ಮಂಗಳವಾರ, 30 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಉಪ ನಗರ ರೈಲು ಯೋಜನೆಗೆ ಸಾಲ: ಜರ್ಮನಿ ಬ್ಯಾಂಕ್ ಜತೆ ಕೆ- ರೈಡ್ ಒಪ್ಪಂದ

Published 9 ಫೆಬ್ರುವರಿ 2024, 7:11 IST
Last Updated 9 ಫೆಬ್ರುವರಿ 2024, 7:11 IST
ಅಕ್ಷರ ಗಾತ್ರ

ಬೆಂಗಳೂರು: ರಾಜಧಾನಿಯ ಸುಮುತ್ತಲಿನಲ್ಲಿ 148 ಕಿ.ಮೀ. ಉದ್ದದ ಮಾರ್ಗದಲ್ಲಿ ಉಪ ನಗರ ರೈಲು ಯೋಜನೆ ಅನುಷ್ಠಾನಕ್ಕೆ ಜರ್ಮನಿಯ ಲಕ್ಸಂಬರ್ಗ್‌ನ ಕೆಡಬ್ಲ್ಯುಎಫ್‌ ಡೆವಲಪ್‌ಮೆಂಟ್‌ ಬ್ಯಾಂಕ್‌ನಿಂದ ಪಡೆಯುವ ₹ 4,561 ಕೋಟಿ ಸಾಲದ ಮೇಲಿನ ಷರತ್ತುಗಳುಳ್ಳ ಒಪ್ಪಂದಕ್ಕೆ ರಾಜ್ಯ ಸರ್ಕಾರಿ ಸ್ವಾಮ್ಯದ ಕೆ–ರೈಡ್‌ ಸಂಸ್ಥೆಯು ಶುಕ್ರವಾರ ಸಹಿ ಹಾಕಿತು.

₹15,767 ಕೋಟಿ ವೆಚ್ಚದಲ್ಲಿ ಉಪ ನಗರ ರೈಲು ಯೋಜನೆಯನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇಕಡ 20ರಷ್ಟು ವೆಚ್ಚ ಭರಿಸಲಿವೆ. ₹ 4,561 ಕೋಟಿ ಸಾಲ ಪಡೆಯುವ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಮತ್ತು ಕೆಡಬ್ಲ್ಯುಎಫ್‌ ಬ್ಯಾಂಕ್‌ 2023ರ ಡಿಸೆಂಬರ್‌ನಲ್ಲಿ ಸಹಿ ಮಾಡಿದ್ದವು.

ಸಾಲ ಮಂಜೂರಾತಿಯ ಷರತ್ತುಗಳನ್ನು ಒಳಗೊಂಡ ಒಪ್ಪಂದಗಳಿಗೆ ಕೆ–ರೈಡ್‌ ವ್ಯವಸ್ಥಾಪಕ ನಿರ್ದೇಶಕಿ ಎನ್‌. ಮಂಜುಳಾ ಮತ್ತು ಕೆಡಬ್ಲ್ಯುಎಫ್‌ ಬ್ಯಾಂಕ್‌ನ ಭಾರತ ಘಟಕದ ಮುಖ್ಯಸ್ಥ ವೂಲ್ಫ್‌ ಮತ್‌ ಸಹಿ ಮಾಡಿದರು. ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಮತ್ತು ಬೆಂಗಳೂರಿನಲ್ಲಿ ಜರ್ಮನಿಯ ಕಾನ್ಸುಲ್‌ ಜನರಲ್‌ ಅಕಿಂ ಬರ್ಕಾರ್ಟ್‌ ಉಪಸ್ಥಿತಿಯಲ್ಲಿ ಒಪ್ಪಂದ  ಪತ್ರದ ವಿನಿಮಯ ನಡೆಯಿತು.

ಒಪ್ಪಂದದ ಬಳಿಕ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಚಿವರು, ‘ಉಪ ನಗರ ರೈಲು ಯೋಜನೆ ಅನುಷ್ಠಾನಕ್ಕೆ ಕೆಡಬ್ಲ್ಯುಎಫ್‌ ವಾರ್ಷಿಕ ಶೇ 4ರ ಬಡ್ಡಿ ದರದಲ್ಲಿ ಸಾಲ ನೀಡುತ್ತಿದೆ. 20 ವರ್ಷಗಳ ಸಾಲ ಮರುಪಾವತಿ ಅವಧಿ ಇದೆ’ ಎಂದರು.

ಕೆಂಗೇರಿ-ವೈಟ್‌ಫೀಲ್ಡ್ ಮಧ್ಯದ ಕಾರಿಡಾರ್-3ರ ಅಡಿ ಬರುವ ನಿಲ್ದಾಣ ಕಾಮಗಾರಿ, ವಯಾಡಕ್ಟ್, ಹೀಲಲಿಗೆ-ರಾಜಾನುಕುಂಟೆ ಮಧ್ಯದ ಕಾರಿಡಾರ್-4ರ ವ್ಯಾಪ್ತಿಯಲ್ಲಿ ಬರುವ ದೇವನಹಳ್ಳಿಯಲ್ಲಿನ ಡಿಪೋ-1, ಸಿಗ್ನಲ್ ಮತ್ತು ಟೆಲಿಕಾಂ, ಪ್ಲಾಟ್ ಫಾರ್ಮ್‌ ಸ್ಕ್ರೀನ್ ಡೋರ್, ಸ್ವಯಂಚಾಲಿತ ಪ್ರಯಾಣ ದರ ವಸೂಲಿ ವ್ಯವಸ್ಥೆ, ಸೌರ ವಿದ್ಯುತ್‌ ಫಲಕ, ಭದ್ರತಾ ಸಾಧನಗಳು ಮತ್ತು ಮ್ಯಾನ್ ಮಶೀನ್ ಇಂಟರ್‌ಫೇಸ್‌ (ಎಂಎಐ) ಕಾಮಗಾರಿಗಳಿಗೆ ಸಾಲದ ಮೊತ್ತವನ್ನು ಬಳಸಲಾಗುವುದು ಎಂದು ವಿವರಿಸಿದರು.

2027ರ ಅಂತ್ಯಕ್ಕೆ ಪೂರ್ಣ:

ಒಟ್ಟು ನಾಲ್ಕು ಕಾರಿಡಾರ್‌ಗಳಲ್ಲಿ 148 ಕಿ.ಮೀ. ಉದ್ದದ ಉಪ ನಗರ ರೈಲ್ವೆ ಸಂಪರ್ಕ ಜಾಲವನ್ನು ನಿರ್ಮಿಸಲಾಗುತ್ತಿದೆ. ಕಾರಿಡಾರ್‌ ಎರಡು ಮತ್ತು ನಾಲ್ಕರ ಕಾಮಗಾರಿಗಳು ಬೇಗ ಪೂರ್ಣಗೊಳ್ಳಲಿವೆ. ಒಂದು ಮತ್ತು ಮೂರನೇ ಕಾರಿಡಾರ್‌ಗಳ ಕಾಮಗಾರಿಗಳಿಗೆ ಶೀಘ್ರದಲ್ಲಿ ಟೆಂಡರ್‌ ಪ್ರಕ್ರಿಯೆ ಆರಂಭಿಸಲಾಗುವುದು. 2027ರ ಡಿಸೆಂಬರ್‌ ಅಂತ್ಯಕ್ಕೆ ಯೋಜನೆ ಪೂರ್ಣಗೊಳ್ಳಲಿದೆ ಎಂದು ಪಾಟೀಲ ಹೇಳಿದರು.

ನಗರಾಭಿವೃದ್ಧಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ರಾಕೇಶ್ ಸಿಂಗ್, ಹಣಕಾಸು ಇಲಾಖೆ ಕಾರ್ಯದರ್ಶಿ ಆರ್‌. ವಿಶಾಲ್‌, ಕೆಎಫ್‌ಡಬ್ಲ್ಯುನ ನಗರ ಮತ್ತು ಸಂಚಾರ ವಿಭಾಗದ ಹಿರಿಯ ತಜ್ಞೆ ಸ್ವಾತಿ ಖನ್ನಾ ಹಾಗೂ ಬೆಂಗಳೂರಿನಲ್ಲಿ ಜರ್ಮನಿ ಕಾನ್ಸುಲೇಟ್‌ನ ಸಲಹೆಗಾರ್ತಿ ಕಾಂಚಿ ಅರೋರ ಉಪಸ್ಥಿತರಿದ್ದರು.

ಉಪ ನಗರ ರೈಲು ಯೋಜನೆಯ ನಾಲ್ಕು ಕಾರಿಡಾರ್‌ಗಳು

ಕಾರಿಡಾರ್ 1 - ಬೆಂಗಳೂರು - ದೇವನಹಳ್ಳಿ- 41.4 ಕಿ.ಮೀ.

ಕಾರಿಡಾರ್ 2– ಚಿಕ್ಕಬಾಣಾವರ - ಬೆನ್ನಿಗಾನಹಳ್ಳಿ– 25.2 ಕಿ.ಮೀ.

ಕಾರಿಡಾರ್ 3– ಕೆಂಗೇರಿ - ವೈಟ್ ಫೀಲ್ಡ್– 35.52 ಕಿ.ಮೀ.

ಕಾರಿಡಾರ್ 4 –ಹೀಲಲಿಗೆ - ರಾಜಾನುಕುಂಟೆ– 46.24 ಕಿ.ಮೀ.

‘ಇನ್ನಷ್ಟು ನಗರಗಳಿಗೆ ವಿಸ್ತರಿಸಲು ಪ್ರಸ್ತಾವ’

‘ಮೈಸೂರು ತುಮಕೂರು ಸೇರಿದಂತೆ ಇತರ ನಗರಗಳಿಗೂ ಉಪ ನಗರ ರೈಲು ಯೋಜನೆಯನ್ನು ವಿಸ್ತರಿಸುವ ಪ್ರಸ್ತಾವವನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಾಗಿದೆ. ತಾಂತ್ರಿಕವಾಗಿ ಕೆಲವು ತೊಡಕುಗಳಿವೆ. ಅವುಗಳನ್ನು ನಿವಾರಿಸಿದ ನಂತರ ನಿರ್ಧಾರಕ್ಕೆ ಬರಲಾಗುವುದು’ ಎಂದು ಸಚಿವ ಎಂ.ಬಿ. ಪಾಟೀಲ ತಿಳಿಸಿದರು.

‘ಪ್ರತಿ 90 ಸೆಕೆಂಡ್‌ಗೆ ಒಂದು ರೈಲು’

‘ಉಪ ನಗರ ರೈಲು ಮಾರ್ಗದಲ್ಲಿ ಪ್ರತಿ 90 ಸೆಕೆಂಡ್‌ಗೆ ಒಂದು ರೈಲು ಸಂಚರಿಸುವಂತೆ ಯೋಜನೆ ರೂಪಿಸಲಾಗಿದೆ. ಜನದಟ್ಟಣೆಯ ಆಧಾರದಲ್ಲಿ ರೈಲುಗಳ ಸಂಚಾರದ ಅವಧಿಯನ್ನು ನಿರ್ಧರಿಸಲಾಗುವುದು’ ಎಂದು ಕೆ–ರೈಡ್‌ ವ್ಯವಸ್ಥಾಪಕ ನಿರ್ದೇಶಕಿ ಎನ್‌. ಮಂಜುಳಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT