ಮಂಗಳವಾರ, ಜುಲೈ 27, 2021
24 °C

ಬೆಂಗಳೂರು ಉಪನಗರ ರೈಲು: 3 ತಿಂಗಳಲ್ಲಿ ಕಾಮಗಾರಿ ಆರಂಭ, ಪಿಎಂ ಶಂಕುಸ್ಥಾಪನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani Photo

ಬೆಂಗಳೂರು: ಬೆಂಗಳೂರು ಉಪನಗರ ರೈಲು ಯೋಜನೆಯ ಕಾಮಗಾರಿಗೆ ಇನ್ನು ಮೂರು ತಿಂಗಳಲ್ಲಿ ಚಾಲನೆ ನೀಡಲಿದ್ದು, ಇದರ ಶಂಕುಸ್ಥಾಪನೆ ಕಾರ್ಯಕ್ರಮಕ್ಕೆ ಪ್ರಧಾನಿ ನರೇಂದ್ರ ಮೋದಿಯವರನ್ನು ಆಹ್ವಾನಿಸಲಾಗುವುದು ಎಂದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹೇಳಿದ್ದಾರೆ.

ನಗರದ ಕಂಟೋನ್ಮೆಂಟ್‌ ನಿಲ್ದಾಣದಿಂದ ಬೆಂಗಳೂರು ಉಪನಗರ ರೈಲು ಯೋಜನೆ ಮತ್ತು ರೈಲ್ವೆ ಮಾರ್ಗ ಡಬ್ಲಿಂಗ್‌ ಯೋಜನೆಗಳ ಪ್ರಗತಿ ಪರಿಶೀಲನೆ ಬಳಿಕ ಅವರು ಸುದ್ದಿಗಾರರ ಜತೆ ಮಾತನಾಡಿದರು.

ಈ ಯೋಜನೆಯ ವೆಚ್ಚ ₹15,767 ಕೋಟಿ ಆಗಲಿದ್ದು ಕೇಂದ್ರ, ರಾಜ್ಯ ಮತ್ತು ಬಾಹ್ಯ ಹಣಕಾಸು ಸಂಸ್ಥೆಗಳ ಮೂಲಕ 20:20:60 ಅನುಪಾತದಲ್ಲಿ ಇದಕ್ಕೆ ಬಂಡವಾಳ ತೊಡಗಿಸಲಾಗುವುದು. 2020–21 ನೇ ಸಾಲಿಗೆ ರಾಜ್ಯ ಸರ್ಕಾರ ₹400 ಕೋಟಿ ಈ ಯೋಜನೆಗೆ ಮೀಸಲಿಟ್ಟಿದೆ ಎಂದು ಹೇಳಿದರು.

ಬೈಯ್ಯಪ್ಪನಹಳ್ಳಿ–ರಾಜಾನುಕುಂಟೆ ಮತ್ತು ಯಶವಂತಪುರ– ಹೊಸೂರು ರಸ್ತೆ ಸಂಪರ್ಕಿಸುವ ರೈಲ್ವೆ ಮಾರ್ಗಗಳ ಡಬ್ಲಿಂಗ್‌ ಕೆಲಸಕ್ಕಾಗಿ 2020–21 ನೇ ಸಾಲಿಗೆ ₹65 ಕೋಟಿ ಅನುದಾನ ಒದಗಿಸಲಾಗಿದೆ.  ಕಾಲಮಿತಿಯಲ್ಲಿ ಅಂದರೆ 2023 ಕ್ಕೆ ಕಾಮಗಾರಿ ಪೂರ್ಣಗೊಳಿಸಲಾಗುವುದು ಎಂದು ಯಡಿಯೂರಪ್ಪ ತಿಳಿಸಿದರು.

ಕೇಂದ್ರದಲ್ಲಿ ಬಿಜೆಪಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಇದ್ದು ಏನು ಮಾಡುತ್ತಿದೆ ಎಂದು ಕಾಂಗ್ರೆಸ್‌ ಪಕ್ಷ ಟೀಕೆ ಮಾಡುತ್ತಿದೆ. ಇಲ್ಲಿಗೆ ಬಂದು ಆಗುತ್ತಿರುವ ಕೆಲಸಗಳನ್ನು ನೋಡಲಿ, ಇವು ಕೇಂದ್ರದ ಸಹಭಾಗಿತ್ವದಲ್ಲಿ ನಡೆಯುತ್ತಿರುವ ಯೋಜನೆಗಳು ಎಂದರು.

ಎರಡು ದಿನಕ್ಕೊಮ್ಮೆ ರೈಲಿನ ಮೂಲಕ ರಾಜ್ಯದ ಎಳನೀರು, ಮಾವಿನಹಣ್ಣು ಮತ್ತು ಟೊಮೇಟೊವನ್ನು ದೆಹಲಿಗೆ ಕಳುಹಿಸಲಾಗುತ್ತಿದ್ದು, ಒಂದು ರೈಲಿನಲ್ಲಿ ಕಳಿಸಿದ್ದಕ್ಕೆ ₹24 ಲಕ್ಷ ಲಾಭ ಆಗುತ್ತಿದೆ. ರೈತನಿಗೆ ಉತ್ತಮ ಬೆಲೆ ಸಿಗಲಿ ಎಂಬ ಕಾರಣಕ್ಕೆ ಇಂತಹ ಪ್ರಯತ್ನಕ್ಕೆ ಕೈಹಾಕಲಾಗಿದೆ ಎಂದು ಯಡಿಯೂರಪ್ಪ ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು