ಸೋಮವಾರ, 20 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Bengaluru Rains | ನಗರದಲ್ಲಿ ಮುಂದುವರಿದ ಪೂರ್ವ ಮುಂಗಾರು

ಹಲವೆಡೆ ಭಾರಿ ಮಳೆ; ರಸ್ತೆಯಲ್ಲಿ ನಿಂತ ನೀರು, ಸಾಲುಗಟ್ಟಿ ನಿಂತ ವಾಹಗಳು
Published 10 ಮೇ 2024, 0:18 IST
Last Updated 10 ಮೇ 2024, 0:18 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮುಂಗಾರುಪೂರ್ವ ಮಳೆ ಬುಧವಾರವೂ ಮುಂದುವರಿಯಿತು. ಸಂಜೆ ವೇಳೆಗೆ ಬಿರುಗಾಳಿ, ಗುಡುಗು, ಮಿಂಚು ಸಹಿತ ಭಾರಿ ಮಳೆಯಾಯಿತು. ತಡರಾತ್ರಿಯವರೆಗೂ ನಗರದ ಬಹುತೇಕ ಪ್ರದೇಶಗಳಲ್ಲಿ ಮಳೆ ಸುರಿಯಿತು.

ಹಂಪಿನಗರ, ನಂದಿನಿ ಬಡಾವಣೆ, ಮಾರುತಿ ಮಂದಿರ, ನಾಗಪುರ, ನಾಯಂಡಹಳ್ಳಿಯಲ್ಲಿ ಅತಿಹೆಚ್ಚು ಮಳೆಯಾಯಿತು. ನಗರದ ವಿವಿಧೆಡೆ ರಸ್ತೆಗಳಲ್ಲಿ ನೀರು ನಿಂತಿದ್ದರಿಂದ ವಾಹನ ಸಂಚಾರಕ್ಕೆ ತೊಡಕು ಉಂಟಾಯಿತು. ವಾಹನಗಳು ನಿಧಾನಗತಿಯಲ್ಲಿ ಸಾಗಿದ್ದರಿಂದ ದಟ್ಟಣೆ ವಿಪರೀತಗೊಂಡಿತು.

ಚಾಲುಕ್ಯ ವೃತ್ತದಿಂದ ಹೆಬ್ಬಾಳ, ಸುಮನಹಳ್ಳಿ ಜಂಕ್ಷನ್, ನಾಯಂಡಹಳ್ಳಿ ಜಂಕ್ಷನ್‌ ಹಾಗೂ ಸುತ್ತಮುತ್ತ ವಿಪರೀತ ದಟ್ಟಣೆ ಉಂಟಾಯಿತು. ನಗರದ ಅನಿಲ್ ಕುಂಬ್ಳೆ ವೃತ್ತದ ಬಳಿ ರಸ್ತೆ ಮೇಲೆಯೇ ನೀರು ನಿಂತುಕೊಂಡಿತ್ತು. ಬಿಆರ್‌ವಿ ಜಂಕ್ಷನ್‌ ಕಡೆಗೆ ಸಾಗುತ್ತಿದ್ದ ವಾಹನಗಳು ನಿಧಾನವಾಗಿ ಸಾಗಿದವು.

ಪಂತರಪಾಳ್ಯ ಹೊರವರ್ತುಲ ರಸ್ತೆ, ಹಳೇ ಉದಯ ಟಿ.ವಿ ಜಂಕ್ಷನ್‌, ಮಲ್ಲೇಶ್ವರದ ಸಂಪಿಗೆ ರಸ್ತೆ, ಬಿನ್ನಿ ಮಿಲ್ ಹಾಗೂ ಸುತ್ತಮುತ್ತಲಿನ ಕೆಲ ರಸ್ತೆಗಳಲ್ಲಿಯೇ ನೀರು ಹರಿಯಿತು. ರಾಜಾಜಿನಗರ, ಯಶವಂತಪುರ, ಶಿವಾಜಿನಗರ, ಆರ್‌ಟಿ ನಗರ, ಮೈಸೂರು ರಸ್ತೆ, ಕನಕಪುರ ರಸ್ತೆ ಸೇರಿದಂತೆ ನಗರದ ಬಹುತೇಕ ಕಡೆಗಳಲ್ಲಿ ಉತ್ತಮ ಮಳೆಯಾಗಿದೆ.

70 ಮರಗಳು ಧರೆಗೆ: ಬಿಬಿಎಂಪಿ ವ್ಯಾಪ್ತಿಯ ಎಂಟು ವಲಯಗಳಲ್ಲಿ ಗುರುವಾರ ಸುರಿದ ಮಳೆ ಹಾಗೂ ಬಿರುಗಾಳಿಗೆ 70 ಮರಗಳು ಧರೆಗುರುಳಿವೆ. ಇದರಲ್ಲಿ 55 ಮರಗಳನ್ನು ತೆರವು ಮಾಡಲಾಗಿದೆ. 171 ಪ್ರದೇಶಗಳಲ್ಲಿ ಕೊಂಬೆಗಳು ಬಿದ್ದಿವೆ. ಇರಲ್ಲಿ 119 ಕೊಂಬೆಗಳನ್ನು ತೆರವು ಮಾಡಲಾಗಿದೆ ಎಂದು ಬಿಬಿಎಂಪಿ ಪ್ರಕಟಣೆ ತಿಳಿಸಿದೆ.

ಒಂದು ವಾರ ಮಳೆ: ಮುಂದಿನ ಒಂದು ವಾರ ಬಿರುಗಾಳಿ, ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

36 ಸ್ಥಳಗಳ ಗುರುತು: ಮಳೆ ಬಂದಾಗ ಪ್ರವಾಹ ಉಂಟಾಗುವ 36 ಸ್ಥಳಗಳನ್ನು ಬಿಬಿಎಂಪಿ ಗುರುತಿಸಿದೆ.  ನೀರು ನಿಲ್ಲುವ ಎಲ್ಲ ಅಂಡರ್‌ಪಾಸ್‌ಗಳಲ್ಲಿ 36 ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ತಿಳಿಸಿದ್ದಾರೆ.

ಲವಕುಶನಗರ, ವೃಷಭಾವತಿ ವ್ಯಾಲಿ, ಪಿಲಪ್ಪನಕಟ್ಟೆ ವ್ಯಾಲಿ, ಕಲ್ಯಾಣನಗರ, ಎಚ್‌ಆರ್‌ಬಿಆರ್‌ ಬಡಾವಣೆ, ಮಾರ್ಗನ್‌ ರಸ್ತೆ, ಬ್ರಿಗೇಡ್‌ ಜಂಕ್ಷನ್‌, ಆರ್‌ಆರ್‌ನಗರ, ಹೊಯ್ಸಳನಗರ, ನಾಯಂಡಹಳ್ಳಿ ಶಂಕರಪ್ಪ ಬಡಾವಣೆ, ಹೊಸಕೆರೆಹಳ್ಳಿ, ಗ್ಲೋಬಲ್‌ ವಿಲೇಜ್‌ ಸೇರಿದಂತೆ ಪ್ರವಾಹ ಉಂಟಾಗುವ ಪ್ರದೇಶಗಳನ್ನು ಗುರುತಿಸಲಾಗಿದೆ.

‘ಸರಿಯಾದ ನಿರ್ವಹಣೆಯಿಲ್ಲ’: ಪ್ರವಾಹ ಪೀಡಿತ ಪ್ರದೇಶಗಳನ್ನು ಬಿಬಿಎಂಪಿ ಸರಿಯಾಗಿ ನಿರ್ವಹಣೆ ಮಾಡದ ಕಾರಣ ಕೆಲವು ಭಾಗಗಳಲ್ಲಿ ಜನರಿಗೆ ಸಂಕಷ್ಟ ಉಂಟಾಗಲಿದೆ. ಬಿಬಿಎಂಪಿಯ ಪೂರ್ವ, ಆರ್‌ಆರ್ ನಗರ, ಪಶ್ಚಿಮ ಮತ್ತು ಮಹದೇವಪುರ ವಲಯಗಳಲ್ಲಿ ಇಂಥ ಪ್ರದೇಶಗಳು ಹೆಚ್ಚಿವೆ ಎಂದು ಸ್ಥಳೀಯರು ತಿಳಿಸಿದ್ದಾರೆ.

ನಗರದ ಮೈಸೂರು ರಸ್ತೆಯಲ್ಲಿ ಭಾರಿ ಮಳೆಯ ನಡುವೆ ವಾಹನಗಳು ಸಾಗಿದವು

ನಗರದ ಮೈಸೂರು ರಸ್ತೆಯಲ್ಲಿ ಭಾರಿ ಮಳೆಯ ನಡುವೆ ವಾಹನಗಳು ಸಾಗಿದವು

–ಪ್ರಜಾವಾಣಿ ಚಿತ್ರ/ಪುಷ್ಕರ್‌ ವಿ.

ಪ್ರವಾಹ ಪ್ರದೇಶಗಳ ವರ್ಗೀಕರಣ

ಮಳೆಗಾಲದಲ್ಲಿ ಪ್ರವಾಹ ಉಂಟಾಗುವ ಪ್ರದೇಶಗಳನ್ನು ದುರ್ಬಲ ಮತ್ತು ಮಧ್ಯಮ ಎಂದು ವರ್ಗೀಕರಿಸಲಾಗಿದೆ.  25 ತೀವ್ರ ಪ್ರವಾಹ 49 ಮಧ್ಯಮ ಪ್ರವಾಹ ಪ್ರದೇಶಗಳನ್ನು ಗುರುತಿಸಲಾಗಿದೆ. ಮಳೆಗಾಲಕ್ಕೆ ಮುಂಚಿತವಾಗಿ ಬಿಬಿಎಂಪಿಯು ವಲಯ ವಿಪತ್ತು ನಿಯಂತ್ರಣ ಕೊಠಡಿಗಳನ್ನು ಸಕ್ರಿಯಗೊಳಿಸಿದೆ. ದೂರು ದಾಖಲಿಸಲು 64 ವಿಭಾಗೀಯ ವಾಟ್ಸ್‌ಆ್ಯಪ್‌ ಗುಂಪುಗಳನ್ನು ಕೂಡ ರಚಿಸಲಾಗಿದೆ ಎಂದು ಬಿಬಿಎಂಪಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ವಿಪತ್ತು ನಿಯಂತ್ರಣ ಕೊಠಡಿ ಸ್ಥಾಪನೆ

ಬಿಬಿಎಂಪಿ ವಿಪತ್ತು ನಿಯಂತ್ರಣಕ್ಕೆ ಸಿದ್ಧತೆಗಳನ್ನು ಮಾಡಿಕೊಂಡಿದೆ. ದಿನದ 24 ಗಂಟೆಯೂ ಕಾರ್ಯನಿರ್ವಹಿಸುವ ಸಹಾಯವಾಣಿ 1533 ಜೊತೆಗೆ ನಗರದ ಎಂಟೂ ವಲಯಗಳಲ್ಲೂ ಪ್ರತ್ಯೇಕ ನಿಯಂತ್ರಣ ಕೊಠಡಿಗಳನ್ನು ಸ್ಥಾಪಿಸಲಾಗಿದೆ.

ಬೊಮ್ಮನಹಳ್ಳಿ ವಲಯ: 080-25732447257356429480685707

ದಾಸರಹಳ್ಳಿ ವಲಯ: 080-283949099480685709

ಪೂರ್ವ ವಲಯ: 080-229758039480685702

ಮಹದೇವಪುರ ವಲಯ: 080-285123009480685706

ರಾಜರಾಜೇಶ್ವರಿ ನಗರ ವಲಯ: 080-286018519480685708

ದಕ್ಷಿಣ ವಲಯ: 948068570480265663628022975703

ಪಶ್ಚಿಮ ವಲಯ: 080-23463366235616929480685703

ಯಲಹಂಕ ವಲಯ: 080-23636671229759369480685705

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT