ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಳೆ ಅಬ್ಬರ: ಮನೆಗಳಿಗೆ ನುಗ್ಗಿದ ನೀರು

ಸಿಡಿಲು ಹಾಗೂ ಗುಡುಗಿನ ಸದ್ದು ಜೋರು l ರಸ್ತೆಯಲ್ಲಿ ಹರಿದ ನೀರು
Last Updated 17 ಮೇ 2022, 19:51 IST
ಅಕ್ಷರ ಗಾತ್ರ

ಬೆಂಗಳೂರು: ನಗರದಲ್ಲಿ ಮಂಗಳವಾರ ಸಂಜೆಯಿಂದ ರಾತ್ರಿಯವರೆಗೂ ಅಬ್ಬರದ ಮಳೆ ಸುರಿದಿದ್ದು, 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಪ್ರಮುಖ ರಸ್ತೆಗಳಲ್ಲಿ ನೀರು ಹೊಳೆಯಂತೆ ಹರಿಯಿತು.

ಹಲವು ದಿನಗಳಿಂದ ಬಿಡುವು ಕೊಡುತ್ತಲೇ ನಗರದಲ್ಲಿ ಜೋರು ಮಳೆ ಸುರಿಯುತ್ತಿದ್ದು, ಸಿಡಿಲು ಹಾಗೂ ಗುಡುಗಿನ ಸದ್ದು ಜೋರಾಗಿದೆ.

ಬಹುತೇಕ ಪ್ರದೇಶಗಳಲ್ಲಿ ಮಂಗಳವಾರ ಬೆಳಿಗ್ಗೆಯಿಂದಲೇ ಮೋಡ ಕವಿದ ವಾತಾವರಣ ಕಾಣಿಸಿಕೊಂಡಿತ್ತು. ಮಂಗಳವಾರ ಮಧ್ಯಾಹ್ನ ತುಂತುರು ಮಳೆ ಆರಂಭವಾಗಿ, ಕ್ರಮೇಣ ಜೋರಾಗಿ ಸುರಿಯಿತು. ಸಂಜೆಯವರೆಗೂ ಬಿಡುವು ಕೊಟ್ಟಿದ್ದ ಮಳೆ, ನಂತರ ತನ್ನ ಆರ್ಭಟ ಮುಂದುವರಿಸಿತು. ಸಂಜೆಯಿಂದ ರಾತ್ರಿ 10 ಗಂಟೆವರೆಗೂ ಜೋರು ಮಳೆ ಸುರಿಯಿತು.

ಬಸವೇಶ್ವರನಗರ, ಕುರುಬರಹಳ್ಳಿ, ಜಯನಗರ 3ನೇ ಹಂತ, ಶಿವಾಜಿನಗರದ ಶಿವಾಜಿ ರಸ್ತೆ, ಜೆ.ಸಿ.ನಗರ ಹಾಗೂ ಜಗಜೀವನ್‌ರಾಮ್‌ ನಗರದ 100ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತು. ಇದರಿಂದಾಗಿ ನಿವಾಸಿಗಳು ತೊಂದರೆ ಅನುಭವಿಸಿದರು.

ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಕಾಲುವೆಗಳಲ್ಲಿ ನೀರು ತುಂಬಿ ಹರಿದು, ಮನೆಗಳಿಗೆ ನುಗ್ಗಿತು. ಪೀಠೋಪಕರಣ ಹಾಗೂ ಇತರೆ ವಸ್ತುಗಳನ್ನು ನೀರಿನಲ್ಲಿ ತೇಲಿ ಹೋದವು. ಮಳೆ ಕಡಿಮೆಯಾದ ನಂತರ, ಮನೆಯೊಳಗೆ ನುಗ್ಗಿದ್ದ ನೀರನ್ನು ಹೊರಹಾಕುವಲ್ಲಿ ನಿವಾಸಿಗಳು ನಿರತರಾಗಿದ್ದರು. ಕೆಲವರು, ತೇಲಿಹೋದ ವಸ್ತುಗಳಿಗಾಗಿ ಹುಡುಕಾಟ ನಡೆಸಿದರು.

‘ಮಂಗಳವಾರ ಸಂಜೆಯಿಂದ ರಾತ್ರಿಯವರೆಗೂ ನಗರದಲ್ಲಿ ಉತ್ತಮ ಮಳೆ ಆಗಿದೆ. ಮನೆಗಳಿಗೆ ನೀರು ನುಗ್ಗಿದ ಬಗ್ಗೆ ಹೆಚ್ಚು ದೂರುಗಳು ಬಂದಿದ್ದವು. ಸಂಬಂಧಪಟ್ಟ ವಲಯ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಸಿಬ್ಬಂದಿ ಸ್ಥಳಕ್ಕೆ ಹೋಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ರಸ್ತೆಯಲ್ಲಿ ನೀರು ಹರಿಯುತ್ತಿದ್ದ ಹಾಗೂ ಮರದ ಕೊಂಬೆಗಳು ಬಿದ್ದಿದ್ದ ಬಗ್ಗೆಯೂ ದೂರುಗಳು ಬಂದಿವೆ’ ಎಂದು ಬಿಬಿಎಂಪಿ ಸಹಾಯವಾಣಿ ಸಿಬ್ಬಂದಿ ಹೇಳಿದರು.

‌ರಸ್ತೆಯಲ್ಲಿ ಹೊಳೆಯಂತೆ ಹರಿದ ನೀರು: ಜೋರು ಮಳೆಯಿಂದಾಗಿ ಸಂಗ್ರಹವಾದ ನೀರು ನಗರದ ಹಲವು ರಸ್ತೆಗಳಲ್ಲಿ ಧಾರಾಕಾರವಾಗಿ ಹರಿಯಿತು.

ಕೆಂಗೇರಿ, ರಾಜರಾಜೇಶ್ವರಿನಗರ, ನಾಯಂಡಹಳ್ಳಿ, ದೀಪಾಂಜಲಿನಗರ, ವಿಜಯನಗರ, ರಾಜಾಜಿನಗರ, ಗಿರಿನಗರ, ಹೊಸಕೆರೆಹಳ್ಳಿ, ಹನುಮಂತನಗರ, ಚಾಮರಾಜಪೇಟೆ, ಮೆಜೆಸ್ಟಿಕ್, ಗಾಂಧಿನಗರ, ಚಿಕ್ಕಪೇಟೆ, ಶೇಷಾದ್ರಿಪುರ, ಮಲ್ಲೇಶ್ವರ, ಶೇಷಾದ್ರಿಪುರ, ಯಶವಂತಪುರ, ಪೀಣ್ಯ, ದಾಸರಹಳ್ಳಿ, ಗೊರಗುಂಟೆಪಾಳ್ಯ ಹಾಗೂ ಸುತ್ತಮುತ್ತ ಮಳೆ ಜೋರಾಗಿತ್ತು.

ಶಿವಾಜಿನಗರ, ಎಂ.ಜಿ. ರಸ್ತೆ, ಅಶೋಕನಗರ, ಕಮರ್ಷಿಯಲ್ ಸ್ಟ್ರೀಟ್, ಕೋರಮಂಗಲ, ವಿವೇಕನಗರ, ಮಡಿವಾಳ, ಎಚ್‌ಎಸ್‌ಆರ್ ಲೇಔಟ್ ಮತ್ತು ಸುತ್ತಮುತ್ತ ಪ್ರದೇಶಗಳಲ್ಲೂ ಉತ್ತಮ ಮಳೆ ಆಯಿತು. ಮೆಜೆಸ್ಟಿಕ್‌ ರೈಲ್ವೆ ಕೆಳಸೇತುವೆ, ಶಿವಾನಂದ ವೃತ್ತ, ಬ್ಯಾಟರಾಯನಪುರ ಮೇಲ್ಸೇತುವೆ, ಸ್ಯಾಟ್‌ಲೈಟ್ ಬಸ್‌ ನಿಲ್ದಾಣ ಎದುರು ಸೇರಿದಂತೆ ಹಲವೆಡೆ ನೀರು ಹೆಚ್ಚಿನ ಪ್ರಮಾಣದಲ್ಲಿತ್ತು. ಅದರಲ್ಲೇ ವಾಹನಗಳು ಸಂಚರಿಸಿದವು. ಕೆಲ ವಾಹನಗಳು ಕೆಟ್ಟು ನಿಂತಿದ್ದ ದೃಶ್ಯಗಳೂ ಕಾಣಿಸಿದವು. ಅಂಥ ವಾಹನಗಳನ್ನು ಸ್ಥಳೀಯರೇ ತಳ್ಳಿ, ಸುರಕ್ಷಿತ ಸ್ಥಳಕ್ಕೆ ತಲುಪಿಸಿದರು.

ಚಿಕ್ಕಪೇಟೆ, ಸುಲ್ತಾನ್ ಪೇಟೆ, ಬಿವಿಕೆ ಅಯ್ಯಂಗಾರ್ ರಸ್ತೆ ಹಾಗೂ ಸುತ್ತಮುತ್ತ ರಸ್ತೆಗಳಲ್ಲಿ ಎರಡು ಅಡಿಯಷ್ಟು ನೀರು ಹರಿಯಿತು. ವಾಹನಗಳ ಸಂಚಾರ ಹಾಗೂ ಸಾರ್ವಜನಿಕರ ಸಂಚಾರಕ್ಕೆ ತೊಂದರೆ ಉಂಟಾಯಿತು.

ಮಳೆ ಹೆಚ್ಚಿದ್ದರಿಂದ ರಸ್ತೆಯ ಅಕ್ಕ–ಪಕ್ಕದಲ್ಲಿ ವಾಹನ ನಿಲ್ಲಿಸಿದ್ದ ಸವಾರರು, ಮಳಿಗೆಗಳಲ್ಲಿ ಆಶ್ರಯ ಪಡೆದಿದ್ದರು.

ವಸತಿ ಪ್ರದೇಶದಲ್ಲಿ ಮುಳುಗಿದ ವಾಹನಗಳು: ಕುಮಾರಸ್ವಾಮಿ ಲೇಔಟ್, ಜೆ.ಪಿ.ನಗರ ಹಾಗೂ ಪುಟ್ಟೇನಹಳ್ಳಿಯ ಕೆಲ ಪ್ರದೇಶಗಳಲ್ಲಿ ವಸತಿ ಪ್ರದೇಶಗಳ ರಸ್ತೆಗಳಲ್ಲಿ ನೀರು ಹೆಚ್ಚಿನ ಪ್ರಮಾಣದಲ್ಲಿ ಹರಿಯಿತು. ನಿವಾಸಿಗಳ ದ್ವಿಚಕ್ರ ವಾಹನ ಹಾಗೂ ಕಾರುಗಳು ನೀರಿನಲ್ಲಿ ಮುಳಗಿದ್ದು ಕಂಡುಬಂತು.

ಕಾರ್ಮಿಕರ ಶೆಡ್‌ ಮೇಲೆ ಕುಸಿದ ಗೋಡೆ

ಸೋಮವಾರವೂ ನಗರದಲ್ಲಿ ಜೋರು ಮಳೆ ಆಗಿತ್ತು. ಕೊಡಿಗೇಹಳ್ಳಿ ಬಳಿ ಮಧ್ಯಾಹ್ನ 4.30ರ ಸುಮಾರಿಗೆ ಗೋಡೆ ಕುಸಿದು ಹಾನಿ ಸಂಭವಿಸಿದೆ.

‘ಬಿಬಿಎಂಪಿ ಪೌರ ಕಾರ್ಮಿಕರ ಕುಟುಂಬಗಳು, ಶೆಡ್‌ ನಿರ್ಮಿಸಿಕೊಂಡು ವಾಸವಿದ್ದರು. ಶೆಡ್‌ಗೆ ಹೊಂದಿಕೊಂಡ ಜಾಗಕ್ಕೆ ಕಾಂಪೌಂಡ್ ಗೋಡೆ ನಿರ್ಮಿಸಲಾಗಿದೆ. ಮಳೆ ಜೋರಾಗಿದ್ದರಿಂದ ಗೋಡೆ ಕುಸಿದು, ಶೆಡ್‌ಗಳ ಮೇಲೆ ಬಿದ್ದಿದೆ. ಇದರಿಂದಾಗಿ, 25 ಶೆಡ್‌ಗಳಿಗೆ ಹಾನಿಯಾಗಿದೆ. ಕೆಲ ಶೆಡ್‌ಗಳು ಸಂಪೂ
ರ್ಣವಾಗಿ ನೆಲಸಮವಾಗಿವೆ’ ಎಂದು ಪೌರ ಕಾರ್ಮಿಕ ಬಾಲರಾಜು ತಿಳಿಸಿದರು.‌

‘ಮಕ್ಕಳು, ವೃದ್ಧರ ಜೊತೆ ಕಾರ್ಮಿಕರು ಶೆಡ್‌ನಲ್ಲಿದ್ದರು. ಇದೀಗ ಶೆಡ್‌ ಖಾಲಿ ಮಾಡಿ, ಬೇರೆಡೆ ಹೋಗಿದ್ದಾರೆ. ಪುನಃ ಮಳೆ ಬಂದರೆ ಏನಾಗುತ್ತದೆ ಎಂಬ ಆತಂಕ ಇತರೆ ಶೆಡ್‌ನಲ್ಲಿರುವ ಕಾರ್ಮಿಕರನ್ನು ಕಾಡುತ್ತಿದೆ’ ಎಂದೂ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT