ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

'ರೇರಾ' ನಡೆಗೆ ಆಕ್ರೋಶ: ಪರಿಹಾರ ಮೊತ್ತ ಭೂ ಕಂದಾಯ ಬಾಕಿಗೆ ಪರಿಗಣನೆ

Last Updated 18 ಜನವರಿ 2020, 21:52 IST
ಅಕ್ಷರ ಗಾತ್ರ

ಬೆಂಗಳೂರು: ರಿಯಲ್‌ ಎಸ್ಟೇಟ್‌ ನಿಯಂತ್ರಣ ಮತ್ತು ಅಭಿವೃದ್ಧಿ ಕಾಯ್ದೆಯ ನಿಯಮ ಉಲ್ಲಂಘಿಸಿರುವ ಡೆವಲಪರ್‌ಗಳು, ದೂರುದಾರರು ಅಥವಾ ಮನೆ ಖರೀದಿದಾರರಿಗೆ ಪಾವತಿಸಬೇಕಾದ ದಂಡ ಅಥವಾ ಪರಿಹಾರದ ಮೊತ್ತವನ್ನು ಭೂ ಕಂದಾಯ ಬಾಕಿ ಎಂಬುದಾಗಿ ಪರಿಗಣಿಸಬೇಕು ಎಂದು ರಿಯಲ್‌ ಎಸ್ಟೇಟ್‌ ನಿಯಂತ್ರಣ ಪ್ರಾಧಿಕಾರ (ರೇರಾ) ಹೇಳಿದೆ.

ಈ ಕುರಿತು ಪ್ರಾಧಿಕಾರದ ಕಾರ್ಯದರ್ಶಿಯವರು ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿಮತ್ತು ವಸತಿ ಇಲಾಖೆಗೆ ಪತ್ರ ಬರೆದಿದ್ದಾರೆ. ‘ರೇರಾದ ಈ ನಡೆ ಜವಾಬ್ದಾರಿಯಿಂದ ನುಣುಚಿಕೊಳ್ಳುವ ಪ್ರಯತ್ನ’ ಎಂದು ರೇರಾ ಕಾರ್ಯಕರ್ತರು ದೂರಿದ್ದಾರೆ.

‘ದಂಡ ವಸೂಲಿಗೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳುವುದನ್ನು ಬಿಟ್ಟು ಪ್ರಾಧಿಕಾರವು ಸರ್ಕಾರಕ್ಕೆ ಪತ್ರ ಬರೆದು ಸುಮ್ಮನಾಗುತ್ತಿದೆ. ಪ್ರಾಧಿಕಾರವು ಈ ರೀತಿ ಪತ್ರ ಬರೆಯುತ್ತಿರುವುದು ಇದು ಮೂರನೇ ಬಾರಿ. ದೂರುದಾರರಿಗೆ ಡೆವಲಪರ್‌ಗಳಿಂದ ಪರಿಹಾರ ಕೊಡಿಸುವಲ್ಲಿ ರೇರಾ ಇದುವರೆಗೂ ಯಶಸ್ವಿಯಾಗಿಲ್ಲ’ ಎಂದು ರೇರಾ ಕಾರ್ಯಕರ್ತ ಶಂಕರ್‌ ದೂರಿದರು.

ಪತ್ರದಲ್ಲಿಯೇ ಹೇಳಿರುವಂತೆ, ಒಂದು ಪ್ರಕರಣ ಹೊರತುಪಡಿಸಿ ಉಳಿದ ಪ್ರಕರಣಗಳಲ್ಲೂ ದಂಡಅಥವಾ ಪರಿಹಾರ ವಸೂಲಿ ಮಾಡಿಲ್ಲ. ‘ಬಾಕಿ ಇರುವ ಪ್ರಕರಣಗಳನ್ನು ಬೇಗ ಇತ್ಯರ್ಥ ಮಾಡಬೇಕು ಎಂದು ಪತ್ರ ಬರೆಯುವ ರೇರಾ, ತನ್ನ ಅಧಿಕಾರವನ್ನೇ ಸರಿಯಾಗಿ ಬಳಸಿಕೊಳ್ಳುತ್ತಿಲ್ಲ’ ಎಂದು ಶಂಕರ್‌ ದೂರಿದರು.

‘ಈ ಪ್ರಕರಣಗಳನ್ನು ಬಗೆಹರಿಸಲು ಆಯಾ ಜಿಲ್ಲಾಧಿಕಾರಿಗಳಿಗೆ ಸೂಚಿಸುವ ಬದಲು, ಕಾನೂನಿನಲ್ಲಿ ತಿದ್ದುಪಡಿ ತಂದು ಪ್ರಾಧಿಕಾರವೇ ಅವುಗಳನ್ನು ಬಗೆಹರಿಸಬೇಕು ಮತ್ತು ದೂರುದಾರರಿಗೆ ಪರಿಹಾರ ಸಿಗುವಂತೆ ಮಾಡಬೇಕು’ ಎಂದು ಸಲಹೆ ನೀಡಿದರು.

‘ರೇರಾ ನಿಯಮ ಸುಧಾರಣೆ ಕೋರಿ, ರಾಜ್ಯ ಸರ್ಕಾರ ಮೂರನೇ ಬಾರಿ ಆಕ್ಷೇಪ ಗಳನ್ನು ಆಹ್ವಾನಿಸಿದೆ.2018 ಮೇನಲ್ಲಿ ಅಧಿಸೂಚನೆ ಹೊರಡಿಸಿದ ನಂತರ, ನಾವು ಹಲವು ಬಾರಿ ಆಕ್ಷೇಪಣೆ ಸಲ್ಲಿಸಿದ್ದೇವೆ. ಆದರೆ, ಹಲವು ಆಕ್ಷೇಪಣೆಗಳಿಗೆ ಸ್ಪಂದನೆ ಸಿಕ್ಕಿಲ್ಲ. ಭಾಗಶಃ ಸ್ವಾಧೀನಾನುಭವ ಪತ್ರದ ಬದಲಿಗೆ, ಒಂದೇ ಬಾರಿ ಸಂಪೂರ್ಣ ಸ್ವಾಧೀನಾನುಭವ ಪತ್ರ ನೀಡುವ ನಿಯಮ ತರಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆ’ ಎಂದರು.

‘ಕಾಯ್ದೆಯಲ್ಲಿ ಮಾರಾಟ ಒಪ್ಪಂದ ಅಂಶವನ್ನೂ ಸೇರಿಸಬೇಕು’ ಎಂದರು.

ಅಂಕಿ ಅಂಶ
288:ಡೆವಲಪರ್‌ಗಳು ಮನೆ ಖರೀದಿದಾರರಿಗೆ ಬಾಕಿ ಉಳಿಸಿಕೊಂಡ ಪ್ರಕರಣಗಳು
₹118 ಕೋಟಿ:ಡೆವಲಪರ್‌ಗಳು ಮನೆ ಖರೀದಿದಾರರಿಗೆ ನೀಡಬೇಕಾದ ಬಾಕಿ ಮೊತ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT