ಶುಕ್ರವಾರ, ಮಾರ್ಚ್ 31, 2023
33 °C

ಬೆಂಗಳೂರು ದಕ್ಷಿಣ ಕ್ಷೇತ್ರ: ಕೃಷ್ಣಪ್ಪ ಹಿಡಿತ ಸಡಿಲಗೊಳಿಸಲು ಕಾಂಗ್ರೆಸ್ ಯತ್ನ

ಎಸ್‌.ಕೆ. ವಿಜಯಕುಮಾರ್‌ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಬೆಂಗಳೂರು ದಕ್ಷಿಣ ಕ್ಷೇತ್ರ ಅಸ್ತಿತ್ವಕ್ಕೆ ಬಂದಾಗಿನಿಂದ ಮೂರು ಬಾರಿ ಶಾಸಕರಾಗಿರುವ ಎಂ.ಕೃಷ್ಣಪ್ಪ ಅವರ ಬಿಗಿ ಹಿಡಿತದಿಂದ ಕ್ಷೇತ್ರವನ್ನು ಬಿಡಿಸಲು ಕಾಂಗ್ರೆಸ್‌ ಸಿದ್ಧತೆ ನಡೆಸುತ್ತಿದೆ. ಜೆಡಿಎಸ್ ಕೂಡ ತನ್ನದೇ ಮತ ಬ್ಯಾಂಕ್‌ ಸೃಷ್ಟಿಸಿಕೊಳ್ಳುವ ತಯಾರಿ ಮಾಡುತ್ತಿದೆ.

ಬೆಂಗಳೂರು ದಕ್ಷಿಣದ ತುದಿಗೆ ಚಾಚಿಕೊಂಡಿರುವ ಕ್ಷೇತ್ರ ಉತ್ತರಹಳ್ಳಿಯಿಂದ ಆರಂಭವಾಗಿ, ಸುಬ್ರಹ್ಮಣ್ಯಪುರ, ವಸಂತಪುರ, ಯಲಚೇನಹಳ್ಳಿ, ಚುಂಚಘಟ್ಟ, ಬೇಗೂರು, ಕಾಳೇನ ಅಗ್ರಹಾರ, ಗೊಟ್ಟಿಗೆರೆ ಸುತ್ತಮುತ್ತಲ ಪ್ರದೇಶವನ್ನು ಒಳಗೊಂಡಿದೆ. ನಗರ ಮತ್ತು ನಗರವಾಗಿ ಹೊರಳುತ್ತಿರುವ ಹಳ್ಳಿಗಳು, ನೈಸ್ ರಸ್ತೆಯಿಂದ ಆಚೆಗಿನ ಹಳ್ಳಿಗಳೂ ಈ ಕ್ಷೇತ್ರದ ವ್ಯಾಪ್ತಿಯಲ್ಲಿವೆ. ಎಲೆಕ್ಟ್ರಾನಿಕ್ ಸಿಟಿಯಿಂದ ಬನ್ನೇರುಘಟ್ಟದ ತುದಿಗೆ ಮತ್ತು ಜಿಗಣಿ ತನಕ ವ್ಯಾಪಿಸಿಕೊಂಡಿದೆ.

2008ರಲ್ಲಿ ಕ್ಷೇತ್ರ ಪುನರ್ ವಿಂಗಡಣೆಯಾದಾಗ ಉತ್ತರಹಳ್ಳಿ ಕ್ಷೇತ್ರದಲ್ಲಿದ್ದ ಪ್ರದೇಶಗಳು ಬೆಂಗಳೂರು ದಕ್ಷಿಣ ಕ್ಷೇತ್ರವಾಗಿ ಪ್ರತ್ಯೇಕಗೊಂಡಿತು. ನಗರ ಮತ್ತು ಗ್ರಾಮೀಣ ಜನರು, ವಲಸೆ ಕಾರ್ಮಿಕರು ಈ ಕ್ಷೇತ್ರದ ಮತದಾರರು. ರಾಜ್ಯದಲ್ಲಿಯೇ ಅತಿ ಹೆಚ್ಚು ಮತದಾರರನ್ನು ಹೊಂದಿರುವ ವಿಧಾನಸಭಾ ಕ್ಷೇತ್ರ ಎಂಬುದೂ ಮತ್ತೊಂದು ವಿಶೇಷ. ಈ ಕ್ಷೇತ್ರದಲ್ಲಿ 6.50 ಲಕ್ಷ ಮತದಾರರಿದ್ದಾರೆ. 2018ರ ಚುನಾವಣೆಯಲ್ಲಿ 6.03 ಲಕ್ಷ ಜನ ಮತ ಚಲಾಯಿಸಿದ್ದರು.

ಕ್ಷೇತ್ರ ವಿಂಗಡಣೆಯಾದ ನಂತರದ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ತನ್ನ ಹಿಡಿತ ಸಾಧಿಸಿಕೊಂಡೇ ಬಂದಿದೆ. ಸತತ ಮೂರು ಬಾರಿ ಎಂ. ಕೃಷ್ಣಪ್ಪ ಅವರೇ ಶಾಸಕರಾಗಿ ಆಯ್ಕೆಯಾಗಿದ್ದಾರೆ. ನಾಲ್ಕನೇ ಬಾರಿ ಚುನಾವಣೆಗೆ ಸ್ಪರ್ಧಿಸುವ ಉಮೇದಿನಲ್ಲಿದ್ದಾರೆ. ಬಿಜೆಪಿಯಿಂದ ತುಳಸಿ ಮುನಿರಾಜಗೌಡ ಕೂಡ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ. ರಾಜರಾಜೇಶ್ವರಿನಗರ ಅಥವಾ ಬೆಂಗಳೂರು ದಕ್ಷಿಣ ಕ್ಷೇತ್ರ ಎರಡರಲ್ಲಿ ಒಂದು ಕಡೆ ಟಿಕೆಟ್ ಬಯಸುತ್ತಿದ್ದಾರೆ. ಅದರಲ್ಲೂ ಬೆಂಗಳೂರು ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಲು ಹೆಚ್ಚು ಉತ್ಸಾಹ ತೋರುತ್ತಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ.

ಇನ್ನು ಕಾಂಗ್ರೆಸ್‌ನಿಂದ ಆರ್.ಕೆ. ರಮೇಶ್, ರಾಜಗೋಪಾಲರೆಡ್ಡಿ, ಅವರಪತ್ನಿ ಸುಷ್ಮಾ ರಾಜಗೋಪಾಲರೆಡ್ಡಿ, ಕಿಶೋರ್ ಟಿಕೆಟ್ ಬಯಸಿ ಅರ್ಜಿ ಸಲ್ಲಿಸಿದ್ದಾರೆ. 2018ರ ಚುನಾವಣೆಯಲ್ಲಿ ಆರ್.ಕೆ. ರಮೇಶ್ ಸ್ಪರ್ಧಿಸಿ 1.22 ಲಕ್ಷ ಮತಗಳನ್ನು ಪಡೆದು ಎರಡನೇ ಸ್ಥಾನದಲ್ಲಿದ್ದರು. ಈ ಬಾರಿಯೂ ಟಿಕೆಟ್ ಬಯಸಿದ್ದಾರೆ. 2008ರ ಚುನಾವಣೆಯಲ್ಲಿ ರಾಜಗೋಪಾಲರೆಡ್ಡಿ ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿ 17 ಸಾವಿರ ಮತಗಳನ್ನು ಪಡೆದಿದ್ದರು. ಈ ಬಾರಿಯೂ ಅವರು ಟಿಕೆಟ್ ಆಕಾಂಕ್ಷಿ ಆಗಿದ್ದಾರೆ. 

ಆರ್‌. ಪ್ರಭಾಕರ ರೆಡ್ಡಿ ಅವರಿಗೆ ಜೆಡಿಎಸ್‌ ಟಿಕೆಟ್‌ ಘೋಷಿಸಿದೆ. ಪ್ರಭಾಕರ ರೆಡ್ಡಿ 2013ರಲ್ಲಿ ಸ್ಪರ್ಧೆ ಮಾಡಿ 71 ಸಾವಿರ ಮತಗಳನ್ನು ಪಡೆಯುವ ಮೂಲಕ ಎರಡನೇ ಸ್ಥಾನಕ್ಕೆ ಬಂದಿದ್ದರು. ಆದರೆ, 2018ರ ಚುನಾವಣೆಯಲ್ಲಿ 36 ಸಾವಿರ ಮತಗಳನ್ನು ಪಡೆದು ಮೂರನೇ ಸ್ಥಾನಕ್ಕೆ ಇಳಿದಿದ್ದರು. ಚುನಾವಣೆ ಸಮೀಪಿಸುತ್ತಿರುವಂತೆಯೇ ಮೂರೂ ಪಕ್ಷಗಳ ಟಿಕೆಟ್ ಆಕಾಂಕ್ಷಿಗಳು ಕ್ಷೇತ್ರದಲ್ಲಿ ಸುತ್ತಾಡುತ್ತಿದ್ದಾರೆ.


Caption

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು