಕಷ್ಟು ಹಣ್ಣಿನ ಅಂಗಡಿಗಳಿವೆ. ಆ ಅಂಗಡಿಗತಳ ಮೇಲೆ ಹೈಟೆನ್ಷನ್‌ ವಿದ್ಯುತ್‌ ತಂತಿಗಳು ಹಾದುಹೋಗಿವೆ. ಅಲ್ಲಿ ವಿದ್ಯುತ್‌ ಕಂಬವೊಂದಿದ್ದು ಅದಕ್ಕೆ ಹೊಂದಿಕೊಂಡಂತೆಯೇ ವ್ಯಕ್ತಿಯೊಬ್ಬರು ಮಳಿಗೆ ಕಟ್ಟಿಕೊಂಡಿದ್ದಾರೆ. ಬುಧವಾರ ಸಂಜೆ 5.30ರ ಸುಮಾರಿಗೆ ನಗರದಲ್ಲಿ ಬಿರುಗಾಳಿ ಸಹಿತ ಜೋರು ಮಳೆಯಾಗಿದೆ. ಈ ವೇಳೆ ಮರದ ಕೊಂಬೆಯಿಂದ ನೀರು ‘ಇನ್ಸುಲೇಟರ್‌’ ಮೇಲೆ ಬಿದ್ದಿದೆ. ಹೀಗಾಗಿ ಶಾರ್ಟ್‌ ಸರ್ಕೀಟ್‌ ಆಗಿದೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

‘ಶಾರ್ಟ್‌ ಸರ್ಕೀಟ್‌ನಿಂದಾಗಿ ವಿದ್ಯುತ್‌ ಕಂಬದ ಸುತ್ತ ವಿದ್ಯುತ್‌ ಪ್ರವಹಿಸಿದೆ. ವಸಂತ್‌, ಅದೇ ಕಂಬಕ್ಕೆ ಕಾಲು ತಾಗಿಸಿಕೊಂಡು ಕುಳಿತಿದ್ದರಿಂದ ಅವರಿಗೂ ವಿದ್ಯುತ್‌ ಸ್ಪರ್ಶಿಸಿದೆ. ಅಲ್ಲಿದ್ದವರು ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ದಿದ್ದಾರೆ. ಚಿಕಿತ್ಸೆಗೆ ಸ್ಪಂದಿಸದೆ ರಾತ್ರಿ ಮೃತಪಟ್ಟಿದ್ದಾರೆ’ ಎಂದು ಮಾಹಿತಿ ನೀಡಿದ್ದಾರೆ.

‌ಬೆಸ್ಕಾಂ ನಿರ್ಲಕ್ಷ್ಯ: ಬೆಸ್ಕಾಂ ನಿರ್ಲಕ್ಷ್ಯ ದಿಂದಾಗಿ ವಸಂತ್ ಮೃತಪಟ್ಟಿದ್ದಾನೆ ಎಂದು ಕುಟುಂಬದವರು ದೂರಿದ್ದಾರೆ. ವಸಂತ್‌ ಸಾವಿ ಗೆ ಕಾರಣವಾಗಿರುವ ಅಧಿಕಾರಿಗಳ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT