ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರಿನಲ್ಲಿ ಹಿಂಗಾರು ಮಳೆ ಅಬ್ಬರ: ಕೆಳಸೇತುವೆ ಜಲಾವೃತ, ಸವಾರರ ಪರದಾಟ

Published 6 ನವೆಂಬರ್ 2023, 18:22 IST
Last Updated 6 ನವೆಂಬರ್ 2023, 18:22 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಸೋಮವಾರ ರಾತ್ರಿ ಧಾರಾಕಾರ ಮಳೆಯಾಗಿದೆ. ಗುಡುಗು ಸಹಿತ ಧಾರಾಕಾರ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಳಿಸಿತು.

ರಾತ್ರಿ 10 ಗಂಟೆಯ ನಂತರ ಗುಡುಗು ಸಹಿತ ಮಳೆಯ ಅಬ್ಬರ ಮತ್ತುಷ್ಟು ಜೋರಾಗಿತ್ತು. ಇದರಿಂದ ಹಲವು ಕೆಳಸೇತುವೆಗಳು ಜಲಾವೃತಗೊಂಡಿದ್ದವು. ವಾಹನ ಸವಾರರು ಪರದಾಡಿದರು. ಅಂಡರ್‌ಪಾಸ್ ಬಳಿ ಬ್ಯಾರಿಕೇಡ್ ಹಾಕಿ ವಾಹನ ಸಂಚಾರ ನಿರ್ಬಂಧಿಸಲಾಗಿತ್ತು.‌

ಶ್ರೀರಾಂಪುರ ಅಂಡರ್ ಪಾಸ್‌ ಸಂಪೂರ್ಣ ನೀರಿನಲ್ಲಿ ಮುಳುಗಡೆಯಾಗಿದೆ. ಕಂಟೋನ್ಮೆಂಟ್ - ವಸಂತ‌ಗರದ ಕೆಳಸೇತುವೆ, ಜೆ.ಸಿ. ನಗರದ ದೂರದರ್ಶನ ಕೇಂದ್ರದ ಆಸುಪಾಸಿನ ವೃತ್ತಗಳೂ ಜಲಾವೃತವಾಗಿದ್ದವು.

ಮತ್ತಿಕೆರೆ, ಯಶವಂತಪುರ, ದಾಸರಹಳ್ಳಿ, ಯಲಹಂಕ, ಬೇಗೂರು, ಕೋರಮಂಗಲ, ಚಂದ್ರಾಲೇಔಟ್, ನಾಯಂಡಹಳ್ಳಿ, ಜಯನಗರ, ಸುಂಕದಕಟ್ಟೆ ಭಾಗದಲ್ಲಿ ಭಾರೀ ಮಳೆ ಸುರಿಯಿತು.  ರಸ್ತೆಗಳಲ್ಲಿ ಹೊಳೆಯಂತೆ ನೀರು ಹರಿಯಿತು.‌ ರಾಜಕಾಲುವೆಗಳಲ್ಲಿ ನೀರು ತುಂಬಿ ಹರಿಯಿತು.

ಜಾಲಹಳ್ಳಿ ಜಂಕ್ಷನ್ ‌ಮೆಟ್ರೊ ನಿಲ್ದಾಣದ ಕೆಳಗೆ ಅಪಾರ ಪ್ರಮಾಣದ ನೀರು ಸಂಗ್ರಹಗೊಂಡು ವಾಹನ ಸವಾರರು ಪರದಾಡಿದರು.

ಕೆಲವು ಪ್ರದೇಶದಲ್ಲಿ ವಿದ್ಯುತ್ ಕೈಕೊಟ್ಟಿತ್ತು. ಕೆಲವು ರಸ್ತೆಗಳಲ್ಲಿ ಮರ ಉರುಳಿ ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.

ನಗರದಲ್ಲಿ ಮಂಗಳವಾರ ಹಾಗೂ ಬುಧವಾರ ಸಹ ಭಾರೀ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

ಬಿಬಿಎಂಪಿ ವಾರ್ ರೂಂಗೆ ಡಿಕೆಶಿ ಭೇಟಿ

ಬೆಂಗಳೂರು: ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ತಡರಾತ್ರಿಯೇ ಬಿಬಿಎಂಪಿ ಕೇಂದ್ರ ಕಚೇರಿಯ ವಾರ್ ರೂಂಗೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು.‌ ಎಲ್ಲಾದರೂ ಅನಾಹುತವಾಗಿದೆಯೇ ಎಂಬುದರ ಮಾಹಿತಿ ಪಡೆದುಕೊಂಡರು. ಎಲ್ಲ ವಲಯಗಳ ಬಿಬಿಎಂಪಿ ಅಧಿಕಾರಿಗಳಿಗೆ ಕರೆ ಮಾಡಿ ಮಳೆಯಿಂದ ಉಂಟಾಗಿರುವ ಸಮಸ್ಯೆಗಳ ಮಾಹಿತಿ ಪಡೆದುಕೊಂಡರು.

ಗಾಂಧಿನಗರ, ಸಂಜಯನಗರ, ಗಾಳಿ ಆಂಜನೇಯ ದೇವಸ್ಥಾನದ ಬಳಿಗೆ ಅಧಿಕಾರಿಗಳ ತಂಡವನ್ನು ಕಳುಹಿಸಲು ಸೂಚನೆ ನೀಡಿದರು.

ನಂತರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಮುನ್ನೆಚ್ಚರಿಕೆ ವಹಿಸುವಂತೆ ಬಿಬಿಎಂಪಿಯ ಎಲ್ಲ ವಲಯಗಳ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಹಲವು ದೂರುಗಳು ಬಂದಿವೆ. ನಾನೇ ನಾಲ್ಕೈದು ಕರೆ ಸ್ವೀಕರಿಸಿ ಮಾತನಾಡಿದ್ದೇನೆ. ತಕ್ಷಣವೇ ಸ್ಥಳಕ್ಕೆ ತೆರಳುವಂತೆ ಸೂಚಿಸಿದ್ದೇನೆ. ಜನರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ದೇವನಹಳ್ಳಿ ಅಂತರರಾಷ್ಟ್ರೀಯ ವಿಮಾನನಿಲ್ದಾಣ ರಸ್ತೆ ಹಾಗೂ ರಾಜರಾಜೇಶ್ವರಿ ನಗರದಲ್ಲಿ ಸ್ವಲ್ಪ ಸಮಸ್ಯೆಯಾಗಿದೆ ಎಂದು ತಿಳಿಸಿದರು.

ಮುಂಗಾರು ಅವಧಿಯಲ್ಲಿ ಮಳೆ ಕೈಕೊಟ್ಟಿತ್ತು. ಈಗಲಾದರೂ ಮಳೆ ಬರಲಿ. ಜನರಿಗೆ ಯಾವುದೇ ರೀತಿಯಲ್ಲೂ ತೊಂದರೆ ಆಗಬಾರದು ಎಂದು ಹೇಳಿದರು.

ಮನೆಗಳಿಗೆ ನುಗ್ಗಿದ ನೀರು

ಕುರುಬರಹಳ್ಳಿಯಲ್ಲಿ ಹಲವು ಮನೆಗಳಿಗೆ ಮಳೆ ನೀರು ನುಗ್ಗಿ ಸಮಸ್ಯೆ ಸೃಷ್ಟಿಸಿತು. ದಿನಸಿ ಸಾಮಗ್ರಿಗಳು‌, ಹಾಸಿಗೆ , ಬಟ್ಟೆ ಮಳೆಯ ನೀರಿಗೆ ತೊಯ್ದು ಹೋದವು. ನಿವಾಸಿಗಳು ರಾತ್ರಿಯಿಡೀ ಜಾಗರಣೆ ಮಾಡಬೇಕಾದ ಸ್ಥಿತಿ ನಿರ್ಮಾಣವಾಗಿತ್ತು.

ಗೊರಗುಂಟೆಪಾಳ್ಯದ ಪೈಪ್‌ಲೈನ್ ರಸ್ತೆಗಳಲ್ಲಿ ವಾಹನಗಳು ಮುಳುಗುವಷ್ಟು ಮಳೆನೀರು ತುಂಬಿಕೊಂಡಿತ್ತು‌. ನಗರದ ವಿವಿಧ ಭಾಗಗಳಲ್ಲಿರುವ ಅಂಡರ್‌ಪಾಸ್‌ಗಳು ಜಲಾವೃತವಾಗಿದ್ದವು.

ಜೆ.ಸಿ.ನಗರ ದೂರದರ್ಶನ ಕೇಂದ್ರದ ರಸ್ತೆ ಜಲಾವೃತಗೊಂಡಿದೆ.

ಜೆ.ಸಿ.ನಗರ ದೂರದರ್ಶನ ಕೇಂದ್ರದ ರಸ್ತೆ ಜಲಾವೃತಗೊಂಡಿದೆ.

ಬೆಂಗಳೂರಿನಲ್ಲಿ ಸೋಮವಾರ ಸುರಿದ ಮಳೆಯಿಂದ ಶಿರಸಿ ಮೇಲ್ಸೇತುವೆ ಮತ್ತು ಸುಲ್ತಾನ್ ರಸ್ತೆಯಲ್ಲಿ ನಿಂತ ನೀರಿನಲ್ಲೇ ವಾಹನಗಳು ಸಾಗಿದವು

ಬೆಂಗಳೂರಿನಲ್ಲಿ ಸೋಮವಾರ ಸುರಿದ ಮಳೆಯಿಂದ ಶಿರಸಿ ಮೇಲ್ಸೇತುವೆ ಮತ್ತು ಸುಲ್ತಾನ್ ರಸ್ತೆಯಲ್ಲಿ ನಿಂತ ನೀರಿನಲ್ಲೇ ವಾಹನಗಳು ಸಾಗಿದವು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT